ಕೊಪ್ಪಳ: ಭಾರಿ ಮಳೆ (Karnataka Rain) ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿದೆ. ಇದರ ಪರಿಣಾಮವಾಗಿ ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದಲ್ಲಿರುವ ಸುಪ್ರಸಿದ್ಧ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತಗೊಂಡಿದೆ. ಕೇಶಮುಂಡನ ಮಾಡುವ ಕೋಣೆಯು ನೀರಿನಲ್ಲಿ ಮುಳುಗಿದೆ. ತುಂಗಭದ್ರಾ ನದಿ ದಡದಲ್ಲಿರುವ ದೇವಸ್ಥಾನ ಇದಾಗಿದ್ದು, ನೀರಿನ ಪ್ರಮಾಣ ಹೆಚ್ಚಾದರೆ ಅನೇಕ ಅಂಗಡಿಗಳು ಜಲಾವೃತ ಸಾಧ್ಯತೆ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ನದಿ ಸಮೀಪ ಭಕ್ತರಿಗೆ ನಿಷೇಧಿಸಲಾಗಿದೆ.
ಯಾದಗಿರಿ-ರಾಯಚೂರು ಸಂಪರ್ಕ ಕಡಿತ
ಯಾದಗಿರಿಯಲ್ಲಿ ನಾರಾಯಣಪುರ ಡ್ಯಾಂನಿಂದ ಭಾರಿ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿದ್ದು, ಕೃಷ್ಣಾ ನದಿ ಪ್ರವಾಹದಿಂದ ಈಗಾಗಲೇ ಕೊಳ್ಳುರು ಸೇತುವೆ ಹಾಗೂ ಗುರ್ಜಾಪುರ ಸೇತುವೆ ಸಂಪರ್ಕ ಕಡಿತಗೊಂಡಿದೆ. ಅದೆ ರೀತಿ ವಡಗೇರಾ ತಾಲೂಕಿನ ಗುಂಡ್ಲುರು ಹೊರಭಾಗದ ಗುರ್ಜಾಪುರ ಸೇತುವೆ ಜಲಾವೃತಗೊಂಡಿವೆ. ಸೇತುವೆ ಜಲಾವೃತದಿಂದ ಯಾದಗಿರಿ-ರಾಯಚೂರು ಜಿಲ್ಲೆಗೆ ಸಂಪರ್ಕ ಕಡಿತವಾಗಿದೆ.
ಬೆಳಗಾವಿಯಲ್ಲಿ ಮತ್ತೆ ಲೊಳಸೂರ ಸೇತುವೆ ಬಂದ್
ಬೆಳಗಾವಿಯ ಲೊಳಸೂರ ಸೇತುವೆ ಮೇಲೆ ಮತ್ತೆ ಘಟಪ್ರಭೆ ಆವರಿಸಿದೆ. ನಿನ್ನೆಯಷ್ಟೆ ನೀರು ಕಡಿಮೆಯಾಗಿ ಓಪನ್ ಆಗಿದ್ದ ಲೊಳಸೂರ ಸೇತುವೆ, ಇದೀಗ ಮತ್ತೆ ಬಂದ್ ಆಗಿದೆ. ಸಂಕೇಶ್ವರ ಧಾರವಾಡ ರಾಜ್ಯ ಹೆದ್ದಾರಿಯಲ್ಲಿರುವ ಬೃಹತ್ ಸೇತುವೆ ಇದಾಗಿದೆ. ಲೊಳಸೂರು ಗೋಕಾಕ ಸಂಪರ್ಕ ಸೇತುವೆ ಬಂದ್ ಆಗಿದೆ.
ನೀರುಪಾಲಾದ ಹುಂಡಿ ಹಣ
ಕೋಲಾರ ಜಿಲ್ಲೆಯ ಮುಳಬಾಗಿಲು ಪ್ರಸಿದ್ಧ ಕುರುಡುಮಲೆಯ ಹುಂಡಿ ಹಣ ನೀರು ಪಾಲಾಗಿದೆ. ಮುಜರಾಯಿ ಇಲಾಖೆ ಸಿಬ್ಬಂದಿ ನೋಟುಗಳನ್ನು ಬಿಸಿಲಲ್ಲಿ ಒಣಗಿಸಿದ್ದಾರೆ. ದೇವಸ್ಥಾನದ ಚಾವಣಿ ಕೆಲಸ ನಡೆಯುತ್ತಿದ್ದು, ಮಳೆ ಬಿದ್ದ ಪರಿಣಾಮ ನೀರುಪಾಲಾಗಿದೆ.
ಇದನ್ನೂ ಓದಿ: Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು
ಕುಮಟಾ-ಶಿರಸಿ ರಸ್ತೆಯಲ್ಲಿ ಮತ್ತೆ ಗುಡ್ಡಕುಸಿತ
ಭಾರೀ ಮಳೆಗೆ ಕುಮಟಾ-ಶಿರಸಿ ರಸ್ತೆಯ ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡಕುಸಿತ ಉಂಟಾಗಿದೆ. ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ 766EEಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಕಳೆದೆರಡು ವಾರಗಳ ಹಿಂದೆ ಗುಡ್ಡ ಕುಸಿದು 5 ದಿನ ಸಂಚಾರ ಬಂದ್ ಆಗಿತ್ತು. ಇದೀಗ ಮತ್ತೆ ಗುಡ್ಡ ಕುಸಿತದಿಂದ ವಾಹನ ಸವಾರರು ಆತಂಕದಲ್ಲಿದ್ದಾರೆ. ಹಿಟಾಚಿ ಮೂಲಕ ಗುಡ್ಡ ತೆರವು ಕಾರ್ಯ ಆರಂಭಿಸಲಾಗುತ್ತಿದೆ.
ಮಲಪ್ರಭಾ ನದಿ ತಟದಲ್ಲಿ ಪ್ರವಾಹದ ಪರಿಸ್ಥಿತಿ
ಮಲಪ್ರಭಾ ನದಿಯಿಂದಲೂ ಪ್ರವಾಹ ಭೀತಿ ಶುರುವಾಗಿದೆ. ಬೆಳಗಾವಿಯ ರಾಮದುರ್ಗ ತಾಲೂಕಿನ ಸುರೇಬಾನ್ ಬೆನ್ನೂರ ಗ್ರಾಮಕ್ಕೆ ಸಂಪರ್ಕಿಸುವ ಸೇತುವೆ ಜಲಾವೃತಗೊಂಡಿದೆ. ಸೇತುವೆ ಮುಳುಗಡೆಯಿಂದ ಚಿಕ್ಕತಡಸಿ, ಹಿರೇ ತಡಸಿ, ಬೆನ್ನೂರ ಗ್ರಾಮಗಳ ಸಂಪರ್ಕ ಕಟ್ ಆಗಿದೆ. 14 ಸಾವಿರ ಕ್ಯೂಸೆಕ್ ನಷ್ಟು ನವಿಲು ತೀರ್ಥ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಮಲಪ್ರಭಾ ನದಿ ತಟದಲ್ಲಿ ಪ್ರವಾಹದ ಪರಿಸ್ಥಿತಿ ಇದೆ. ಈಗಾಗಲೇ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ಜಲಾವೃತವಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ