ಚಿಕ್ಕಮಗಳೂರು: ಭಾರಿ ಮಳೆಗೆ (Karnataka rain) ಚಿಕ್ಕಮಗಳೂರಿನಲ್ಲಿ ಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ಮತ್ತೊಂದು ಹಸು ಬಲಿಯಾಗಿದೆ. ಚಿಕ್ಕಮಗಳೂರಿನ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಬಳಿ ಘಟನೆ ನಡೆದಿದೆ. ಹೆಬ್ಬಾಳ ಸೇತುವೆ ಮೇಲೆ 5-6 ಅಡಿ ನೀರು ಹರಿಯುತ್ತಿದ್ದು, ಸೇತುವೆ ತುದಿಯಲ್ಲಿದ್ದ ಹಸು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಕಳೆದ ವಾರವೂ ಹಸುವೊಂದು ಇದೇ ಸೇತುವೆ ಮೇಲೆ ಕೊಚ್ಚಿ ಹೋಗಿತ್ತು. ಇದೀಗ ಮತ್ತೊಂದು ಹಸು ನೋಡನೋಡುತ್ತಿದ್ದಂತೆ ಕೊಚ್ಚಿ ಹೋಗಿದೆ. ಕುದುರೆಮುಖ ಘಟ್ಟ ಪ್ರದೇಶದಲ್ಲಿ ಕಳೆದ ರಾತ್ರಿಯಿಂದ ನಿರಂತರ ಮಳೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ.
ಮಲಪ್ರಭಾ ನದಿಯಲ್ಲಿ ಪ್ರವಾಹದ ಪರಿಸ್ಥಿತಿ
ಮಲಪ್ರಭಾ ನದಿಯಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೊಣ್ಣೂರ ಬಳಿಯ ಹಳೆಯ ಸೇತುವೆ ಮುಳುಗಡೆಯಾಗಿದೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಬಳಿಯ ಸೇತುವೆ ಮುಳುಗಡೆಯಾಗಿದೆ. ಹುಬ್ಬಳ್ಳಿ-ವಿಜಯಪುರ ಸಂಪರ್ಕ ಕಲ್ಪಿಸುವ ಹಳೆಯ ಸೇತುವೆ ಇದಾಗಿದ್ದು, ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಹೊಸ ಸೇತುವೆ ಮೇಲೆ ಮಾತ್ರ ವಾಹನಗಳು ಸಂಚಾರಿಸುತ್ತಿವೆ. ಮಲಪ್ರಭಾ ನದಿಗೆ 5,000 ಹೆಚ್ಚು ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ನದಿ ಪಾತ್ರದ ಕೊಣ್ಣೂರು, ವಾಸನ, ಲಖಮಾಪುರ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.
ಇದನ್ನೂ ಓದಿ: Yakshagana Artist: ಬಡಗುತಿಟ್ಟು ಯುವ ಯಕ್ಷಗಾನ ಕಲಾವಿದ ನೇಣಿಗೆ ಶರಣು
ನೇತ್ರಾವತಿ ಅಬ್ಬರಕ್ಕೆ ಮನೆಗಳು ಜಲಾವೃತ
ಕ್ಷಣ ಕ್ಷಣಕ್ಕೂ ನೇತ್ರಾವತಿ ನದಿ ನೀರಿನ ಹರಿವು ಏರಿಕೆ ಆಗುತ್ತಿದ್ದು, ಬಂಟ್ವಾಳದ ಮಣಿಹಳ್ಳದ ಕಡವಿನಬಾಗಿಲು ಬಳಿ ಏಳು ಮನೆಗಳು ಜಲಾವೃತಗೊಂಡಿದೆ. ನದಿ ನೆರೆ ನೀರಿನಿಂದ ಮನೆಗಳು ಮುಳುಗಿದೆ. ಅಪಾಯದ ಮಟ್ಟವನ್ನು ಮೀರಿ ನೇತ್ರಾವತಿ ನದಿ ಹರಿಯುತ್ತಿದ್ದು, ಮನೆಗಳು ಕುಸಿಯುವ ಭೀತಿ ಇದೆ. ಮನೆಯಂಗಳದಲ್ಲಿ ಎದೆ ಮಟ್ಟದಲ್ಲಿ ಹರಿಯುತ್ತಿದೆ. ಬಂಟ್ವಾಳದ ಹಲವು ಭಾಗಗಳಲ್ಲಿ ಭಾರೀ ನೆರೆ ಸೃಷ್ಟಿಯಾಗಿದೆ. ಶಂಭೂರು ಡ್ಯಾಂನಿಂದ ಅಪಾರ ಪ್ರಮಾಣದ ನೀರು ಬಿಡುಗಡೆಯಾಗುತ್ತಿದೆ. ಸ್ಥಳೀಯ ನಿವಾಸಗಳನ್ನು ಸ್ಥಳಾಂತರ ಮಾಡಲು ಜಿಲ್ಲಾಡಳಿತ ಸೂಚನೆ ನೀಡಿದೆ.
ಬೈಂದೂರಿನಲ್ಲಿ ಪ್ರತ್ಯಕ್ಷವಾದ ಬೃಹತ್ ಗಾತ್ರದ ಮೊಸಳೆ
ಉಡುಪಿಯ ಬೈಂದೂರು ತಾಲೂಕಿನ ನಾಗೂರು ಉಡುಪರ ಹಿತ್ತಲಿನಲ್ಲಿ ಬೃಹತ್ ಗಾತ್ರದ ಮೊಸಳೆ ಪತ್ತೆಯಾಗಿದೆ. ತೋಟದಲ್ಲಿ ಸಿಹಿ ನೀರಿನ ಬಾವಿಯಲ್ಲಿ ಮೊಸಳೆ ತೇಲಾಡುತ್ತಿತ್ತು. ಮೊಸಳೆ ನೋಡಿ ಹೌಹಾರಿದ ಸ್ಥಳೀಯರು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈ ಭಾಗದಲ್ಲಿ ಮೊಸಳೆಗಳು ಕಾಣ ಸಿಗುವುದೇ ಅಪರೂಪ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ನಾಗೂರಿನ ರತ್ನಾಕರ ಉಡುಪ ಎನ್ನುವವರ ಬಾವಿಯಲ್ಲಿ ಬೃಹತ್ ಗಾತ್ರದ ಮೊಸಳೆ ಪತ್ತೆಯಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಕೋಳಿ ಮಾಂಸ ಹಾಕಿ ಮೊಸಳೆ ಹಿಡಿಯುವ ಯತ್ನದಲ್ಲಿದ್ದಾರೆ. ಇತ್ತೀಚೆಗೆ ಸುರಿದ ಭಾರಿ ಮಳೆಯ ಹಿನ್ನೆಲೆಯಲ್ಲಿ ಮೊಸಳೆ ತೇಲಿ ಬಂದಿರುವ ಶಂಕೆ ಇದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ