ಬೆಂಗಳೂರು: ರಾಜ್ಯದ ಹಲವೆಡೆ ಇಂದು ಗುಡುಗು ಸಹಿತ ಭಾರಿ ಮಳೆಯಾಗುವ (Rain News) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು, ಮಿಂಚು ಮತ್ತು 30-40 ಕಿ.ಮೀ ಗಾಳಿ ಬೀಸುವ (Karnataka Rain) ಸಾಧ್ಯತೆಯಿದೆ. ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಚದುರಿದಂತೆ ಹಾಗೂ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ.
ತುಮಕೂರು, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಚಾಮರಾಜನಗರ ಸಾಧಾರಣ ಮಳೆಯಾದರೆ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಯಾದಗಿರಿ, ಬೆಳಗಾವಿ, ಧಾರವಾಡ, ಗದಗದಲ್ಲಿ, ವಿಜಯನಗರ ಮತ್ತು ಹಾವೇರಿಯ ಬಹುತೇಕ ಕಡೆಗಳಲ್ಲಿ ಮಳೆಯು ಅಬ್ಬರಿಸಲಿದೆ.
ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದಲ್ಲೂ ಗುಡುಗು ಸಹಿತ ಸಾಧಾರಣ ಮಳೆಯಾದರೆ, ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ.
ರಾಜಧಾನಿಯಲ್ಲಿ ಅಬ್ಬರದ ಮಳೆ
ಬೆಂಗಳೂರಿನಲ್ಲಿ ಭಾನುವಾರ ಸಂಜೆ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಸೂಚನೆ ಇದೆ. ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಿಸಿಲಿನಿಂದ ಕಂಗೆಟ್ಟ ಸಿಟಿ ಮಂದಿಗೆ ರಾತ್ರಿ ಪೂರ್ತಿ ಸುರಿದ ಮಳೆಯಿಂದಾಗಿ ವಾತಾವರಣವೂ ಕೂಲ್ ಆಗಿದೆ.
ಇದನ್ನೂ ಓದಿ: Weather Updates:ಇಡೀ ರಾತ್ರಿ ಭಾರೀ ಮಳೆ; ಮುಂಗಾರು ಆರಂಭದಲ್ಲೇ ಬೆಂಗಳೂರು ಅಸ್ತವ್ಯಸ್ತ
ಮೈಸೂರಿನಲ್ಲಿ ಗಾಳಿ-ಮಳೆಗೆ ನೆಲಕ್ಕುರುಳಿದ ಬಾಳೆ ಬೆಳೆ
ಮೈಸೂರಿನಲ್ಲಿ ವಿವಿಧೆಡೆ ಭಾರಿ ಮಳೆ ಗಾಳಿಗೆ ಬಾಳೆ ಬೆಳೆ ನೆಲಕ್ಕುರುಳಿದೆ. ಮಳೆ, ಗಾಳಿಯು ಕೈಯಿಗೆ ಬಂದ ತುತ್ತು ಬಾಯಿಗೆ ಇಲ್ಲದಂತೆ ಮಾಡಿದೆ. ಶನಿವಾರ ಸುರಿದ ಮಳೆ ಹಾಗೂ ಗಾಳಿಗೆ ಅವಾಂತರವೇ ಸೃಷ್ಟಿಯಾಗಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಚಿಕ್ಕಹೊಮ್ಮ, ದೊಡ್ಡ ಹೊಮ್ಮ ಸೇರಿದಂತೆ ಹಲವೆಡೆ ಗಾಳಿ ಮಳೆಗೆ ಹತ್ತಾರು ಎಕರೆ ಬಾಳೆ ನಾಶವಾಗಿದೆ. ಚಿಕ್ಕಹೊಮ್ಮ ಗ್ರಾಮದ ನಾಗೇಂದ್ರ ಎಂಬುವವರ ಜಮೀನಲ್ಲಿ ಎರಡು ಸಾವಿರ ಬಾಳಿ ಗಿಡ ನೆಲಕ್ಕುರುಳಿದ್ದು ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಸೂಕ್ತ ಪರಿಹಾರಕ್ಕೆ ರೈತರು ಆಗ್ರಹಿಸಿದ್ದಾರೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹನಗೋಡು ವ್ಯಾಪ್ತಿಯಲ್ಲಿ ಮಳೆಗೆ ಅಪಾರ ಪ್ರಮಾಣದ ತಂಬಾಕು ಹಾಗೂ ಶುಂಠಿ ಬೆಳೆ ನಾಶವಾಗಿದೆ. ಪೆಂಜಹಳ್ಳಿ, ಹರಳಹಳ್ಳಿ, ಕಿರಂಗೂರು, ಹಿಂಡಗೂಡ್ಲು ಸುತ್ತ ಮುತ್ತ ಸಾಕಷ್ಟು ಮಳೆ ಅವಾಂತರವೇ ಸೃಷ್ಟಿಯಾಗಿತ್ತು. ತಂಬಾಕು ಸಸಿ ನಾಟಿ ಮಾಡಿ ಗೊಬ್ಬರ ಹಾಕಿದ್ದ ಜಮೀನಿನಲ್ಲಿ ಮಳೆಯ ನೀರು ನಿಂತು ಬೆಳೆ ಹಾನಿಯಾಗಿತ್ತು. ಹರಳಹಳ್ಳಿ ಮಾದಳ್ಳಿಕಟ್ಟೆ, ಹುಲಿಕೆರೆ, ಆದ್ವಾಳಕೆರೆ, ಸೇರಿದಂತೆ ಬಹುತೇಕ ಕೆರೆಕಟ್ಟೆಗಳು ಭರ್ತಿಯಾಗಿವೆ.
ಕೆಜಿಎಫ್‌ನಲ್ಲಿ ಭರ್ಜರಿ ಮಳೆ
ಕೋಲಾರ ಜಿಲ್ಲೆಯ ವಿವಿಧಡೆ ತಡರಾತ್ರಿ ಗುಡುಗು ಸಿಡಿಲ ಧಾರಾಕಾರ ಮಳೆಯಾಗಿದೆ. ಕೆಜಿಎಫ್‌ನಲ್ಲಿ 6.4 ಸೆಂ.ಮೀ ಅತಿ ಹೆಚ್ಚು ಮಳೆಯಾಗಿದೆ. ಬಂಗಾರಪೇಟೆ, ಮಾಲೂರು, ಕೋಲಾರ ಸೇರಿದಂತೆ ಹಲವು ಕಡೆ ಮಳೆಯಾಗಿದೆ. ಕೆಜಿಎಫ್‌ನ ಬೆಮಲ್ ಬಡಾವಣೆಯಲ್ಲಿ ಭಾರಿ ಮಳೆಗೆ ಬೃಹತ್ ಮರವೊಂದು ನೆಲಕ್ಕುರಲಿದೆ. ತಡರಾತ್ರಿ ರಸ್ತೆಗೆ ಮರ ಉರುಳಿದ ಪರಿಣಾಮ ಕೆಲಕಾಲ ಸಂಚಾರವು ಅಸ್ತವ್ಯಸ್ತಗೊಂಡಿತ್ತು.
ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ, ಸವಾರ ಗಂಭೀರ
ಇನ್ನೂ ವಿಜಯನಗರದ ನಿವಾಸಿ ಬೈಕ್‌ನಲ್ಲಿ ಬರುವಾಗ ಗಾಳಿ ಮಳೆಗೆ ಮರ ಬಿದ್ದಿದೆ. ಪರಿಣಾಮ ಬೈಕ್ ಸವಾರ ಇಮ್ಯುನಿಯಲ್ ಎಂಬಾತ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಜಿಎಫ್ ನ ಮಾರಿಕೊಪ್ಪ ಮತ್ತು ಆಂಧ್ರದ ಕುಪ್ಪಂ ರಾಮಕುಪ್ಪಂ ಬಂಗಾರಪೇಟೆ ಮಾಲೂರು ಕಡೆ ಬಿರುಸಿನ ಮಳೆಯಾಗಿದೆ .ಹಳ್ಳ ಕೊಳ್ಳಗಳು ತುಂಬಿ ನೀರು ಹರಿದಿದೆ. ಇನ್ನು ಎರಡು ದಿನಗಳ ಕಾಲ ಕೋಲಾರ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ವಿಜಯಪುರದಲ್ಲಿ ಗಾಳಿ ರಭಸ
ವಿಜಯಪುರ ಜಿಲ್ಲೆಯ ಹೂವಿನ ಹಿಪ್ಪರಗಿ ಭಾಗದಲ್ಲಿ ಭಾರಿ ಮಳೆ ಸುರಿದಿದೆ. ಭೀಕರ ಬರಗಾಲದಿಂದ ಕಂಗೆಟ್ಟಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಮಳೆಯಿಂದಾಗಿ ರೈತರ ಮೊಗದಲ್ಲಿ ಸಂತಸ ಮೂಡಿದೆ. ರಭಸವಾಗಿ ಸುರಿದ ಮಳೆಯಿಂದಾಗಿ ಕೆರೆ ಹಾಗೂ ರಸ್ತೆಗಳು ತುಂಬಿ ಹರಿದಿದ್ದವು. ಭಾರಿ ಗಾಳಿ ಸಮೇತವಾಗಿ ಸತತ ಮೂರು ಗಂಟೆ ಸುರಿದ ಮಳೆಗೆ ಮರಗಳು ಹಾಗೂ ವಿದ್ಯುತ್ ಕಂಬ ನೆಲಕ್ಕೆ ಬಿದ್ದಿದ್ದವು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ