Site icon Vistara News

Karnataka Rain : ಗಾಳಿ-ಮಳೆಗೆ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಜಾನುವಾರುಗಳು ಸಾವು; ಮತ್ತೆ ಮುಳುಗಡೆಯಾದ ತ್ರಿವೇಣಿ ಸಂಗಮ

karnataka Rain

ಕೊಡಗು: ಕೊಡಗು‌ ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತೆರಾಲು ಗ್ರಾಮದಲ್ಲಿ ಭಾರಿ ಮಳೆಗೆ (Karnataka Rain) ವಿದ್ಯುತ್ ತಂತಿ ತುಂಡಾಗಿ ಬಿದ್ದು 6 ಜಾನುವಾರು ಮೃತಪಟ್ಟಿವೆ. ಗ್ರಾಮದ ರೈತ ಬೊಜ್ಜoಗಡ ನಟರಾಜ್ ಅವರಿಗೆ ಸೇರಿದ ಜಾನುವಾರು ಮೃತಪಟ್ಟಿವೆ. ಭಾರಿ ಮಳೆಗೆ 11 ಕೆವಿ ವಿದ್ಯುತ್ ತಂತಿ ರಸ್ತೆಗೆ ತುಂಡಾಗಿ ಬಿದ್ದಿತ್ತು. ಗದ್ದೆಯಿಂದ ಕೊಟ್ಟಿಗೆಗೆ ಸಾಲಾಗಿ ಬರುತ್ತಿದ್ದಾಗ ಕರೆಂಟ್‌ ಶಾಕ್‌ ಹೊಡೆದು, ಒಂದರ ಹಿಂದೆ ಒಂದು ಜಾನುವಾರುಗಳು ದುರ್ಮರಣ ಹೊಂದಿವೆ.

Karnataka Rain

ಹೇಮಾವತಿ ಜಲಾಶಯಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ

ಹಾಸನ ಜಿಲ್ಲೆಯಲ್ಲಿ ಮುಂದುವರಿದ ಮಳೆಯ ಆರ್ಭಟಕ್ಕೆ ಹೇಮಾವತಿ ಜಲಾಶಯದಲ್ಲಿ ಒಳಹರಿವು ಏರಿಕೆಯಾಗುತ್ತಲೇ ಇದೆ. ಹೇಮಾವತಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದೆ. ಹೇಮಾವತಿ ಜಲಾಶಯದಿಂದ ಹೊರಬಿಡುತ್ತಿರುವ ನೀರು ಧುಮ್ಮಿಕ್ಕುವುದನ್ನು ಕಣ್ತುಂಬಿಕೊಳ್ಳಲು ನೂರಾರು ಮಂದಿ ಬರುತ್ತಿದ್ದಾರೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಹಾಸನದ ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ.

ಹಾಸನದಲ್ಲಿ ಗರ್ಭಗುಡಿಯ ಎದುರು ಹೆಡೆ ಎತ್ತಿ ಕುಳಿತ ನಾಗರಹಾವು

ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿರುವ ಹೊಳೆಮಲ್ಲೇಶ್ವರ ದೇವಾಲಯದಲ್ಲಿ ಬೆಳ್ಳಂಬೆಳಿಗ್ಗೆ ನಾಗರಹಾವು ಪ್ರತ್ಯಕ್ಷಗೊಂಡಿದೆ. ಹೇಮಾವತಿ ನದಿ ದಡದಲ್ಲೆ ಇರುವ ಹೊಳೆಮಲ್ಲೇಶ್ವರ ದೇವಾಲಯವು ನದಿ ನೀರಿನಿಂದ ಜಲಾವೃತವಾಗಿದೆ. ಮಂಗಳವಾರ ದೇವಾಲಯದೊಳಗೆ ನಾಗರಹಾವು ಕಾಣಿಸಿಕೊಂಡಿದೆ. ಗರ್ಭಗುಡಿಯ ಎದುರು ಹೆಡೆ ಎತ್ತಿ ಕುಳಿತ ನಾಗರಹಾವು ಕಂಡು ಜನರು ಆತಂಕಗೊಂಡಿದ್ದರು. ಹೇಮಾವತಿ ನದಿ ನೀರು ನುಗ್ಗಿರುವುದರಿಂದ ಗರ್ಭಗುಡಿ ಬಾಗಿಲು ಮುಚ್ಚಿತ್ತು.

ಮತ್ತೆ ತ್ರಿವೇಣಿ ಸಂಗಮ ಮುಳುಗಡೆ

ಬಿಟ್ಟು ಬಿಟ್ಟು ಮಳೆ ಸುರಿಯುತ್ತಿರುವುದರಿಂದ ಆತಂಕ ಹೆಚ್ಚಾಗಿದೆ. ಅಲ್ಲಲ್ಲಿ ಗುಡ್ಡದ ಸಣ್ಣ ಪ್ರಮಾಣದ ಮಣ್ಣು ಕುಸಿಯುತ್ತಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾವೇರಿ ನದಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಇದೆ. ಇತ್ತ ಕೊಡಗಿನ ಭಾಗಮಂಡಲದ ತ್ರಿವೇಣಿ ಸಂಗಮ ಕ್ಷೇತ್ರ ಮತ್ತೆ ಭರ್ತಿಯಾಗಿದೆ. ಮತ್ತೊಮ್ಮೆ ಭಗಂಡೇಶ್ವರ ದೇಗುಲದ ಮೆಟ್ಟಿಲವರೆಗೂ ನೀರು ಬಂದಿದೆ. ಗಾಳಿ ಮಳೆಗೆ ವಿದ್ಯುತ್ ಕಂಬಗಳು ಧರಾಶಾಹಿಯಾಗುತ್ತಿದೆ. ವಿದ್ಯುತ್ ಸಂಪರ್ಕ‌ ಕಲ್ಪಿಸಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಭದ್ರಾ ನದಿ ಅಬ್ಬರಕ್ಕೆ 8 ಗ್ರಾಮಗಳಿಗೆ ಜಲ ದಿಗ್ಬಂಧನ

ಚಿಕ್ಕಮಗಳೂರಿನಲ್ಲಿ ಭದ್ರಾ ನದಿ ಅಬ್ಬರಕ್ಕೆ 8 ಗ್ರಾಮಗಳಿಗೆ ಜಲ ದಿಗ್ಬಂಧನ ಹಾಕಲಾಗಿದೆ. ಭದ್ರಾ ನದಿಯ ಪ್ರವಾಹಕ್ಕೆ ರಸ್ತೆ ಮುಳುಗಿದ್ದು, ಹುಯಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 8 ಗ್ರಾಮಗಳು ಸಂಪರ್ಕ ಕಡಿತಗೊಂಡಿದೆ. ರಸ್ತೆಯ ಮೇಲೆ 8-10 ಅಡಿ ನೀರು ನಿಂತಿದೆ. ಇತ್ತ ಕಳಸ-ಹೊರನಾಡು-ಕೊಟ್ಟಿಗೆಹಾರ ಮಾರ್ಗವು ಸಂಪೂರ್ಣ ಬಂದ್ ಆಗಿದೆ. ಭದ್ರೆಯ ಅಬ್ಬರಕ್ಕೆ 20 ಮನೆಯ ಕುಗ್ರಾಮಕ್ಕೆ ಜಲದಿಗ್ಬಂಧನ ಹಾಕಲಾಗಿದೆ. ಹಳ್ಳಿಯಿಂದ ಹೊರಬರಲು ಯಾವುದೇ ಮಾರ್ಗ ಇಲ್ಲದೆ ಪರದಾಟ ಅನುಭವಿಸುತ್ತಿದ್ದಾರೆ.

ಇದನ್ನೂ ಓದಿ: UGCET 2024 : ಯುಜಿಸಿಇಟಿ ಆಪ್ಶನ್ ದಾಖಲಿಸಲು ಮತ್ತಷ್ಟು ದಿನ ಅವಕಾಶ

ಬೆಳಗಾವಿಯಲ್ಲಿ ದನ ಮೇಯಿಸುವಾಗ ಕರಡಿ ದಾಳಿ

ಮನೆಗೆ ಮರಳುತ್ತಿದ್ದ ವ್ಯಕ್ತಿಯ ಮೇಲೆ ಕರಡಿಯೊಂದು ದಾಳಿ ಮಾಡಿದೆ. ದನ ಮೇಯಿಸುವ ವ್ಯಕ್ತಿಯ ಮೇಲೆ ಏಕಾಏಕಿ ದಾಳಿ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ‌ಖಾನಾಪುರ ತಾಲೂಕಿನ ದೇವರಾಯಿ ಗ್ರಾಮದ ಬಳಿ ನಡೆದಿದೆ. ನಾರಾಯಣ ಚೌರಿ (65) ಕರಡಿ ದಾಳಿಗೆ ಒಳಗಾದವರು. ಕರಡಿ ದಾಳಿ ಮಾಡುತ್ತಿದ್ದಂತೆ ನಾರಾಯಣ ಚೌರಿ ಚಿರಾಡಿದ್ದಾರೆ. ಚಿರಾಟ ಕೇಳಿ ಓಡಿ ಬಂದಿದ್ದ ಅಕ್ಕ ಪಕ್ಕದ ಜನ ಓಡಿಸಿದ್ದಾರೆ. ನಾರಾಯಚ ಚೌರಿ ಬೆನ್ನು ಮೈಮೇಲೆ ಪರಚಿ ದಾಳಿ ಮಾಡಿದೆ. ಗಾಯಗೊಂಡ ನಾರಾಯಣ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಿಜಯಪುರದಲ್ಲಿ ಜಾನುವಾರು ಕೊಂದ ಕಾಡು ಪ್ರಾಣಿ

ವಿಜಯಪುರದ ಕಂದಗನೂರ ಗ್ರಾಮದ ರೈತರು ಕಾಡು ಪ್ರಾಣಿಯ ಕಾಟಕ್ಕೆ ಆತಂಕಕ್ಕೆ ಒಳಗಾಗಿದ್ದಾರೆ. ಸಿದ್ರಾಮಪ್ಪ ಬೂಲಿ ಎಂಬ ರೈತನ ತೋಟದಲ್ಲಿದ್ದ ಆಕಳು ಕರು ಹಾಗೂ ಎಮ್ಮೆ ಕರುವನ್ನು ಕಾಡು ಪ್ರಾಣಿ ಕೊಂದು ಹಾಕಿದೆ. ಚಿರತೆ ಕೊಂದಿರಬಹುದೆಮದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಂದಗನೂರು ಗ್ರಾಮದಲ್ಲಿ ಘಟನೆ ನಡೆದಿದೆ. ಕಾಡು ಪ್ರಾಣಿ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು. ಬೋನ್ ಹಾಕಿದ್ದಾರೆ. ಇನ್ನೂ ಜಾನುವಾರಗಳ ಮೇಲೆ ಚಿರತೆ ಅಲ್ಲ ಕತ್ತೆಕಿರುಬ ಇರಬಹುದು ಎಂದು ಸಂಶಯ ವ್ಯಕ್ತ ಪಡಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version