ಬೆಂಗಳೂರು: ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ (Rain News) ಸಾಧ್ಯತೆ ಇದೆ. ಮಲೆನಾಡು ಸುತ್ತಮುತ್ತ ಸಾಧಾರಣ ಮಳೆಯಾದರೆ, ಒಳನಾಡಿನ ಕಡೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.
ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ ಹಾಗೂ ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಚದುರಿದಂತೆ ಹಗುರದಿಂದ ಕೂಡಿದ ಮಳೆಯಾಗಲಿದೆ.
ಬೆಳಗಾವಿ-ಧಾರವಾಡದಲ್ಲಿ ಸಾಧಾರಣ ಮಳೆ
ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ ಸೇರಿದಂತೆ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಸಣ್ಣ ಮಳೆಯಾಗಲಿದೆ.
ಶಿವಮೊಗ್ಗದಲ್ಲಿ ಭಾರಿ ಮಳೆ ಎಚ್ಚರಿಕೆ
ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಹಾಸನದಲ್ಲಿ ಸಾಧಾರಣ ಮಳೆಯಾದರೆ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿಯಲ್ಲಿ ಹಗುರದಿಂದ ಭಾರಿ ಮಳೆಯಾಗಲಿದೆ.
ಬೆಂಗಳೂರಿನಲ್ಲಿ ತುಂತುರು ಮಳೆ
ಬೆಂಗಳೂರಿನಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಮೀನುಗಾರರಿಗೆ ಎಚ್ಚರಿಕೆ
ಆಗಸ್ಟ್ 28 ರವರೆಗೆ ಕರ್ನಾಟಕದ ಕರಾವಳಿಯಲ್ಲಿ ಗಂಟೆಗೆ 35 ರಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹೀಗಾಗಿ ಮೇಲೆ ತಿಳಿಸಿದ ಅವಧಿಯಲ್ಲಿ ಮೀನುಗಾರರು ಮೇಲಿನ ಸಮುದ್ರ ಪ್ರದೇಶಗಳಿಗೆ ಹೋಗದಂತೆ ಸೂಚಿಸಲಾಗಿದೆ.
ಇದನ್ನೂ ಓದಿ: Divorce Case: ವಿಚ್ಛೇದನದ ಬಳಿಕ ಮಾಜಿ ಪತಿಯಿಂದ ದುಬಾರಿ ಜೀವನಾಂಶ ಕೇಳಿದವಳಿಗೆ ಚಾಟಿ ಬೀಸಿದ ಹೈಕೋರ್ಟ್!
ಚಿಕ್ಕಮಗಳೂರಿನಲ್ಲಿ ಅಬ್ಬರಿಸಿದ ಮಳೆ
ನಿನ್ನೆ ಸೋಮವಾರ ಚಿಕ್ಕಮಗಳೂರಿನ ಚಾರ್ಮಾಡಿಯಲ್ಲಿ ಭಾರಿ ಮಳೆಯಾಗಿದೆ. ಭಾರಿ ಮಳೆಗೆ ರಸ್ತೆ ಕಾಣದೆ ವಾಹನಗಳು ನಿಂತಲ್ಲೇ ನಿಲ್ಲಬೇಕಾಯಿತು. ಸುಮಾರು ಎರಡು ಗಂಟೆಗೂ ಹೆಚ್ಚು ಸಮಯ ಮಂಜು ಮಿಶ್ರಿತ ನಿರಂತರ ಮಳೆಯಿಂದಾಗಿ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‌ನಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ರಸ್ತೆ ಕಾಣದೆ ಕಡೂರು ಮಂಗಳೂರು ಸಂಚಾರಕ್ಕೆ ಸಂಕಷ್ಟ ಎದುರಾಗಿತ್ತು. ಬಣಕಲ್, ಬಾಳೂರು, ಕೊಟ್ಟಿಗೆಹಾರ, ಕುಂದೂರು ಹೊಸೂರು ಭಾಗದಲ್ಲೂ ಭಾರಿ ಮಳೆಯಾಗಿತ್ತು. ಇದ್ದಕ್ಕಿದ್ದಂತೆ ಆರಂಭವಾದ ಮಳೆಯಿಂದ ಜನಜೀವನ ಏರುಪೇರಾಗಿತ್ತು. ಮಳೆ ಮಧ್ಯೆ ವಾಹನಗಳನ್ನು ಚಲಾಯಿಸಲಾಗದೆ ಕೊಟ್ಟಿಗೆಹಾರದಲ್ಲೇ ವಾಹನಗಳು ನಿಲ್ಲಬೇಕಾಯಿತು. ಕಳೆದ ವಾರವಷ್ಟೆ ಚಾರ್ಮಾಡಿ ಘಾಟಿಯಲ್ಲಿ ಗುಡ್ಡ, ಬಂಡೆಗಳು ಕುಸಿದಿದ್ದವು. ಗಾಳಿ-ಮಳೆಗೆ ಗುಡ್ಡ ಕುಸಿಯುವ ಆತಂಕದಿಂದಾಗಿ ವಾಹನಗಳು ನಿಂತಲ್ಲೇ ನಿಲ್ಲಬೇಕಾಯಿತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ