ಹಾಸನ: ಮಳೆರಾಯ ಉತ್ತರ ಧ್ರುವದಿಂದ ದಕ್ಷಿಣ ಧ್ರುವದ ಕಡೆ ಮುಖ ಮಾಡಿದ್ದಾನೆ. ಮುಂದಿನ ಒಂದು ವಾರದಲ್ಲಿ ಭಾರಿ ಮಳೆಯಾಗುವ (Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ.
ಹಾಸನದ ವಿವಿಧೆಡೆ ಕಳೆದ ರಾತ್ರಿಯಿಂದ ಧಾರಾಕಾರ ಮಳೆ ಸುರಿದಿದೆ. ಭಾರಿ ಮಳೆಗೆ ನಾಟಿ ಮಾಡಿದ್ದ ಭತ್ತದ ಸಸಿಗಳು ಕೊಚ್ಚಿ ಹೋಗಿವೆ. ಹಾಸನದ ಆಲೂರು ತಾಲೂಕಿನ ಬೆಂಬಳೂರು ಗ್ರಾಮದಲ್ಲಿ ಮಳೆಯ ಆರ್ಭಟಕ್ಕೆ ಹಳ್ಳಕೊಳ್ಳಗಳು ಉಕ್ಕಿ ಹರಿದಿದೆ. ಭತ್ತದ ಗದ್ದೆಗಳಿಗೆ ಬಾರಿ ಪ್ರಮಾಣದ ನೀರು ನುಗ್ಗಿದೆ.
ನೀರಿನ ರಭಸಕ್ಕೆ ಗದ್ದೆಯ ಬದುಗಳು ಕೊಚ್ಚಿ ಹೋಗಿವೆ. ನಾಟಿ ಮಾಡಲು ಸಿದ್ಧತೆ ನಡೆಸಿದ್ದ ರೈತರ ಆಸೆಗೆ ಮಳೆರಾಯ ತಣ್ಣೀರು ಎರಚಿದ್ದಾನೆ. ಐವತ್ತಕ್ಕೂ ಹೆಚ್ಚು ಎಕರೆ ಪ್ರದೇಶದ ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿದೆ. ಧಾರಾಕಾರ ಮಳೆಯಿಂದ ಕಂಗಾಲಾದ ರೈತರು ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: CM Siddaramaiah: ತುಂಗಭದ್ರಾ ಜಲಾಶಯ ಮತ್ತೆ ತುಂಬುವ ನಿರೀಕ್ಷೆ, ರೈತರಿಗೆ ತೊಂದರೆಯಾಗದಂತೆ ಕ್ರಮ: ಸಿಎಂ
ಸರ್ಕಾರಿ ಶಾಲೆ ಜಲಾವೃತ, ರಸ್ತೆಗಳೆಲ್ಲವೂ ಗುಂಡಿ ಮಯ
ನಿನ್ನೆ ಸುರಿದ ಮಳೆಗೆ ಸರ್ಕಾರಿ ಶಾಲೆಯೊಂದು ಜಲಾವೃತಗೊಂಡಿದೆ. ಬೆಂಗಳೂರಿನ ವರ್ತೂರಿನ ಸಿದ್ದಾಪುರ ಸರ್ಕಾರಿ ಶಾಲೆಯ ಆವರಣದ ಸುತ್ತಲೂ ಮಳೆ ನೀರು ನಿಂತಿತ್ತು. ಬೆಳಗ್ಗೆ ಶಾಲೆಗೆ ಬಂದ ಮಕ್ಕಳು, ಎರಡು ಗಂಟೆಗಳ ಕಾಲ ಶಾಲಾ ಕೊಠಡಿಗಳು ಸ್ವಚ್ಚತೆ ಮಾಡಿದರು.
ಇತ್ತ ಮಳೆ ನಿಂತು ಹೋದಮೇಲೆ ಗುಂಡಿಗಳು ಬಿದ್ದಿವೆ. ಎರಡು ದಿನದಿಂದ ಸುರಿದ ಮಳೆಗೆ ಬೆಂಗಳೂರಿನ ಟೌನ್ ಹಾಲ್ ಎದುರೇ 50ಕ್ಕೂ ಹೆಚ್ಚು ರಸ್ತೆ ಗುಂಡಿ ಬಿದ್ದಿವೆ. ಬಿಬಿಎಂಪಿಯಿಂದ 500 ಮೀಟರ್ ದೂರದಲ್ಲಿರುವ ಟೌನ್ ಹಾಲ್ ಸುತ್ತಮುತ್ತ ಇರುವ ಗುಂಡಿಗಳು ಬೈಕ್ ಸವಾರರ ಪಾಲಿಗೆ ಮೃತ್ಯುಕೂಪವಾಗಿದೆ.
ಕ್ಯಾರೆ ಎನ್ನದ ಬಿಬಿಎಂಪಿ
ಗುಂಡಿ ಫೋಟೋ ತೆಗೆದು ಕಳಿಸಿ ಅಂದರೆ ಬಿಬಿಎಂಪಿ ಕೆಲಸ ಮುಗಿತಾ? ಕೇವಲ ಆ್ಯಪ್ ಮಾಡಿ ಕೈತೊಳೆದು ಕೊಳ್ಳುತ್ತಿದೆ. ಮೊಣಕಾಲು ಉದ್ದ ಗುಂಡಿ ಇದ್ದರೂ ಬಿಬಿಎಂಪಿ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಬೆಂಗಳೂರಿನ ಸಿಂಗಯ್ಯನಪಾಳ್ಯ ರಸ್ತೆಯ ಮಧ್ಯದಲ್ಲಿ ಯಮ ಸ್ವರೂಪಿ ಗುಂಡಿ ಬಿದ್ದಿದೆ. ಸ್ವಲ್ಪ ಎಚ್ಚರ ತಪ್ಪಿದ್ದರೂ, ಜೀವಕ್ಕೆ ಅಪಾಯ ಗ್ಯಾರಂಟಿ. ಇನ್‌ಸ್ಟಾಗ್ರಾಂಮ್‌ನಲ್ಲಿ ಪೋಸ್ಟ್ ಹಾಕಿ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: Tungabhadra Dam: ಗೇಟ್ ರಿಪೇರಿಗಾಗಿ 60 ಟಿಎಂಸಿ ನೀರು ಖಾಲಿ, 8 ಜಿಲ್ಲೆಗಳ ರೈತರಿಗೆ ನೀರಿಲ್ಲ!
ನಾಳೆ ಈ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಾಧ್ಯತೆ
ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ರಾಮನಗರ, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಚದುರಿದಂತೆ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಚಿಕ್ಕಮಗಳೂರು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲೂ ಮಳೆಯು ಅಬ್ಬರಿಸಲಿದೆ. ಇತ್ತ ಕೊಪ್ಪಳ, ಗದಗ, ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಗುಡುಗು ಸಾಥ್ ನೀಡಲಿದೆ.
ಬೆಂಗಳೂರಲ್ಲಿ ಗುಡುಗು ಸಹಿತ ಮಳೆ
ಬೆಂಗಳೂರು ನಗರ ಮತ್ತು ಸುತ್ತಮುತ್ತ ಮುಂದಿನ 24 ಗಂಟೆಯಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಗುಡುಗು ಸಹಿತ ಭಾರೀ ಮಳೆಯಾಗುವ ಸಂಭವವಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 21 ಡಿ.ಸೆ ಇರಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ