ಬೆಳಗಾವಿ: ಭಾರಿ ಮಳೆಗೆ (Karnataka Rain) ಮನೆಗೆ ನೀರು ನುಗ್ಗಿದ ವಿಚಾರ ಕೇಳಿ ಹೃದಯಾಘಾತದಿಂದ (Heart attack) ಮನೆ ಯಜಮಾನ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ನಡೆದಿದೆ. ನಿನ್ನೆ ಶನಿವಾರ ಸಂಜೆ ಮನೆಗೆ ನೀರು ಬರುವ ವಿಚಾರ ತಿಳಿದು ದಶರಥ ಬಂಡಿ (80) ಎಂಬುವವರು ಅಘಾತಕ್ಕೆ ಒಳಗಾಗಿ, ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಇತ್ತ ದಶರಥ ಕುಟುಂಬಸ್ಥರು ರಾತ್ರಿ ಅಂತ್ಯಸಂಸ್ಕಾರ ಮಾಡಿ ಮನೆಗೆ ಹೋಗುವಷ್ಟರಲ್ಲಿ ಮನೆಯೇ ಮುಳುಗಿ ಹೋಗಿದೆ. ರಾತ್ರೋರಾತ್ರಿ ಉಟ್ಟಬಟ್ಟೆಯಲ್ಲೇ ಹೊರ ಬಂದಿದ್ದೇವೆ ಎಂದು ಗೋಕಾಕ್ ನಗರದ ಉಪ್ಪಾರ ಗಲ್ಲಿ ನಿವಾಸಿ ಲಕ್ಷ್ಮಿ ಅಳಲು ತೋಡಿಕೊಂಡಿದ್ದಾರೆ. ಸದ್ಯ ಮಕ್ಕಳು, ನಾಯಿ ಮರಿಗಳ ಜತೆಗೆ ಕಾಳಜಿ ಕೇಂದ್ರಕ್ಕೆ ಶಿಫ್ಟ್ ಆಗಿದ್ದಾರೆ. ಮನೆ ಯಜಮಾನ ಮೃತಪಟ್ಟ ಬಳಿಕ ಕಾರ್ಯಗಳನ್ನೂ ಮಾಡಲಾಗದೇ ಕುಟುಂಬ ಕಂಗಲಾಗಿದ್ದಾರೆ.
ಕಾಲು ಜಾರಿ ನದಿಗೆ ಬಿದ್ದ ವೃದ್ಧೆ ಸಾವು
ಅಪರಿಚಿತ ವೃದ್ಧೆ ಕುಮದ್ವತಿ ನದಿಯಲ್ಲಿ ಕಾಲು ಜಾರಿ ಬಿದ್ದಿದ್ದು, ವೃದ್ದೆ ಜೀವ ಉಳಿಸಲು ತುಂಬಿದ ನದಿಗೆ ಬಸ್ ಚಾಲಕ ನದಿಗೆ ಹಾರಿದ್ದರು. ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನ ತಿಪ್ಪಾಯಿಕೊಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ. ನದಿಗೆ ಬಿದ್ದ ಅಪರಿಚಿತ ವೃದ್ಧೆ ಕಂಡು ಜೀವ ಉಳಿಸಲು ಮುಂದಾದರು. ಆದರೆ ಉಸಿರಾಟದ ತೊಂದರೆಯಿಂದ ವೃದ್ಧೆ ಕೊನೆಯುಸಿರೆಳೆದಿದ್ದಾರೆ. ಜೀವದ ಹಂಗು ತೊರೆದು ವೃದ್ದೆ ಕಾಪಾಡಲು ಮುಂದಾದ ಚಾಲಕ ಮಜೀದ್ ಸಾಬ್ ಗುಬ್ಬಿ ಅವರ ಪ್ರಯತ್ನ ವಿಫಲವಾಗಿದೆ.
ಇದನ್ನೂ ಓದಿ: Karnataka Rain : ಭಾರಿ ಗಾಳಿ-ಮಳೆಗೆ ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ; ಸವಾರ ಸ್ಥಳದಲ್ಲೆ ಸಾವು
ಪ್ರವಾಹ ಭೀತಿ 10ಕ್ಕೂ ಹೆಚ್ಚು ಗರ್ಭಿಣಿಯರ ಸ್ಥಳಾಂತರ
ರಾಯಚೂರಲ್ಲಿ ಕೃಷ್ಣಾ ನದಿ ತೀರದ ಗ್ರಾಮಗಳಿಗೆ ಪ್ರವಾಹದ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಗರ್ಭಿಣಿಯರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಆಂಬ್ಯುಲೆನ್ಸ್ ಮೂಲಕ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಕಡದರಗಡ್ಡಿ, ಮ್ಯಾದರಗಡ್ಡಿ, ಹಂಚಿನಾಳ, ಯರಗೋಡಿ, ವಕ್ಕಂಗಡ್ಡಿ ಸೇರಿದಂತೆ ಇನ್ನಿತರ ನಡುಗಡ್ಡೆ ಗ್ರಾಮಗಳಲ್ಲಿ ಇದ್ದ 15 ಮಂದಿ ಗರ್ಭಿಣಿಯರನ್ನು ಹಂಚಿನಾಳ ಗ್ರಾಮದ ಹೆಲ್ತ್ ಸೆಂಟರ್ ಶಿಫ್ಟ್ ಮಾಡಲಾಗಿದೆ. ಕೃಷ್ಣಾ ನದಿಯಿಂದಾಗಿ ಪ್ರವಾಹ ಹೆಚ್ಚಾದರೆ ಸಂಪರ್ಕ ಕಡಿತವಾಗುವ ಭೀತಿ ಇದೆ.
ಕೃಷ್ಣಾ ನದಿಯ ಪ್ರವಾಹಕ್ಕೆ ಕೊಳ್ಳುರು ಸೇತುವೆ ಸಂಪೂರ್ಣ ಜಲಾವೃತ
ಯಾದಗಿರಿ-ರಾಯಚೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಕೊಳ್ಳುರು ಸೇತುವೆ ಮುಳುಗಡೆಯಾಗಿದೆ. ಕೃಷ್ಣಾ ನದಿಯ ಪ್ರವಾಹಕ್ಕೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳುರು ಸೇತುವೆಗೆ ಜಲದಿಗ್ಭಂಧನ ಹಾಕಲಾಗಿದೆ. ಕೊಳ್ಳುರು ಸೇತುವೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆ ಎತ್ತರ ನಿರ್ಮಾಣ ಮಾಡಬೇಕೆಂದು ಬಹು ವರ್ಷಗಳ ಬೇಡಿಕೆ ಇದೆ. ಸಾಕಷ್ಟು ಜನ ಪ್ರತಿನಿಧಿ ಅಧಿಕಾರಿಗಳು ಸೇತುವೆ ಎತ್ತರ ನಿರ್ಮಾಣ ಮಾಡುತ್ತೆವೆಂದು ಕೇವಲ ಭರವಸೆ ನೀಡಿ ಹೋಗಿದ್ದಾರೆ.
ಚಿತ್ರದುರ್ಗದಲ್ಲಿ ಮನೆ ಗೋಡೆ ಕುಸಿದು ಮೇಕೆಗಳು ಸಾವು
ಭಾರಿ ಮಳೆಗೆ ಮನೆ ಗೋಡೆ ಕುಸಿದು 7 ಮೇಕೆಗಳು ಮೃತಪಟ್ಟಿವೆ. ಚಿತ್ರದುರ್ಗದ ಭೀಮಸಮುದ್ರ ಬಳಿ ತೊರೆ ಬಯಲು ಗ್ರಾಮದಲ್ಲಿ ಘಟನೆ ನಡೆದಿದೆ. ತೊರೆ ಬಯಲು ಗ್ರಾಮದ ಜಯಣ್ಣ ಎಂಬುವವರ ಮನೆ ಗೋಡೆ ಕುಸಿದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ಜಯಣ್ಣ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಮನೆ ಗೋಡೆ ಮಣ್ಣಿನಡಿ ಸಿಲುಕಿ ಮೇಕೆಗಳು ಸ್ಥಳದಲ್ಲೇ ಮೃತಪಟ್ಟಿವೆ.
ಕಾರು, ಆಟೋ ಮೇಲೆ ಉರುಳಿ ಬಿದ್ದ ಮರ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮರಗಳ ಧರಶಾಹಿ ಮುಂದುವರಿದಿದೆ. ಯಾವುದೇ ಮಳೆ ಇಲ್ಲದೆ ಇದ್ದರೂ ದಿಢೀರ್ ಬೃಹತ್ ಗಾತ್ರದ ಮರವೊಂದು ಉರುಳಿದೆ. ಪರಿಣಾಮ 2 ಕಾರುಗಳು, ಆಟೋವೊಂದು ಜಖಂಗೊಂಡಿದೆ. ಕ್ವೀನ್ಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮರ ಬಿದ್ದ ಪರಿಣಾಮ ಆಟೋ ಡ್ರೈವರ್ ದಿವಾಕರ್, ಪ್ರಯಾಣಿಕ ಸ್ಟಾಲಿನ್ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಟ್ರಾಫಿಕ್ ಪೊಲೀಸರು ಹಾಗೂ ಸ್ಥಳೀಯರು ಸಹಾಯದಿಂದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮರ ಬಿದ್ದ ಪರಿಣಾಮ ರಸ್ತೆ ಬಂದ್ ಮಾಡಬೇಕಾಯಿತು.
ಮನೆ ಮೇಲೆ ಬಿದ್ದ ತೆಂಗಿನಮರ
ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಹಾರವಾಡದ ಗಾಬಿತವಾಡದಲ್ಲಿ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಗಾಬಿತವಾಡದ ಆಶಾ ಪಟೇ ಎಂಬುವವರ ಮನೆಯ ಚಾವಣಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ. ಭಟ್ಕಳದ ಹಾಡುವಳ್ಳಿ ಪಂಚಾಯತ ವ್ಯಾಪ್ತಿಯ ಹೇರಿಬಿಳ್ಳೂರು ಗ್ರಾಮದಲ್ಲಿ ಮಂಜುನಾಥ ನಾಯ್ಕ, ಕುಪ್ಪಯ್ಯ ನಾಯ್ಕ ಸೇರಿ ಹಲವರ ಅಡಿಕೆ ತೋಟಕ್ಕೆ ಹಾನಿಯಾಗಿದೆ. ಅಡಿಕೆ ಮರ ಬಿದ್ದು ಸುಮಾರು 8 ಎಕರೆ ತೋಟಕ್ಕೆ ಹಾನಿಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ