ಯಾದಗಿರಿ: ಸೋಮವಾರ ಯಾದಗಿರಿ ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರಿ ಮಳೆಯಾಗಿದೆ. ಸಿಡಿಲು ಬಡಿದು ಮೂವರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಇಬ್ಬರು ಸಹೋದರರು ಹಾಗೂ ಸಹೋದರಿ ದುರ್ಮರಣ ಹೊಂದಿದ್ದಾರೆ. ಯಾದಗಿರಿ ತಾಲೂಕಿನ ಜೀನಕೇರಾ ತಾಂಡದಲ್ಲಿ ಘಟನೆ ನಡೆದಿದೆ.
ಕೀಶನ್ ಜಾಧವ್ ( 25), ಚನ್ನಪ್ಪ ಜಾಧವ್ (18) ಹಾಗೂ ಸುನೀಬಾಯಿ ರಾಠೋಡ (27), ನೇನು ಜಾಧವ್ (15) ಮೃತ ದುರ್ದೈವಿ. ಸಿಡಿಲು ಬಡಿದು ತೀವ್ರ ಅಸ್ವಸ್ಥಗೊಂಡ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾನೆ. ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಯಾದಗಿರಿ ತಾಲ್ಲೂಕಿನ ಜೀನಕೇರಾ ತಾಂಡಾದಲ್ಲಿ ಕುಟುಂಬಸ್ಥರ ಜತೆ ಉಳ್ಳಾಗಡ್ಡಿ ಹಚ್ಚಲು ತೆರಳಿದರು. ಈ ವೇಳೆ ಭಾರಿ ಮಳೆಯಿಂದ ರಕ್ಷಣೆ ಮಾಡಿಕೊಳ್ಳಲು ದೇವಸ್ಥಾನದೊಳಗೆ ತೆರಳಿದರು. ಜೀನಕೇರಾ ತಾಂಡಾದ ದುರ್ಗಮ್ಮ ದೇವಸ್ಥಾನದೊಳಗೆ ತೆರಳಿದ್ದರು. ಈ ವೇಳೆ ಸಿಡಿಲು ಬಡಿದಿದೆ. ಯಾದಗಿರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಗದಗದಲ್ಲಿ ಸಿಡಿಲು ಬಡಿದು ಕುರಿಗಳು ಸಾವು
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಮಳೆ ಜತೆಗೆ ಸಿಡಿಲು ಬಡಿದು ಕುರಿಗಳು ಮೃತಪಟ್ಟಿವೆ. ನಿಪ್ಪಾಣಿ ಮೂಲದ ಕುರಿಗಾಹಿಗೆ ಸೇರಿದ ನಾಲ್ಕು ಕುರಿಗಳು ಮೃತಪಟ್ಟಿವೆ. ಮಳೆಗಾಲದಲ್ಲಿ ತಮ್ಮ ಕುರಿಗಳನ್ನು ಮೇಯಿಸುತ್ತಾ ಸಂಚಾರ ಮಾಡುವ ಕುರಿಗಾಹಿಗಳು, ನಿನ್ನೆ ರಾತ್ರಿ ಗ್ರಾಮದ ಹೊರವಲಯದಲ್ಲಿ ತಂಗಿದ್ದರು. ನಿನ್ನೆ ರಾತ್ರಿ ಸುರಿದ ಭಾರಿ ಮಳೆ ವೇಳೆ ಸಿಡಿಲು ಬಡಿದು ಕುರಿಗಳು ಮೃತಪಟ್ಟಿವೆ. ಕುರಿಗಾಹಿಗಳಿಗೆ ಪಶು ಸಂಗೋಪನಾ ಇಲಾಖೆ ಪರಿಹಾರ ನೀಡಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸಿಡಿಲಿಗೆ ರೈತ ಬಲಿ
ಧಾರವಾಡ ಜಿಲ್ಲೆಯಲ್ಲಿ ಸಿಡಿಲಿನ ಹೊಡೆತಕ್ಕೆ ರೈತರೊಬ್ಬರು ಬಲಿಯಾಗಿದ್ದಾರೆ. ಧಾರವಾಡ ತಾಲೂಕಿನ ಹನುಮನಾಳ ಗ್ರಾಮದ ರೈತ ಭೀಮನಗೌಡ ಪಾಟೀಲ(65)ಮೃತ ದುರ್ದೈವಿ. ಹೊಲದಿಂದ ಮನೆಗೆ ಬರುವಾಗ ಸಿಡಿಲು ಬಡಿದು ಭೀಮನಗೌಡ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಗರಗ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಾಗಿದೆ.
ಮಳೆಗೆ ಮನೆ ಗೋಡೆ ಕುಸಿದು ಬಿದ್ದು ವ್ಯಕ್ತಿ ಸಾವು
ಉತ್ತರ ಒಳನಾಡಿನಲ್ಲಿ ಮಳೆಯು (Karnataka Rain) ಅಬ್ಬರಿಸುತ್ತಿದ್ದು, ಧಾರಾಕಾರವಾಗಿ ಸುರಿದ ಮಳೆಗೆ ಮನೆ ಗೋಡೆ ಕುಸಿದು ಸ್ಥಳದಲ್ಲೆ ವ್ಯಕ್ತಿಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕುರುಕುಂಟಾ ಗ್ರಾಮದಲ್ಲಿ ಘಟನೆ ನಡೆದಿದೆ. ರಾಜೇಂದ್ರ ಪಾಟೀಲ್ (62) ಮೃತ ದುದೈವಿ.
ರಾಜೋಳ ಗ್ರಾಮದಿಂದ ಮಗಳ ಮನೆ ಕುರುಕುಂಟಾ ಗ್ರಾಮಕ್ಕೆ ತೆರಳಿದ್ದರು. ಮನೆಯಲ್ಲಿ ಮಲಗಿದ್ದ ವೇಳೆ ಗೋಡೆ ಕುಸಿದಿದೆ. ಪರಿಣಾಮ ರಾಜೇಂದ್ರ ಅವರು ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಕುರುಕುಂಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.