ಬೆಂಗಳೂರು: ನಿನ್ನೆ (ಅ.5) ಸುರಿದ ಭಾರಿ ಮಳೆಗೆ (Bengaluru Rain) ಬೆಂಗಳೂರಿನ ಮಲ್ಲೇಶ್ವರದ 13ನೇ ಕ್ರಾಸ್‌ನಲ್ಲಿ ರಸ್ತೆ ಕುಸಿದಿದೆ. ಎರಡು ವಾರದ ಹಿಂದೆ ಗುಂಡಿ ಮುಚ್ಚಲು ಹಾಕಿದ್ದ ಟಾರು ಮಳೆಯಿಂದಾಗಿ (Karnataka Rain) ಕುಸಿದು ಬಿದ್ದಿದೆ. ಕಳಪೆ ಕಾಮಗಾರಿ ಹಿನ್ನೆಲೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ರಾತ್ರಿ ಸುರಿದ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಅಲ್ಲಲ್ಲಿ ರಸ್ತೆಗಳಲ್ಲೇ ನೀರು ನಿಂತಿದ್ದರಿಂದ ಹಲವು ಕಡೆಗಳಲ್ಲಿ ಅವಾಂತರವೇ ಸೃಷ್ಟಿಯಾಗಿದೆ. ಕೋಗಿಲು ಕ್ರಾಸ್ ಬಳಿ ತಡೆಗೋಡೆ ಕುಸಿದು ಅಪಾರ್ಟ್‌ಮೆಂಟ್ ಒಳಗೆ ನೀರು ನುಗ್ಗಿದೆ. ಬಿನ್ನಿಪೇಟೆ ಬಳಿ ಚೇಂಬರ್ ಕಾಂಪೌಂಡ್ ಕುಸಿದು ಇಪ್ಪತ್ತಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿದೆ. ಹಲವು ಮನೆಗಳಿಗೆ ನೀರು ನುಗ್ಗಿದೆ. ಬಸವೇಶ್ವರ ನಗರ, ಪುಟ್ಟೇನಹಳ್ಳಿ ಯಲಹಂಕಾ ಸೇರಿದಂತೆ ಹಲವೆಡೆ ಮನೆಗಳಿಗೆ ಜಲಕಂಟಕ ಎದುರಾಗಿದೆ. ನಗರದಲ್ಲಿ ಸರಾಸರಿ 36 ಮಿ.ಮೀ ಮಳೆ ದಾಖಲಾಗಿದೆ. ಕೊಟ್ಟಿಗೆ ಪಾಳ್ಯದಲ್ಲಿ 113 ಮಿ.ಮೀ ದಾಖಲೆಯ ಮಳೆಯಾದರೆ, ಹಂಪಿನಗರ, ನಾಗಪುರಗಳಲ್ಲಿ 10 ಸೆಂ.ಮೀಗಿಂತಲೂ ಮಳೆಯಾಗಿದೆ.
ಯಾವ್ಯಾವ ಭಾಗದಲ್ಲಿ ಎಷ್ಟು ಮಳೆ?
ಕೊಟ್ಟಿಗೆಪಾಳ್ಯ : 113 ಮಿ.ಮೀ
ಹಂಪಿನಗರ : 108 ಮಿ.ಮೀ
ನಾಗಪುರ : 107.5 ಮಿ.ಮೀ
ಚೌಡೇಶ್ವರಿ : 79.5 ಮಿ.ಮೀ
ಮಾರುತಿಮಂದಿರ : 75.5 ಮಿ.ಮೀ
ನಂದಿನಿ ಲೇಔಟ್ : 71.5 ಮಿ.ಮೀ
ರಾಜಾಜಿನಗರ : 59 ಮಿ.ಮೀ
ನಾಯಂಡಹಳ್ಳಿ : 46 ಮಿ.ಮೀ
HAL ಏರ್ಪೋರ್ಟ್ : 45 ಮಿ.ಮೀ
ವಿದ್ಯಾರಣ್ಯಪುರ : 45 ಮಿ.ಮೀ
ಪುಟ್ಟೇನಹಳ್ಳಿ : 42.5 ಮಿ.ಮೀ
RR ನಗರ : 42.5 ಮಿ.ಮೀ
ರಾಜಮಹಲ್ ಗುಟ್ಟಹಳ್ಳಿ : 42.5 ಮಿ.ಮೀ
ಸೇರಿದಂತೆ ಸರಾಸರಿ 36 ಮಿ.ಮೀ ಮಳೆ ದಾಖಲು
ಯಲಹಂಕದ ಕೇಂದ್ರಿಯ ವಿಹಾರ ಅಪಾರ್ಟ್‌ಮೆಂಟ್ ಜಲಾವೃತ
ಬೆಂಗಳೂರಿನಲ್ಲಿ ಮಳೆ ಅವಾಂತರ ಮುಂದುವರಿದಿದೆ. ಯಲಹಂಕದ ಕೇಂದ್ರಿಯ ವಿಹಾರ ಅಪಾರ್ಟ್‌ಮೆಂಟ್ ಜಲಾವೃತಗೊಂಡಿದೆ. ಅಪಾರ್ಟ್‌ಮೆಂಟ್ ಹಿಂಭಾಗದ ಕಾಂಪೌಂಡ್ ಗೋಡೆ ಕುಸಿದ ಪರಿಣಾಮ ಅಪಾರ್ಟ್‌ಮೆಂಟ್ ಆವರಣಕ್ಕೆ ನೀರು ನುಗ್ಗಿದೆ. ಸುಮಾರು 20 ವರ್ಷಕ್ಕೂ ಹಿಂದಿನ ಶಿಥಿಲಾವಸ್ಥೆಯಲ್ಲಿದ್ದ ಗೋಡೆ ಕುಸಿದಿದೆ. ಒಂಭತ್ತು ಎಕರೆ ವಿಸ್ತೀರ್ಣವುಳ್ಳ ಕೇಂದ್ರಿಯ ವಿಹಾರ ಅಪಾರ್ಟ್‌ಮೆಂಟ್ ಆವರಣದಲ್ಲಿ 603 ಫ್ಲಾಟ್‌ನಲ್ಲಿ ಎರಡು ಸಾವಿರ ಮಂದಿ ವಾಸವಿದ್ದಾರೆ. ಕೇಂದ್ರಿಯ ವಿಹಾರ ಅಪಾರ್ಟ್‌ಮೆಂಟ್ ನಿವಾಸಿಗಳು ಅಕ್ಷರಶಃ ಜಲದಿಗ್ಬಂಧನಕ್ಕೆ ಒಳಗಾಗಿದ್ದಾರೆ. ಟ್ರ್ಯಾಕ್ಟರ್ ಮೂಲಕ ಅಪಾರ್ಟ್‌ಮೆಂಟ್ ನಿವಾಸಿಗಳನ್ನು ಕರೆದೊಯ್ದಬೇಕಾಯಿತು.
ಅಗ್ನಿಶಾಮಕದಳ ಸಿಬ್ಬಂದಿಯಿಂದ ನಿರಂತರವಾಗಿ ನೀರನ್ನು ಹೊರಹಾಕುವ ಕಾರ್ಯ ನಡೆಯಿತು. 80ಕ್ಕೂ ಹೆಚ್ಚು ಕಾರು ನೂರಕ್ಕೂ ಹೆಚ್ಚು ಬೈಕ್ ಭಾಗಶ: ನೀರಿನಲ್ಲಿ ಮುಳುಗಡೆಯಾಗಿದೆ. ಟ್ರ್ಯಾಕ್ಟರ್ ಹಾಗೂ ಬೋಟ್ ಮೂಲಕ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ಪರಿಸ್ಥಿತಿ ಎದುರಾಗಿದೆ. ಹಿರಿಯ ನಾಗರೀಕರು ಮತ್ತು ಮಕ್ಕಳನ್ನು ಕರೆದೊಯ್ಯಲು ನಿವಾಸಿಗಳು ಪರದಾಡಿದರು.
ಕೆರೆಯಂತಾದ ಕ್ರೀಡಾಂಗಣ
ರಾತ್ರಿ ಸುರಿದ ಮಳೆಗೆ ಕ್ರೀಡಾಂಗಣ ಜಲಾವೃತವಾಗಿದೆ. ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದಲ್ಲಿನ ತಾಲೂಕು ಮಟ್ಟದ ಕ್ರೀಡಾಂಗಣವು ಕೆರೆಯಂತೆ ಭಾಸವಾಗುತ್ತಿದೆ. ಪ್ರತಿಬಾರಿ ಮಳೆ ಬಂದಾಗ ಕ್ರೀಡಾಂಗಣ ಜಲಾವೃತಗೊಳ್ಳುತ್ತದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಕ್ರೀಡಾಂಗಣವು ಕ್ರೀಡಾ ಇಲಾಖೆ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಅವ್ಯವಸ್ಥೆ ಆಗಿದೆ. ಸರಿಯಾದ ನಿರ್ವಹಣೆ ಇಲ್ಲದೆ ಕ್ರೀಡಾಂಗಣ ಹಾಳಾಗಿದೆ.
ಕೆಸರು ಗದ್ದೆಯಾದ ರಸ್ತೆ
ರಾತ್ರಿ ಸುರಿದ ಭಾರಿ ಮಳೆಗೆ ರಸ್ತೆಯು ಕೆಸರು ಗದ್ದೆಯಾಗಿದೆ. ಹದಗೆಟ್ಟ ರಸ್ತೆಯಲ್ಲಿ ಸಂಚರಿಸಲಾಗದೆ ನಿವಾಸಿಗಳು ಪರದಾಡುತ್ತಿದ್ದಾರೆ. ಆನೇಕಲ್‌ನ ಚಂದಾಪುರ ಪುರಸಭೆ ವಾರ್ಡ್ ನಂಬರ್ 20ರಲ್ಲಿ ಘಟನೆ ನಡೆದಿದೆ. ಹೆಡ್ ಮಾಸ್ಟರ್ ಲೇಔಟ್‌ಗೆ ಸಂಪರ್ಕ್ ಕಲ್ಪಿಸುವ ರಸ್ತೆ ಇದಾಗಿದೆ. ಮಳೆ ಬಂದಾಗ ರಸ್ತೆ ಜಲಾವೃತಗೊಂಡು ಸಂಪೂರ್ಣ ಕೆಸರುಮಯವಾಗಿದೆ. ನಿತ್ಯ ಓಡಾಡುವ ಜನರಿಗೆ ಈ ರಸ್ತೆಯಲ್ಲಿ ಸಂಚರಿಸುವುದೆ ನರಕಯಾತನೆ ಆಗಿದೆ. ಮಳೆ ಬಂದಾಗ ಕೆಸರು ಗದ್ದೆ, ಬಿಸಿಲಿನ ಸಮಯದಲ್ಲಿ ಧೂಳಿನ ಸಮಸ್ಯೆ ಎದುರಾಗಿದೆ. ರಸ್ತೆಯಲ್ಲಿ ಹಳ್ಳಗುಂಡಿಗಳು ಕಾಣದೆ ಬಿದ್ದು ನಿವಾಸಿಗಳು ಆಸ್ಪತ್ರೆ ಪಾಲಾಗುತ್ತಿದ್ದಾರೆ. ಚಂದಾಪುರ ಪುರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ