ಕಾರವಾರ: ಭಾರಿ ಮಳೆ (Karnataka Rain) ನಡುವೆ ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರನ್ನು ದರದರನೇ ಎಳೆದುತಂದು ಲೈಫ್‌ಗಾರ್ಡ್ ಸಿಬ್ಬಂದಿ ಥಳಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ರವೀಂದ್ರನಾಥ ಟಾಗೋರ್ ಕಡಲತೀರದಲ್ಲಿ ಘಟನೆ ನಡೆದಿದೆ.
ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಅಬ್ಬರ ಒಂದೆಡೆ ಸಮುದ್ರತೀರದಲ್ಲಿ ಪ್ರವಾಸಿಗರ ಹುಚ್ಚಾಟ ಮಿತಿಮೀರಿದೆ. ಅಪಾಯದ ಎಚ್ಚರಿಕೆಯನ್ನು ನಿರ್ಲಕ್ಷಿಸಿದ ಕೆಲ ಪ್ರವಾಸಿಗರು ಸಮುದ್ರಕ್ಕಿಳಿದು, ಈಜುತ್ತಿದ್ದರು. ಅಪಾಯಕಾರಿ ರೀತಿಯಲ್ಲಿ ಅಲೆಗಳು ಅಪ್ಪಳಿಸುತ್ತಿದ್ದರೂ ಲೆಕ್ಕಿಸದೇ ಮೋಜು ಮಸ್ತಿ ಮಾಡುತ್ತಿದ್ದರು.
ಹೀಗಾಗಿ ನೀರಲ್ಲಿ ಈಜಲು ತೆರಳಿದ್ದ ಪ್ರವಾಸಿಗರಿಗೆ ಥಳಿಸಿ ಲೈಫ್‌ಗಾರ್ಡ್‌ಗಳು ದಡಕ್ಕೆ ಕರೆತಂದಿದ್ದಾರೆ. ಬಳಿಕ ಸೂಚನೆಯನ್ನು ನಿರ್ಲಕ್ಷ್ಯಿಸಿ ನೀರಿಗಿಳಿದಿದ್ದಕ್ಕೆ ಹೊಡೆದು ಬುದ್ಧಿ ಹೇಳಿದ್ದಾರೆ. ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುವ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜತೆಗೆ ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿಯೇ ನೀರಿಗಿಳಿಯದಂತೆ ಕಡಲತೀರದಲ್ಲಿ ರೆಡ್ ಫ್ಲ್ಯಾಗ್ ಅಳವಡಿಸಿದರೂ ಹುಚ್ಚಾಟ ತೋರಿದ ಪ್ರವಾಸಿಗರಿಗೆ ಬಿಸಿ ಮುಟ್ಟಿಸಲಾಗಿದೆ.
ನಿರಂತರ ಮಳೆಯಿಂದಾಗಿ ಚಾರ್ಮಾಡಿ ಘಾಟ್ ಅಧೋಗತಿ
ಚಿಕ್ಕಮಗಳೂರಿನಲ್ಲಿ ರಣಮಳೆಗೆ ಜನ-ಜೀವನ ಅಸ್ತವ್ಯಸ್ತವಾಗಿದೆ. ಮಳೆಯ ಅಬ್ಬರಕ್ಕೆ ಚಾರ್ಮಾಡಿ, ಕೊಟ್ಟಿಗೆಹಾರದಲ್ಲಿ ಕೇವಲ 7 ದಿನಕ್ಕೆ 96 ಇಂಚು ಪ್ರಮಾಣದ ಮಳೆ ದಾಖಲಾಗಿದೆ. ಇತ್ತ ನಿರಂತರ ಮಳೆಯಿಂದಾಗಿ ಚಾರ್ಮಾಡಿ ಹೆದ್ದಾರಿ ಸಂಚಾರ ಅಧೋಗತಿ ತಲುಪಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ ವಾಹನ ಚಲಾಯಿಸಲು ಚಾಲಕರು ಪರದಾಡುತ್ತಿದ್ದಾರೆ. ಮಂಜು ಮಿಶ್ರಿತ ಮಳೆಯಿಂದಾಗಿ ಸಂಚಾರಕ್ಕೆ ಅಡೆತಡೆಯಾಗಿದ್ದು ಜತೆಗೆ ಗುಡ್ಡ ಕುಸಿತದ ಆತಂಕವು ಹೆಚ್ಚಿದೆ. ಕಳೆದ ಭಾನುವಾರ ರಾತ್ರಿ ಚಾರ್ಮಾಡಿಯ ಆಲೆಖಾನ್ ಬಳಿ ಗುಡ್ಡ ಕುಸಿದಿತ್ತು.
ಇದನ್ನೂ ಓದಿ: Murder case : ಕುಡಿದ ಅಮಲಿನಲ್ಲಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ
ಮನೆಗಳಿಗೆ ನುಗ್ಗುತ್ತಿರುವ ನೀರು, ಕೆರೆಯಂತಾದ ಜಮೀನು
ಉತ್ತರಕನ್ನಡ ಜಿಲ್ಲೆಯಲ್ಲಿ ನಿಲ್ಲದ ಮಳೆ ಅಬ್ಬರಕ್ಕೆ ಹಲವೆಡೆ ಮನೆಗಳಿಗೆ ನೀರು ನುಗ್ಗುತ್ತಿದೆ. ಅಂಕೋಲಾ ತಾಲ್ಲೂಕಿನ ಅವರ್ಸಾದಲ್ಲಿ ಹೆದ್ದಾರಿ ಪಕ್ಕದ ಜಮೀನು ಕೆರೆಯಂತಾಗಿತ್ತು. ಧಾರಾಕಾರ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಗುಡ್ಡ ಕುಸಿಯುವ ಭೀತಿಯಲ್ಲಿ ಜನರು ಕಾಲಕಳೆಯುತ್ತಿದ್ದಾರೆ. ಕಾರವಾರ, ಅಂಕೋಲಾ ಭಾಗದಲ್ಲಿ ಸಮುದ್ರಕ್ಕೆ ನೀರು ಹರಿದುಹೋಗದೇ ಹಲವೆಡೆ ಅವಾಂತರವೇ ಸೃಷ್ಟಿಯಾಗಿದೆ.
ಇನ್ನೂ ಉತ್ತರಕನ್ನಡದಲ್ಲಿ ಭಾರೀ ಮಳೆಯಿಂದಾಗಿ ಜಲಾಶಯಗಳಿಗೆ ನೀರು ಹರಿದುಬರುತ್ತಿದೆ. ಸೂಪಾ ಜಲಾಶಯದಲ್ಲಿ ನೀರಿನ ಒಳಹರಿವು ಹೆಚ್ಚಿದೆ. ಜೋಯಿಡಾದ ಗಣೇಶಗುಡಿಯಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೂಪಾ ಜಲಾಶಯದ ಗರಿಷ್ಠ 564 ಮೀ ಸಾಮರ್ಥ್ಯ ಇದ್ದು, ಸದ್ಯ ಜಲಾಶಯದಲ್ಲಿ 532.32 ಮೀ ನೀರು ಸಂಗ್ರಹವಾಗಿದೆ.
ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಗುಂಡಬಾಳ ನದಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ನದಿ ತೀರ ಪ್ರದೇಶದ ತೋಟ, ಮನೆಗಳಿಗೆ ನೀರು ನುಗ್ಗಿದೆ. ನೆರೆಯಿಂದಾಗಿ ಗ್ರಾಮದ ಜನರು ಸಂತ್ರಸ್ತರಾಗುವ ಆತಂಕ ಎದುರಾಗಿದೆ. ಮಲೆನಾಡಿನಲ್ಲಿ ಹೆಚ್ಚು ಮಳೆಯಾದ ಕಾರಣ ಗುಂಡಬಾಳ ನದಿ ನೀರಿನಮಟ್ಟ ಏರಿಕೆ ಆಗಿದೆ. ನದಿ ಪಾತ್ರದ ನಿವಾಸಿಗಳನ್ನು ಎತ್ತರದ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಸ್ಥಳೀಯಾಡಳಿತದಿಂದ ಸೂಚನೆ ನೀಡಿದೆ.
ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ
ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ತಗ್ಗು ಪ್ರದೇಶ, ಗದ್ದೆ ಸಾಲುಗಳಿಗೆ ಭಾರೀ ಪ್ರಮಾಣದ ನೀರು ಹರಿದುಹೋಗುತ್ತಿದೆ. ಜನವಸತಿ ಪ್ರದೇಶಗಳತ್ತ ನೀರು ನುಗ್ಗಿ, ರಸ್ತೆಯಲ್ಲಿ ನದಿಯಂತೆ ಹರಿಯುತ್ತಿದೆ. ಸಗ್ರಿ, ಗುಂಡಿಬೈಲು, ಚಕ್ರತೀರ್ಥ ಪ್ರದೇಶದಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ.
ಜತೆಗೆ ಬೈಲಕೆರೆ, ಕಲ್ಸಂಕ ಮಠದಬೆಟ್ಟು ಜಲಾವೃತಗೊಂಡಿದೆ. ಬೈಲಕೆರೆ ಸಮೀಪ ಮನೆಗಳಿಗೆ ನೀರು ನುಗ್ಗಿ ನೆರೆ ಸೃಷ್ಟಿಯಾಗಿತ್ತು. ಹೀಗಾಗಿ ಗುಂಡಿಬೈಲು ಸಮೀಪ ಐದಾರು ಕುಟುಂಬಗಳ ಸದಸ್ಯರನ್ನು ಅಗ್ನಿಶಾಮಕ ದಳದಿಂದ ರಕ್ಷಣೆ ಮಾಡಲಾಗಿದೆ. ಒಂದು ಮನೆಯ ಮೂವರನ್ನು ರಕ್ಷಣೆ ಮಾಡಿ, ಪಾಡಿಗಾರು ಸಮೀಪ ನಾಲ್ಕು ಮನೆಗಳ ಜನರನ್ನು ಎತ್ತರ ಪ್ರದೇಶಕ್ಕೆ ಶಿಫ್ಟ್ ಮಾಡಿದ್ದಾರೆ. ಉಡುಪಿ ಅಂಬಾಗಿಲು ಕಲ್ಸಂಕ ರಸ್ತೆಯಲ್ಲಿ ಸಂಪೂರ್ಣ ನೆರೆಯಾಗಿದೆ. ಉಡುಪಿ ನಗರಕ್ಕೆ ಸಂಪರ್ಕ ಕಲ್ಪಿಸುವ ಬಹುಮುಖ್ಯ ರಸ್ತೆಯಲ್ಲಿ ನೀರು ನಿಂತಿದ್ದು, ನಗರದ ಗುಂಡಿಬೈಲು ವಾಹನ ಸಂಚಾರ ದುಸ್ತರ ಪರಿಸ್ಥಿತಿಯಲ್ಲಿ ಇದೆ.
ರಾಷ್ಟ್ರೀಯ ಹೆದ್ದಾರಿ 66ರ ಅಂಡರ್ ಪಾಸ್ ಪಕ್ಕದ ಸರ್ವಿಸ್ ರಸ್ತೆಯಲ್ಲಿ ನೀರು ನಿಂತು ಸಮಸ್ಯೆಯಾಗಿದೆ. ಸರ್ವಿಸ್ ರಸ್ತೆಯಲ್ಲಿ ನೀರು ನಿಂತು ದಿನವು ಇಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಅಂಡರ್ ಪಾಸ್ ಕಾಮಗಾರಿ ವೇಳೆ ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಸರ್ವಿಸ್ ರಸ್ತೆ ಬ್ಲಾಕ್ ಆಗಿದೆ ಎಂದು ಸ್ಥಳೀಯರು ಕಿಡಿಕಾರಿದರು. ಸ್ಥಳೀಯರ ದೂರಿನ ಹಿನ್ನೆಲೆ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಪರಿಸ್ಥಿತಿ ಅವಲೋಕಿಸಿದರು. ತಕ್ಷಣ ಈ ಸಮಸ್ಯೆಗೆ ತುರ್ತು ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು. ಸರ್ವಿಸ್ ರಸ್ತೆ ಪಕ್ಕದಲ್ಲಿರುವ ಚರಂಡಿ ವ್ಯವಸ್ಥೆ, ಸರಿ ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಸಂಸರಿಗೆ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಸಾಥ್ ನೀಡಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ