ವಿಜಯನಗರ: ರಾಜ್ಯದ ಹಲವೆಡೆ ಶುಕ್ರವಾರ ಸಂಜೆ ವೇಳೆಗೆ ಭಾರಿ (Rain News) ಮಳೆಯಾಗಿದೆ. ವಿಜಯನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಬೃಹತ್ ಮರವೊಂದು (Karnataka Weather Forecast) ನೆಲಕ್ಕುರುಳಿದೆ. ಪರಿಣಾಮ ಕಾರು ಹಾಗೂ ತಾತ್ಕಾಲಿಕ ಶೆಡ್‌ವೊಂದು ಜಖಂಗೊಂಡಿದೆ. ಜತೆಗೆ ವಿದ್ಯುತ್ ಕಂಬಗಳು ಧರೆಗುರುಳಿವೆ. ವಿಜಯನಗರದ ಹೊಸಪೇಟೆಯ ಪಟೇಲ್ ನಗರದಲ್ಲಿ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅರ್ಧ ಗಂಟೆಗೂ ಅಧಿಕ ಕಾಲ ಮಳೆಯಾಗಿದೆ.
ಇನ್ನು ಬೆಂಗಳೂರಿನಲ್ಲೂ ಮತ್ತೆ ವರುಣನ ಸಿಂಚನವಾಗಿದೆ. ಸಂಜೆ ಆಗುತ್ತಿದ್ದಂತೆ ನಗರದ ಹಲವು ಭಾಗಗಳಲ್ಲಿ ಮಳೆಯಾಗಿದೆ. ಜಯಮಹಲ್, ಶಿವಾಜಿ ನಗರ, ಮೆಕ್ರಿ ಸರ್ಕಲ್ ಸುತ್ತಮುತ್ತ ಮಳೆಯಿಂದಾಗಿ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಅನಾನುಕೂಲ ಉಂಟಾಯಿತು.
ಮತ್ತೆ ಪ್ರವಾಹ ಭೀತಿ
ಮಹಾರಾಷ್ಟ್ರದ ಮಹಾಮಳೆಗೆ ಭೀಮಾನದಿ ತೀರದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಅಪಾಯದ ಮಟ್ಟ ಮೀರಿ ಭೀಮಾನದಿ ಹರಿಯುತ್ತಿದ್ದು, 1 ಲಕ್ಷ ಕ್ಯೂಸೆಕ್ ನೀರು ಗುರುಸಣಗಿ ಬ್ಯಾರೇಜ್‌ನಿಂದ ಬಿಡುಗಡೆ ಮಾಡಲಾಗಿದೆ. ಭೀಮಾನದಿ ಅಬ್ಬರಕ್ಕೆ ದೇಗುಲಗಳು ಜಲಾವೃತಗೊಂಡಿದೆ. ಭೀಮಾನದಿ ತೀರದ ವಿರಾಂಜನೇಯ ಹಾಗೂ ಕಂಗಳೇಶ್ವರ ಎರಡು ದೇಗುಲುಗಳು ಮುಳುಗಡೆಯಾಗಿದೆ. ನದಿ ತೀರಕ್ಕೆ ತೆರಳದಂತೆ ಎಚ್ಚರಿಕೆ ನೀಡಿದ್ದರೂ ಜಿಲ್ಲಾಡಳಿತದ ಆದೇಶಕ್ಕೆ ಡೋಂಟ್ ಕೇರ್ ಎಂದು ಬ್ಯಾರೇಜ್ ಮುಂಭಾಗದ ನದಿ ತೀರದಲ್ಲಿ ಮೀನು ಹಿಡಿಯುವ ಹುಚ್ಚು ಸಾಹಸ ಮಾಡುತ್ತಿದ್ದಾರೆ.
ಬೆಳಗಾವಿ ಜಲಾನಯನ ಪ್ರದೇಶದಲ್ಲಿ ಮಳೆ ಹಿನ್ನೆಲೆಯಲ್ಲಿ ಘಟಪ್ರಭಾ ನದಿ ತುಂಬಿ ಹರಿಯುತ್ತಿದೆ. ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ 22 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಹೊಳೆ ಬಸವೇಶ್ವರ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದೆ. ಮಾಚಕನೂರು ಗ್ರಾಮದ ಮನೆಗಳ ಸಮೀಪ ನೀರು ಹರಿದಿದೆ. ಮಾಚಕನೂರು-ಚಿಕ್ಕೂರು ಸಂಪರ್ಕ ಸೇತುವೆ ಮುಳುಗಡೆಯಾಗಿದೆ.
ಇದನ್ನೂ ಓದಿ: KJ George: ಬಿಜೆಪಿಯವರು ಸುಳ್ಳನ್ನು ನೂರು ಬಾರಿ ಹೇಳಿ ನಿಜ ಮಾಡುತ್ತಾರೆ ಎಂದ ಸಚಿವ ಕೆ.ಜೆ. ಜಾರ್ಜ್
ವಿಕೆಂಡ್‌ನಲ್ಲಿ ಭಾರಿ ಮಳೆ ಅಬ್ಬರ
ಶನಿವಾರ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಬೆಳಗಾವಿ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ಪ್ರತ್ಯೇಕವಾದ ಭಾರೀ ಮಳೆ ಮತ್ತು ನಿರಂತರ ಗಾಳಿಯ ವೇಗ 35-45 ಕಿ.ಮೀ ತಲುಪುವ ಸಾಧ್ಯತೆಯಿದೆ. ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಅನೇಕ ಸ್ಥಳಗಳಲ್ಲಿ ಲಘುವಾಗಿ ಮಧ್ಯಮ ಮಳೆ ಮತ್ತು ನಿರಂತರ ಗಾಳಿಯ ವೇಗ 35-45 ಕಿ.ಮೀ ಆಗುವ ಸಾಧ್ಯತೆಯಿದೆ.
ಮುಂದಿನ 48 ಗಂಟೆಯಲ್ಲಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗಾಳಿಯ ವೇಗ 35-45 ಕಿ.ಮೀ ಸಹಿತ ನಿರಂತರ ಗಾಳಿಯು ಬೀಸುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 27 ಮತ್ತು 20 ಡಿ.ಸೆ ಇರಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ