ಮೈಸೂರು: ಮೈಸೂರಿನಲ್ಲಿ ಸುರಿದ ಭಾರಿ ಮಳೆಗೆ (Karnataka Rain) ಎರಡು ಮನೆಗಳ ಗೋಡೆ ಕುಸಿದಿದೆ. ಅದೃಷ್ಟವಶಾತ್ ಮನೆಯೊಳಗೆ ಇದ್ದ ವೃದ್ಧ ಪ್ರಾಣಪಾಯದಿಂದ ಪಾರಾಗಿದ್ದಾರೆ. ಮೈಸೂರು ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ಗೋಪಾಲಪುರ ಗ್ರಾಮದ ದೇವಮ್ಮ ಮತ್ತು ಸಣ್ಣ ತಾಯಮ್ಮ ಎಂಬುವರಿಗೆ ಸೇರಿದ ಮನೆಯ ಗೋಡೆ ಕುಸಿದಿದೆ. ಗೋಡೆ ಕುಸಿದ ಪರಿಣಾಮ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿಯಾಗಿದೆ. ಇದೇ ಗ್ರಾಮದ ರಾಜೇಗೌಡ ಎಂಬುವರ ಮನೆ ಗೋಡೆ ಕೂಡ ಕುಸಿದಿದೆ. ಮನೆ ಗೋಡೆ ಕುಸಿಯುವಾಗ ಒಳಗೆ ಇದ್ದ ರಾಜೇಗೌಡ ಅವರು ಚಾವಣಿ ಅಡಿಯಲ್ಲಿ ಸಿಲುಕಿದ್ದರು. ಸಣ್ಣಪುಟ್ಟ ಗಾಯಗಳಷ್ಟೇ ಆಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಮತ್ತು ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಬಿನಿ ಜಲಾಶಯ ಭರ್ತಿಗೆ 9 ಅಡಿಗಳು ಮಾತ್ರ ಬಾಕಿ
ಮೈಸೂರು ಜಿಲ್ಲೆಯ ಎಚ್‌ಡಿ ಕೋಟೆ ತಾಲೂಕಿನ ಬೀಚನಹಳ್ಳಿ ಬಳಿಯಿರುವ ಕಬಿನಿ ಜಲಾಶಯ ಸಂಪೂರ್ಣ ಭರ್ತಿಗೆ ಕೇವಲ 9 ಅಡಿಗಳು ಮಾತ್ರ ಬಾಕಿ ಇವೆ. ಕಬಿನಿ ಜಲಾನಯನ ಪ್ರದೇಶದಲ್ಲಿ ಮಳೆ ಅಬ್ಬರ ತಗ್ಗಿದ್ದು, ಒಳಹರಿವಿನ ಪ್ರಮಾಣದಲ್ಲಿ ಇಳಿಕೆ ಆಗಿದೆ.
ಸಮುದ್ರ ಮಟ್ಟದಿಂದ 2,284 ಅಡಿ ಗರಿಷ್ಠ ಸಾಮರ್ಥ್ಯದ ಕಬಿನಿ ಜಲಾಶಯದಲ್ಲಿ ಇಂದಿನ ನೀರಿನ ಮಟ್ಟ 2275.06 ಅಡಿಗಳು ಇದೆ. ಒಟ್ಟು 19.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ, ಸದ್ಯ 14.30 ಟಿಎಂಸಿ ನೀರಿದೆ. ಜಲಾಶಯದ ಇಂದಿನ ಒಳಹರಿವು 17873 ಕ್ಯೂಸೆಕ್, ಹೊರಹರಿವು 2000 ಕ್ಯೂಸೆಕ್ ಇದೆ. ಕಬಿನಿ ಜಲಾಶಯ ಸಂಪೂರ್ಣ ಭರ್ತಿಗೆ 9 ಅಡಿಗಳು ಮಾತ್ರ ಬಾಕಿ ಇವೆ.
ಇದನ್ನೂ ಓದಿ: Karnataka Weather : ಕರಾವಳಿಯಲ್ಲಿ ಮುಂಗಾರು ಪ್ರಬಲ; ಮುಂದುವರಿಯಲಿದೆ ಮಳೆ ಅಬ್ಬರ
ಶಿಥಿಲಗೊಂಡಿರುವ ಚೆಲ್ಯಡ್ಯ ಸೇತುವೆಯಲ್ಲಿ ವಾಹನ ಓಡಾಟ ನಿಷೇಧ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕ ಸೇತುವೆ ಶಿಥಿಲಗೊಂಡಿದೆ. ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಗೆ ಚೆಲ್ಯಡ್ಕ ಸೇತುವೆ ಮುಳುಗಡೆಯಾಗಿತ್ತು. ಹೀಗಾಗಿ ಶಿಥಿಲಗೊಂಡಿರುವ ಚೆಲ್ಯಡ್ಯ ಸೇತುವೆಗೆ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿದರು. ಸೇತುವೆಯ ಪರಿಸ್ಥಿಯನ್ನು ಗಮನಿಸಿ ಸ್ಥಳೀಯರಲ್ಲಿ ಮಾಹಿತಿ ಪಡೆದುಕೊಂಡರು.
ಸೇತುವೆ ವೀಕ್ಷಣೆ ಬಳಿಕ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಚೆಲ್ಯಡ್ಕ ಸೇತುವೆಯಲ್ಲಿ ಘನವಾಹನ ಸಂಚಾರವನ್ನು ನಿಷೇಧ ಮಾಡಲಾಗಿದೆ. ಉಳಿದಂತೆ ಲಘು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ರಾತ್ರಿ 8 ರಿಂದ ಬೆಳಗ್ಗೆ 6ರ ವರೆಗೆ ಸಂಪೂರ್ಣ ವಾಹನ ಸಂಚಾರ ನಿಷೇಧಿಸಲಾಗಿದ್ದು, ಬೆಳಗಿನ ಅವಧಿಯಲ್ಲಿ ಲಘು ವಾಹನ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಅಂದರು. ಇನ್ನೂ ಮಳೆಗಾಲ ಮುಗಿದ ಬಳಿಕ ಸೇತುವೆಯ ಕಾಮಗಾರಿ ಆರಂಭಿಸಲಾಗುವುದು. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣವಾಗಿದೆ ಎಂದು ಮಾಹಿತಿ ನೀಡಿದರು, ಜಿಲ್ಲಾಧಿಕಾರಿಗೆ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ,ತಹಶೀಲ್ದಾರ್ ಪುರಂದರ ಹೆಗ್ಡೆ ಸಾಥ್ ನೀಡಿದ್ದರು.
ಕಾರವಾರದಲ್ಲಿ ಭಾರಿ ಮಳೆಗೆ ಮಣ್ಣಿನ ಗೋಡೆ ಕುಸಿದು ವೃದ್ಧೆ ಸಾವು
ಕಾರವಾರ: ಭಾರಿ ಮಳೆಗೆ ಮಣ್ಣಿನ ಗೋಡೆ ಕುಸಿದು ವೃದ್ಧೆ ಮೃತಪಟ್ಟಿರುವ ಘಟನೆ ಕಾರವಾರದ ಅಸ್ನೋಟಿಯ ಆರವ ಗ್ರಾಮದ ತೋರ್ಲೆಭಾಗದಲ್ಲಿ ಶುಕ್ರವಾರ ನಡೆದಿದೆ. ಗುಲಾಬಿ ರಾಮಚಂದ್ರ ಮಾಂಜ್ರೇಕರ್ (70) ಮೃತ ದುರ್ದೈವಿ. ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ ವೃದ್ಧೆ, ಚಿತ್ತಾಕುಲದಲ್ಲಿ ಹಣ್ಣಿನ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದರು. ನೆನ್ನೆ ಮಧ್ಯಾಹ್ನ ಮನೆಯ ಪಕ್ಕದ ಹಳೆಯ ಕಟ್ಟಡದ ಬಳಿ ತೆರಳಿದ್ದಾಗ ಮೈಮೇಲೆ ಗೋಡೆ ಕುಸಿದಿದೆ. ಗೋಡೆಯ ಅವಶೇಷಗಳಡಿ ವೃದ್ಧೆ ಮುಚ್ಚಿಹೋಗಿದ್ದರಂದ ಇಂದು ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ತಹಸೀಲ್ದಾರ್ ನಿಶ್ಚಲ ನೊರೋನ್ಹಾ, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರಲ್ಲಿ ಭಾರಿ ಮಳೆಗೆ ರಸ್ತೆ ಕಾಣದೆ ನದಿಗೆ ಬಿದ್ದ ಕಾರು
ಭಾರಿ ಮಳೆಯಿಂದಾಗಿ ರಸ್ತೆ ಕಾಣದೆ ಕಾರೊಂದು ನದಿಗೆ ಬಿದ್ದಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಪಾರಾಗಿದ್ದಾರೆ. ಜೂ 28ರಂದು ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಣಕಲ್ ಬಳಿ ಘಟನೆ ನಡೆದಿದೆ. ನೋಡ ನೋಡುತ್ತಿದ್ದಂತೆ ಕಾರು ಹೇಮಾವತಿ ನದಿಗೆ ಹಾರಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ನಿಂತ ಹಿನ್ನೆಲೆಯಲ್ಲಿ ರಸ್ತೆ ಕಾಣದೆ ಕಾರು ನಿಯಂತ್ರಣ ತಪ್ಪಿರುವ ಶಂಕೆ ವ್ಯಕ್ತವಾಗಿದೆ. ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಯಿಂದ ಜಿಗಿದು ನದಿಗೆ ಕಾರು ಬಿದ್ದಿದೆ. ಕಳೆದ ಎರಡು ತಿಂಗಳ ಹಿಂದೆ ನಾಲ್ವರು ಅಪಘಾತದಲ್ಲಿ ಮೃತಪಟ್ಟಿದ್ದರು. ಇದೀಗ ಇದೆ ಸ್ಥಳದಲ್ಲೇ ಮತ್ತೊಂದು ಅಪಘಾತ ಸಂಭವಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ