ಮಂಡ್ಯ/ಮೈಸೂರು: ಭಾರಿ ಮಳೆಗೆ (Karnataka Rain) ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯದಿಂದ ಭಾರಿ ಪ್ರಮಾಣದ ನೀರು ನದಿಗೆ ಬಿಡುಗಡೆ ಆಗುತ್ತಿದೆ. ಹೀಗಾಗಿ ಮೈಸೂರು ಜಿಲ್ಲೆಯ ತಿ. ನರಸೀಪುರ ತಾಲೂಕಿನ ತಲಕಾಡಿನ ಹೆಮ್ಮಿಗೆ ಸೇತುವೆ ಮುಳುಗಡೆಯಾಗಿದೆ. ಹೀಗಾಗಿ ತಿ. ನರಸೀಪುರ ತಲಕಾಡು ಸಂಚಾರ ಬಂದ್ ಮಾಡಲಾಗಿದೆ. ಸೇತುವೆ ಮೇಲೆ ಎರಡು ಅಡಿಗಳಷ್ಟು ನೀರು ಹರಿಯುತ್ತಿದ್ದು, ಒಂದೇ ವಾರದ ಅಂತರದಲ್ಲಿ ಎರಡು ಭಾರಿ ಸೇತುವೆ ಮುಳುಗಡೆಯಾಗಿದೆ. ಹೀಗಾಗಿ ಸೇತುವೆ ಎರಡು ಭಾಗದಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ತಿ.ನರಸೀಪುರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ನರಸೀಪುರ ಪಟ್ಟಣದ ಗುಂಜಾನರಸಿಂಹಸ್ವಾಮಿ ದೇವಸ್ಥಾನದ ಮೆಟ್ಟಿಲುಗಳು ಮುಳುಗಡೆಯಾಗಿದೆ. ಶ್ರೀನಿವಾಸ ಕಲ್ಯಾಣ ಮಂಟಪ ಜಲಾವೃತವಾಗಿದ್ದು, ಸಂತೆಮಾಳ ಬಳಿಯ ಕಾಲೇಜಿನ ಆವರಣಕ್ಕೂ ನೀರು ನುಗ್ಗಿದೆ. ಹಲವು ಜಮೀನುಗಳು ಕೂಡ ನೀರಿನಲ್ಲಿ ಜಲಾವೃತವಾಗಿದೆ.
ಸುತ್ತೂರು ಸೇತುವೆ ಮುಳುಗಡೆ
ಕಬಿನಿ ಜಲಾಶಯದಿಂದ ಭಾರಿ ಪ್ರಮಾಣದ ನೀರು ನದಿಗೆ ಬಿಟ್ಟ ಹಿನ್ನೆಲೆಯಲ್ಲಿ ಮೈಸೂರು ತಾಲೂಕಿನ ವರುಣ ಕ್ಷೇತ್ರ ವ್ಯಾಪ್ತಿಯ ಸುತ್ತೂರು ಸೇತುವೆ ಮುಳುಗಡೆಯಾಗಿದೆ. ಹೀಗಾಗಿ ಮೈಸೂರು ಸುತ್ತೂರು ಮಾರ್ಗದ ಸಂಚಾರ ಬಂದ್ ಆಗಿದೆ. ಸುತ್ತೂರು ಸೇರಿದಂತೆ ಅನೇಕ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಸೇತುವೆ ಅಕ್ಕ ಪಕ್ಕದ ತೆಂಗಿನ ತೋಟಕ್ಕೂ ನೀರು ನುಗ್ಗಿದೆ.
ಶ್ರೀರಂಗಪಟ್ಟಣದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆಗೆ ಹಾನಿ
ಕೆಆರ್‌ಎಸ್ ನಿಂದ 1.70 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ ಮಂಡ್ಯ ಶ್ರೀರಂಗಪಟ್ಟಣದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಬಳಿ ಹಾನಿಯಾಗಿದೆ. ನೀರಿನ ರಭಸಕ್ಕೆ ತಡೆಗೋಡೆ ಕೊಚ್ಚಿ ಹೋಗಿದೆ. ಕಾವೇರಿ ನದಿ ಬಳಿಯ ಎರಡೂ ಬದಿಗಳಲ್ಲಿನ ತಡೆಗೋಡೆ ಕೊಚ್ಚಿ ಹೋಗಿದ್ದು, ವಿದ್ಯುತ್ ಕಂಬಗಳು ಪಳೆಯುಳಿಕೆಯಂತಾಗಿದೆ. ಚೆಸ್ಕಾಂ ಸಿಬ್ಬಂದಿ ವಿದ್ಯುತ್ ಕಂಬಗಳು ಬೀಳದಂತೆ ಭದ್ರ ಮಾಡಿದ್ದಾರೆ. 1804 ರಲ್ಲಿ ಸಂಪೂರ್ಣ ಕಲ್ಲಿನಿಂದ ವೆಲ್ಲೆಸ್ಲಿ ಸೇತುವೆ ನಿರ್ಮಿಸಲಾಗಿದ್ದು, 2 ಶತಮಾನಗಳಿಂದಲೂ ಭದ್ರವಾಗಿ ನೆಲೆಯೂರಿದೆ. ಇತಿಹಾಸದಲ್ಲಿ ನಿನ್ನೆಯೂ ಸೇರಿ ನಾಲ್ಕು ಭಾರಿ ಸೇತುವೆ ಮುಳುಗಡೆಯಾಗಿದೆ.
ಇದನ್ನೂ ಓದಿ: Road Accident : ಲಾರಿ ಗುದ್ದಿದ ರಭಸಕ್ಕೆ ಸ್ಥಳದಲ್ಲೇ ಪ್ರಾಣಬಿಟ್ಟ ಬೈಕ್ ಸವಾರರು
ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ
ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿದೆ. ಇದರ ಪರಿಣಾಮವಾಗಿ ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದಲ್ಲಿರುವ ಸುಪ್ರಸಿದ್ಧ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತಗೊಂಡಿದೆ. ಕೇಶಮುಂಡನ ಮಾಡುವ ಕೋಣೆಯು ನೀರಿನಲ್ಲಿ ಮುಳುಗಿದೆ. ತುಂಗಭದ್ರಾ ನದಿ ದಡದಲ್ಲಿರುವ ದೇವಸ್ಥಾನ ಇದಾಗಿದ್ದು, ನೀರಿನ ಪ್ರಮಾಣ ಹೆಚ್ಚಾದರೆ ಅನೇಕ ಅಂಗಡಿಗಳು ಜಲಾವೃತ ಸಾಧ್ಯತೆ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ನದಿ ಸಮೀಪ ಭಕ್ತರಿಗೆ ನಿಷೇಧಿಸಲಾಗಿದೆ.
ಯಾದಗಿರಿ-ರಾಯಚೂರು ಸಂಪರ್ಕ ಕಡಿತ
ಯಾದಗಿರಿಯಲ್ಲಿ ನಾರಾಯಣಪುರ ಡ್ಯಾಂನಿಂದ ಭಾರಿ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿದ್ದು, ಕೃಷ್ಣಾ ನದಿ ಪ್ರವಾಹದಿಂದ ಈಗಾಗಲೇ ಕೊಳ್ಳುರು ಸೇತುವೆ ಹಾಗೂ ಗುರ್ಜಾಪುರ ಸೇತುವೆ ಸಂಪರ್ಕ ಕಡಿತಗೊಂಡಿದೆ. ಅದೆ ರೀತಿ ವಡಗೇರಾ ತಾಲೂಕಿನ ಗುಂಡ್ಲುರು ಹೊರಭಾಗದ ಗುರ್ಜಾಪುರ ಸೇತುವೆ ಜಲಾವೃತಗೊಂಡಿವೆ. ಸೇತುವೆ ಜಲಾವೃತದಿಂದ ಯಾದಗಿರಿ-ರಾಯಚೂರು ಜಿಲ್ಲೆಗೆ ಸಂಪರ್ಕ ಕಡಿತವಾಗಿದೆ.
ಬೆಳಗಾವಿಯಲ್ಲಿ ಮತ್ತೆ ಲೊಳಸೂರ ಸೇತುವೆ ಬಂದ್
ಬೆಳಗಾವಿಯ ಲೊಳಸೂರ ಸೇತುವೆ ಮೇಲೆ ಮತ್ತೆ ಘಟಪ್ರಭೆ ಆವರಿಸಿದೆ. ನಿನ್ನೆಯಷ್ಟೆ ನೀರು ಕಡಿಮೆಯಾಗಿ ಓಪನ್ ಆಗಿದ್ದ ಲೊಳಸೂರ ಸೇತುವೆ, ಇದೀಗ ಮತ್ತೆ ಬಂದ್ ಆಗಿದೆ. ಸಂಕೇಶ್ವರ ಧಾರವಾಡ ರಾಜ್ಯ ಹೆದ್ದಾರಿಯಲ್ಲಿರುವ ಬೃಹತ್ ಸೇತುವೆ ಇದಾಗಿದೆ. ಲೊಳಸೂರು ಗೋಕಾಕ ಸಂಪರ್ಕ ಸೇತುವೆ ಬಂದ್ ಆಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ