ಹಾವೇರಿ/ಹಾಸನ: ಭಾರಿ ಮಳೆ, ಗಾಳಿಗೆ (karnataka Rain) ವಾಸದ ಮನೆಯೊಂದು ಕುಸಿದು ಬಿದ್ದಿದೆ. ಮನೆಯಲ್ಲಿದ್ದ ಆರು ಮಂದಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಹಾಸನದ ಅಂಬೇಡ್ಕರ್ ನಗರದಲ್ಲಿ ಘಟನೆ ನಡೆದಿದೆ. ಮುನಿರ್ ಪಾಷ ಎಂಬುವವರಿಗೆ ಸೇರಿದ ಮನೆಯು ಕುಸಿದಿದೆ. ಮನೆಯ ಒಂದು ಭಾಗ ಕುಸಿಯುತ್ತಿರುವಾಗಲೇ ಆರು ಮಂದಿ ಹೊರಗೆ ಓಡಿ ಬಂದಿದ್ದಾರೆ. ಮನೆಯಲ್ಲಿದ್ದ ವಸ್ತುಗಳು ಮಣ್ಣು ಪಾಲಾಗಿದೆ.
ಕುಸಿದು ಬಿದ್ದ ಮಣ್ಣಿನ ಗೋಡೆ
ಉತ್ತರಕನ್ನಡದ ಕಾರವಾರ ಶಿರವಾಡದ ಬಂಗಾರಪ್ಪನಗರದಲ್ಲಿ ಸುಪ್ರಿಯಾ ವಡ್ಡರ್ ಎಂಬುವವರ ಮನೆಯ ಹಿಂಬದಿ ಗೋಡೆ ಕುಸಿದಿದೆ. ಮಳೆಯಿಂದಾಗಿ ನೆನೆದು ಮಣ್ಣಿನಗೋಡೆ ಕುಸಿದಿದೆ. ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
ಮಂಗಳೂರಿನಲ್ಲಿ ಭೂ ಕುಸಿದು ಜಾನುವಾರುಗಳು ಸಾವು
ಭೂ ಕುಸಿತಗೊಂಡು ಮೂರು ಮನೆಗಳಿಗೆ ಹಾನಿಯಾಗಿದ್ದು, ನಾಲ್ಕು ಜಾನುವಾರುಗಳು ಮೃತಪಟ್ಟಿವೆ. ದಕ್ಷಿಣ ಕನ್ನಡದ ಪುತ್ತೂರಿನ ಬೆಳ್ಳಿಪ್ಪಾಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಬೆಳ್ಳಿಪ್ಪಾಡಿ ಗ್ರಾಮದ ಅಂದ್ರಿಗೇರಿನ ಗಂಗಯ್ಯ ಗೌಡ, ಮಹಾಬಲ ಗೌಡ ಅವರ ಮನೆಗಳಿಗೆ ಹಾನಿಯಾಗಿದೆ. ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ದನಗಳ ಮೇಲೆ ಮಣ್ಣು ಬಿದ್ದ ಪರಿಣಾಮ ಜಾನುವಾರುಗಳು ಮೃತಪಟ್ಟಿವೆ.
ಐತಿಹಾಸಿಕ ಕಿತ್ತೂರು ಕೋಟೆಯ ವಾಚ್ ಟವರ್ ಕುಸಿತ
ಬೆಳಗಾವಿ ಜಿಲ್ಲೆಯಾದ್ಯಂತ ನಿರಂತರ ಮಳೆಯಿಂದಾಗಿ ಐತಿಹಾಸಿಕ ಕಿತ್ತೂರು ಕೋಟೆಯ ವಾಚ್ ಟವರ್ ಕುಸಿದು ಬಿದ್ದಿದೆ. 15ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ವಾಚ್ ಟವರ್ ಮಧ್ಯಾಹ್ನ ಸುರಿದ ಭಾರಿ ಮಳೆಗೆ ಕುಸಿದಿದೆ.
ಹಾವೇರಿಯಲ್ಲಿ ಬಾಲಕನ ಮೇಲೆ ಕುಸಿದ ಚಾವಣಿ
ಹಾವೇರಿ ಜಿಲ್ಲೆಯಲ್ಲಿ ಮಳೆಯು ಅವಾಂತರವನ್ನೇ ಸೃಷ್ಟಿಸಿದೆ. ನಿರಂತರ ಮಳೆಗೆ ಶಾಲೆಯ ಚಾವಣಿ ಕುಸಿದು ಬಾಲಕನಿಗೆ ಗಾಯವಾಗಿದೆ. ಹಾವೇರಿಯ ನೀರಲಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ. 25 ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 5 ನೇ ತರಗತಿಯಲ್ಲಿ ಓದುತ್ತಿದ್ದ ವಿನಾಯಕ್ ಮೋರೆ ಗಾಯಗೊಂಡವನು. ಬಾಲಕನ ಕಾಲಿನ ಮೇಲೆ ಚಾವಣಿ ಕಂಬ ಬಿದ್ದಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಗುತ್ತಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹರವಿ ಗ್ರಾಮದಲ್ಲೂ ಮನೆ ಕುಸಿದಿದೆ. ಕುಮಾರ ಮಳೆಪ್ಪನವರ ಮನೆಯು ಕುಸಿದು ಬಿದ್ದಿದೆ. ಬೆಳಗಿನ ಜಾವದಲ್ಲಿ ಮಣ್ಣು ಕುಸಿದಿದೆ. ಅದೃಷ್ಟವಶಾತ್ ಕುಟುಂಬಸ್ಥರು ಪಾರಾಗಿದ್ದಾರೆ.
ಇದನ್ನೂ ಓದಿ: Governor Versus State: ಶುರುವಾಯ್ತು ರಾಜ್ಯದಲ್ಲಿ ರಾಜ್ಯ ಸರ್ಕಾರ ವರ್ಸಸ್ ರಾಜ್ಯಪಾಲ ಸಂಘರ್ಷ; ರಾಜ್ಯಪಾಲರ ಮುಂದಿನ ನಡೆ ಏನು?
ಸೌಪರ್ಣಿಕ ನದಿ ತೀರದಲ್ಲಿ ಮತ್ತೆ ನೆರೆ
ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಸೌಪರ್ಣಿಕ ನದಿ ತೀರದಲ್ಲಿ ಮತ್ತೆ ನೆರೆ ಸೃಷ್ಟಿಯಾಗಿದೆ. ಸತತ ಮೂರನೇ ಬಾರಿಗೆ ನೆರೆ ಹಾವಳಿಯಿಂದಾಗಿ ಬೈಂದೂರು ತಾಲೂಕಿನ ನಾವುಂದ ಕುದ್ರು ವಿನಲ್ಲಿ ವಾಸವಾಗಿರುವ ಏಳು ಮನೆಗಳಿಗೆ ಜಲದಿಗ್ಬಂದನ ಹಾಕಲಾಗಿದೆ. ದೋಣಿಯ ಮೂಲಕವೇ ದೈನಂದಿನ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮನೆ ಮುಂಭಾಗವೇ ಭೂಮಿ ಛಿದ್ರ
ಚಿಕ್ಕಮಗಳೂರಿನಲ್ಲಿ ಮಳೆಯ ಅಬ್ಬರ ನಿಲ್ಲುವಂತೆ ಕಾಣುತ್ತಿಲ್ಲ. ಭಾರಿ ಮಳೆಗೆ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿದೆ. ಕೊಪ್ಪ ತಾಲೂಕಿನ ಬಸರಿ ಕಟ್ಟೆ ಚೆನ್ನಕಲ್ಲು ಗ್ರಾಮದಲ್ಲಿ ನಾಗರಾಜ್ ಎಂಬುವವರ ಮನೆ ಮುಂದೆ ಭೂಮಿ ಛಿದ್ರ ಛಿದ್ರಗೊಂಡಿದೆ. 300 ಅಡಿಯಷ್ಟು ದೂರಕ್ಕೆ ಭೂಮಿ ಜಾರಿ ಹೋಗಿದೆ. ಭೂಮಿ ಕುಸಿತದ ರಭಸಕ್ಕೆ ಮನೆಯ ಅಡಿಪಾಯ, ಗೋಡೆಗಳಲ್ಲಿ ಬಿರುಕು ಉಂಟಾಗಿದೆ. ಮಳೆ ಹೆಚ್ಚಾದಂತೆ ಮನೆಯ ಮುಂಭಾಗ ಮತ್ತಷ್ಟು ಧರೆ ಕುಸಿತ ಉಂಟಾಗುವ ಸಾಧ್ಯತೆ ಇದೆ. ಭೂ ಕುಸಿತದಿಂದಾಗಿ 4-5 ಎಕರೆ, ಅಡಿಕೆ ತೋಟವು ನಾಶವಾಗಿದೆ.
ಶಿರಾಡಿಘಾಟ್ ಭೂ ಕುಸಿತ; ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಟೀಂ ಭೇಟಿ
ಹಾಸನದ ಸಕಲೇಶಪುರ ತಾಲೂಕಿನ ದೊಡ್ಡತಪ್ಲು ಸಮೀಪದ ಗುಡ್ಡಕುಸಿತ ಸ್ಥಳಕ್ಕೆ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಕುಸಿತಕ್ಕೆ ಕಾರಣ ತಿಳಿಯಲು ಸ್ಥಳ ಪರಿಶೀಲನೆ ನಡೆಸಿದ್ದರು. ಒಂದೇ ಸ್ಥಳದಲ್ಲಿ ನಿರಂತರವಾಗಿ ಭೂಮಿ ಕುಸಿಯುತ್ತಿದೆ. ಸಕಲೇಶಪುರ ತಾಲೂಕಿನ ಹಾರ್ಲೇ ಕೂಡಿಗೆ ಗ್ರಾಮದ ಸಮೀಪ ಭೂಮಿ ಕುಸಿದಿತ್ತು. ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಕುಸಿತವಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ