Site icon Vistara News

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

karnataka Rain

ಕಾರವಾರ: ಕರಾವಳಿಯಲ್ಲಿ ವರುಣನ ಅಬ್ಬರ (Karnataka Rain) ಮತ್ತಷ್ಟು ಹೆಚ್ಚಿದೆ. ಭಾರೀ ಗಾಳಿಗೆ 20ಕ್ಕೂ ಅಧಿಕ ಮನೆಗಳ ಚಾವಣಿ ಹಾರಿಹೋಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಹಾರವಾಡ ಸೀಬರ್ಡ್ ಕಾಲೋನಿಯಲ್ಲಿ ಘಟನೆ ನಡೆದಿದೆ. ಸುಧಾ ಹರಿಕಾಂತ, ನಿರ್ಮಲಾ ದುರ್ಗೇಕರ್, ಶೋಭಾ ದುರ್ಗೇಕರ್ ಸೇರಿ 20ಕ್ಕೂ ಅಧಿಕ ನಿವಾಸಿಗಳ ಮನೆಗಳ ಚಾವಣಿಗೆ ಹಾನಿಯಾಗಿದೆ. ತಡರಾತ್ರಿ ಬೀಸಿದ ಭಾರೀ ಗಾಳಿಗೆ ತಗಡಿನ ಶೀಟ್‌ಗಳು ಹಾರಿಹೋಗಿದೆ. ಕೆಲವರ ಹೆಂಚಿನ ಮನೆಗಳಿಗೂ ಹಾನಿಯಾಗಿದೆ. ಕೆಲವರು ಹೆಂಚಿನ ತುಂಡು ತಲೆಗೆ ಬಿದ್ದು ಗಾಯಗೊಂಡಿದ್ದಾರೆ. ಚಾವಣಿ ಹಾರಿಹೋದ ಪರಿಣಾಮ ಮಳೆ ನೀರು ಬಿದ್ದು ಮನೆಯ ವಸ್ತುಗಳಿಗೂ ಹಾನಿಯಾಗಿದೆ.

ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

ಮಲೆನಾಡು ಭಾಗದಲ್ಲಿ ಮತ್ತೆ ಮಳೆ ಆರಂಭವಾಗಿದ್ದು, ಹಾಸನದ ಸಕಲೇಶಪುರ ತಾಲೂಕಿನ ದೊಡ್ಡತಪ್ಲು ಬಳಿ ಮತ್ತೆ ಭೂಕುಸಿತ ಉಂಟಾಗಿದೆ. ಶಿರಾಡಿಘಾಟ್ ರಸ್ತೆ 75 ರಲ್ಲಿ ಭೂಕುಸಿತದಿಂದ ನೂರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ಕಾಂಕ್ರಿಟ್ ರಸ್ತೆ ಗುತ್ತಿಗೆ ಪಡೆದಿರುವ ಕಂಪನಿಯ ಸಿಬ್ಬಂದಿ ಮಣ್ಣು ತೆರವುಗೊಳಿಸುತ್ತಿದ್ದಾರೆ. ಗುತ್ತಿಗೆದಾರ ಹಾಗೂ ಸರ್ಕಾರದ ವಿರುದ್ಧ ಸವಾರರು ಕಿಡಿಕಾರಿದ್ದಾರೆ. ಮಣ್ಣು ತೆರವು ಮಾಡುತ್ತಿರುವುದು ವಿಳಂಬವಾಗುತ್ತಿದೆ, ಬೇಸಿಗೆ ಕಾಲದಲ್ಲಿ ಕೆಲಸ ಮಾಡುವುದು ಬಿಟ್ಟು ಮಳೆಗಾಲದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಹೆಸ್ಕಾಂ ಸಿಬ್ಬಂದಿಗೆ ಸಾಥ್‌ ಕೊಟ್ಟ ರಿವರ್‌ ರ‍್ಯಾಫ್ಟಿಂಗ್‌ ತಂಡ

ಭಾರಿ ಮಳೆಗೆ ಹಲವಡೆ ವಿದ್ಯುತ್‌ ಕಂಬಗಳು ಧರೆಗುರುಳಿದ್ದು, ಕರೆಂಟ್‌ ಇಲ್ಲದೇ ಜನರು ಕಂಗಲಾಗಿದ್ದಾರೆ. ಹೀಗಾಗಿ ವಿದ್ಯುತ್ ಸಂಪರ್ಕ ನೀಡಲು ಹೆಸ್ಕಾಂ ಸಿಬ್ಬಂದಿಗೆ ರಿವರ್ ರ‍್ಯಾಫ್ಟಿಂಗ್ ತಂಡ ನೆರವಾಗಿದೆ. ಉತ್ತರ ಕನ್ನಡದ ಜೋಯಿಡಾದ ಅಸು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಾಂದೇವಾಡಿ ಗ್ರಾಮದಲ್ಲಿ ವಿದ್ಯುತ್ ತಂತಿ ಮೇಲೆ ಭಾರೀ ಗಾತ್ರದ ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಇದರಿಂದಾಗಿ ಬಜಾರಕುಣಂಗ್, ಕ್ಯಾಸಲ್‌ರಾಕ್, ಅಸು, ಅಕೇತಿ ಪಂಚಾಯತ್ ವ್ಯಾಪ್ತಿಯ ಹತ್ತಾರು ಗ್ರಾಮಗಳು ಕತ್ತಲೇಯಲ್ಲೇ ಕಾಲ ಕಳೆಯುತ್ತಿದ್ದವು.

ಚಾಂದೇವಾಡಿ ಗ್ರಾಮವು ಭಾರೀ ಮಳೆಯಿಂದ ಪಾಂಡ್ರಿ ನದಿ ಉಕ್ಕಿ ಸಂಪರ್ಕ ಕಡಿದುಕೊಂಡಿತ್ತು. ಇತ್ತ ವಿದ್ಯುತ್ ಸಂಪರ್ಕ ಸರಿಪಡಿಸಲು ಮುಂದಾಗಿದ್ದ ಹೆಸ್ಕಾಂ, ಕೆಪಿಟಿಸಿಎಲ್‌ (KPTCL) ಸಿಬ್ಬಂದಿ ನದಿ ಹರಿವು ಹೆಚ್ಚಿದ್ದರಿಂದ ಗ್ರಾಮಕ್ಕೆ ತೆರಳಲು ಸಾಧ್ಯವಾಗದೇ ಸಂಕಷ್ಟದಲ್ಲಿದ್ದರು. ಗ್ರಾಮಸ್ಥರು, ರಿವರ್ ರ‍್ಯಾಫ್ಟಿಂಗ್ ಸಹಾಯದಿಂದ ಚಾಂದೇವಾಡಿ ಗ್ರಾಮಕ್ಕೆ ತಲುಪಿದ್ದಾರೆ. 13 ಮಂದಿ ಹೆಸ್ಕಾಂ ಸಿಬ್ಬಂದಿ, 6 ಮಂದಿ ರ‍್ಯಾಫ್ಟಿಂಗ್ ತಂಡದ ಸದಸ್ಯರಿಂದ ಕಾರ್ಯಾಚರಣೆ ನಡೆಸಿ ಸುಮಾರು 600 ಮೀಟರ್ ಬೋಟ್‌ನಲ್ಲಿ ತೆರಳಿ ವಿದ್ಯುತ್ ಸಂಪರ್ಕ ರಿಪೇರಿ ಮಾಡಿದ್ದಾರೆ. ದಾಂಡೇಲಿ ವಿಭಾಗದ ಸೂಪಾ-ಅನಮೋಡ್ 110 ಕೆವಿ ವಿದ್ಯುತ್ ಮಾರ್ಗ ಸರಿಪಡಿದ್ದಾರೆ. ಹೆಸ್ಕಾಂ, ಕೆಪಿಟಿಸಿಎಲ್ ಸಿಬ್ಬಂದಿ ಕಾರ್ಯವೈಖರಿಗೆ ಗ್ರಾಮಸ್ಥರು ಅಭಿನಂದಿಸಿದ್ದಾರೆ.

ಇದನ್ನೂ ಓದಿ: Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಕೃಷ್ಣಾ ನದಿಯ ಆರ್ಭಟಕ್ಕೆ ಜನರು ತತ್ತರ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ನದಿ ತೀರದ ಪ್ರದೇಶಗಳಿಗೆ ಕೃಷ್ಣಾ ನದಿ ನೀರು ನುಗ್ಗಿದೆ. ಗ್ರಾಮದ ಬಸ್ ನಿಲ್ದಾಣ, ಬಸ್ ನಿಲ್ದಾಣ ಸಮೀಪದ 15 ಕ್ಕೂ ಹೆಚ್ಚು ಅಂಗಡಿಗಳು, ಪ್ರೌಢ ಶಾಲೆ ಆವರಣ ಜಲಾವೃತಗೊಂಡಿದೆ.

ಇನ್ನೂ ಹಾವೇರಿ ಜಿಲ್ಲೆಯಲ್ಲಿ ಮುಂದುವರೆದ ಮಳೆ ಅಬ್ಬರಕ್ಕೆ ಕುಮದ್ವತಿ ನದಿ ಉಕ್ಕಿ ಹರಿಯುತ್ತಿದೆ. ಕುಮದ್ವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಬಾಂದಾರ ಕೊಚ್ಚಿ ಹೋಗಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕುಡಪಲಿ- ಬಡಸಂಗಾಪುರ ಗ್ರಾಮದ ಬಳಿ ಕಟ್ಟಿದ್ದ ಬಾಂದರ್ ಕಾಣದಂತಾಗಿದೆ. ಸ್ಥಳಕ್ಕೆ ಹಿರೇಕೆರೂರ ಶಾಸಕ ಯುಬಿ ಬಣಕಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರೈತರಿಗೆ ಹಾವುಗಳ ಕಾಟ

ನಿರಂತರ ಮಳೆಯಿಂದಾಗಿ ನದಿಗಳ ಮಟ್ಟ ಏರಿಕೆ ಹಿನ್ನೆಲೆ ನದಿ ಪಾತ್ರದ ರೈತರು ಮೋಟಾರ್, ಪಂಪ್‌ಸೆಟ್‌ ಹಾಗೂ ವಿದ್ಯುತ್ ಸರಬರಾಜಿನ ಡಬ್ಬಿಗಳನ್ನು ಸ್ಥಳಾಂತರಿಸುತ್ತಿದ್ದಾರೆ. ಈ ನಡುವೆ ರೈತರಿಗೆ ಹಾವುಗಳ ಕಾಟ ಪ್ರಾರಂಭವಾಗಿದೆ. ರೈತರೊಬ್ಬರು ವಿದ್ಯುತ್ ಡಬ್ಬಿ ಸ್ಥಳಾಂತರಿಸುವಾಗ ಹಾವು ಪ್ರತ್ಯಕ್ಷಗೊಂಡಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಬಳಿ ಘಟನೆ ನಡೆದಿದೆ. ಯಕ್ಸಂಬಾ ಗ್ರಾಮದ ಹೊರವಲಯದ ದೂದ್‌ಗಂಗಾ ನದಿಯ ದಂಡೆಯ ಮೇಲೆ ಅಲ್ಲಲ್ಲಿ ಹಾವುಗಳ ಪ್ರತ್ಯಕ್ಷಗೊಳ್ಳುತ್ತಿರುವುದರಿಂದ ರೈತರು ಭಯಭೀತರಾಗಿದ್ದಾರೆ.

ಕೃಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ರೈತನ ಶವ ಪತ್ತೆ

ಬಾಗಲಕೋಟೆ ಜಮಖಂಡಿ ತಾಲ್ಲೂಕಿನ ಆಲಗೂರ ಗ್ರಾಮದಲ್ಲಿ ಕೃಷ್ಣಾ ನದಿ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದ ರೈತ ಸಿದ್ದಪ್ಪ ಅಡಹಳ್ಳಿ(60) ಶವವಾಗಿ ಪತ್ತೆಯಾಗಿದ್ದಾರೆ. ಕೊಚ್ಚಿ ಹೋದ ಸಿದ್ದಪ್ಪನಿಗಾಗಿ ಶೋಧ ಕಾರ್ಯ ನಡೆದಿತ್ತು. ಸೋಮವಾರ ಬಬಲೇಶ್ವರ ತಾಲೂಕಿನ ಶಿರಗೂರ ಗ್ರಾಮದ ಬಳಿ ಶವ ಪತ್ತೆಯಾಗಿದೆ. ಶವ ಇದ್ದ ಸ್ಥಳಕ್ಕೆ ಜಮಖಂಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೇವು ಮಾಡಿಕೊಂಡು ಮರಳಿ‌ ಬರುವಾಗ ಆಲಗೂರ ಗ್ರಾಮದ ಸಿದ್ದಪ್ಪ ಅಡಹಳ್ಳಿ 3 ದಿನದ ಹಿಂದೆ ನದಿ ಪಾಲಾಗಿದ್ದರು.

ಕಾವೇರಿ ನದಿಗೆ ಹಾರಿದ ನೌಕರನ ಮೃತದೇಹ ಪತ್ತೆ

ಕೊಡಗಿನ ಕುಶಾಲನಗರದಲ್ಲಿ ಸರಕಾರಿ ನೌಕರನೊಬ್ಬ ಕಾವೇರಿ‌ ನದಿಗೆ ಹಾರಿದ್ದ. 5 ದಿನಗಳ ಬಳಿಕ‌ ಸೋಮವಾರ ಮೃತದೇಹ ಪತ್ತೆಯಾಗಿದೆ. ಎಸಿ ಕಚೇರಿ ಪ್ರಥಮ ದರ್ಜೆ ನೌಕರ ಅರುಣ್(52) ಮೃತ ದುರ್ದೈವಿ. ಕೊಪ್ಪ ಸೇತುವೆಯಿಂದ ಕಾವೇರಿ ನದಿಗೆ ಹಾರಿದ್ದ ಅರುಣ್, ಸೇತುವೆಯಿಂದ 5 ಕಿ.ಮೀ ದೂರದಲ್ಲಿ ಶವ ಪತ್ತೆಯಾಗಿದೆ. ಮೃತದೇಹಕ್ಕಾಗಿ ರ‍್ಯಾಫ್ಟಿಂಗ್ ತಂಡ, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಸ್ಥಳಕ್ಕೆ ಕುಶಾಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆ ಎಚ್ಚರಿಕೆ

ಕರಾವಳಿಯ ಉತ್ತರ ಕನ್ನಡ, ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ, ಬೆಳಗಾಗಿ, ಕೊಡಗು ಸುತ್ತಮುತ್ತ ವಿಪರೀತ ಮಳೆಯಾಗಲಿದ್ದು, ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣದಿಂದ ಕೂಡಿದ ಮಳೆಯಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version