ಶಿವಮೊಗ್ಗ: ನಿನ್ನೆ ತಡರಾತ್ರಿ ಸುರಿದ ಧಾರಾಕಾರ ಮಳೆಗೆ (Karnataka rain) ವಾಸದ ಮನೆಯೊಂದು ಕುಸಿದು ಬಿದ್ದಿದೆ. ಶಿವಮೊಗ್ಗದ ಮಿಳಘಟ್ಟದಲ್ಲಿ ಘಟನೆ ನಡೆದಿದೆ. ಕುಲುಶುಂಬಿ ಎನ್ನುವವರಿಗೆ ಸೇರಿದ ಮನೆ ಕುಸಿದ ಕಾರಣಕ್ಕೆ ಇಡೀ ಕುಟುಂಬ ಬೀದಿಗೆ ಬಿದ್ದಿದೆ.
ಮನೆ ಕುಸಿತದಿಂದ ಕುಲುಶುಂಬಿ ಕುಟುಂಬಸ್ಥರು ಸಂಕಷ್ಟಕ್ಕೆ ಸಿಲುಕಿದ್ದು, ಕಂಗಲಾಗಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸರ್ಕಾರಕ್ಕೆ ಮನೆ ಕಟ್ಟಿಸಿಕೊಡುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಮನೆಯಿಲ್ಲದೆ ಇಡೀ ಕುಟುಂಬ ಬೀದಿಯಲ್ಲಿ ವಾಸ ಮಾಡುವಂತಾಗಿದೆ.
ಚಿತ್ರದುರ್ಗದಲ್ಲಿ ತುಕ್ಕು ಹಿಡಿದ ಬ್ಯಾರೇಜ್ ಗೇಟ್‌ಗಳು
ಬರದ ನಾಡಲ್ಲಿ ಸುರಿದ ಭರ್ಜರಿ ವರ್ಷಧಾರೆಯಿಂದಾಗಿ ಕೆರೆ ಕಟ್ಟೆ ಸಂಪೂರ್ಣ ಭರ್ತಿಯಾಗಿದೆ. ರೈತರ ಮೊಗದಲ್ಲಿ ಮಳೆರಾಯ ಮಂದಹಾಸ ಮೂಡಿಸಿದ್ದರೆ, ಮತ್ತೊಂದು ಕಡೆ ಬ್ಯಾರೇಜ್ ಗೇಟ್‌ಗಳು ರೈತರಲ್ಲಿ ಆತಂಕ ಮೂಡಿಸುತ್ತಿದೆ. ಚಿತ್ರದುರ್ಗದ ಮೊಳಕಾಲ್ಮೂರು ತಾಲ್ಲೂಕಿನ ಚಿಕ್ಕುಂತಿ& ಚಿಕ್ಕೋಬನಹಳ್ಳಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬ್ಯಾರೇಜ್ ಗೇಟ್‌ಗಳು ತುಕ್ಕು ಹಿಡಿಯುತ್ತಿವೆ.
ಬ್ಯಾರೇಜ್ ಗೇಟ್ ತುಕ್ಕು ಹಿಡಿದು ಅಪಾರ ಪ್ರಮಾಣದ ನೀರು ಸೋರಿಕೆಯಾಗುತ್ತಿದೆ. ಚಿನ್ನ ಹಗರಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿರುವ ಬ್ಯಾರೇಜ್ ಗೇಟ್‌ನಿಂದ ನೀರು ಸೋರಿಕೆ ಆಗುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ರೈತರ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: Road Accident : ಪ್ರತ್ಯೇಕ ಕಡೆಗಳಲ್ಲಿ ಅಪಘಾತ; ಓವರ್ ಸ್ಪೀಡ್ ಯಡವಟ್ಟು, ಪ್ರಾಣಕ್ಕೆ ತಂತು ಕುತ್ತು
ಮಳೆ ಹಾನಿ ಪ್ರದೇಶಕ್ಕೆ ಶಾಸಕ ವೀರೇಂದ್ರ ಪಪ್ಪಿ ಭೇಟಿ
ಮಳೆ ಹಾನಿ ಪ್ರದೇಶಕ್ಕೆ ಭಾನುವಾರ ಶಾಕ ವೀರೇಂದ್ರ ಪಪ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಓಬಣ್ಣನಹಳ್ಳಿ ಗ್ರಾಮದಲ್ಲಿ ಸತತ ಮಳೆಯಿಂದ ಪ್ರವಾಹ ಸ್ಥಿತಿ ಉಂಟಾಗಿತ್ತು. ಹೀಗಾಗಿ ಗ್ರಾಮಕ್ಕೆ ಭೇಟಿ ನೀಡಿ ಹಾನಿಗೊಂಡ ಪ್ರದೇಶದ ವೀಕ್ಷಣೆ ಮಾಡಿದರು. ಕೂಡಲೇ ಮೂಲಸೌಕರ್ಯ ನೀಡುವುದಾಗಿ ಭರವಸೆ ನೀಡಿದರು.
ಧಾರವಾಡದಲ್ಲಿ ಜಿಟಿಜಿಟಿ ಮಳೆ
ಧಾರವಾಡ ಜಿಲ್ಲೆಯಲ್ಲಿ ಎರಡು ದಿನಗಳಿಂದ ಜಿಟಿಜಿಟಿ ಮಳೆಯಾಗುತ್ತಿದ್ದು, ವಾತಾವರಣ ತಂಪಾಗಿದೆ. ತಂಪು ವಾತಾವರಣದಿಂದ ಹೆಸರು, ಉದ್ದು ಹಾಗೂ ಇತರೆ ಬೆಳೆ ಬೆಳೆದ ರೈತರಿಗೆ ಸಂಕಷ್ಟ ಎದುರಾಗಿದೆ. ಈಗಾಗಲೇ ಕಟಾವಿಗೆ ಬಂದಿದ್ದ ಬೆಳೆಗಳು ಜಿಟಿಜಿಟಿ ಮಳೆಗೆ ಬೆಳೆಗಳು ಮೊಳಕೆ ಒಡೆಯುವ ಸಾಧ್ಯತೆ ಇದೆ. ಸುಮಾರು 60 ಸಾವಿರ ಹೆಕ್ಟೇರ್‌ನಲ್ಲಿ ಹೆಸರು, ಉದ್ದು ಹಾಗೂ ಇತರೆ ಬೆಳೆಗಳನ್ನು ಬೆಳೆದಿದ್ದಾರೆ. ನವಲಗುಂದ ಭಾಗದಲ್ಲಿ ರೈತರು ಈಗಾಗಲೇ ಹೆಸರು ಬೆಳೆ ಕಟಾವ್ ಮಾಡಿದ್ದಾರೆ. ಧಾರವಾಡ ಹಾಗೂ ಅಳ್ನಾವರ ಭಾಗದಲ್ಲಿ ಬೆಳೆ ಇನ್ನು ಕಟಾವು ಆಗಬೇಗಬೇಕು. ಹೀಗಾಗಿ ಸರಿಯಾಗಿ ಸಮೀಕ್ಷೆ ಮಾಡಿ ಬೆಳೆ ವಿಮೆ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಗಾಳಿಯೊಂದಿಗೆ ಭಾರಿ ಮಳೆ ಎಚ್ಚರಿಕೆ
ಆ.26ರಂದು ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪ್ರತ್ಯೇಕವಾದ ಭಾರೀ ಮಳೆಯೊಂದಿಗೆ ನಿರಂತರ ಗಾಳಿಯ ವೇಗ 30-40 ಕಿ.ಮೀ ವೇಗದಲ್ಲಿ ಬೀಸಲಿದೆ. ಇನ್ನೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುತೇಕ ಕಡೆಗಳಲ್ಲಿ ಸಾಧಾರಣ ಮಳೆಯೊಂದಿಗೆ ನಿರಂತರ ಗಾಳಿಯ ವೇಗ 30-40 ಕಿ.ಮೀ ತಲುಪುವ ಸಾಧ್ಯತೆಯಿದೆ. ಇನ್ನೂ ಬೆಳಗಾವಿ ಜಿಲ್ಲೆಯ ಪ್ರತ್ಯೇಕವಾಗಿ ಭಾರೀ ಮಳೆ ಮತ್ತು ನಿರಂತರ ಗಾಳಿಯ ವೇಗ 40-50 ಕಿ.ಮೀ ಇರಲಿದೆ. ಉತ್ತರ ಒಳನಾಡು ಉಳಿದ ಜಿಲ್ಲೆಗಳಲ್ಲಿ ಅನೇಕ ಸ್ಥಳಗಳಲ್ಲಿ ಲಘುವಾಗಿ ಮಧ್ಯಮ ಮಳೆ ಮತ್ತು ನಿರಂತರ ಗಾಳಿಯ ಇರಲಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ