ಬೆಂಗಳೂರು: ನಾಳೆ ಬುಧವಾರ ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯಾಗುವ (Rain News) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ. ಉತ್ತರ ಕನ್ನಡ ಜಿಲ್ಲೆಯ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಧರೆಗುರುಳಿದ ಮರ
ಇನ್ನೂ ಮಂಗಳವಾರವೂ ಮಳೆ ಅವಾಂತರ ಮುಂದುವರಿದಿದೆ. ಬೆಂಗಳೂರಿನಲ್ಲಿ ಮಧ್ಯಾಹ್ನದ ವೇಳೆಗೆ ಹಲವೆಡೆ ಮಳೆಯು ಅಬ್ಬರಿಸಿತ್ತು. ವಿಧಾನಸೌಧ, ಶಿವಾಜಿನಗರ, ಕಬ್ಬನ್‌ಪಾರ್ಕ್,ಕಸ್ತೂರಬಾ ರಸ್ತೆ ಸೇರಿದಂತೆ ಮೆಜೆಸ್ಟಿಕ್ ಸುತ್ತಮುತ್ತ ಮಳೆಯಾಗಿದೆ. ಸದಾಶಿವನಗರ ಪೊಲೀಸ್ ಠಾಣೆ ಮುಂಭಾಗ ಮರವೊಂದು ಧರೆಗುರುಳಿದೆ. ಮರ ಬಿದ್ದ ಪರಿಣಾಮ ರಸ್ತೆಯಲ್ಲಿ ನಿಂತಿದ್ದ ಒಂದು ಕಾರು ಜಖಂಗೊಂಡಿದೆ. ಬಿಬಿಎಂಪಿ ಸಿಬ್ಬಂದಿ ಬರಲು ತಡವಾದ ಹಿನ್ನೆಲೆಯಲ್ಲಿ ಪೊಲೀಸರಿಂದಲೇ ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಬೃಹತ್ ಮರ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಗ್ರಾಮಕ್ಕೆ ನುಗ್ಗಿದ ಹಳ್ಳದ ನೀರು
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮುದೇನೂರು ಗ್ರಾಮದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದವು. ಮಾರಾಟವಾಗಬೇಕಿದ್ದ ತರಕಾರಿಗಳು ಕೊಚ್ಚಿಹೋಗಿದ್ದು ಕಂಡು ವ್ಯಾಪಾರಸ್ಥರು ಕಣ್ಣೀರು ಹಾಕಿದರು. ಕೊಪ್ಪಳದ ಕುಷ್ಟಗಿ ತಾಲೂಕಿನ ಅಡವಿಬಾವಿ ಗ್ರಾಮದ ಕೊಳ್ಳದ ಅಮರೇಶ್ವರ ದೇವಸ್ಥಾನ ಜಲಾವೃತಗೊಂಡಿತ್ತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದಲ್ಲದೇ ಜುಮಲಾಪುರದ ಸರಕಾರಿ ಪ್ರಾಥಮಿಕ ಶಾಲಾ ಆವರಣ ನದಿಯಂತಾಗಿತ್ತು.
ವಿಜಯನಗರದ ಹಂಪಿಯಲ್ಲೂ ಉತ್ತಮ ಮಳೆಯಾಗಿದೆ. ಹೊಸಪೇಟೆ ತಾಲೂಕಿನ ಹಂಪಿ ಸುತ್ತಮುತ್ತಲಿನ ಪ್ರದೇಶದ ಬಾಳೆ ತೋಟಕ್ಕೆ ಮಳೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿತ್ತು. ಹೊಸಪೇಟೆ ತಾಲೂಕಿನ ಗುಂಡ್ಲಕೇರಿಯ ಬಳಿ ಇರುವ ಕಾಲುವೆಯ ಸೇತುವೆ ಮೇಲೆ ನೀರು ಹರಿದಿದೆ. ಸೀತಾರಾಮ್ ತಾಂಡ- ಕಮಲಾಪುರ ರಸ್ತೆಯ ಮಧ್ಯದ ಸೇತುವೆ, ಹಗರಿಬೊಮ್ಮನ ಹಳ್ಳಿ ತಾಲೂಕಿನ ಮುತ್ಕೂರು- ವಲ್ಲಭಾಪುರ ಸೇತುವೆ ಮುಳುಗಡೆಯಾಗಿದೆ.
ಹೊಸಪೇಟೆ ತಾಲೂಕಿನ ಭಾಗದ ಗ್ರಾಮಗಳಲ್ಲಿ ಭಾರೀ ಮಳೆಗೆ ಹತ್ತಿ, ಮೆಣಸಿನ ಕಾಯಿ ಬೆಳೆಗಳು ನೀರಿಗೆ ಆಹುತಿಯಾಗಿವೆ. ಧರ್ಮಸಾಗರ ಗ್ರಾಮದ ನಾಯಕರ ಹುಲಗಪ್ಪ ಎಂಬವರಿಗೆ ಸೇರಿದ ಜಮೀನಿನಲ್ಲಿ ಬೆಳೆದ ಬೆಳೆಯು ಮಳೆಗೆ ಕೊಚ್ಚಿ ಹೋಗಿದೆ. ರೈತ ನಾಯಕರ ಹುಲಗಪ್ಪ ಸಾಲಸೊಲ ಮಾಡಿ ಬೆಳೆಯನ್ನು ಬೆಳೆದಿದ್ದರು. ಇದೀಗ ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಜಮೀನುಗಳಿಗೆ ನೀರು ನುಗ್ಗಿದೆ.
ಇದನ್ನೂ ಓದಿ: Celina Jaitley: ಮರ್ಮಾಂಗ ತೋರಿಸಿದ ದುಷ್ಟ; ಟೀಕೆಗೆ ಒಳಗಾದದ್ದು ನಾನು: ಕರಾಳ ನೆನಪು ಬಿಚ್ಚಿಟ್ಟ ನಟಿ
ತುಮಕೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ಒಂದೇ ದಿನಕ್ಕೆ ಜಯಮಂಗಲಿ ನದಿ ತುಂಬಿ ಹರಿದಿದೆ. ಪರಿಣಾಮ ಮಧುಗಿರಿ ತಾಲ್ಲೂಕಿನ ವೀರೇನಹಳ್ಳಿ -ಕಾಳೇನಹಳ್ಳಿ ರಸ್ತೆ ಜಲಾವೃತಗೊಂಡಿತ್ತು. ತುಮಕೂರಿನ ದೇವರಾಯನದುರ್ಗ ತಪ್ಪಲಲ್ಲಿ ಹುಟ್ಟುವ ಜಯಮಂಗಲಿ ನದಿ, ಕೊರಟಗೆರೆ, ಮಧುಗಿರಿ ಮಾರ್ಗವಾಗಿ ಆಂಧ್ರದ ಪರ್ಗಿ ಕೆರೆಗೆ ಸೇರಲಿದೆ. ಕಳೆದ ಎರಡು ವರ್ಷಗಳ ಹಿಂದೆ ಸುರಿದ ಮಳೆಗೆ ತುಂಬಿ ಹರಿದಿದ್ದ ಜಯಮಂಗಲಿ ನದಿ ಆ ನಂತರ ನೀರು ಖಾಲಿಯಾಗಿತ್ತು. ಇದೀಗ ರಾತ್ರಿ ಸುರಿದ ಧಾರಕಾರ ಮಳೆಗೆ ತುಂಬಿ ಹರಿಯುತ್ತಿದೆ. ಕೊರಟಗೆರೆ ಪಟ್ಟಣದ ಕನಕ ವೃತ್ತ ಬಳಿ 15ಕ್ಕೂ ಹೆಚ್ಚು ಅಂಗಡಿಗಳಿಗೆ ನೀರು ನುಗ್ಗಿತ್ತು. ಶಿವಗಂಗಾ ಥಿಯೇಟರ್ ಬಳಿರುವ ಸಿಮೆಂಟ್ ಅಂಗಡಿಗೆ ಮುಳುಗಿ 200 ಹೆಚ್ಚು ಸಿಮೆಂಟ್ ಮೂಟೆಗಳು ನೀರುಪಾಲಾಗಿದ್ದವು.
ವರುಣನ ಆರ್ಭಟಕ್ಕೆ ಬಳ್ಳಾರಿಯ ಕಂಪ್ಲಿಯ ಅನ್ನ ದಾತರು ನಲುಗಿ ಹೋಗಿದ್ದಾರೆ. ಮಳೆ ನೀರು ನುಗ್ಗಿ ಜಮೀನುಗಳು ಹಳ್ಳಗಳಂತೆ ಗೋಚರಿಸುತ್ತಿದೆ. ಕಂಪ್ಲಿ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲೆಡೆ ಬೆಳಗಿನ ಜಾವ ಮಳೆಯಾಗಿದೆ. ಕಂಪ್ಲಿ ಪಟ್ಟಣ, ರಾಮಸಾಗರ, ದೇವಲಾಪುರ, ಮೆಟ್ರಿ, ದೇವಸಮುದ್ರ, ನಂ.10 ಮುದ್ದಾಪುರ, ಸಣಾಪುರ, ಬೆಳಗೋಡ್ ಹಾಳ್ ಸೇರಿ ರೈತರ ಜಮೀನುಗಳಿಗೆ ನೀರು ನುಗ್ಗಿದೆ. ಪರಿಣಾಮ ಭತ್ತ, ಹೂ, ಬಾಳೆ, ಕಬ್ಬು, ಸೊಪ್ಪು ಸೇರಿದಂತೆ ನೂರಾರು ಹೆಕ್ಟರ್ ಬೆಳೆ ಜಲಾವೃತಗೊಂಡು ಹಾಳಾಗಿದೆ. ಲಕ್ಷಾಂತರ ರೂ ವ್ಯಯಿಸಿ ಬಿತ್ತನೆ ಮಾಡಿರುವ ರೈತರಲ್ಲಿ ಬೆಳೆ ನಷ್ಟದ ಆತಂಕ ಹೆಚ್ಚಾಗಿದೆ.
ರಾಜ್ಯ ಹೆದ್ದಾರಿ-29ರ ಮಾರೆಮ್ಮ ದೇವಸ್ಥಾನ ಬಳಿ ನೀರಿನ ರಭಸಕ್ಕೆ ರಸ್ತೆಯ ಕೆಳಭಾಗ ಕೊಚ್ಚಿ ಹೋಗಿದೆ. ಜವುಕು-ಜೀರಿಗನೂರು ಮತ್ತು ಚಿನ್ನಾಪುರ-ಮೆಟ್ರಿ ಸೇತುವೆ ಮೇಲೆ ನೀರು ಹರಿದು ಸಂಪರ್ಕ ಕಡಿತಗೊಂಡಿದೆ. ದೇವಲಾಪುರ ಗ್ರಾಮದ ರಾಜನ ಮಟ್ಟಿಯ ಚರಂಡಿ ಭರ್ತಿಯಾಗಿ ಮನೆಗಳಿಗೆ ನೀರು ನುಗ್ಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ