ವಿಜಯನಗರ : ವಿಜಯನಗರದ ಹರಪನಹಳ್ಳಿ ತಾಲೂಕಿನಲ್ಲಿ ಮಳೆಯ ಅವಾಂತರ (Karnataka Rain ) ಮುಂದುವರಿದಿದೆ. ಮಳೆಯಿಂದಾಗಿ 10ಕ್ಕೂ ಹೆಚ್ಚು ಮನೆಗಳು ಕುಸಿದಿದೆ. ಬಂಡ್ರಿ ತಾಂಡದಲ್ಲಿ ಕೊಟ್ರಿಬಾಯಿ, ಚಿಗಟೇರಿಯಲ್ಲಿ ಉತ್ತಂಗಿ ದೀಪ, ಹಗರಿಗಜಾಪುರದಲ್ಲಿ ಶಂಭುಲಿಂಗಯ್ಯ ಎಂಬುವವರ ಮನೆಗೆ ಹಾನಿಯಾಗಿದೆ, ಕೂಲಹಳ್ಳಿ ಗುರುವಿನ ಬಸವರಾಜ, ಬಸವನಾಳು ಗ್ರಾಮ ಕೊಟ್ರೇಶ್, ಶ್ರೀಕಂಠಾಪುರದಲ್ಲಿ ಅಣ್ಣಪ್ಪ, ಕುಣೆಮಾದಿಹಳ್ಳಿ, ದಡಿಗಾರನಹಳ್ಳಿ, ಕೆಸರಹಳ್ಳಿ ಗ್ರಾಮದಲ್ಲಿ ತಲಾ ಒಂದು ಮನೆ, ಚಿಗಟೇರಿ ಹೋಬಳಿ 6 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಲಕ್ಷ್ಮಿಪುರದಲ್ಲಿ ಸಿಡಿಲು ಬಡಿದು ಹಸು ಮೃತಪಟ್ಟಿದೆ. ಮಾದಾಪುರ ಗ್ರಾಮದಲ್ಲಿನ ಕೆರೆ ಕೋಡಿ ಬಿದ್ದಿದೆ. ಕೂಲಹಳ್ಳಿ ಗ್ರಾಮದ ಐತಿಹಾಸಿಕ ಕೆರೆ ಭರ್ತಿಯಾಗುವ ಹಂತದಲ್ಲಿದೆ. ಹರಪನಹಳ್ಳಿ ಅಯ್ಯನಕೆರೆ, ಕಾಯಕದಹಳ್ಳಿ ರಸ್ತೆಯ ನಾಯಕನಕೆರೆಗೆ ಮಳೆ ನೀರಿಂದ ಭರ್ತಿ ಹಂತಕ್ಕೆ ತಲುಪಿದೆ.
ಮಂಡ್ಯದಲ್ಲೂ ಮಳೆ ಅವಾಂತರ
ಸತತವಾಗಿ ಸುರಿದ ಮಳೆಗೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಬಳಿ ಉಮರ್ ನಗರದ ರೈಲ್ವೆ ಅಂಡರ್ ಪಾಸ್ ಜಲಾವೃತಗೊಂಡಿದೆ. ಮಳೆ ನೀರಿನಿಂದ ರೈಲ್ವೆ ಅಂಡರ್ ಪಾಸ್ ಸಂಪೂರ್ಣ ಜಲಾವೃತವಾಗಿದೆ.
ಮೈಸೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸುವ ಅಂಡರ್ ಪಾಸ್ ರಸ್ತೆ ಇದಾಗಿದೆ. ಅಂಡರ್ ಪಾಸ್ ರಸ್ತೆ ಜಲಾವೃತದಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಅಂಡರ್ ಪಾಸ್ ರಸ್ತೆ ದಾಟಲು ಬೈಕ್ ಸವಾರ ಪರದಾಡಿದರು. ಸಮಸ್ಯೆ ಸರಿಪಡಿಸಿದ ರೈಲ್ವೆ ಅಧಿಕಾರಿಗಳು ಹಾಗು ಹೆದ್ದಾರಿ ಪ್ರಾಧಿಕಾರದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕೊಟ್ಟೂರು ಕೆರೆಯ ಕೋಡಿಯಲ್ಲಿ ಬಿರುಕು
ವಿಜಯನಗರದ ಕೊಟ್ಟೂರು ಕೆರೆಯ ಕೋಡಿಯಲ್ಲಿ ಬಿರುಕು ಬಿಟ್ಟಿದೆ. ನಿನ್ನೆ ರಾತ್ರಿ ಸಮೃದ್ಧ ಮಳೆಯಾಗಿ ಕೊಟ್ಟೂರು ಕೆರೆಗೆ ನೀರು ಬಂದಿದೆ. ಕೆರೆ ಕೋಡಿ ಬೀಳಲು ಇನ್ನೂ ಅರ್ಧ ಅಡಿ ನೀರು ಬರುವುದು ಬಾಕಿ ಇದೆ. ಇದೇ ರೀತಿ ಇನ್ನೆರಡು ಮಳೆಗಳು ಬಂದರೆ ಕೋಡಿ ಬೀಳಬಹುದು. ಈಗಾಗಲೇ ಕೊಡಿಯ ಗೋಡೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಹತ್ತಿದೆ. ಕೋಡಿ ತನ್ನ ಉದ್ದಕ್ಕೂ ಎಂಟು ಹತ್ತಿರ ಬಿರುಕು ಬಿಟ್ಟು ಇದರಿಂದ ನೀರು ಹೊರಗಡೆ ಹರಿಯುತ್ತಿದೆ. ಅದರಲ್ಲೂ ಕೋಡಿಯ ಪ್ರಮುಖ ಭಾಗದಲ್ಲಿ ನೀರು ಹೋಗುತ್ತದೆ. ಇದನ್ನು ಹೀಗೆ ಬಿಟ್ಟರೆ ಕೊಡಿಯೇ ಒಡೆದು ಹೋಗಿ ನೀರೆಲ್ಲಾ ಪೋಲಾಗುವುದು ಗ್ಯಾರಂಟಿ.
ವಿಜಯನಗರ ಜಿಲ್ಲೆಯಾದ್ಯಂತ ರಾತ್ರಿಯಿಡೀ ಧಾರಾಕಾರ ಮಳೆಯಾಗಿದೆ. ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ನೀರು ನುಗ್ಗಿ ಇಡೀ ಬಡಾವಣೆ ಕೆರೆಯಂತಾಗಿದೆ. 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ರಾತ್ರಿಯಿಡೀ ಜನರ ಪರದಾಡಿದರು. ದಿನಸಿ, ಕಿರಾಣಿ ವಸ್ತುಗಳು, ಸಂಪೂರ್ಣ ನೀರುಮಯವಾಗಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ವಿದ್ಯಾ ನಗರದಲ್ಲಿ ಘಟನೆ ನಡೆದಿದೆ. ಸಣ್ಣ ಕಾಲುವೆ ಮೂಲಕ ದೊಡ್ಡ ಕಾಲುವೆಗೆ ಸೇರಬೇಕಿದ್ದ ಮಳೆ ನೀರು ಅವೈಜ್ಞಾನಿಕವಾಗಿ ಸಣ್ಣ ಕಾಲುವೆ ನಿರ್ಮಾಣ ಮಾಡಿದ ಹಿನ್ನೆಲೆ ಬಡಾವಣೆಗೆ ರಭಸವಾಗಿ ಹರಿದು ಬಂದು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಬೆಣ್ಣಿ ಹಳ್ಳದ ತೀರದಲ್ಲಿ ಭಾರಿ ಮಳೆ
ಗದಗ ಜಿಲ್ಲೆಯ ರೋಣ ತಾಲೂಕಿನ ಗ್ರಾಮದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಕುರುಗೋವಿನಕೊಪ್ಪ ಗ್ರಾಮದಲ್ಲಿ 10 ಕುಟುಂಬದ 50 ಕ್ಕೂ ಹೆಚ್ಚು ಜನ ಸಿಲುಕಿ ಪರದಾಟ ಅನುಭವಿಸಿದರು. ಕುರುಗೋವಿನಕೊಪ್ಪ ಗ್ರಾಮ ಸುತ್ತುವರಿದ ಮಲಪ್ರಭಾ ನದಿ ನಡುಗಡ್ಡೆಯಾಗಿದೆ. ಬೆಣ್ಣಿಹಳ್ಳ ಉಕ್ಕಿ ಹರಿದು ಮಲಪ್ರಭಾ ನದಿ ಸೇರಿ ಅವಾಂತರವೇ ಸೃಷ್ಟಿಯಾಗಿದೆ. ವೃದ್ಧರು, ಮಹಿಳೆಯರು, ಮಕ್ಕಳು ಸೇರಿ 50ಕ್ಕೂ ಹೆಚ್ಚು ಜನರು ಗ್ರಾಮದಲ್ಲಿ ಸಿಲುಕಿ ಪರದಾಡಿದ್ದರು. ಎಮ್ಮೆ, ಆಕಳು ಸೇರಿದಂತೆ ಮೂಕ ಪ್ರಾಣಿಗಳು ಗ್ರಾಮದಲ್ಲಿ ಸಿಲುಕಿಕೊಂಡಿವೆ. ಕ್ಷಣ ಕ್ಷಣಕ್ಕೂ ಮಲಪ್ರಭಾ ನದಿ ನೀರು ಏರುತ್ತಿದೆ. ಗ್ರಾಮದಲ್ಲಿ ಸಿಲುಕಿದ ಜನರಲ್ಲಿ ಆತಂಕ ಹೆಚ್ಚಿದೆ.
ಹಾವೇರಿಯಲ್ಲಿ ವರುಣ ಆರ್ಭಟ
ಹಾವೇರಿ ಜಿಲ್ಲೆಯಲ್ಲಿ ಮೂರ್ನಾಲ್ಕು ದಿನಗಳಿಂದ ವರುಣನ ಆರ್ಭಟ ಮುಂದುವರಿದಿದೆ. ಮಳೆಯ ರೌದ್ರನರ್ತನಕ್ಕೆ ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ಒಡೆದು ಹೋಗಿದೆ. ಕಾಲುವೆ ಒಡೆದು ರೈತರ ಹೊಲಗದ್ದೆಗಳಿಗೆ ನೀರು ನುಗ್ಗಿದೆ. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ. ಕಾಲುವೆ ಒಡೆದು ಎರಡು ದಿನ ಕಳೆದರು ದುರಸ್ತಿ ಕಾರ್ಯ ಆರಂಭವಾಗಿಲ್ಲ. ಕಾಲುವೆ ಸರಿಪಡಿಸಲು ಮುಂದಾಗದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಕೊಚ್ಚಿ ಹೋದ ಸೇತುವೆ
ಕಳೆದ ನಾಲ್ಕು ದಿನಗಳಿಂದ ಸುರಿದ ಭಾರಿ ಮಳೆಗೆ ಸೇತುವೆ ಕೊಚ್ಚಿ ಹೋಗಿದೆ. ಗ್ರಾಮಸ್ಥರು ಹಗ್ಗದ ಸಹಾಯದಿಂದ ಕೊಚ್ಚಿ ಹೋದ ಸೇತುವೆಯನ್ನು ದಾಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಧಾರವಾಡ ಜಿಲ್ಲೆಯ ಆಳ್ನಾವರ ತಾಲೂಕಿನ ಬೆಣಚಿ ಮತ್ತು ಬಾಲಗೇರಿ ಗ್ರಾಮದ ಮಧ್ಯ ಇರುವ ಸೇತುವೆ ಇದಾಗಿದೆ. ಸದ್ಯ ಸೇತುವೆ ಕೊಚ್ಚಿಹೋಗಿರೋದರಿಂದ ಬೆಣಚಿ ಮತ್ತು ಬಾಲಗೇರಿ ಗ್ರಾಮದ ಸಂಪರ್ಕ ಸ್ಥಗಿತಗೊಂಡಿದೆ. ಕಳೆದ 2019ರ ಪ್ರವಾಹದಲ್ಲಿ ಸೇತುವೆ ಅರ್ಧ ಕೊಚ್ಚಿ ಹೋಗಿತ್ತು. ಸೇತುವೆ ನಿರ್ಮಾಣ ಮಾಡಿಕೊಡಿ ಎಂದು ಸಚಿವ ಸಂತೋಷ ಲಾಡ್ಗೆ ಮನವಿ ಸಲ್ಲಿಸಿದ್ದರು. ಕಳೆದ 4 ದಿನಗಳಿಂದ ಸುರಿದ ಮಳೆಗೆ ಪೂರ್ತಿಯಾಗಿ ಸೇತುವೆ ಕೊಚ್ಚಿಹೋಗಿದೆ.