ಆನೇಕಲ್: ಸೋಮವಾರ ಆನೇಕಲ್ ತಾಲ್ಲೂಕಿನಾದ್ಯಂತ (Karnataka Weather Forecast) ಮಳೆರಾಯನ ಅಬ್ಬರ (Rain News) ಜೋರಾಗಿತ್ತು. ಆನೇಕಲ್, ಬನ್ನೇರುಘಟ್ಟ, ಜಿಗಣಿ, ಅತ್ತಿಬೆಲೆ ಸುತ್ತಮುತ್ತ ಮಳೆಯ ಸಿಂಚನವಾಗಿದೆ. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು, ಬಳಿಕ ಮಧ್ಯಾಹ್ನದ ಹೊತ್ತಿಗೆ ದಿಢೀರ್ ಮಳೆಯಿಂದ ವಾಹನ ಸವಾರರು ಪರದಾಡಬೇಕಾಯಿತು.
ಕೆಲವರು ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆಯಬೇಕಾಯಿತು. ಮಳೆರಾಯನ ಆಗಮನದಿಂದ ವಾತಾವರಣ ಕೂಲ್ ಆಗಿತ್ತು. ಕೆಲ ತಾಸು ಸುರಿದ ಮಳೆಗೆ ಆನೇಕಲ್ ರಸ್ತೆಗಳು ಜಲಾವೃತಗೊಂಡಿದ್ದವು. ಇತ್ತ ಮಳೆಯಿಂದಾಗಿ ಬನ್ನೇರುಘಟ್ಟ ರಸ್ತೆ ಕೆರೆಯಂತಾಗಿತ್ತು. ಮುಕ್ಕಾಲು ಅಡಿ ನೀರು ನಿಂತ ಕಾರಣ ವಾಹನ ಸವಾರರು ಪರದಾಡಿದರು. ಬನ್ನೇರುಘಟ್ಟದಿಂದ ಆನೇಕಲ್ ಗೆ ಸಂಪರ್ಕ ಕಲ್ಪಿಸುವ ಮಾರ್ಗ ಇದಾಗಿದ್ದು, ರಸ್ತೆ ಕಾಣದೆ ಸವಾರರ ಕಂಗಲಾದರು. ಬನ್ನೇರುಘಟ್ಟ ರಸ್ತೆಯ ರಾಗೀಹಳ್ಳಿ ಬಳಿ ಘಟನೆ ನಡೆದಿದೆ.
ಯಾದಗಿರಿಯಲ್ಲಿ ನಿರಂತರ ಮಳೆ
ಯಾದಗಿರಿ ಜಿಲ್ಲೆಯಲ್ಲಿ ನಿರಂತರ ಸುರಿದ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ನೀರು ಪಾಲಾಗಿತ್ತು. ಮಳೆ ನೀರಿನಿಂದ ರೈತರ ಜಮೀನು ಪ್ರದೇಶ ನದಿಯಂತಾಗಿತ್ತು. ಯಾದಗಿರಿ ಜಿಲ್ಲೆಯ ಪಗಲಾಪುರ, ನಂದೆಪಲ್ಲಿ, ಬದ್ದೆಪಲ್ಲಿ, ವಂಕಸಂಬ್ರ ಸೇರಿದಂತೆ ಮೊದಲಾದ ಕಡೆ ಬೆಳೆ ಹಾಳಾಗಿತ್ತು. ಹತ್ತಿ, ಭತ್ತ, ತೊಗರಿ ಬೆಳೆ ಎಲ್ಲವೂ ನೀರುಪಾಲಾಗಿದ್ದವು. ಬೆಳೆ ಹಾನಿಯಿಂದ ಯಾದಗಿರಿ ಜಿಲ್ಲೆಯ ರೈತರ ಸಂಕಷ್ಟ ಎದುರಿಸಬೇಕಾಯಿತು. ಸರಕಾರ ಸೂಕ್ತ ಪರಿಹಾರ ಕಲ್ಪಿಸುವಂತೆ ಉಮೇಶ ಮುದ್ನಾಳ ಒತ್ತಾಯಸಿದರು.
ಇಂದು- ನಾಳೆ ಭಾರಿ ಮಳೆ ಎಚ್ಚರಿಕೆ
ಸೆ.2ರ ಸಂಜೆ ನಂತರ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉಡುಪಿಯಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಸಾಧಾರಣ ಮಳೆಯಾಗಲಿದೆ. ಒಳನಾಡಿನ ಸುತ್ತಮುತ್ತ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇನ್ನು ನಾಳೆ ಮಂಗಳವಾರ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ಒಳನಾಡಿನ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಡಿ.ಸೆ ಮತ್ತು 21 ಡಿ.ಸೆ ಇರಲಿದೆ.