ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ (Karnataka Rain) ನಿಲ್ಲುವಂತೆ ಕಾಣುತ್ತಿಲ್ಲ. ವರುಣಾರ್ಭಟಕ್ಕೆ ಮನೆಯ ಮೇಲೆ ಭೂ ಕುಸಿತ ಉಂಟಾಗಿದೆ. ಮನೆಯ ಹಿಂಬದಿಯ ಗುಡ್ಡ ಕುಸಿದು ಸಂಪೂರ್ಣ ಹಾನಿಯಾಗಿದೆ. ಕಳಸ ತಾಲೂಕಿನ ಸಂಸೆ ಗ್ರಾ.ಪಂ ವ್ಯಾಪ್ತಿಯ ಕುನ್ನಿ ಹಳ್ಳ ಗ್ರಾಮದಲ್ಲಿ ಘಟನೆ ನಡೆದಿದೆ. ಮನೆಯಲ್ಲಿ ಮಲಗಿದ್ದಾಗ ಹಾಸಿಗೆಗೆ ನೀರು ಬಂದಾಗ ಕುಟುಂಬಸ್ಥರು ಎಚ್ಚರಗೊಂಡು, ಗುಡ್ಡ ಕುಸಿತದ ಶಬ್ದಕ್ಕೆ ಮನೆಯಿಂದ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ಮನೆಯ ಗೋಡೆ ಕುಸಿದು ಬಿದ್ದು ಅವಾಂತರವೇ ಸೃಷ್ಟಿಯಾಗಿದೆ. ಮನೆ ಬಿರುಕು ಬಿಟ್ಟಿದ್ದು, ಅಧಿಕಾರಿಗಳಿಗೆ ವಿಷಯ ಮುಟ್ಟಿಸಲು ನೆಟ್‌ವರ್ಕ್ ಇಲ್ಲದೆ ಪರದಾಡುತ್ತಿದ್ದಾರೆ.
ಇನ್ನೂ ಧರೆ ಕುಸಿದು 50 ಗಂಟೆ ಕಳೆದರೂ ಮಣ್ಣು ತೆರವಾಗಿಲ್ಲ. ಇದರಿಂದಾಗಿ ಕಲ್ಗುಡ್ಡೆ, ಹೊರನಾಡು, ಮೆಣಸಿನ ಹಾಡ್ಯ ರಸ್ತೆ ಬಂದ್ ಆಗಿದೆ. ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಕೊಗ್ರೆ, ಸಾತ್ ಕೊಡಿಗೆ ಸಮೀಪ ಎರಡು ದಿನದ ಹಿಂದೆ ರಸ್ತೆಗೆ ಗುಡ್ಡ ಕುಸಿದು ರಸ್ತೆ ಸಂಚಾರ ಬಂದ್ ಆಗಿತ್ತು. ರಸ್ತೆ ಮೇಲೆ ಮತ್ತಷ್ಟು ಗುಡ್ಡದ ಮಣ್ಣು ಕುಸಿಯುತ್ತಿದ್ದು, ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ರಣ ಭೀಕರ ಮಳೆಗೆ ಕಳಸ ತಾಲೂಕಿನ ಹೊರನಾಡು ಬಳಿ ಇರುವ ಸಿಮೆಂಟ್ ರಸ್ತೆ ಕೊಚ್ಚಿಹೋಗಿದೆ. ಹೊರನಾಡಿನಿಂದ ಹಲವು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ರಸ್ತೆಯಲ್ಲಿದ್ದ ತಡೆಗೋಡೆ ಪೈಪ್ ಎಲ್ಲವೂ ನೀರುಪಾಲಾಗಿದೆ. ಇತ್ತ ತುಂಗಾ ನದಿ ಅಬ್ಬರಕ್ಕೆ ಶೃಂಗೇರಿ ನಲುಗಿದೆ. ನದಿ ತಟದ ತೋಟಗಳು, ರಸ್ತೆ ಎಲ್ಲವೂ ಮುಳುಗಡೆಯಾಗಿದೆ. ಪಟ್ಟಣದ ಮುಖ್ಯ ಭಾರತಿ ತೀರ್ಥ ರಸ್ತೆಯನ್ನು ನೀರು ಆವರಿಸಿದೆ.
ಶಿರಸಿಯಲ್ಲಿ ಭಾರಿ ಮಳೆಗೆ ಕುಸಿದು ಬಿದ್ದ ಮನೆಯ ಚಾವಣಿ
ಉತ್ತರ ಕನ್ನಡದ ಶಿರಸಿ ನಗರದ ಗಣೇಶ ನಗರದ ವಾರ್ಡ್ ನಂ.2 ರಲ್ಲಿ ಭಾರಿ ಮಳೆಗೆ ಬೆಳಗಿನ ಜಾವದಲ್ಲಿ ಮನೆಯ ಚಾವಣಿ ಕುಸಿದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾವಣಿ ಕುಸಿಯುವ ಸದ್ದು ಕೇಳಿ ಎಚ್ಚರಗೊಂಡ ಕುಟುಂಬಸ್ಥರು ಹೊರಗೆ ಓಡಿದ್ದಾರೆ. ಚಾವಣಿ ಕುಸಿದ ಪರಿಣಾಮ ಮನೆಯ ಗೋಡೆಗೂ ಹಾನಿಯಾಗಿದೆ. ಸ್ಥಳಕ್ಕೆ ನಗರಸಭಾ ಸದಸ್ಯೆ ನೇತ್ರಾವತಿ, ಮಾರುತಿ ವಡ್ಡರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಾಸನದಲ್ಲಿ ಮಳೆ ನಿಂತರೂ ನಿಲ್ಲದ ಅವಾಂತರಗಳು
ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ, ಕಣತೂರು ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಕೆರೆಯ ಕೋಡಿ ಒಡೆದು ಜಮೀನುಗಳಿಗೆ ನೀರು ನುಗ್ಗಿದೆ. ಅಡಿಕೆ, ಶುಂಠಿ ಬೆಳೆಗಳು ಸಂಪೂರ್ಣ ಜಲಾವೃತವಾಗಿದೆ. ಗ್ರಾಮದ ಸುಪ್ರೀತ್, ಉಮೇಶ್, ಶಾಂತಕುಮಾರ್, ಬಾಲಲೋಚನಾ ಎಂಬುವವರ ಜಮೀನಿಗೆ ನೀರು ನುಗ್ಗಿದೆ. ಹಾಸನ ಜಿಲ್ಲೆಯಲ್ಲಿ ಮಳೆ ನಿಂತರೂ ನಿಲ್ಲದ ಮಳೆಯ ಅವಾಂತರಗಳು ಕಡಿಮೆ ಆಗುತ್ತಿಲ್ಲ. ಕೆರೆ ಒಡೆದು ಅಪಾರ ಪ್ರಮಾಣದ ನೀರು ಹರಿದ ಪರಿಣಾಮ ಐವತ್ತುಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ್ದ ಭತ್ತದ ಸಸಿಗಳು ಕೊಚ್ಚಿ ಹೋಗಿದೆ. ಹಾಸನದ ಬೇಲೂರು ತಾಲೂಕಿನ ಕಣಗುಪ್ಪೆ ಗ್ರಾಮದಲ್ಲಿ ಘಟನೆ ನಡೆದಿದೆ. ಗದ್ದೆಯ ಮಣ್ಣು ಸಮೇತ ನೀರಿನಲ್ಲಿ ಭತ್ತದ ಸಸಿಗಳು ನೀರುಪಾಲಾಗಿವೆ. ಗ್ರಾಮದ ವೀರಭದ್ರ ಶೆಟ್ಟಿ, ಅಣ್ಣಪ್ಪಶೆಟ್ಟಿ, ಬಸವರಾಜು, ಹರೀಶ್, ಇಂದ್ರೇಶ್, ವೆಂಕಟೇಶ್, ರುಕ್ಮಣಮ್ಮ, ತಿಮ್ಮೇಗೌಡ ಎಂಬುವವರಿಗೆ ಸೇರಿದ ಗದ್ದೆಗಳು ಹಾಳಾಗಿವೆ.
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಾಭದ್ರಾ
ಅಪಾಯದ ಮಟ್ಟ ಮೀರಿ ತುಂಗಭದ್ರಾ ನದಿ ಹರಿಯುತ್ತಿದ್ದು, ನದಿಗೆ 1,67,443 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಮತ್ತೆ ಕಂಪ್ಲಿ ಸೇತುವೆ ಮುಳುಗಡೆಯಾಗಿದೆ. ಕಂಪ್ಲಿ ಸೇತುವೆ ಮುಳುಗಡೆಯಾದ ಕಾರಣಕ್ಕೆ ಬಳ್ಳಾರಿ- ಗಂಗಾವತಿ ಸಂಪರ್ಕ ಕಡಿತಗೊಂಡಿದೆ. ಸೇತುವೆ ಮೇಲ್ಭಾಗದಿಂದ ಮೂರು ಅಡಿ ನೀರು ಹರಿಯುತ್ತಿದೆ. ಹೀಗಾಗಿ ಕಂಪ್ಲಿ ಕೋಟೆಯ ಪ್ರದೇಶಕ್ಕೆ ನದಿ ನೀರು ನುಗ್ಗಿದೆ. ಕಂಪ್ಲಿ ಕೋಟೆ ಪ್ರದೇಶದ ಹೊಳೆ ಆಂಜನೇಯ, ಪ್ರಸನ್ನ ವೆಂಕಟರಮಣ ದೇವಸ್ಥಾನ ಜಲಾವೃತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಕೋಟೆ ಪ್ರದೇಶದ ಜನರನ್ನ ಸ್ಥಳಾಂತರ ಮಾಡಲಾಗಿತ್ತು.
ಇತ್ತ ಮಲೆನಾಡು ಭಾಗದಲ್ಲಿ ನಿರಂತರ ಮಳೆಯಿಂದಾಗಿ ವಿಜಯನಗರ ಜಿಲ್ಲೆಯಲ್ಲಿ ರಸ್ತೆ, ಭತ್ತದ ಗದ್ದೆಗಳು ಜಲಾವೃತವಾಗಿದೆ. ಮಕರಬ್ಬಿ-ಬ್ಯಾಲಾಹುಣಸೆ ಗ್ರಾಮದ ರಸ್ತೆ ಸಂಪೂರ್ಣ ಬಂದ್ ಆಗಿದೆ. ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನ ಗ್ರಾಮಗಳ ಹತ್ತಾರು ಎಕರೆ ಭತ್ತದ ಜಮೀನಿಗೆ ನೀರು ನುಗ್ಗಿದ್ದರಿಂದ ಸಂಪೂರ್ಣ ನೀರು ಪಾಲಾಗಿದೆ. ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶಗಳಲ್ಲಿ ಸಂಕಷ್ಟ ಎದುರಾಗಿದೆ. ನದಿಪಾತ್ರದ 22 ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಇದನ್ನೂ ಓದಿ: Self Harming : ವಯಸ್ಸಲ್ಲದ ವಯಸ್ಸಲ್ಲಿ ಲವ್; 15ನೇ ವರ್ಷಕ್ಕೆ ಮದುವೆ ಆದವಳು 17ನೇ ವರ್ಷಕ್ಕೆ ಆತ್ಮಹತ್ಯೆ
ಉಕ್ಕಡಗಾತ್ರಿ ಅಜ್ಜಯನ ದೇವಸ್ಥಾನಕ್ಕೂ ಜಲದಿಗ್ಬಂಧನ
ದಾವಣಗೆರೆಯಲ್ಲಿ ಅಪಾಯ ಮಟ್ಟದಲ್ಲಿ ತುಂಗಾಭದ್ರಾ ನದಿ ಹರಿಯುತ್ತಿದ್ದು, ತುಂಗಾ, ಭದ್ರ ಅಣೆಕಟ್ಟುಗಳಿಂದ 1 ಲಕ್ಷ 20 ಸಾವಿರಕ್ಕೂ ಅಧಿಕ ನೀರು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದಾಗಿ ಪುಣ್ಯಕ್ಷೇತ್ರ ಉಕ್ಕಡಗಾತ್ರಿ ಕರಿಬಸವೇಶ್ವರ ದೇವಾಲಯಕ್ಕೆ ಜಲದಿಗ್ಬಂಧನ ಹಾಕಲಾಗಿದೆ. ಶ್ರೀ ಕ್ಷೇತ್ರ ಉಕ್ಕಡಗಾತ್ರಿ ದೇವಸ್ಥಾನದ ಹಣ್ಣು,ಕಾಯಿ ಅಂಗಡಿಗಳು ಸೇರಿ 30 ಕ್ಕೂ ಅಧಿಕ ಅಂಗಡಿ ಮುಂಗಟ್ಟು ಮುಳುಗಡೆಯಾಗಿದೆ. ಉಕ್ಕಡಗಾತ್ರಿ ಅಜ್ಜಯನ ದೇವಸ್ಥಾನದ ಪಾದಗಟ್ಟೆ, ಜವಳ ಘಟ್ಟ, ಸ್ನಾನಘಟ್ಟಗಳು ಮುಳುಗಡೆಯಾಗಿದೆ. ಭಕ್ತರು ನದಿಗೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಬ್ಯಾರಿಕೇಡ್ ಹಾಕಿ ಯಾರು ನದಿಗೆ ಇಳಿಯದಂತೆ ಬಂದ್ ಮಾಡಿದ್ದಾರೆ.
ಪಲ್ಗುಣಿ ನದಿ ಅಬ್ಬರಕ್ಕೆ ಪಡುಶೆಡ್ಡೆ ಗ್ರಾಮ ಜಲಾವೃತ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿದ್ದು, ಪಲ್ಗುಣಿ ನದಿಯಲ್ಲಿ ಒಳಹರಿವು ಹೆಚ್ಚಾಗಿದೆ. ಇದರಿಂದಾಗಿ ಮಂಗಳೂರು ನಗರ ಹೊರವಲಯದ ಪಡುಶೆಡ್ಡೆಯ ಸುಮಾರು 20ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದೆ. ನೆರೆ ಬಾಧಿತ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. ನದಿಯಲ್ಲಿ ಕ್ಷಣ ಕ್ಷಣಕ್ಕೂ ನೀರು ಏರಿಕೆ ಆಗುತ್ತಿದ್ದು, ನದಿ ತೀರದ ಹಲವು ಮನೆಗಳು, ಕೃಷಿ ಭೂಮಿಗಳು ಜಲಾವೃತಗೊಂಡಿದೆ. ಪಲ್ಗುಣಿ ನದಿಯ ಮಧ್ಯ ಭಾಗದಲ್ಲಿ ಡ್ರೆಜ್ಜಿಂಗ್ ಬೋಟ್ ಸಿಲುಕಿದೆ. ರಾತ್ರಿ ಸುರಿದ ಮಹಾಮಳೆಗೆ ಪಲ್ಗುಣಿ ನದಿ ಉಕ್ಕಿದ್ದು, ಬಂಟ್ವಾಳ ತಾಲೂಕಿನ ಅಮ್ಮುಂಜೆಯ ಏಳು ಮನೆಗಳು ಜಲಾವೃತಗೊಂಡು, ಅಮ್ಮುಂಜೆ ಸೋಮನಾಥೇಶ್ವರ ದೇವಸ್ಥಾನದಲ್ಲಿ ನೀರು ನುಗ್ಗಿದೆ. ಬಂಟ್ವಾಳ ಸಿದ್ಧಕಟ್ಟೆ ಸಮೀಪದ ಅಂಗಾರಕರಿಯ ಸೇತುವೆ ಮೇಲೆ ನೀರು ಹರಿದಿದೆ.
ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ
ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿದೆ. ಇದರ ಪರಿಣಾಮವಾಗಿ ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದಲ್ಲಿರುವ ಸುಪ್ರಸಿದ್ಧ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತಗೊಂಡಿದೆ. ಕೇಶಮುಂಡನ ಮಾಡುವ ಕೋಣೆಯು ನೀರಿನಲ್ಲಿ ಮುಳುಗಿದೆ. ತುಂಗಭದ್ರಾ ನದಿ ದಡದಲ್ಲಿರುವ ದೇವಸ್ಥಾನ ಇದಾಗಿದ್ದು, ನೀರಿನ ಪ್ರಮಾಣ ಹೆಚ್ಚಾದರೆ ಅನೇಕ ಅಂಗಡಿಗಳು ಜಲಾವೃತ ಸಾಧ್ಯತೆ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ನದಿ ಸಮೀಪ ಭಕ್ತರಿಗೆ ನಿಷೇಧಿಸಲಾಗಿದೆ.
ಯಾದಗಿರಿ-ರಾಯಚೂರು ಸಂಪರ್ಕ ಕಡಿತ
ಯಾದಗಿರಿಯಲ್ಲಿ ನಾರಾಯಣಪುರ ಡ್ಯಾಂನಿಂದ ಭಾರಿ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿದ್ದು, ಕೃಷ್ಣಾ ನದಿ ಪ್ರವಾಹದಿಂದ ಈಗಾಗಲೇ ಕೊಳ್ಳುರು ಸೇತುವೆ ಹಾಗೂ ಗುರ್ಜಾಪುರ ಸೇತುವೆ ಸಂಪರ್ಕ ಕಡಿತಗೊಂಡಿದೆ. ಅದೆ ರೀತಿ ವಡಗೇರಾ ತಾಲೂಕಿನ ಗುಂಡ್ಲುರು ಹೊರಭಾಗದ ಗುರ್ಜಾಪುರ ಸೇತುವೆ ಜಲಾವೃತಗೊಂಡಿವೆ. ಸೇತುವೆ ಜಲಾವೃತದಿಂದ ಯಾದಗಿರಿ-ರಾಯಚೂರು ಜಿಲ್ಲೆಗೆ ಸಂಪರ್ಕ ಕಡಿತವಾಗಿದೆ.
ಬೆಳಗಾವಿಯಲ್ಲಿ ಮತ್ತೆ ಲೊಳಸೂರ ಸೇತುವೆ ಬಂದ್
ಬೆಳಗಾವಿಯ ಲೊಳಸೂರ ಸೇತುವೆ ಮೇಲೆ ಮತ್ತೆ ಘಟಪ್ರಭೆ ಆವರಿಸಿದೆ. ನಿನ್ನೆಯಷ್ಟೆ ನೀರು ಕಡಿಮೆಯಾಗಿ ಓಪನ್ ಆಗಿದ್ದ ಲೊಳಸೂರ ಸೇತುವೆ, ಇದೀಗ ಮತ್ತೆ ಬಂದ್ ಆಗಿದೆ. ಸಂಕೇಶ್ವರ ಧಾರವಾಡ ರಾಜ್ಯ ಹೆದ್ದಾರಿಯಲ್ಲಿರುವ ಬೃಹತ್ ಸೇತುವೆ ಇದಾಗಿದೆ. ಲೊಳಸೂರು ಗೋಕಾಕ ಸಂಪರ್ಕ ಸೇತುವೆ ಬಂದ್ ಆಗಿದೆ.
ಮತ್ತೆ ಕುಸಿದ ಚರಂಡಿ
ಧಾರವಾಡದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮನಸೂರ ಗ್ರಾಮದ ಬಳಿ ಚರಂಡಿ ಕುಸಿದಿದೆ. ಕಳಪೆ ಮಟ್ಟದ ಕಾಮಗಾರಿ ಆಗಿದ್ದಕ್ಕೆ ಚರಂಡಿ ಕುಸಿದಿದೆ ಎಂದು ರೈತರು ಆರೋಪಿಸಿದ್ದಾರೆ. ಚರಂಡಿ ಕುಸಿದು ಪಕ್ಕದಲ್ಲೇ ಇದ್ದ ಮೆಕ್ಕೆಜೋಳ ಹಾಗೂ ಭತ್ತದ ಜಮೀನಿಗೆ ನುಗ್ಗಿದ ನೀರು ನುಗ್ಗಿ, ಹಾಳಾಗಿದೆ.
ತಿ. ನರಸೀಪುರ ತಲಕಾಡು ಸಂಚಾರ ಬಂದ್
ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯದಿಂದ ಭಾರಿ ಪ್ರಮಾಣದ ನೀರು ನದಿಗೆ ಬಿಡುಗಡೆ ಆಗುತ್ತಿದೆ. ಹೀಗಾಗಿ ಮೈಸೂರು ಜಿಲ್ಲೆಯ ತಿ. ನರಸೀಪುರ ತಾಲೂಕಿನ ತಲಕಾಡಿನ ಹೆಮ್ಮಿಗೆ ಸೇತುವೆ ಮುಳುಗಡೆಯಾಗಿದೆ. ಹೀಗಾಗಿ ತಿ. ನರಸೀಪುರ ತಲಕಾಡು ಸಂಚಾರ ಬಂದ್ ಮಾಡಲಾಗಿದೆ. ಸೇತುವೆ ಮೇಲೆ ಎರಡು ಅಡಿಗಳಷ್ಟು ನೀರು ಹರಿಯುತ್ತಿದ್ದು, ಒಂದೇ ವಾರದ ಅಂತರದಲ್ಲಿ ಎರಡು ಭಾರಿ ಸೇತುವೆ ಮುಳುಗಡೆಯಾಗಿದೆ. ಹೀಗಾಗಿ ಸೇತುವೆ ಎರಡು ಭಾಗದಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಸುತ್ತೂರು ಸೇತುವೆ ಮುಳುಗಡೆ
ಕಬಿನಿ ಜಲಾಶಯದಿಂದ ಭಾರಿ ಪ್ರಮಾಣದ ನೀರು ನದಿಗೆ ಬಿಟ್ಟ ಹಿನ್ನೆಲೆಯಲ್ಲಿ ಮೈಸೂರು ತಾಲೂಕಿನ ವರುಣ ಕ್ಷೇತ್ರ ವ್ಯಾಪ್ತಿಯ ಸುತ್ತೂರು ಸೇತುವೆ ಮುಳುಗಡೆಯಾಗಿದೆ. ಹೀಗಾಗಿ ಮೈಸೂರು ಸುತ್ತೂರು ಮಾರ್ಗದ ಸಂಚಾರ ಬಂದ್ ಆಗಿದೆ. ಸುತ್ತೂರು ಸೇರಿದಂತೆ ಅನೇಕ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಸೇತುವೆ ಅಕ್ಕ ಪಕ್ಕದ ತೆಂಗಿನ ತೋಟಕ್ಕೂ ನೀರು ನುಗ್ಗಿದೆ.
ಶ್ರೀರಂಗಪಟ್ಟಣದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆಗೆ ಹಾನಿ
ಕೆಆರ್‌ಎಸ್ ನಿಂದ 1.70 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ ಮಂಡ್ಯ ಶ್ರೀರಂಗಪಟ್ಟಣದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಬಳಿ ಹಾನಿಯಾಗಿದೆ. ನೀರಿನ ರಭಸಕ್ಕೆ ತಡೆಗೋಡೆ ಕೊಚ್ಚಿ ಹೋಗಿದೆ. ಕಾವೇರಿ ನದಿ ಬಳಿಯ ಎರಡೂ ಬದಿಗಳಲ್ಲಿನ ತಡೆಗೋಡೆ ಕೊಚ್ಚಿ ಹೋಗಿದ್ದು, ವಿದ್ಯುತ್ ಕಂಬಗಳು ಪಳೆಯುಳಿಕೆಯಂತಾಗಿದೆ. ಚೆಸ್ಕಾಂ ಸಿಬ್ಬಂದಿ ವಿದ್ಯುತ್ ಕಂಬಗಳು ಬೀಳದಂತೆ ಭದ್ರ ಮಾಡಿದ್ದಾರೆ. 1804 ರಲ್ಲಿ ಸಂಪೂರ್ಣ ಕಲ್ಲಿನಿಂದ ವೆಲ್ಲೆಸ್ಲಿ ಸೇತುವೆ ನಿರ್ಮಿಸಲಾಗಿದ್ದು, 2 ಶತಮಾನಗಳಿಂದಲೂ ಭದ್ರವಾಗಿ ನೆಲೆಯೂರಿದೆ. ಇತಿಹಾಸದಲ್ಲಿ ನಿನ್ನೆಯೂ ಸೇರಿ ನಾಲ್ಕು ಭಾರಿ ಸೇತುವೆ ಮುಳುಗಡೆಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ