ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಿಟ್ಟು ಬಿಡದೆ ಮಳೆ (Karnataka Rain) ಸುರಿಯುತ್ತಿರುವ ಕಾರಣ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ವರುಣ ಅಡ್ಡಿಯಾಗಿದ್ದಾನೆ. ಶೇಷಾದ್ರಿಪುರಂ, ಆರ್ ಆರ್ ನಗರ, ರಾಜಾಜಿನಗರ, ಗಾಂಧಿನಗರ, ಶಾಂತಿ ನಗರ, ಮೆಜೆಸ್ಟಿಕ್, ಕೆ.ಆರ್ ಮಾರುಕಟ್ಟೆ ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದೆ.
ಕೆಲಸ- ಕಾಲೇಜುಗಳಿಗೆ ಹೋಗುವವರಿಗೆ ಮಳೆರಾಯ ಶಾಕ್ ಕೊಟ್ಟಿದ್ದ. ಆಗ್ನೇಯ ಬಂಗಾಳ ಉಪಮಹಾಸಾಗರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇನ್ನು ಮೂರು ದಿನ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು ಹಾಗೂ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಹಾಸನ ಸೇರಿದಂತೆ ಚಾಮರಾಜನಗರ, ಕೊಡಗು, ಉಡುಪಿ, ದಕ್ಷಿಣ ಕನ್ನಡ, ಉತ್ತರಕನ್ನಡಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮೇಲಿನ ಜಿಲ್ಲೆಗಳಿಗೆ ಮಂಗಳವಾರ ಹಾಗೂ ಬುಧವಾರ ಯೆಲ್ಲೋ ಅಲರ್ಟ್ ಹಾಗೂ ಅಕ್ಟೋಬರ್ 17ರಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಮಳೆಗೆ ಧರೆಗುರುಳಿದ ಮರ, ಅಂಡರ್‌ಪಾಸ್ ಜಲಾವೃತ
ರಾತ್ರಿ ಶುರುವಾದ ಮಳೆಯು ಬೆಳಗಾದರೂ ಬಿಟ್ಟಿಲ್ಲ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಮೆಜೆಸ್ಟಿಕ್ ರೈಲ್ವೆ ಅಂಡರ್ ಪಾಸ್ ಜಲಾವೃತಗೊಂಡಿತ್ತು. ಇದರಿಂದಾಗಿ ವಾಹನ ಸವಾರರು ಪರದಾಡಿದರು. ಬೆಂಗಳೂರಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಎಚ್‌ಎಂಟಿ (HMT)ಲೇಔಟ್ ನಲ್ಲಿ ಬೃಹದಾಕಾರದ ಮರ ಧರೆಗುರುಳಿದೆ. ಬೆಳಗ್ಗೆ 5 ಗಂಟೆ ಸುಮಾರಿಗೆ ಮರ ಬಿದ್ದಿದ್ದು, ಮನೆ ಮುಂದೆ ನಿಲ್ಲಿಸಿದ್ದ ಕಾರು ಜಖಂಗೊಂಡಿದೆ. 3 ತಿಂಗಳ ಹಿಂದೆ ಮರ ತೆರವು ಮಾಡುವಂತೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.
ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ ಭಾಗದಲ್ಲಿ ನಿರಂತರ ಮಳೆಯಾಗುತ್ತಿದೆ. ಆನೇಕಲ್, ಬನ್ನೇರುಘಟ್ಟ, ಅತ್ತಿಬೆಲೆ, ಹೊಸೂರು ಸೇರಿದಂತೆ ಹಲವೆಡೆ ಮಳೆಯಾಗಿದ್ದು, ರಸ್ತೆಯಲ್ಲಿ ಜನರು ಛತ್ರಿ ಹಿಡಿದು ಓಡಾಡುತ್ತಿರುವ ದೃಶ್ಯ ಕಂಡು ಬಂತು. ತಗ್ಗು ಪ್ರದೇಶ ಮತ್ತು ರಸ್ತೆಗಳಲ್ಲಿ ಮಳೆ ನೀರು ನಿಂತು ಅವಾಂತರವೇ ಸೃಷ್ಟಿಯಾಗಿತ್ತು.
ಮನೆಗಳಿಗೆ ನುಗ್ಗಿದ ಕೊಳಚೆ ನೀರು
ಬೆಳಗ್ಗೆಯಿಂದ ಸುರಿದ ಮಹಾ ಮಳೆಗೆ ಫ್ರೇಜರ್ ಟೌನ್ ಬಳಿ ಇರುವ ಎನ್ ಸಿ ಕಾಲೋನಿಯಲ್ಲಿ ಅವಾಂತರವೇ ಸೃಷ್ಟಿಯಾಗಿದೆ. ಬೆಂಗಳೂರಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಎನ್ ಸಿ ಕಾಲೋನಿ ಸಂಪೂರ್ಣ ಜಲಾವೃತಗೊಂಡಿದೆ. ರಾಜಕಾಲುವೆ ಉಕ್ಕಿ ಹರಿದು ಎನ್ ಸಿ ಕಾಲೋನಿಗೆ ಕೊಚ್ಚೆ ನೀರು ನುಗ್ಗಿದೆ. ನೀರು ತೆರವು ಮಾಡಲು ಸ್ಥಳೀಯ ನಿವಾಸಿಗಳ ಪರದಾಟ ಅನುಭವಿಸುತ್ತಿದ್ದಾರೆ. ರಾಜಕಾಲುವೆಗೆ ಅಂಟಿಕೊಂಡೇ ಇರುವ ಎನ್ ಸಿ ಕಾಲೋನಿ ಬಡಾವಣೆ ಇದಾಗಿದೆ. ಇನ್ನೂ ಪಣತ್ತೂರು ಅಂಡರ್ ಪಾಸ್ ನೀರು ನಿಂತಿದ್ದರಿಂದ ಸವಾರರು, ಚಾಲಕರು ಸರ್ಕಸ್ ಮಾಡಬೇಕಾಯಿತು
ತುಮಕೂರು, ಶಿವಮೊಗ್ಗದಲ್ಲೂ ಮಳೆ ಅಬ್ಬರ
ಕಲ್ಪತರು ನಾಡು ತುಮಕೂರಿನಲ್ಲೂ ವರುಣನ ಅಬ್ಬರ ಜೋರಾಗಿದೆ. ರಾತ್ರಿಯಿಂದಲೂ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ದೈನಂದಿನ ಕೆಲಸಕ್ಕೆ ಹೋಗುವವರ ಪರದಾಡಿದರು. ಈಗಾಗಲೇ ಜಿಲ್ಲಾಡಳಿತ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಮಲೆನಾಡು ಶಿವಮೊಗ್ಗದಲ್ಲೂ ಬೆಳಗ್ಗೆಯಿಂದಲೇ ಧಾರಾಕಾರ ಮಳೆ ಸುರಿಯುತ್ತಿದೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯ ಅಬ್ಬರದಿಂದ ಮತ್ತೆ ನದಿ, ಹಳ್ಳಕೊಳ್ಳಗಳು ಜೀವಕಳೆ ಪಡೆದುಕೊಂಡಿವೆ.
ಬಿರುಗಾಳಿ ಸಹಿತ ಭಾರಿ ಮಳೆಗೆ ನೆಲಕ್ಕುರುಳಿದ ಟೆಂಟ್
ಬಿರುಗಾಳಿ ಸಹಿತ ಭಾರೀ ಮಳೆಗೆ ಡ್ರಾಮಾ ಟೆಂಟ್ ನೆಲಕ್ಕುರುಳಿದೆ. ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಘಟನೆ ನಡೆದಿದೆ. ಚಿತ್ತರಗಿಯ ಶ್ರೀಕುಮಾರ ವಿಜಯ ನಾಟಕ ಸಂಘದ ಬೃಹತ್ ಗಾತ್ರದ ಟೆಂಟ್‌ಗೆ ಹಾನಿಯಾಗಿದೆ. ಪಟ್ಟಣದ ಅನ್ನದಾನೀಶ್ವರ ಮಠದ ಜಾಗೆಯಲ್ಲಿ ಹಾಕಲಾಗಿದ್ದ ನಾಟಕದ ಬೃಹತ್ ರಂಗಮಂದಿರ ಸಜ್ಜಿಕೆ, ಬಿರುಗಾಳಿ ಸಹಿತ ಮಳೆ ಬಂದ ಹಿನ್ನೆಲೆಯಲ್ಲಿ ರಂಗಮಂದಿರ ಧರೆಗುರುಳಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಇಲ್ಲ. ಕಲೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಕಲಾವಿದರ ಬದುಕು ಬೀದಿಗೆ ಬಿದ್ದಿದೆ. ನಾಟಕದ ಬ್ಯಾಗ್ರೌಂಡ್ ಸೀನ್ರಿ, ಸೌಂಡ್ ಸಿಸ್ಟಮ್, ಲೈಟಿಂಗ್, ಕುರ್ಚಿ ಸೇರಿದಂತೆ 12 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ. ಒಂದು ಕಾರು, ಎರಡು ಬೈಕ್‌ಗಳು ಜಖಂಗೊಂಡಿದೆ. ಸಹಾಯಹಸ್ತದ ನೀರಿಕ್ಷೆಯಲ್ಲಿ ರಂಗ ಕಲಾವಿದರು ಇದ್ದಾರೆ.
ದಾವಣಗೆರೆಯಲ್ಲಿ ಮಲೆನಾಡು ವಾತಾವರಣ
ದಾವಣಗೆರೆ ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆಯಿಂದಾಗಿ ಕಳೆದ ಒಂದು ವಾರದಿಂದ ಜಿಲ್ಲೆಯ ಬಹುತೇಕ ಕಡೆ ಮಲೆನಾಡ ವಾತಾವರಣ ನಿರ್ಮಾಣವಾಗಿದೆ. ರಾತ್ರಿಯಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಜನರು ಮನೆ ಬಿಟ್ಟು ಹೊರಗೆ ಬಾರದಂತಾಗಿದೆ.ದಾವಣಗೆರೆ ತಾಲೂಕಿನ ಅಣ್ಣಾಪುರ, ನರಗನಹಳ್ಳಿ, ಹೊನ್ನಾಯಕನಹಳ್ಳಿ , ಸುಲ್ತಾನಿಪುರ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ನಿರಂತರ ಮಳೆಯಾಗಿದೆ. ಮಳೆಯಿಂದ ಅಡಿಕೆ ತೆಂಗಿನ ತೋಟಗಳ ರೈತರಲ್ಲಿ ಸಂತಸ ಮೂಡಿದೆ. ಜಿಲ್ಲೆಯ ಬಹುತೇಕ ನಡೆ ಕೆರೆ ಕಟ್ಟೆಗಳು ಭರ್ತಿಯಾಗಿದೆ. ಜಿಟಿ ಜಿಟಿ ಮಳೆಗೆ ದಿನ ನಿತ್ಯ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಿದೆ. ಕಲಬುರಗಿಯಲ್ಲಿ ಮತ್ತೆ ವರುಣನ ಆಗಮನವಾಗಿದ್ದು, ಒಂದು ಗಂಟೆಯಿಂದ ಸುರಿಯುತ್ತಿದೆ. ಭಾರಿ ಗುಡುಗು ಸಮೇತ ಧಾರಾಕಾರ ಮಳೆಯಾಗುತ್ತಿದೆ. ಎರಡು ದಿನದಿಂದ ಬಿಸಿಲಿಗೆ ಬೆಂದಿದ್ದ ಕಲಬುರಗಿ ಜನತೆಗೆ ವರುಣ ತಂಪೆರದಿದ್ದಾನೆ.
ಸತತ ಮಳೆಗೆ ಬತ್ತಿದ ಕೊಳವೆಗಳಲ್ಲಿ ಚಿಮ್ಮುತ್ತಿರುವ ನೀರಿನ ಸೆಲೆ
ಕಳೆದ ಒಂದು ವಾರದಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಾವೇರಿ ಜಿಲ್ಲೆಯ ಹಲವೆಡೆ ಬತ್ತಿದ ಕೊಳವೆಗಳಲ್ಲಿ ನೀರಿನ ಸೆಲೆ ಚಿಮ್ಮುತ್ತಿದೆ. ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ಚೌಡಯ್ಯಧಾನಪುರ ಗ್ರಾಮದಲ್ಲಿ ಬೊರ್ ವೆಲ್ನಿಂದ ನೀರು ಚಿಮ್ಮುತ್ತಿದೆ. ಚೌಡಯ್ಯಧಾನಪುರ ಗ್ರಾಮದ ಸಿದ್ದಪ್ಪ ದೀಪಾವಳಿ ಎಂಬುವ ರೈತರಿಗೆ ಸೇರಿದ ಬೋರ ವೆಲ್ ಇದಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ