ಚಿಕ್ಕೋಡಿ/ಬೆಳಗಾವಿ: ಭಾರಿ ಮಳೆಗೆ (Karnataka Rain) ಕೃಷ್ಣಾ ನದಿಯಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹದಲ್ಲಿ ಎನ್‌ಡಿಆರ್‌ಎಫ್ ಸಿಬ್ಬಂದಿ ಬೋಟ್ ಪಲ್ಟಿಯಾಗಿದೆ. ಚಿಕ್ಕೋಡಿಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಬಳಿ ಕೃಷ್ಣಾ ನದಿಯಲ್ಲಿ ಘಟನೆ ನಡೆದಿದೆ. ಒಂದು ವಾರದಿಂದ ಕುಡಚಿ ಪಟ್ಟಣಕ್ಕೆ ನೀರು ಬಾರದೇ ಸಮಸ್ಯೆಯಾಗಿತ್ತು. ಹೀಗಾಗಿ ಸಿಬ್ಬಂದಿ ಕುಡಚಿ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಪಂಪ್ ಸೆಟ್ ಸರಿಪಡಿಸಲು ಹೋಗಿದ್ದರು. ಈ ವೇಳೆ ನೀರಿನ ಹರಿವು ಹೆಚ್ಚಾಗಿದ್ದರಿಂದ ಕಂಟ್ರೋಲ್ ತಪ್ಪಿ ಬೋಟ್ ಪಲ್ಟಿಯಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸದ್ಯ ಜಾಕ್ವೆಲ್ ನಲ್ಲೇ ಇರುವ ಸಿಬ್ಬಂದಿ ಮತ್ತೊಂದು ಬೋಟ್ ತಂದು ಹೊರ ತರಲು ಪ್ಲ್ಯಾನ್ ಮಾಡಿದ್ದಾರೆ.
ಮಳೆಗೆ ಎತ್ತುಗಳ ಮೇಲೆ ಉರುಳಿ ಬಿದ್ದ ಗೋಡೆ
ನಿರಂತರ ಮಳೆಗೆ ಮನೆ ಗೋಡೆ ಉರುಳಿ ಬಿದ್ದಿದ್ದು, ಅಲ್ಲೇ ಸಮೀಪದಲ್ಲಿದ್ದ ಎತ್ತುಗಳು ಗಾಯಗೊಂಡಿವೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಘಟನೆ ನಡೆದಿದೆ. ಇಂಚಲ ಗ್ರಾಮದ ಯಶವಂತ ನಲವಡೆ ಎಂಬುವವರ ಎತ್ತುಗಳು ಗಾಯಗೊಂಡಿವೆ. ಯಂಕವ್ವ ಗಾಯಕವಾಡ ಎಂಬುವವರ ಮನೆ ಗೋಡೆ ಉರುಳಿ ಬಿದ್ದು ಈ ಅವಘಡ ಸಂಭವಿಸಿದೆ. ಯಶವಂತ ಹಾಗೂ ಯಂಕವ್ವ ಮನೆಗಳು ಅಕ್ಕ ಪಕ್ಕವೇ ಇದ್ದು, ಗೋಡೆ ಬೀಳುತ್ತಿದ್ದಂತೆ ಮಣ್ಣು ತೆಗೆದು ಎತ್ತುಗಳನ್ನು ಉಳಿಸಿಕೊಂಡಿದ್ದಾರೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇಲ್ಲೇ ಸಾಯುತ್ತೇವೆ ಹೊರತು ಕಾಳಜಿ ಕೇಂದ್ರಕ್ಕೆ ಹೋಗಲ್ಲ
ದಾವಣಗೆರೆ: ತುಂಗಾಭದ್ರ ನದಿಯ ನೀರಿನ ಮಟ್ಟ ಹೆಚ್ಚಾದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಹರಿಹರದ ಗಂಗಾನಗರ ಸಂಪೂರ್ಣ ಜಲಾವೃತಗೊಂಡಿದೆ. 22ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಜಿಲ್ಲಾಡಳಿತದಿಂದ ಕಾಳಜಿ ಕೇಂದ್ರ ತೆರೆದರೂ ಗಂಗಾನಗರ ನಿವಾಸಿಗಳು, ಇಲ್ಲೇ ನೀರಿನಲ್ಲಿ ಸಾಯುತ್ತೇವೆ ವಿನಃ, ಕಾಳಜಿ ಕೇಂದ್ರಕ್ಕೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಪ್ರತಿ ಬಾರಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದರೆ ಮನೆಗಳು ಮುಳುಗಡೆಯಾಗುತ್ತವೆ. ಕಾಳಜಿ ಕೇಂದ್ರಕ್ಕೆ ಸಾಮಾಗ್ರಿಗಳನ್ನು ಮಕ್ಕಳನ್ನು ಕಟ್ಟಿಕೊಂಡು ಹೋಗಬೇಕು. ಹಲವು ವರ್ಷಗಳಿಂದ ಇದೇ ಪರಿಸ್ಥಿತಿ ಅನುಭವಿಸುತ್ತಿದ್ದೇವೆ. ಬೇರೆ ಕಡೆ ನಿವೇಶನ ನೀಡಿ ಅಲ್ಲಿ ಗುಡಿಸಲು ಹಾಕಿಕೊಂಡು ಇರುತ್ತೇವೆ ಎಂದು ಕಿಡಿಕಾರಿದರು.
ಇದನ್ನೂ ಓದಿ: Road Accident : ಬೆಂಗಳೂರಲ್ಲಿ ಮಳೆಗೆ ಬೈಕ್ ಸವಾರ ಬಲಿ; ಕಂಟ್ರೋಲ್ ತಪ್ಪಿ ಬಿದ್ದವನ ಮೇಲೆ ಹರಿದ ವಾಹನಗಳು!
ಬಾಗಲಕೋಟೆಯ ಗೋವಿನಕೊಪ್ಪ ಸೇತುವೆ ಜಲಾವೃತ
ಬಾಗಲಕೋಟೆ ಜಿಲ್ಲೆಯಲ್ಲಿ ಮಲಪ್ರಭಾ ನದಿ ಅಬ್ಬರಕ್ಕೆ ಪ್ರವಾಹ ಭೀತಿ ಶುರುವಾಗಿದೆ. ಮಲಪ್ರಭಾ ನದಿಗೆ 12 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ನದಿಗೆ ಅಡ್ಡಲಾಗಿರುವ ಗೋವಿನಕೊಪ್ಪ ಸೇತುವೆ ಜಲಾವೃತಗೊಂಡಿದೆ. ಹುಬ್ಬಳ್ಳಿ ಸೋಲ್ಹಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗೋವಿನಕೊಪ್ಫ ಹಳೆ ಸೇತುವೆ ಮೇಲೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಹೊಸ ಸೇತುವೆ ಮೂಲಕ ವಾಹನಗಳು ಓಡಾಟ ನಡೆಸಿವೆ. ನದಿಯ ಇಕ್ಕೆಲದಲ್ಲಿರುವ ಹೊಲ ಗದ್ದೆಗಳಿಗೆ ನೀರು ನುಗ್ಗಿದೆ.
ಶಿರಾಡಿ ಭೂ ಕುಸಿತ ಭೀತಿ; ವಾಹನ ಸಂಚಾರ ಇಳಿಕೆ
ಶಿರಾಡಿ ಭೂಕುಸಿತದ ಬಳಿಕ ಚಿಕ್ಕಮಗಳೂರಿನಲ್ಲಿ ವಾಹನ ಸಂಚಾರ ಇಳಿಕೆಯಾಗಿದೆ. ಚಾರ್ಮಾಡಿಯಲ್ಲಿ ವಾಹನ ಸಂಚಾರಕ್ಕೆ ಪ್ರಯಾಣಿಕರು ಹಿಂದೇಟು ಹಾಕುತ್ತಿದ್ದಾರೆ. ಕಡೂರು-ದಕ್ಷಿಣ ಕನ್ನಡ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಗಣನೀಯ ಪ್ರಮಾಣದಲ್ಲಿ ವಾಹನಗಳ ಸಂಖ್ಯೆ ಇಳಿಕೆ ಕಂಡಿದೆ. ಚಾರ್ಮಾಡಿಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಪದೆ ಪದೇ ಕಲ್ಲು ಬಂಡೆಗಳು, ಮರಗಳು ಬಿದ್ದು ಅವಾಂತರವೇ ಸೃಷ್ಟಿಯಾಗುತ್ತಿದೆ. ನಿತ್ಯ 1500-2000 ವಾಹನಗಳು ಸಂಚಾರಿಸುತ್ತಿದ್ದವು. ಇದೀಗ ಗುಡ್ಡ ಕುಸಿತದ ಭಯಕ್ಕೆ ದಿನವೊಂದಕ್ಕೆ 500 ವಾಹನಗಳು ಓಡಾಟ ನಡೆಸುತ್ತಿವೆ. ಚಾರ್ಮಾಡಿ ಹೆದ್ದಾರಿ ಸಂಚಾರ ಮುಕ್ತ ಗೊಳಿಸಿದರು ಸವಾರರಲ್ಲಿ ಭಯ ಆವರಿಸಿದೆ.
ಹಾವೇರಿಯಲ್ಲಿ ಮಳೆ ಅವಾಂತರಕ್ಕೆ ಬೆಳೆ ನಾಶ
ಹಾವೇರಿ ತಾಲೂಕಿನ ಕೊರಡೂರು ಗ್ರಾಮದಲ್ಲಿ ಮಳೆ ಅಬ್ಬರಕ್ಕೆ ತರಕಾರಿ ಬೆಳೆ ನಾಶವಾಗಿದೆ. ಫಕ್ಕಿರೇಶ ಕೊಡಬಾಳ ಎಂಬುವವರು ಎರಡು ಎಕರೆ ಜಮೀನಿನಲ್ಲಿ ವಿವಿಧ ತರಕಾರಿ ಬೆಳೆ ಬೆಳೆದಿದ್ದರು. ಆದರೆ ವರದಾ ನದಿಯ ಅಬ್ಬರಕ್ಕೆ ಟೊಮೆಟೋ, ಮೆಣಸಿನಕಾಯಿ, ಬೆಂಡೆ ಮತ್ತು ಚವಳಿಕಾಯಿ ಸೇರಿದಂತೆ ವಿವಿಧ ತರಕಾರಿ ಬೆಳೆ ನೀರುಪಾಲಾಗಿದೆ.
ಪಂಪಾ ಸರೋವರಕ್ಕೆ ಹೋಗುವ ರಸ್ತೆ ಸ್ಥಗಿತ
ಕೊಪ್ಪಳದಲ್ಲಿ ತುಂಗಭದ್ರಾ ನದಿ ತುಂಬಿ ಹರಿಯುತ್ತಿದೆ. ಹೀಗಾಗಿ ಆನೆಗೊಂದಿ ಬಳಿಯ ಪಂಪಾ ಸರೋವರಕ್ಕೆ ಹೋಗುವ ರಸ್ತೆ ಸ್ಥಗಿತಗೊಂಡಿದೆ. ಭಾರತದ ವಿವಿಧ ಪ್ರದೇಶದಿಂದ ಭಕ್ತರು ಆಗಮಿಸುವ ಪಂಪಾಸರೋವರ ಇದೀಗ ಬಂದ್ ಆಗಿದೆ. ತುಂಗಭದ್ರಾ ನದಿಗೆ 1.70 ಲಕ್ಷ ಕ್ಯೂಸೆಕ್ ನೀರು ಬಿಟ್ಟ ಹಿನ್ನೆಲೆಯಲ್ಲಿ ನೀರು ರಸ್ತೆಗೆ ಬಂದಿದೆ. ನದಿಯಲ್ಲಿ ಇನ್ನಷ್ಟು ನೀರು ಬಂದರೆ ಅಂಜನಾದ್ರಿ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ