ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ (Karnataka Rain) ಮುಂದುವರಿದಿದೆ. ರಾಷ್ಟ್ರೀಯ ಹೆದ್ದಾರಿ 66ರ ಕಾರವಾರದ ಸುರಂಗ ಮಾರ್ಗದಲ್ಲಿ ಕಲ್ಲು ಕುಸಿದಿದೆ. ಬಿಣಗಾದಿಂದ ಕಾರವಾರಕ್ಕೆ ಆಗಮಿಸುವ ಸುರಂಗದ ಎದುರು ಕಲ್ಲು, ಮಣ್ಣು ಜಾರಿ ಬಿದ್ದಿದೆ. ಅದೃಷ್ಟವಶಾತ್ ವಾಹನ ಸವಾರರು ಪಾರಾಗಿದ್ದಾರೆ.
ಸ್ಥಳಕ್ಕೆ ಕಾರವಾರ ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದು, ಐಆರ್‌ಬಿ ಕಾರ್ಮಿಕರಿಂದ ಹೆದ್ದಾರಿಯಲ್ಲಿ ಬಿದ್ದ ಕಲ್ಲು ಮಣ್ಣು ತೆರವು ಮಾಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಬಿಣಗಾ ಕಾರವಾರ ಟನೆಲ್ ಬಂದ್ ಮಾಡಿದ್ದಾರೆ. ಬಿಣಗಾದಿಂದ ಬೈತಕೋಲ್ ಮಾರ್ಗದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಕುಸಿದು ಬಿದ್ದ ದೇವಸ್ಥಾನದ ಗೋಪುರ
ಬೆಳಗಾವಿ: ನಿರಂತರ ಮಳೆಗೆ ಬೆಳಗಾವಿಯ ಕಿತ್ತೂರಿನ ಕೊಂಡವಾಡ ಚೌಕಿನಲ್ಲಿರುವ ಕರೆಮ್ಮ ದೇವಿ ದೇವಸ್ಥಾನದ ಗೋಪುರ ಕುಸಿದು ಬಿದ್ದಿದೆ. ಕಳೆದ ಮೂರು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಗೋಪುರ ಸಂಪೂರ್ಣವಾಗಿ ಕುಸಿದು, ಪಕ್ಕದ ಮಳಿಗೆಯ ಮೇಲೆ ಗೋಪುರ ಬಿದ್ದಿದೆ. ಘಟನೆಯಲ್ಲಿ ಅದೃಷ್ಟವಷಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ನಿನ್ನೆ ಶುಕ್ರವಾರವಷ್ಟೇ ಕಿತ್ತೂರು ಕೋಟೆಯ ಆವರಣದಲ್ಲಿದ್ದ ಐತಿಹಾಸಿಕ ವಾಚ್ ಟವರ್ ಕುಸಿದು ಬಿದ್ದಿತ್ತು.
ರಾಮ-ಲಕ್ಷ್ಮಣ ದೇಗುಲಕ್ಕೆ ಜಲದಿಗ್ಭಂದನ
ಜಲಾಶಯದಿಂದ 1.80 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ನದಿಗೆ ಹರಿಬಿಟ್ಟ ಹಿನ್ನೆಲೆಯಲ್ಲಿ ವಿಜಯನಗರದ ವಿಶ್ವ ವಿಖ್ಯಾತ ಹಂಪಿಯಲ್ಲಿ ತುಂಗಭದ್ರಾ ಉಕ್ಕಿ ಹರಿಯುತ್ತಿದೆ. ನದಿಯ ರೌದ್ರ ನರ್ತನ ಹೆಚ್ಚಾಗಿದ್ದರಿಂದ ಹಂಪಿಯ ಹಲವು ಸ್ಮಾರಕಗಳು ಮುಳುಗಿವೆ. ಅದರಲ್ಲೂ ಐತಿಹಾಸಿಕ ರಾಮ – ಲಕ್ಷ್ಮಣ ದೇಗುಲಕ್ಕೆ ಜಲ ದಿಗ್ಭಂದನ ಹಾಕಲಾಗಿದೆ. ಪ್ರವಾಸಿಗರು ಉಳಿದುಕೊಳುತ್ತಿದ್ದ ಮೂರು ಕಲ್ಲಿನ ಮಂಟಪಗಳು ಮುಕ್ಕಾಲು ಭಾಗ ಮುಳುಗಡೆಯಾಗಿದೆ.
ತುಂಗಭದ್ರಾ ನದಿ ನೀರು ನುಗ್ಗಿದ್ದರಿಂದ ದೇಗುಲಕ್ಕೆ ಭಕ್ತರ ಸಂಖ್ಯೆಯಲ್ಲಿ ಭಾರೀ ವಿರಳವಾಗಿದೆ. ರಾಮ – ಲಕ್ಷ್ಮಣ, ಸೀತೆ ದೇಗುಲ 2011, 2017ರಲ್ಲಿ ಎರಡು ಬಾರಿ ಸಂಪೂರ್ಣ ಮುಳುಗಡೆ ಆಗಿತ್ತು. ವಾಲಿ ಎನ್ನುವ ರಾಜನನ್ನು ಸಂಹರಿಸಿ ಸುಗ್ರೀವ ಅನ್ನೋ ರಾಜನಿಗೆ ಪಟ್ಟಾಭಿಷೇಕ ಮಾಡಿದ ಜಾಗವೇ ರಾಮ-ಲಕ್ಷ್ಮಣ ದೇಗುಲವಾಗಿದೆ. ರಾಮ-ಲಕ್ಷ್ಮಣ, ಸೀತಾಮಾತೆ, ಆಂಜನೇಯ ಹಾಗೂ ಸುಗ್ರೀವ ರಾಜ ಸೇರಿ ಐದು ಜನರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ವಿಧಿ, ವಿಧಾನ ಮಂಟಪ, ಸ್ನಾನ ಘಟ್ಟ, ಪುರಂದರ ದಾಸರ ಮಂಟಪ ಸೇರಿ ಹತ್ತಾರು ಸ್ಮಾರಕಗಳು ಈಗಾಗಲೇ ಮುಳುಗಡೆಯಾಗಿದೆ. ಸ್ಮಾರಕಗಳು ಎಲ್ಲಿವೆ ಎಂಬುದು ಗೊತ್ತಾಗದ ರೀತಿ ತುಂಗಭದ್ರಾ ಉಕ್ಕಿ ಹರಿಯುತ್ತಿದೆ.
ಇದನ್ನೂ ಓದಿ: Murder case : ಮಲೆನಾಡಲ್ಲಿ ಒಂಟಿ ಮಹಿಳೆ ಕೊಲೆ; ಕತ್ತು ಹಿಸುಕಿ ಕೊಂದವರು ಯಾರು?
ಮುಳುಗಿದ ಸಂಗಮೇಶ್ವರ ದೇವಾಲಯ
ಮಲೆನಾಡಿನ ಶಿವಮೊಗ್ಗದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಮಳೆ ಅಬ್ಬರಕ್ಕೆ ಮಲೆನಾಡಿನ ನದಿಗಳು ಮೈದುಂಬಿ ಹರಿಯುತ್ತಿದೆ. ಅಪಾಯದ ಮಟ್ಟ ಮೀರಿ ತುಂಗಾ, ಭದ್ರಾ ಹರಿಯುತ್ತಿದೆ. ತುಂಗಾ, ಭದ್ರಾ ನದಿ ಸಂಗಮ ಕ್ಷೇತ್ರ ನೋಡಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕೂಡ್ಲಿ ತುಂಗಾ ಹಾಗೂ ಭದ್ರಾ ನದಿ ಬಂದು ಸಂಗಮ ಆಗುವ ಪುಣ್ಯಕ್ಷೇತ್ರವಾಗಿದ್ದು, ಸಂಗಮೇಶ್ವರ ದೇವಾಲಯ ಮುಳುಗಿದೆ.
ಏತ ನೀರಾವರಿ ಬ್ಯಾರೇಜ್‌ಗೆ ಪ್ರವಾಸಿಗರ ದಂಡು
ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಬ್ಯಾರೇಜ್‌ನಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಮುಂಡರಗಿ ತಾಲೂಕಿನ ಹಮ್ಮಿಗಿ, ಗುಮ್ಮಗೋಳ, ವಿಠಲಾಪುರ ಸೇರಿದಂತೆ ಅನೇಕ ಗ್ರಾಮದ ರೈತರು ತತ್ತರಿಸಿದ್ದಾರೆ.
ಬ್ಯಾರೇಜ್‌ನ 26 ಗೇಟ್‌ಗಳಲ್ಲಿ 19 ಗೇಟ್‌ಗಳು ತೆರದು 2,90,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಬ್ಯಾರೇಜ್‌ನಿಂದ ರಭಸವಾಗಿ ಹರಿಯುತ್ತಿರುವ ನೀರು ನೋಡಲು ಕಿರು ಆಣೆಕಟ್ಟು ವೀಕ್ಷಿಸಲು ಪ್ರವಾಸಿಗರು ದೌಡಯಿಸಿದ್ದಾರೆ. ಬ್ಯಾರೇಜ್ ಎದುರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಗೊಂಡಿದ್ದಾರೆ.
ಜೋಗ ಜಲಪಾತಕ್ಕೆ ಪ್ರವಾಸಿಗರು ಫಿದಾ
ಲಿಂಗನಮಕ್ಕಿ ಜಲಾಶಯದಿಂದ 40 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ವಿಶ್ವವಿಖ್ಯಾತ ಜೋಗ ಜಲಪಾತ ಕಣ್ಮನ ಸೆಳೆಯುತ್ತಿದೆ. ಹಾಲ್ನೊರೆಯಂತೆ ಧುಮ್ಮಿಕ್ಕಿ ಹರಿಯುತ್ತಿದೆ. ಜೋಗ ಜಲಪಾತದ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ ಆಗಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ