Site icon Vistara News

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

ವಿಜಯನಗರ: ವಿಜಯನಗರ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನದಿಂದ ಸುರಿಯುತ್ತಿರುವ ( karnataka Rain news) ಮಳೆಯಿಂದಾಗಿ (Karnataka Weather Forecast) ಹಳ್ಳ – ಕೊಳ್ಳಗಳು ತುಂಬಿ ಹರಿಯುತ್ತಿವೆ. ಹೊಸಪೇಟೆ ತಾಲೂಕಿನ ಜಿ.ನಾಗಲಾಪೂರ ಗ್ರಾಮದಲ್ಲಿ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಹೆಣ ಹೂಳಲು ಸಹ ಹೆಣಗಾಡಬೇಕಾಯಿತು.

ಗ್ರಾಮಕ್ಕೆ ಮೀಸಲಿಟ್ಟ ಸ್ಮಶಾನಕ್ಕೆ ಹೋಗಲು ರಸ್ತೆಯೇ ಇಲ್ಲ. ಅಕ್ಕ – ಪಕ್ಕದವರ ಜಮೀನಿನ ಪಕ್ಕದಲ್ಲಿ ಹೋದರೆ ಕಿರಿಕಿರಿ ಮಾಡುತ್ತಾರೆ. ಹೀಗಾಗಿ ಹರಿಯುವ ಹಳ್ಳದಲ್ಲೇ ಹೆಣ ಹೊತ್ತು ಗ್ರಾಮಸ್ಥರು ಸಾಗಿದ್ದರು. ಹೆಣ ಹೊತ್ತು ಸಾಗುವ ವೇಳೆ ನೀರಿನ ರಭಸ ಹೆಚ್ಚಾದರೆ ಹೆಣ ಸಮೇತ ಕೊಚ್ಚಿಹೋಗುವ ಆತಂಕ ಇದೆ.

ಹೆಣ ಹೂಳುವ ಜಾಗ ಗ್ರಾಮದಿಂದ ಒಂದೂವರೆ ಕಿ.ಮೀ ದೂರದಲ್ಲಿದೆ. ಶವ ಸಂಸ್ಕಾರಕ್ಕೆ ಹೋಗಲು ಸೂಕ್ತ ರಸ್ತೆ ಮಾಡಿಕೊಡದೇ ಜಿಲ್ಲಾಡಳಿತ, ಕಂದಾಯ ಇಲಾಖೆ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಕೆಲವು ದಿನಗಳ ಹಿಂದೆ ಐತಿಹಾಸಿಕ ಒಪ್ಪತ್ತೇಶ್ವರ ರಥೋತ್ಸವ ಇದೇ ಹಳ್ಳದಲ್ಲಿ ಸಾಗಿತ್ತು. ಸ್ಮಶಾನಕ್ಕೆ, ಜಮೀನುಗಳಿಗೆ ಹೋಗಲು ಸೇತುವೆ ನಿರ್ಮಿಸಿ ಕೊಡಲು ಹತ್ತಾರು ಬಾರಿ ಮನವಿ ಮಾಡಿದ್ದಾರೆ. ಆದರೂ ಗ್ರಾಮಸ್ಥರ ಮನವಿಗೆ ಕ್ಯಾರೇ ಎನ್ನದೇ ಶಾಸಕರು, ಸಚಿವರು, ಅಧಿಕಾರಿಗಳ ಧೋರಣೆಗೆ ಕಿಡಿಕಾರಿದ್ದಾರೆ.

ಭಾರಿ ಮಳೆಗೆ ಅಡಿಕೆ ತೋಟದಲ್ಲಿ ಕಂದಕ ಸೃಷ್ಟಿ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅವಾಂತರ ಮುಂದುವರಿದಿದೆ. ಇದ್ದಕ್ಕಿದ್ದ ಹಾಗೆ ಸ್ವಲ್ಪ ಸ್ವಲ್ಪವೇ ಅಡಿಕೆ ತೋಟ ಕುಸಿಯುತ್ತಿದೆ. ತೋಟದಲ್ಲಿ 10-15 ಅಡಿ ಕಂದಕ ಸೃಷ್ಟಿಯಾಗಿದೆ. ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ದೂಪದ ಖಾನ್ ಗ್ರಾಮದಲ್ಲಿ ಘಟನೆ ನಡೆದಿದೆ.

ಭೂಮಿ ಕುಸಿತದಿಂದ ನೂರಾರು ಅಡಿಕೆ ಮರಗಳು ನೆಲಕ್ಕುರುಳಿದೆ. ಗ್ರಾಮದ ಆಶಾ ಕೃಷ್ಣ ಎಂಬುವರಿಗೆ ಸೇರಿದ ಅಡಿಕೆ ತೋಟ ನಾಶವಾಗಿದೆ. ಜೀವನಕ್ಕೆ ಆಧಾರವಾಗಿದ್ದ ತೋಟ ನಾಶವಾಗುತ್ತಿರುವುದರಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಮಳೆ ಬೀಳುತ್ತಿದ್ದಂತೆ ಮತ್ತೆ ಮತ್ತೆ ತೋಟ ಕುಸಿಯುತ್ತಿದೆ.

ಇದನ್ನೂ ಓದಿ: KEA : ಕೆಯುಡಬ್ಲ್ಯೂಎಸ್‌ಡಿಬಿ ಪರೀಕ್ಷೆಯ ತಾತ್ಕಾಲಿಕ ಅಂಕಪಟ್ಟಿ ಪ್ರಕಟ; ಆ.27ರವರೆಗೆ ಆಕ್ಷೇಪಣೆಗೆ ಅವಕಾಶ

ವಿಕೆಂಡ್‌ ಮಸ್ತಿಗೆ ಮಳೆ ಅಡ್ಡಿ

ನೈರುತ್ಯ ಮಾನ್ಸೂನ್‌ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿದ್ದರೆ, ಉತ್ತರ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು. ಕಲಬುರಗಿಯ ಚಿಂಚೋಳಿಯಲ್ಲಿ 7 ಸೆಂ.ಮೀ ಮಳೆಯಾಗಿದೆ. ನಾಳೆ ಭಾನುವಾರ ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಚದುರಿದಂತೆ ಭಾರಿ ಮಳೆಯಾಗಲಿದ್ದು, ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ.

ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗಲಿದ್ದು, ಕೆಲವೊಮ್ಮೆ ಗುಡುಗು ಇರಲಿದೆ. ನಿರಂತರ ಗಾಳಿ ಗಂಟೆಗೆ 40-50 ಕಿ.ಮೀ ತಲುಪಲಿದೆ. ಇನ್ನೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ.

ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಮಧ್ಯಮ ಮಳೆ ಅಥವಾ ಗುಡುಗು ಸಹಿತ ಗಂಟೆಗೆ 40-50 ಕಿ.ಮೀ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version