ಹಾವೇರಿ: ಹಾವೇರಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ವರುಣನ (Karnataka Rain ) ಆರ್ಭಟಕ್ಕೆ ರಸ್ತೆಗಳು ಜಲಾವೃತಗೊಂಡಿದೆ. ನಗರದ ಪಿಬಿ ರಸ್ತೆ, ಹಾನಗಲ್ ರಸ್ತೆಯಲ್ಲಿ ನೀರು ತುಂಬಿ ಹರಿದಿದೆ. ಕೆರೆಯಂತಾದ ರಸ್ತೆಗಳಲ್ಲಿ ವಾಹನ ಸವಾರರು ಪರದಾಡಿದರು. ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ್ದು ಅವಾಂತರವೇ ಸೃಷ್ಟಿಯಾಗಿದೆ.
ಹಾವೇರಿ ತಾಲೂಕಿನ ಕನಕಾಪುರ ಬಳಿ ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ಒಡೆದು ಬೆಳೆಹಾನಿಯಾಗಿದೆ. ಜಮೀನುಗಳಿಗೆ ಮಳೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ. ಬ್ಯಾಡಗಿ ಪಟ್ಟಣದ ಜನಾತಾ ಪ್ಲಾಟ್‌ನ ಮನೆಗಳಿಗೆ ನೀರು ನುಗ್ಗಿದೆ. ಹಾವೇರಿ ಬ್ಯಾಡಗಿ ರಸ್ತೆ ತಡೆದು ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಪ್ರತಿಭಟಿಸಿದರು. ಮಳೆ ನೀರು ಹೋಗಲು ಸರಿಯಾದ ಕಾಲುವೆ ಇಲ್ಲದ ಪರಿಣಾಮ ಮಳೆ ನೀರು ಮನೆಗಳಿಗೆ ನುಗ್ಗಿದೆ ಎಂದು ಆಕ್ರೋಶಿಸಿದರು.
ವಿಜಯನಗರದಲ್ಲೂ ಧಾರಾಕಾರ ಮಳೆ
ವಿಜಯನಗರ ಜಿಲ್ಲೆಯಲ್ಲಿ ನಿನ್ನೆ ತಡೆರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ, ಮನೆಗಳಿಗೆ ನೀರು ನುಗ್ಗಿದೆ. ಕೂಡ್ಲಿಗಿ ತಾಲೂಕಿನ ಕೊಟ್ಟೂರು ರಸ್ತೆಯಲ್ಲಿ ಹತ್ತಾರು ಮನೆಗಳಿಗೆ ನೀರು ನುಗ್ಗಿ ಅವಾಂತರವಾಗಿದೆ. ನೀರು ನುಗ್ಗಿದ್ದರಿಂದ ರಾತ್ರಿಯಿಡಿ ನಿವಾಸಿಗಳು ಜಾಗರಣೆ ಇರಬೇಕಾಯಿತು. ಮೊಣಕಾಲುದ್ದ ಮಳೆ ನೀರು ನಿಂತು ಮನೆಯಲ್ಲಿದ್ದ ಸಾಮಗ್ರಿಗಳು ನೀರಲ್ಲೇ ಮುಳುಗಡೆಯಾಗಿದ್ದವು. ಮಳೆ ನೀರು ನುಗ್ಗಿದ ಮನೆಗಳಿಗೆ ತೆರಳಿ ಜನರ ಸಮಸ್ಯೆಯನ್ನು ಪುರಸಭೆ ಅಧ್ಯಕ್ಷ ಕಾವಲಿ ಶಿವಪ್ಪ ಆಲಿಸಿದರು.
ತಡರಾತ್ರಿ ಸುರಿದ ಮಳೆಗೆ ಈರುಳ್ಳಿ ಬೆಳೆಗೆ ಹಾನಿಯಾಗಿದೆ. ಹತ್ತಾರು ಎಕರೆಯಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಗೆ ಮಳೆ ನೀರು ನುಗ್ಗಿ ಅವಾಂತರವೇ ಸೃಷ್ಟಿಸಿದೆ. ಬೆಳೆದು ನಿಂತಿದ್ದ ಈರುಳ್ಳಿ ಬೆಳೆಗೆ ಮಳೆ ನೀರು ನುಗ್ಗಿದ್ದರಿಂದ ಕೊಳೆಯುವ ಆತಂಕ ಇದೆ. ವಿಜಯನಗರದ ಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಎಸ್.ಎಂ ಮಂಜಯ್ಯ ಎಂಬವವರು ಬೆಳೆಗೆ ನುಗ್ಗಿದ ನೀರನ್ನು ಹರಿಮಾಡಿ ಬಿಟ್ಟು ಈರುಳ್ಳಿ ರಕ್ಷಣೆಗೆ ಮುಂದಾದರು. ಕೈಗೆ ಬಂದ ತುತ್ತು ಬಾಯಿಗೆ ಬರುತ್ತೋ..? ಇಲ್ವೋ..? ಆತಂಕದಲ್ಲಿದ್ದಾರೆ. ಬೆಳೆ ನಾಶ ಆದರೆ ಸೂಕ್ತ ಪರಿಹಾರ ಕೊಡಬೇಕು ಅಂತ ಈರುಳ್ಳಿ ಬೆಳೆಗಾರರಿಂದ ಆಗ್ರಹಿಸಿದ್ದಾರೆ.
ಹಡಗಲಿ ತಾಲೂಕಿನಲ್ಲೂ ಭಾರೀ ಮಳೆ ಸುರಿದಿದ್ದು, ಈರುಳ್ಳಿ ಹೊಲಕ್ಕೆ ನೀರು ನುಗ್ಗಿತ್ತು. ಅಪಾರ ಪ್ರಮಾಣ ಈರುಳ್ಳಿ ಬೆಳೆ ನಾಶವಾಗಿದೆ. ಹಡಗಲಿ ತಾಲೂಕಿನ ಕೆಂಚಮ್ಮನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. 3.5 ಎಕರೆ ಹೊಲದಲ್ಲಿ ಈರುಳ್ಳಿ ಕಿತ್ತು ಒಣಗಿಸಲು ಹಾಕಲಾಗಿತ್ತು. ಆದರೆ ನಿನ್ನೆ ರಾತ್ರಿ ಭಾರೀ ಮಳೆಯಿಂದಾಗಿ ನೀರಲ್ಲೇ ಈರುಳ್ಳಿ ಬೆಳೆ ತೇಲಾಡಿದೆ. ಎಕರೆಗೆ ಹತ್ತಾರು ಸಾವಿರ ಖರ್ಚು ಮಾಡಲಾಗಿತ್ತು. ಮಾರ್ಕೆಟ್‌ನಲ್ಲಿ ಈರುಳ್ಳಿ ಬೆಳೆಗೆ ಬೆಲೆ ಇರುವುದರಿಂದ ಆಶಾ ಭವಾನೆಯಲ್ಲಿದ್ದರು. ಆದರೆ ಏಕಾಏಕಿ ನಿನ್ನೆ ಮಳೆ ಸುರಿದಿದ್ದು, ಈರುಳ್ಳಿ ಕೊಳೆತುಹೋಗುವ ಆತಂಕದಲ್ಲಿ ಅನ್ನದಾತ ಇದ್ದಾರೆ.
ದಾವಣಗೆರೆಯಲ್ಲಿ ನಿರಂತರ ಮಳೆಗೆ ಗೋಡೆ ಕುಸಿತ
ನಿರಂತರವಾಗಿ ಸುರಿದ ಮಳೆಗೆ ದೊಡ್ಡಬೊಮ್ಮನಹಳ್ಳಿ ಕೋಟೆ ಗೋಡೆ ಕುಸಿದಿದೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ದೊಡ್ಡಬೊಮ್ಮನಹಳ್ಳಿ ಘಟನೆ ನಡೆದಿದೆ. ಪಾಳೇಗಾರರ ಕಾಲದಲ್ಲಿ ನಿರ್ಮಾಣವಾಗಿದ್ದ ಕೋಟೆ ಗೋಡೆಯು ನಿರಂತರ ಮಳೆಯಿಂದ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅನಾಹುತವಾಗಿಲ್ಲ. ಸತತ ಮಳೆಯಿಂದ ಜಗಳೂರು ತಾಲ್ಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಿದೆ. ಮಳೆ ಜತೆ 57 ಕೆರೆ ಯೋಜನೆ ನೀರು ಕೂಡ ಸೇರಿ ಕೋಡಿ ಬೀಳುತ್ತಿವೆ. ಕೋಡಿ ಬಿದ್ದ ತಾಲೂಕಿನ ಎರಡನೇ ಅತಿ ದೊಡ್ಡ ಕೆರೆ ಗಡಿಮಾಕುಂಟೆ ಕೆರೆಯ ಕೋಡಿ ಬೀಳುವ ದೃಶ್ಯವನ್ನು ನೋಡಲು ಗ್ರಾಮಸ್ಥರು ನೆರೆದಿದ್ದರು. ಕೋಡಿ ಬೀಳುತ್ತಿದ್ದಂತೆ ಕೇಕೆ ಶಿಳ್ಳೇಹಾಕಿ ಸಂತೋಷ ವ್ಯಕ್ತಪಡಿಸಿದರು.
ಕೊಪ್ಪಳದಲ್ಲಿ ಮಳೆಗೆ ನೆಲಕಚ್ಚಿದ ಮೆಕ್ಕೆಜೋಳ
ಕೊಪ್ಪಳ ತಾಲೂಕಿನ ತಿಗರಿ ಗ್ರಾಮದಲ್ಲಿ ತಡರಾತ್ರಿ ಸುರಿದ ಮಳೆಗೆ ಮೆಕ್ಕೆಜೋಳ ಬೆಳೆ ನೆಲಕಚ್ಚಿದೆ. ಮಳೆಯ ಆರ್ಭಟಕ್ಕೆ ಮೆಕ್ಕಜೋಳ ಬೆಳೆ ಹಾನಿಯಾಗಿದೆ. ತಿಗರಿ ಗ್ರಾಮದ ಕೊಟ್ರಪ್ಪ ಅಂಗಡಿ ಎಂಬ ರೈತನ ಬೆಳೆ ಹಾನಿಯಾಗಿದೆ. ಎರಡು ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆ ಬೆಳೆದಿದ್ದರು. ಆದರೆ ಮಳೆಯಿಂದಾಗಿ ಮೆಕ್ಕೆಜೋಳ ಬೆಳೆ ನೆಲಕಚ್ಚಿದ್ದು, ಪರಿಹಾರ ನೀಡುವಂತೆ ರೈತ ಕೊಟ್ರಪ್ಪ ಆಗ್ರಹಿಸಿದರು.
ಭದ್ರಾವತಿಯಲ್ಲಿ ಮಳೆ ಅಬ್ಬರ
ಶಿವಮೊಗ್ಗದ ಭದ್ರಾವತಿ ತಾಲೂಕಿನಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಧಾರಾಕಾರ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ್ದು, ರಸ್ತೆಗಳು ಜಲಾವೃತಗೊಂಡಿದೆ. ಮಳೆ ಮುಂದುವರೆದ ಹಿನ್ನೆಲೆಯಲ್ಲಿ ಚರಂಡಿಗಳು ತುಂಬಿ ಹರಿಯುತ್ತಿವೆ. ಚರಂಡಿ ತುಂಬಿದ ಪರಿಣಾಮ ರಸ್ತೆ ಮೇಲೆ ನೀರು ಹರಿಯುತ್ತಿದೆ. ಭದ್ರಾವತಿ ನಗರದ ಜನ್ನಾಪುರದ ಕಿತ್ತೂರು ರಾಣಿ ಚೆನ್ನಮ್ಮ ಬ್ಲಾಕ್‌ನ ಮನೆಯೊಂದರ ಕಾಂಪೌಂಡ್ ಗೋಡೆ ಕುಸಿದಿದೆ. ಮನೆಗಳಿಗೆ ನುಗ್ಗಿರುವ ನೀರನ್ನು ಹೊರ ಹಾಕಲು ಜನರು ಹರಸಾಹಸ ಪಡುತ್ತಿದ್ದಾರೆ.
ಧಾರವಾಡದಲ್ಲಿ ಪ್ರವಾಹಕ್ಕೆ ಸಿಲುಕಿದ ವ್ಯಕ್ತಿ
ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಕಾಲವಾಡ ಗ್ರಾಮದ ಹೊರಹೊಲಯದಲ್ಲಿ ಬೆಣ್ಣೆ ಹಳ್ಳದ ಪ್ರವಾಹಕ್ಕೆ ವ್ಯಕ್ತಿಯೊಬ್ಬರು ಸಿಲುಕಿದ ಘಟನೆ ನಡೆದಿದೆ. ಲಕ್ಷ್ಮಣ ಬಾರಕೇರ ಹಳ್ಳದಲ್ಲಿ ಸಿಲುಕಿರುವವರು. ಕಳೆದ ಎರಡು ದಿನಗಳಿಂದ ಲಕ್ಷ್ಮಣ ಹೊಲದಲ್ಲಿಯೇ ಇದ್ದರು. ನಿನ್ನೆ ಏಕಾಏಕಿ ಬೆಣ್ಣೆ ಹಳ್ಳದ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಸುತ್ತಲೂ ನೀರು ಆವರಿಸಿದೆ. ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ ನಡೆಸಿ ವ್ಯಕ್ತಿಯನ್ನು ಹೊರತರಲಾಯಿತು. ಸ್ಥಳಕ್ಕೆ ನವಲಗುಂದ ಶಾಸಕ ಕೋನರೆಡ್ಡಿ ಭೇಟಿ ನೀಡಿದರು.
ಮಡಿಕೇರಿಯಲ್ಲಿ ಮಳೆಯ ಸಿಂಚನ
ಶನಿವಾರ ಬೆಳಗ್ಗಿನಿಂದಲೇ ತುಂತುರು ಮಳೆ ಆರಂಭವಾಗಿದ್ದು, ದಸರಾ ಶೋಭಾಯಾತ್ರೆ ಸಿದ್ಧತೆಗೆ ವರುಣ ಅಡ್ಡಿಯಾಗಿದ್ದಾನೆ. ಮಳೆಯ ನಡುವೆ ಶೋಭಾಯಾತ್ರೆಗೆ ಬಿರುಸಿನ ಸಿದ್ಧತೆ ನಡೆಯುತ್ತಿದೆ. ಸಂಜೆ ವೇಳೆಗೆ ಮಳೆ ಬಿಡುವು ನೀಡುವ ಸಾಧ್ಯತೆ ಇದೆ. ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಇದ್ದು, ಮಳೆಯಿಂದ ಜನತೆಗೆ ಕಿರಿಕಿರಿ ಅನುಭವಿಸಿದ್ದಾರೆ.