ಬೆಳಗಾವಿ: ಸತತ ಮಳೆಗೆ (Karnataka rain) ಹಲವು ಜಿಲ್ಲೆಗಳು ನಲುಗಿ ಹೋಗಿವೆ. ಗುಡ್ಡ ಕುಸಿತ, ಸೇತುವೆಗಳು ಮುಳುಗಡೆ, ಮನೆಗಳು ಕುಸಿದು ಬೀಳುವ ಸಾಧ್ಯತೆ ಇದೆ. ಈ ನಡುವೆ ಪ್ರವಾಹದ ಭೀಕರತೆಗೆ ಜನರು ಬೆಚ್ಚಿ ಬೀಳುವಂತಾಗಿದೆ. ಹಳ್ಳ-ಕೊಳ್ಳಗಳಲ್ಲಿ ಎಮ್ಮೆಗಳ ಕಳೇಬರ ತೇಲಿ ಬರುತ್ತಿವೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದ ಹಳ್ಳದಲ್ಲಿ ಎಮ್ಮೆಗಳ ಮೃತದೇಹ ತೇಲಿ ಬಂದಿದೆ. ಮೂರು ಎಮ್ಮೆಗಳು ತೇಲಿ ಬಂದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ನದಿ ದಾಟಲು ಹೋಗಿ ಅಥವಾ ನೀರು ಹೆಚ್ಚಾಗಿ ಕೊಚ್ಚಿಕೊಂಡು ಬಂದಿರುವ ಶಂಕೆ ಇದೆ.
ತೆರವುಗೊಳಿಸಿದ ಜಾಗದಲ್ಲೆ ಮಣ್ಣು ಕುಸಿತ
ಕೊಡಗು ಜಿಲ್ಲೆಯಾದ್ಯಂತ ಮಳೆ ಕೊಂಚ ತಗ್ಗಿದೆ. ಮಳೆ ಕಡಿಮೆಯಾದರೂ ಮಳೆ ಅನಾಹುತ ಇನ್ನೂ ನಿಂತಿಲ್ಲ. ಮಡಿಕೇರಿ ಮಾದಪು ರಸ್ತೆಯಲ್ಲಿ ಅಲ್ಲಲ್ಲಿ ಗುಡ್ಡ ಕುಸಿಯುವ ಭೀತಿ ಹೆಚ್ಚಾಗಿದೆ. ಮಾದಪುರದಿಂದ 2ಕಿ.ಮೀ ದೂರದಲ್ಲಿ ಗುಡ್ಡದ ಮಣ್ಣು ಕುಸಿಯುತ್ತಿದೆ. ಮಣ್ಣು ತೆರವು ಗೊಳಿಸಿದ ಜಾಗದಲ್ಲೆ ಪದೆಪದೇ ಮಣ್ಣು ಬೀಳುತ್ತಿದೆ. 2018ರಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿದು ಹಾನಿಯಾಗಿದ್ದ ಸ್ಥಳದಲ್ಲೆ ಮತ್ತೆ ಅಪಾಯ ಎದುರಾಗಿದೆ. ಮಳೆ ಹೆಚ್ಚಾಗಿ ಮತ್ತಷ್ಟು ಮಣ್ಣುಕುಸಿದಲ್ಲಿ ಮಾದಪುರ ಮಡಿಕೇರಿ ರಸ್ತೆ ಬಂದ್ ಆಗುವ ಸಾಧ್ಯತೆ ಇದೆ.
ಟಿಬಿ ಡ್ಯಾಂನಲ್ಲಿ ಪ್ರವಾಸಿಗರ ಹುಚ್ಚಾಟ
ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿತುಂಗಭದ್ರಾ ಜಲಾಶಯ ಭರ್ತಿ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಆದರೆ ಜಲಾಶಯದ ಹಿನ್ನೀರಿನಲ್ಲಿ ಚಿಕ್ಕ ಚಿಕ್ಕ ಮಕ್ಕಳೊಂದಿಗೆ ನೀರಿಗಿಳಿದು ಹುಚ್ಚಾಟ ತೋರುತ್ತಿದ್ದಾರೆ. ರಭಸವಾಗಿ ನೀರು ಬರುತ್ತಿದ್ದರೂ, ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.
ಒಂಟಗೋಡಿ ಗ್ರಾಮಕ್ಕೆ ನುಗ್ಗಿದ ಘಟಪ್ರಭಾ ನೀರು
ಮಹಾರಾಷ್ಟ್ರದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಘಟಪ್ರಭಾ ನದಿ ಅಬ್ಬರ ಜೋರಾಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಒಂಟಗೋಡಿ ಗ್ರಾಮಕ್ಕೆ ನೀರು ನುಗ್ಗಿದೆ. ಗ್ರಾಮದಲ್ಲಿ ಹತ್ತಾರು ಮನೆಗಳು ಜಲಾವೃತಗೊಂಡಿದ್ದು, ಸರಕಾರಿ ಪ್ರಾಥಮಿಕ ಶಾಲೆಗೆ ನೀರು ನುಗ್ಗಿದೆ. ಶಾಲೆ ಮೈದಾನ ನೀರಿಂದ ಭರ್ತಿಯಾಗಿದ್ದು, ಕೆರೆಯಂತಾಗಿದೆ.
ಬೆಳಗಾವಿಯ ಸುರೇಬಾನ-ರಾಮದುರ್ಗ ಸಂಪರ್ಕ ಸೇತುವೆ ಜಲಾವೃತ
ಇತ್ತ ಮಲಪ್ರಭಾ ನದಿ ಅಬ್ಬರ ರಾಮದುರ್ಗ ಪಟ್ಟಣ ಸೇರಿ ಹಳ್ಳಿಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ರಾಮದುರ್ಗ ಪಟ್ಟಣದ ತೇರ ಬಜಾರ್ ಬಳಿಯ ಸಂಪರ್ಕ ಸೇತುವೆ ಜಲಾವೃತಗೊಂಡಿದೆ. ಸುರೇಬಾನ-ರಾಮದುರ್ಗ ಸಂಪರ್ಕ ಸೇತುವೆ ಮುಳುಗಡೆಯಾಗಿದೆ. ಮುಳುಗಿದ ಸೇತುವೆ ಮೇಲೆ ಕಾಲೇಜು ವಿದ್ಯಾರ್ಥಿಗಳು, ಶಾಲಾ ವಾಹನ, ಜನರ ಓಡಾಡುವಂತಾಗಿದೆ. ಖಾನಾಪುರ, ಕಣಕುಂಬಿ ಭಾಗದಲ್ಲಿ ಮಳೆ ಅಬ್ಬರ ಹಿನ್ನೆಲೆಯಲ್ಲಿ ಸವದತ್ತಿ ತಾಲೂಕಿನ ಮುನವಳ್ಳಿ ಬಳಿಯ ನವಿಲು ತೀರ್ಥ ಜಲಾಶಯ ಭರ್ತಿಯಾಗಿದೆ. ಜಲಾಶಯದಿಂದ ಐದು ಸಾವಿರ ಕ್ಯೂಸೆಕ್ ನೀರು ಮಲಪ್ರಭಾ ನದಿಗೆ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: Viral video: ರಸ್ತೆಯಿಂದ ರಾಶಿಗಟ್ಟಲೆ ಮೊಳೆ ಹೆಕ್ಕಿ ತೆಗೆದ ಟ್ರಾಫಿಕ್ ಪೊಲೀಸರು; ಪಂಕ್ಚರ್ ಮಾಫಿಯಾ ಸಕ್ರಿಯ?
ಚಿಕ್ಕೊಳಿ ಸೇತುವೆ ಸಂಚಾರಕ್ಕೆ ಮುಕ್ತ
ಪಶ್ಚಿಮ ಘಟ್ಟಗಳಲ್ಲಿ ಮಳೆ ಅಬ್ಬರ ಕೊಂಚ ತಣ್ಣಗಾಗಿದೆ. ಬೆಳಗಾವಿಯ ಒಂದು ಸೇತುವೆ ಸಂಚಾರಕ್ಕೆ ಮುಕ್ತ ವಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದ ಹೊರವಲಯದ ಚಿಕ್ಕೊಳಿ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ. ಲೋಕೊಪಯೋಗಿ,ಕಂದಾಯ,ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೇತುವೆ ಪರಿಸ್ಥಿತಿಯ ಪರಿಶೀಲಿಸಿದ ನಂತರ ಭಾರಿ ವಾಹನಕ್ಕೆ ಅವಕಾಶ ನೀಡಲಿದ್ದಾರೆ. ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ಹೊರ ವಲಯದ ಕೃಷ್ಣ ನದಿಯಲ್ಲಿ ಬೃಹತ್ ಗಾತ್ರದ ಮೀನು ಕಾಣಿಸಿಕೊಂಡಿದೆ. ಸುಮಾರು 500 ಕೆ.ಜಿ ತೂಕವಿರುವ ಸಾಧ್ಯತೆ ಇದೆ. ಸ್ಥಳೀಯರ ಮೊಬೈಲ್‌ನಲ್ಲಿ ಬೃಹತ್ ಗಾತ್ರದ ಮೀನು ಸೆರೆಯಾಗಿದೆ.
ಘಟಪ್ರಭೆಯ ಅಬ್ಬರಕ್ಕೆ ನಲುಗುತ್ತಿರುವ ಕುಟುಂಬಗಳು
ಘಟಪ್ರಭೆಯ ಅಬ್ಬರಕ್ಕೆ ಕುಟುಂಬಗಳು ನಲುಗುತ್ತಿವೆ. ಬೆಳಗಾವಿಯ ಗೋಕಾಕ ನಗರಕ್ಕೆ ನೀರು ನುಗ್ಗಿದ್ದರಿಂದ ಉಟ್ಟ ಬಟ್ಟೆಯಲ್ಲಿ ಮನೆ ಬಿಟ್ಟ ಅಜ್ಜಿ ಕುಟುಂಬ ಕಣ್ಣೀರು ಹಾಕುತ್ತಿದೆ. ಗೋಕಾಕ ನಗರದ ಬೋಜಗರ್ ಗಲ್ಲಿಯಲ್ಲಿರುವ ಮೈರಾಬಿ ಬೋಜಗಾ ಎಂಬುವವರು ಮೊಮ್ಮಮ್ಮಕ್ಕಳು ಮಗಳ ಜತೆಗೆ ಕಾಳಜಿ ಕೇಂದ್ರದಲ್ಲಿದ್ದಾರೆ.
ತನ್ನೆರಡು ಗಂಡು ಮಕ್ಕಳ ಅಕಾಲಿಕ ಸಾವಿನಿಂದ ಕಂಗೆಟ್ಟಿರುವ ಅಜ್ಜಿ ಮೈರಾಬಿ, ಗಂಡು ಮಕ್ಕಳಿದಿದ್ದರೆ ಮನೆಯ ವಸ್ತುಗಳೆಲ್ಲ ಹೊರಗೆ ತರುತ್ತಿದ್ದರು. ನನ್ನ ಮಕ್ಕಳು ತೀರಿ ಹೋಗಿದ್ದಾರೆ, ಮನೆಯ ವಸ್ತುಗಳು ನೀರಲ್ಲಿವೆ ಎಂದು ರೋಧಿಸಿದ್ದಾರೆ. ಚುರುಮುರಿ ಭಟ್ಟಿಯಲ್ಲಿ ಕೆಲಸ ಮಾಡಿ ಬಡ ಕುಟುಂಬ ಜೀವನ ಸಾಗಿಸುತ್ತಿದ್ದಾರೆ. ಸದ್ಯ ಕಾಳಜಿ ಕೇಂದ್ರದಲ್ಲಿ ದಿಕ್ಕೆ ತೋಚದಂತ ಸ್ಥಿತಿಯಲ್ಲಿದ್ದಾರೆ.
ಕೃಷ್ಣಾ ನದಿ ತೀರದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಇಟ್ಟಂಗಿ ನಿರ್ಮಾಣ ಘಟಕಗಳು ಜಲಾವೃತಗೊಂಡಿದೆ. ನೀರಿನ ಒಳ ಹರಿವು ಹೆಚ್ಚಾದರೇ ಮಾಂಜರಿ ಗ್ರಾಮಕ್ಕೂ ನೀರು ನುಗ್ಗಲಿದೆ. ಹುಣಶ್ಯಾಳ ಪಿ ಜಿ ಗ್ರಾಮದ ಲಕ್ಷ್ಮಿ ದೇವಾಲಯ ಸೇರಿ 200ಕ್ಕೂ ಅಧಿಕ ಮನೆಗಳು ನೀರಿನಲ್ಲಿ ಮುಳುಗಡೆಯಾಗಿದೆ. ಐದು ಕಾಳಜಿ ಕೇಂದ್ರ ಓಪನ್ ಮಾಡಿ ಇಡೀ ಗ್ರಾಮದ ಜನರನ್ನು ರವಾನಿಸಲಾಗಿದೆ.
ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮಿರ್ಜಿವು ನಲುಗಿ ಹೋಗಿದೆ. ಮಿರ್ಜಿ ಗ್ರಾಮಕ್ಕೆ ನದಿ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. 87ಕ್ಕೂ ಹೆಚ್ಚು ಮನೆಗಳು ನೀರಲ್ಲಿ ಜಲಾವೃತಗೊಂಡಿದೆ. 87 ಕುಟುಂಬಗಳ 300ಕ್ಕೂ ಹೆಚ್ಚು ಜನರು ಕಾಳಜಿ ಕೇಂದ್ರಕ್ಕೆ ಶಿಫ್ಟ್ ಆಗಿದ್ದಾರೆ. ಮಿರ್ಜಿ ಗ್ರಾಮದ ಎತ್ತರ ಪ್ರದೇಶದಲ್ಲಿರುವ ಬಿಬಿ ಮುಧೋಳ, ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿರುವ ಕಾಳಜಿ ಕೇಂದ್ರಗಳನ್ನು ತೆರಯಲಾಗಿದೆ. ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದ ಕಬ್ಬು, ಉದ್ದು, ಸೇರಿ ಹಲವು ಬೆಳೆಗಳು ಮುಳುಗಡೆಯಾಗಿದೆ. ಶಾಶ್ವತ ಸ್ಥಳಾಂತರಕ್ಕೆ ಮಿರ್ಜಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ