ಕೊಡಗು: ಕೊಡಗು ಜಿಲ್ಲೆಯಾದ್ಯಂತ ವರುಣನ (Karnataka Rain) ಆರ್ಭಟ ಕೊಂಚ ತಗ್ಗಿದೆ. ಮಳೆ ಕಡಿಮೆಯಾದರೂ ಮಳೆಯ ಅನಾಹುತ ನಿಂತಿಲ್ಲ. ಮಾದಪುರ ಟೌನ್ ಸಮೀಪ ಗುಡ್ಡ ಕುಸಿದಿದೆ. ಗುಡ್ಡ ಕುಸಿದ ಜಾಗದಲ್ಲೆ ಭೂಮಿ ಬಿರುಕು ಬಿಟ್ಟಿದೆ. ಮಳೆ ಹೆಚ್ಚಾದಲ್ಲಿ ಮತ್ತಷ್ಟು ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ಮಡಿಕೇರಿ ಮಾದಪುರ ಸೋಮವಾರಪೇಟೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಇದಾಗಿದೆ. ಗುಡ್ಡ ಕುಸಿದರೆ ಮಡಿಕೇರಿ – ಮಾದಾಪುರ ಸೋಮವಾರಪೇಟೆ ರಸ್ತೆ ಬಂದ್ ಆಗುವ ಸಾಧ್ಯತೆ ಇದೆ. ಸದ್ಯ ಆತಂಕದಲ್ಲೇ ವಾಹನ ಸವಾರರು ಓಡಾಡುತ್ತಿದ್ದಾರೆ.
ಉಕ್ಕಿ ಹರಿಯುವ ನೀರಿಗೆ ಜಿಗಿದು ಯುವಕರ ಈಜಾಟ
ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ನದಿ ಸೇರಿದಂತೆ ಕಾಲುವೆಗಳಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿದೆ. ಇತ್ತ ಬಾಲಕರು ಜೀವದ ಹಂಗು ತೊರೆದು, ಕಾಲುವೆಗಳಿಗೆ ಜಿಗಿಯುತ್ತಿದ್ದಾರೆ. ರಕ್ಷಣಾ ಕವಚಗಳು ಇಲ್ಲದೆ ಕಾಲುವೆಗಳಿಗೆ ಮೇಲಿಂದ ಜಿಗಿದು ಆಟವಾಡುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಜಲಾಶಯದ ಬಳಿ ಇರುವ ಕಾಲುವೆಗಳಲ್ಲಿ ಜಿಗಿದು ಈಜಾಡುತ್ತಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಳೆಯ ನಡುವೆ ಆತಂಕದ ಹುಟ್ಟಿಸಿದ ಕಾಳಿಂಗ
ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಇದರ ನಡುವೆ ಕಾಳಿಂಗ ಸರ್ಪವೊಂದು ಪ್ರತ್ಯಕ್ಷಗೊಂಡು ಆತಂಕದ ಹುಟ್ಟಿಸಿತ್ತು. 13 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆಹಿಡಿಯಲಾಗಿದೆ. ಕಳಸದ ಸಂಸೆ ಗ್ರಾ.ಪಂ ವ್ಯಾಪ್ತಿಯ ಪಾತಿಗುಡ್ಡದಲ್ಲಿ ಘಟನೆ ನಡೆದಿದೆ. ಕಾಳಿಂಗ ಸರ್ಪ ಓಡಾಟದಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿತ್ತು. ಉರಗತಜ್ಞ ರಿಜ್ವಾನ್ ಹಾಗೂ ಅರಣ್ಯ ಸಿಬ್ಬಂದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಕಾಳಿಂಗ ಸರ್ಪ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ವಿಜಯನಗರದಲ್ಲಿ ಐತಿಹಾಸಿಕ ಹಂಪಿಯ ನಾನಾ ಸ್ಮಾರಕಗಳು ಮುಳುಗಡೆ
ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ಐತಿಹಾಸಿಕ ಹಂಪಿಯ ನಾನಾ ಸ್ಮಾರಕಗಳು ಮುಳುಗಡೆಯಾಗಿದೆ. ವಿಜಯನಗರದ ಕೋದಂಡರಾಮ ದೇಗುಲದ ಅರ್ಧಕ್ಕೆ ನೀರು ಹರಿದು ಬಂದಿದೆ. ಸೀತೆ ಸೆರಗು, ಸುಗ್ರೀವ ಗುಹೆಯ ಬಳಿಯೂ ಜಲಾವೃತಗೊಂಡಿದೆ. ನದಿ ಪಾತ್ರಕ್ಕೆ ತೆರಳದಂತೆ ಸ್ಥಳೀಯ ಆಡಳಿತ ಎಚ್ಚರಿಕೆ ನೀಡಿದೆ. ಕಳೆದ ಎರಡು ದಿನಗಳ ಹಿಂದೆಯೇ ಸ್ನಾನಘಟ್ಟಗಳು, ಪುರಂದರ ದಾಸರ ಮಂಟಪಗಳು ಮುಳುಗಿದೆ.
ಇತ್ತ ತುಂಗಭದ್ರಾ ನದಿಯ ನೀರು ತುಂಬಿ ಐತಿಹಾಸಿಕ ಮದಲಘಟ್ಟ ಆಂಜನೇಯ ದೇಗುಲದ ಬಳಿ ಹರಿದಿದೆ. ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮದಲಘಟ್ಟ ಆಂಜನೇಯ ಸ್ವಾಮಿ ದೇಗುಲದಲ್ಲಿ ಇನ್ನೂ ಸ್ವಲ್ಪ ನೀರು ಹೆಚ್ಚಾದರೆ ಜಲಾವೃತ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: Assault Case : ಠಾಣೆಗೆ ಬಂದ ಮಹಿಳೆಗೆ ಜಾಡಿಸಿ ಒದ್ದ ಖಡಕಲಾಟ ಪಿಎಸ್‌ಐ!
ಪ್ರವಾಹಕ್ಕೆ ಸಿಲುಕಿ ನಲುಗಿ ಹೋದ ಗೋಕಾಕ ನಗರ
ಪ್ರವಾಹಕ್ಕೆ ಸಿಲುಕಿ ಗೋಕಾಕ ನಗರ ನಲುಗಿ ಹೋಗಿದೆ. ಹೀಗಾಗಿ ಶಾಸಕ ರಮೇಶ ಜಾರಕಿಹೊಳಿಯವರಿಂದ ಪರಿಸ್ಥಿತಿ ಅವಲೋಕನ ಮಾಡಿದರು. ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ವಿವಿಧ ಸ್ಥಳಗಳಿಗೆ ರಮೇಶ ಭೇಟಿ ನೀಡಿದರು. ಬೆಳಗಾವಿ, ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮುಂದುವರೆದ ಮಳೆ ಅಬ್ಬರಕ್ಕೆ ಚಿಕ್ಕೋಡಿ ಉಪವಿಭಾಗದ ಜನಜೀವನ ಅಸ್ತವ್ಯಸ್ತವಾಗಿದೆ. ಸರಿಯಾಗಿ ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸದ ಸರ್ಕಾರದ ವಿರುದ್ಧ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ರೈತನ ಆಕ್ರೋಶ ಹೊರಹಾಕಿದ್ದಾರೆ. ಸ್ಥಳೀಯ ಆಡಳಿತದವರು ನದಿಪಾತ್ರದಿಂದ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸುತ್ತಿದ್ದಾರೆ. ಆದರೆ ನಾವು ಹೋಗುವುದಾದರೂ ಎಲ್ಲಿಗೆ ? ರಾಜ್ಯದ ಜನತೆಗೆ ಬೆಳೆದ ಬೆಳೆಗಳನ್ನು ಪೂರೈಸಿ ಪ್ರತಿಯೊಬ್ಬರಿಗೂ ಆಸರೆಯಾಗುತ್ತೇವೆ.
ಆದರೆ ಪ್ರವಾಹದ ಪರಿಸ್ಥಿತಿ ಸಂದರ್ಭದಲ್ಲಿ ನಮ್ಮ ಬಗ್ಗೆ ಕಾಳಜಿ ವಹಿಸಲು ಸರ್ಕಾರದಿಂದ ಆಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ನಾವು ಎಲ್ಲಿಯಾದರೂ ಗುಡಿ-ಗುಂಡಾತರಗಳಲ್ಲಿ ತಂಗಿ ಜೀವನ ನಡೆಸುತ್ತೇವೆ. ಆದರೆ ನಮ್ಮ ಬಳಿ ಲಕ್ಷಾಂತರ ರೂಪಾಯಿ ಮೌಲ್ಯದ ಜಾನುವಾರುಗಳಿವೆ. ಜಾನುವಾರುಗಳು ಬೆಚ್ಚಗೆ ವಾತಾವರಣ ಬೇಕಾಗುತ್ತದೆ. ಸರ್ಕಾರಿ ಜಾಗಗಳಲ್ಲಿ ಜಾನುವಾರುಗಳಲ್ಲಿ ಶೆಡ್ ನಿರ್ಮಿಸಿ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಇತ್ತ ಘಟಪ್ರಭಾ ನದಿ ತೀರದಲ್ಲಿ ಪ್ರವಾಹದ ಆತಂಕ ಹೆಚ್ಚುತ್ತಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಢವಳೇಶ್ವರ ಗ್ರಾಮಕ್ಕೆ ನೀರು ನುಗ್ಗುವ ಸಾಧ್ಯತೆ ಇದೆ. ಢವಳೇಶ್ವರ ಗ್ರಾಮದ ಸುಪ್ರಸಿದ್ಧ ಲಕ್ಷ್ಮೀ ದೇವಿ ದೇವಸ್ಥಾನ ಜಲಾವೃತಗೊಂಡಿದೆ. ಜತೆಗೆ ಡವಳೇಶ್ವರ ಮಹಾಲಿಂಗಪುರ ಸಂಪರ್ಕ ಕಲ್ಪಿಸುವ ನಂದಗಾಂವ ಸೇತುವೆ ಮುಳುಗಡೆಯಾಗಿದೆ. ನದಿ ಪಾತ್ರದ ಜನರನ್ನು ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಕ್ಕೆ ಜಿಲ್ಲಾ ಆಡಳಿತ ಆದೇಶಿಸಿದೆ. ಈಗಾಗಲೇ ಢವಳೇಶ್ವರ ಗ್ರಾಮದಲ್ಲಿ ಗಂಜಿ ಕೇಂದ್ರ ಸ್ಥಾಪನೆ ಮಾಡಲಾಗಿದೆ.
ಮಳೆ ನಿಂತರೂ ನಿಲ್ಲದ ಅನಾಹುತ
ಹಾವೇರಿಯಲ್ಲಿ ಮಳೆಯ ಅಬ್ಬರ ಕಡಿಮೆ ಆಗಿದೆ. ಮಳೆ ನಿಂತರೂ ಅದರಿಂದ ಆಗುತ್ತಿರುವ ಅನಾಹುತಕ್ಕೆ ರೈತರು ಕಂಗಾಲಾಗಿದ್ದಾರೆ. ಹಾನಗಲ್ ತಾಲೂಕಿನ ವರ್ದಿ ಗ್ರಾಮದಲ್ಲಿ ವರದಾ ನದಿಯ ನೀರು ಹರಿದು ರೈತರು ಬೆಳೆ ಕಳೆದುಕೊಂಡಿದ್ದಾರೆ. ರೈತರ ಹೊಲಗಳಿಗೆ ನೀರು ನುಗ್ಗಿ ಶೇಂಗಾ, ಕಬ್ಬು ಬೆಳೆ ಹಾನಿಯಾಗಿದೆ.
ಮುಳುಗಡೆ ಹಂತ ತಲುಪಿದ ವೆಲ್ಲೆಸ್ಲಿ ಸೇತುವೆ
ಮಂಡ್ಯದ ವೆಲ್ಲೆಸ್ಲಿ ಸೇತುವೆ ಮುಳುಗಡೆ ಹಂತ ತಲುಪಿದೆ. ಕೆಆರ್‌ಎಸ್ ಡ್ಯಾಂನಿಂದ 1.30,867 ಕ್ಯೂಸೆಕ್ ನೀರು ಬಿಟ್ಟ ಹಿನ್ನೆಲೆಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಶ್ರೀರಂಗಪಟ್ಟಣದ ಐತಿಹಾಸಿಕ ಸೇತುವೆಯನ್ನು 1804 ರಲ್ಲಿ ಸಂಪೂರ್ಣ ಕಲ್ಲುಗಳಿಂದಲೇ ನಿರ್ಮಿಸಲಾಗಿದೆ. ಆಗಿನ ದಿನಗಳಲ್ಲಿ ಬೆಂಗಳೂರು- ಮೈಸೂರು ನಡುವೆ ಸಂಚರಿಸಲು ಇದ್ದ ಏಕೈಕ ಸೇತುವೆ ಇದಾಗಿದೆ. ಡ್ಯಾಂ ನಿರ್ಮಾಣವಾದಗಿನಿಂದ ಈ ವರೆಗೆ ಮೂರು ಬಾರಿ ಸೇತುವೆ ಮುಳುಗಡೆಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ