ಬೆಂಗಳೂರು:ಸತತವಾಗಿ ಸುರಿಯುತ್ತಿರುವ ಮಳೆಗೆ ರಾಜಧಾನಿ ಬೆಂಗಳೂರು ಹೊಳೆಯಂತಾಗಿದೆ. ರಸ್ತೆಗಳೆಲ್ಲವೂ ಮಳೆ ನೀರಿನಿಂದ ಮುಳುಗಡೆಯಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಜನರು ಪರದಾಡುವಂತಾಗಿದೆ.
ಧಾರಾಕಾರ ಮಳೆಗೆ ಸರ್ಜಾಪುರ- ದೊಮ್ಮಸಂದ್ರ ರಸ್ತೆ ಜಲಾವೃತಗೊಂಡಿದೆ. ಸಿಲ್ಕ್ ಬೋರ್ಡ್‌ನಿಂದ ಸರ್ಜಾಪುರಕ್ಕೆ ಸಂಪರ್ಕಿಸುವ ರಸ್ತೆಯು ಮುಳುಗಡೆಯಾಗಿದೆ. ದೊಮ್ಮಸಂದ್ರ ಸರ್ಕಲ್ ಬಳಿ ರಸ್ತೆಯು ಕೆರೆಯಂತಾಗಿದೆ. ಹಳ್ಳ-ಗುಂಡಿಗಳಿಂದ ಕೂಡಿರುವ ರಸ್ತೆಯಲ್ಲಿ ವಾಹನ ಸವಾರರು ಹೈರಾಣಾದರು.
ಬಿಟ್ಟು ಬಿಡದ ಮಳೆಗೆ ಬೆಂಗಳೂರಿನ ಕೆಆರ್ ಮಾರ್ಕೆಟ್‌ನಲ್ಲಿ ನಿಂತ ನೀರಿನಿಂದಾಗಿ ವ್ಯಾಪಾರಿಗಳ ಗೋಳು, ಇನ್ನೊಂದೆಡೆ ವಾಹನ ಸವಾರರ ಫಜೀತಿ ಹೇಳತಿರದು.
ಬನ್ನೇರುಘಟ್ಟ ರಸ್ತೆಯ ವಿಜಯಶ್ರೀ ಲೇಔಟ್, ಹುಳಿಮಾವು ಮೆಟ್ರೋ ಸ್ಟೇಷನ್ ಬಳಿಯ ರಸ್ತೆಗಳು ಜಲಾವೃತಗೊಂಡಿದೆ.
ಶೆಟ್ಟಿಹಳ್ಳಿ ವಾರ್ಡ್‌ನ ಚೌಡಪ್ಪ ಬಡಾವಣೆ, ಕಾವೇರಿ ಬಡಾವಣೆ, ಶ್ರೀದೇವಿ ಬಡಾವಣೆಯ ರಾಜಕಾಲುವೆ ನೀರು ತುಂಬಿದ್ದು, ರಸ್ತೆಗಳಿಗೆ ಹಾಗೂ ಮನೆಗಳಿಗೆ ನುಗ್ಗಿದೆ.
ಬೆಂಗಳೂರಿನ ಸಂಪಂಗಿರಾಮನಗರದ 3-4 ಕಿಲೋ ಮೀಟರ್ ಜಲಾವೃತಗೊಂಡಿದ್ದು, ಬಿಎಂಟಿಸಿ ಬಸ್‌ಗಳು ಅರ್ಧ ಮುಳುಗಡೆಯಾಗಿದ್ದವು.