ಯಾದಗಿರಿ: ಭಾರಿ ಮಳೆ ಜತೆಗೆ ಸಿಡಿಲು ಬಡಿದು ಕೂಲಿ ಕಾರ್ಮಿಕ ಮಹಿಳೆ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚಂದ್ಲಾಪೂರ ಗ್ರಾಮದಲ್ಲಿ ಘಟನೆ ನಡೆದಿದೆ. ಕಾರ್ಮಿಕರು ಹತ್ತಿ ಬಿಡಿಸಲು ಬೇರೊಬ್ಬರ ಜಮೀನಿಗೆ ಕೂಲಿಗೆ ತೆರಳಿದ್ದರು. ನಿನ್ನೆ ಸಂಜೆ ಜಮೀನಿನಲ್ಲಿ ಹತ್ತಿ ಬಿಡಿಸುವಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ನಿಂಗಮ್ಮ ಕೊಂಗಂಡಿ (35) ಮೃತ ದುರ್ದೈವಿ. ಭಾಗಮ್ಮ, ಬಸವರಾಜ ಎಂಬುವರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳಿಗೆ ಸುರಪುರ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಲವತ್ತು ಕೋಳಿಗಳು ಬಲಿ
ಕೊಪ್ಪಳ ತಾಲೂಕಿನ ಗಿಣಗೇರಿಯ ಹುಲಿಗಿ ಚಿಕನ್ ಸೆಂಟರ್‌ನಲ್ಲಿ ಭಾರಿ ಮಳೆಗೆ ನಲವತ್ತು ಕೋಳಿಗಳು ಬಲಿಯಾಗಿವೆ. ನಿನ್ನೆ ರಾತ್ರಿ ಸುರಿದ ಮಳೆಗೆ ರಾಜು ಎಂಬುವವರಿಗೆ ಸೇರಿದ ಶಾಪ್‌ನ ಒಳಗೆ ಗ್ರಾಮದ ಚರಂಡಿ ನೀರು ನುಗ್ಗಿದೆ. ಪರಿಣಾಮ ನೀರಿಗೆ ಸಿಲುಕಿ ಮಾರಾಟಕ್ಕಿಟ್ಟಿದ್ದ ಕೋಳಿಗಳು ಮೃತಪಟ್ಟಿವೆ. ಸಾವಿರಾರು ರೂಪಾಯಿ ಮೌಲ್ಯದ ಕೋಳಿಗಳು ಕಳೆದುಕೊಂಡು ಶಾಪ್ ಮಾಲೀಕ ನಷ್ಟ ಅನುಭವಿಸಿದ್ದರು.
ಕೋಡಿ ಬಿದ್ದು ಮನೆಗಳು ಜಲಾವೃತ
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು ಹಿರೇಮಲ್ಲನಹೊಳೆ ಗ್ರಾಮದಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಗೆ
ಹಿರೇಮಲ್ಲನಹೊಳೆ ಕೆರೆ ಕೋಡಿ ಬಿದ್ದಿದೆ. ಮೂವತ್ತು ವರ್ಷಗಳ ಬಳಿಕ ಕೆರೆ ಕೋಡಿ ಬಿದ್ದಿದ್ದು, 30ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದವು. ಕೆರೆ ತುಂಬಿ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ತೊರೆಸಾಲು, ಹಿರೇಮಲ್ಲನಹೊಳೆ, ತಾಯಿಟೋಣಿ, ಹಾಲೆಹಳ್ಳಿ, ಕೋರಚರಹಟ್ಟಿ ಗ್ರಾಮದ ರೈತರ ಮೊಗದಲ್ಲಿ ಸಂತಸ ಮೂಡಿದೆ. ಜೆಸಿಬಿ ಮೂಲಕ ಕೋಡಿ ಬಿದ್ದ ನೀರನ ಹರಿವನ್ನು ಬೇರೆ ಕಡೆಗೆ ಬದಲಿಸಲು ಪ್ರಯತ್ನಿಸಿದರು.
ಚಿತ್ರದುರ್ಗದಲ್ಲೂ ಮಳೆ ಅಬ್ಬರ
ಚಿತ್ರದುರ್ಗ ಜಿಲ್ಲೆಯ ಹಲವು ಕಡೆ ತಡರಾತ್ರಿ ಮಳೆಯ ಅಬ್ಬರ ಜೋರಾಗಿತ್ತು. ಮಳೆಯ ಆರ್ಭಟಕ್ಕೆ ಕೆರೆ ಕಟ್ಟೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿತ್ತು. ಚಳ್ಳಕೆರೆ ತಾಲೂಕಿನ ರೇಖಲಗೆರೆ ಕೆರೆ ಕೋಡಿ ತುಂಬಿ ಹರಿಯುತ್ತಿದೆ. ರಾಮಸಾಗರ ಹಳ್ಳ ಸಂಪೂರ್ಣ ಭರ್ತಿಯಾಗಿದೆ. ರೇಖಲಗೆರೆ ಫೀಡರ್ ಚಾನಲ್ ಮೂಲಕ ಬಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ರಾತ್ರಿ ಮಳೆಗೆ ವರವು ಗ್ರಾಮದ ಕೆರೆಯೂ ಸಂಪೂರ್ಣ ಭರ್ತಿಯಾಗಿ, ಕೋಡಿ ಬಿದ್ದು ಹರಿಯುತ್ತಿದೆ. ಬರದ ನಾಡಲ್ಲಿ ಬರಪೂರ ಮಳೆಗೆ ಅನ್ನದಾತರಲ್ಲಿ ಸಂತಸ ಮೂಡಿದೆ.
ಇದನ್ನೂ ಓದಿ:Karnataka Weather : ದಕ್ಷಿಣದಿಂದ ಉತ್ತರ ಒಳನಾಡಿನವರೆಗೂ ಗುಡುಗು ಸಹಿತ ವ್ಯಾಪಕ ಮಳೆ ಮುನ್ಸೂಚನೆ
ಕೆರೆ ಕೋಡಿ ಬಿದ್ದು ಶವ ಸಾಗಿಸಲು ಗ್ರಾಮಸ್ಥರ ಹೆಣಗಾಟ
ಬೆಳಗಾವಿಯ ಕಿತ್ತೂರು ತಾಲೂಕಿನಾದ್ಯಂತ ಭಾರಿ ಮಳೆ ಹಿನ್ನೆಲೆಯಲ್ಲಿ ಬಸರಕೋಡ ಗ್ರಾಮದಲ್ಲಿ ಶವ ಸಾಗಿಸಲು ಗ್ರಾಮಸ್ಥರು ಹೆಣಗಾಡಿದರು. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬಸರಕೋಡ ಗ್ರಾಮದಲ್ಲಿ ಪ್ರತಿ ವರ್ಷ ಮಳೆಗಾಲ ಬಂದ್ರೇ ಶವ ಸಾಗಿಸಲು ಜನರು ಪರದಾಡಬೇಕು. ಸ್ಮಶಾನಕ್ಕೆ ಹೋಗುವ ಮಾರ್ಗದಲ್ಲಿರುವ ಕೆರೆ ಕೊಡಿ ಬಿದ್ದು ಪರದಾಟ ಅನುಭವಿಸಬೇಕು.
ಮಳೆಗಾಲದಲ್ಲಿ ರಸ್ತೆ ಮೇಲೆ ಕೆರೆಯ ನೀರು ಹಳ್ಳದಂತೆ ಹರಿದು ಹೋಗಲಿದೆ. ನಡುಮಟದ ನೀರಲ್ಲೇ ಶವ ಹೊತ್ತು ಸ್ಮಶಾನಕ್ಕೆ ಸಾಗಿಸುವ ಪರಿಸ್ಥಿತಿ ಇದೆ. ಗ್ರಾಮದಲ್ಲಿ ಹೃದಯಾಘಾತದಿಂದ ಶಂಕ್ರಪ್ಪ ಹರಿಜನ(40) ಎಂಬುವವರು ಮೃತಪಟ್ಟಿದ್ದರು. ಶವ ಹೊತ್ತು ರಭಸವಾಗಿ ಹರಿಯುವ ನೀರಲ್ಲೇ ಸಾಗಿದ ಗ್ರಾಮಸ್ಥರು ಅಂತ್ಯ ಸಂಸ್ಕಾರ ನೆರವೇರಿಸಿದರು. ಕೆರೆ ಪಕ್ಕ ಸೇತುವೆ ನಿರ್ಮಾಣಕ್ಕೆ ಹಣ ಬಂದ್ದರೂ, ಸಣ್ಣ ನೀರಾವರಿ ಇಲಾಖೆ ಅಸಡ್ಡೆ ತೋರುತ್ತಿದೆ. ಒಂದು ಕೋಟಿಗೂ ಅಧಿಕ ಹಣವನ್ನು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ದುರಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಗದಗ-ಶಲವಡಿ- ನರಗುಂದ ರಸ್ತೆ ಸಂಪರ್ಕ ಸ್ಥಗಿತ
ಗದಗ ಜಿಲ್ಲೆಯ ನರಗುಂದ ತಾ. ಕುರ್ಲಗೇರಿ ಸೇತುವೆ ಭಾರೀ ಮಳೆಗೆ ಜಲಾವೃತಗೊಂಡಿದೆ. ಗದಗ-ಶಲವಡಿ- ನರಗುಂದ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ರೋಣ ತಾ.ಯಾವಗಲ್ ಗ್ರಾಮದ ಬಳಿಯ ಸೇತುವೆ ಜಲಾವೃತವಾಗಿದೆ. ರೋಣ-ನರಗುಂದ ರಸ್ತೆ ಸಂಚಾರ ಸ್ಥಗಿತವಾಗಿದ್ದರಿಂದ ವಾಹನ ಸವಾರರು ಪರದಾಡಿದರು. ಅಪಾಯ ಮಟ್ಟ ಮೀರಿ ಬೆಣ್ಣೆಹಳ್ಳ ಹರಿಯುತ್ತಿದೆ. ಹುಬ್ಬಳ್ಳಿ-ಧಾರವಾಢ ಹಾಗೂ ಗದಗ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಹೀಗಾಗಿ ಬೆಣ್ಣೆ ಹಳ್ಳದ ಬಳಿ ಯಾರು ಹೋಗದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಧ್ವನಿ ವರ್ಧಕದ ಮೂಲಕ ಬೆಣ್ಣೆ ಹಳ್ಳ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಜಿಲ್ಲಾಡಳಿತದಿಂದ ಹೈ ಅಲರ್ಟ್ ಘೋಷಣೆ ಮಾಡಿದೆ. ಕಷ್ಟ ಪಟ್ಟು ಬೆಳೆದ ಗೋವಿನಜೋಳ ಹತ್ತಿ ಈರುಳ್ಳಿ ಬೆಳೆಗಳು ಜಲಾವೃತಗೊಂಡು, ಬೆಳೆ ಹಾನಿಯಾಗಿದೆ.
ಧಾರವಾಡ, ಯಾದಗಿರಿಯಲ್ಲಿ ಭರ್ಜರಿ ಮಳೆ
ಧಾರವಾಡ ಜಿಲ್ಲೆಯಾದ್ಯಂತ ಭರ್ಜರಿ ಮಳೆಯಾಗುತ್ತಿದೆ. ಮತ್ತಷ್ಟು ಮಳೆ ಆದರೆ ಪ್ರವಾಹ ಭೀತಿಯಲ್ಲಿ ಹಳ್ಳಕ್ಕೆ ಹೊಂದಿರುವ ಗ್ರಾಮಗಳು ಜಲಾವೃತಗೊಳ್ಳುವ ಸಾಧ್ಯತೆ ಇದೆ. ಯಾದಗಿರಿ ಜಿಲ್ಲೆಯಲ್ಲಿ ವರುಣನ ಅಬ್ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ನಗರ ಸೇರಿದಂತೆ ವಿವಿಧೆಡೆ ಒಂದು ಗಂಟೆಗೂ ಮಳೆ ಸುರಿದಿದೆ. ಮಳೆಯಿಂದ ಯಾದಗಿರಿ ರೈತರು ಕಂಗಲಾಗಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ