Site icon Vistara News

Karnataka Weather : ಮುಂದಿನ 24 ಗಂಟೆಯಲ್ಲಿ ಭಾರಿ ಮಳೆ; ಮಲೆನಾಡಿನ ಶಾಲಾ-ಕಾಲೇಜು ರಜೆ

karnataka Weather Forecast

ಚಿಕ್ಕಮಗಳೂರು/ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೆಳಗಿನಿಂದಲೂ ಮೋಡ ಕವಿದ ವಾತಾವರಣ ಇತ್ತು. ಸಂಜೆ ಆಗುತ್ತಿದ್ದಂತೆ ಹಲವೆಡೆ (Rain News) ಮಳೆಯಾಗಿದೆ. ಆನಂದ್‌ ರಾವ್‌ ಸರ್ಕಲ್‌, ಶಿವಾಜಿನಗರ, ವಿಧಾನಸೌಧ, ಮೆಜೆಸ್ಟಿಕ್‌ ಸುತ್ತಮುತ್ತ ಮಳೆಯಾಗಿದೆ. ಇನ್ನೂ ಮಲೆನಾಡಿನ ಚಿಕ್ಕಮಗಳೂರಿನಲ್ಲಿ ಧಾರಾಕಾರ (Karnataka Weather Forecast) ಮ‌ಳೆ‌ಯಾಗುತ್ತಿದೆ. ಜು.31ರಂದು ಚಿಕ್ಕಮಗಳೂರಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮಲೆನಾಡು ಭಾಗದ ಆರು ತಾಲೂಕಿನ ಅಂಗನವಾಡಿ, ಶಾಲಾ ಕಾಲೇಜು, ಪದವಿ ಕಾಲೇಜಿಗೂ ರಜೆ ಘೋಷಣೆ ಮಾಡಲಾಗಿದೆ. ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಜೆ‌‌ ಘೋಷಣೆ ಮಾಡಲಾಗಿದೆ.

ಮುಖ್ಯವಾಗಿ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಚಿಕ್ಕಮಗಳೂರು, ತಾಲೂಕಿನ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ‌ರಜೆ‌ ಘೋಷಣೆ ಮಾಡಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶಿಸಿದ್ದಾರೆ. ಇನ್ನೂ ಬಯಲುಸೀಮೆ ತಾಲೂಕುಗಳಾದ ಕಡೂರು, ತರೀಕೆರೆ, ಅಜ್ಜಂಪುರಕ್ಕೆ ರಜೆ ಇಲ್ಲ.

ಇತ್ತ ಕೊಡಗಿನಲ್ಲೂ ಭಾರಿ ಗಾಳಿ-ಮಳೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬುಧವಾರ ಒಂದು ದಿನ ಜಿಲ್ಲೆಯಾದ್ಯಂತ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳನ್ನು ಹೊರತು ಪಡಿಸಿ, ಅಂಗನವಾಡಿ ಸೇರಿದಂತೆ ಶಾಲಾ-ಕಾಲೇಜುಗಳಿಗೆ ರಜೆ ನೀಡಿ, ಕೊಡಗು ಜಿಲ್ಲಾಧಿಕಾರಿ ವೆಂಕಟರಾಜಾ ಆದೇಶಿಸಿದ್ದಾರೆ.

ಧಾರಾಕಾರ ಮಳೆಗೆ ಐತಿಹಾಸಿಕ ರಾಮ ಮಂಟಪ ಮುಳುಗಡೆ

ಶಿವಮೊಗ್ಗದಲ್ಲೂ ಎಡಬಿಡದೆ ವ್ಯಾಪಕ ಮಳೆಯಾಗುತ್ತಿದ್ದು, ಐತಿಹಾಸಿಕ ರಾಮ ಮಂಟಪ ಮುಳುಗಡೆಯಾಗಿದೆ. ತೀರ್ಥಹಳ್ಳಿಯ ತುಂಗಾ ನದಿಯಲ್ಲಿರುವ ರಾಮ ಮಂಟಪ ಮುಳುಗಡೆಯಾಗಿದ್ದು, ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ಇನ್ನೂ ಲಿಂಗನಮಕ್ಕಿ ಜಲಾಶಯ ಭರ್ತಿಗೆ ಕ್ಷಣಗಣನೆ ಶುರುವಾಗಿದೆ. ನದಿ ಪಾತ್ರದ ಜನರಿಗೆ ಜಲಾಶಯದ ಅಧಿಕಾರಿಗಳು ಎಚ್ಚರಿಕೆಯಿಂದ ಇರುವಂತೆ ಸೂಚಿಸುತ್ತಿದ್ದಾರೆ. ಲಿಂಗನಮಕ್ಕಿ ಮಲೆನಾಡಿನ ಅತಿದೊಡ್ಡ ಜಲಾಶಯವಾಗಿದೆ. ನದಿಪಾತ್ರದ ಜನರಿಗೆ ಕಟ್ಟೇಚ್ಚರ ಘೋಷಣೆ ಮಾಡಲಾಗಿದೆ. ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನದಿಪಾತ್ರದ ಹಳ್ಳಿಗಳಿಗೆ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ:Namma Metro : ವಿದ್ಯುತ್‌ ಸರಬರಾಜು ವ್ಯವಸ್ಥೆಯಲ್ಲಿ ದೋಷ; ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ವ್ಯತ್ಯಯ

ನಾಳೆಗೂ ಮಳೆ ಅಬ್ಬರ

ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ ಮತ್ತು ಹಾಸನ ಜಿಲ್ಲೆಗಳ ಪ್ರತ್ಯೇಕ ಕಡೆ ಗಾಳಿಯೊಂದಿಗೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಜತೆಗೆ ಬೆಳಗಾವಿ ಮತ್ತು ಮೈಸೂರಿನಲ್ಲೂ ಮಳೆ ಮುಂದುವರಿಯಲಿದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಮತ್ತು ಉತ್ತರ ಒಳನಾಡಿನ ಉಳಿದ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗಾಳಿಯ ವೇಗವು (40-50 kmph) ತಲುಪುವ ಸಾಧ್ಯತೆಯಿದೆ ಹಾಗೊ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version