Site icon Vistara News

Karnataka Weather : ಯಾದಗಿರಿಯಲ್ಲಿ ಸಿಡಿಲಿಗೆ ಕುರಿಗಾಹಿ ಸಾವು ; ಬಿರುಗಾಳಿ ಸಹಿತ ಮಳೆಗೆ ಸಿಲುಕಿದ ಪ್ರವಾಸಿಗರು

Karnataka weather Forecast

ಯಾದಗಿರಿ/ಚಿಕ್ಕಮಗಳೂರು: ಮಳೆಯ ಆರ್ಭಟ (Karnataka Weather Forecast) ಮುಂದುವರಿದಿದ್ದು, ಸಾವು-ನೋವಿಗೆ ಕಾರಣವಾಗುತ್ತಿದೆ. ಯಾದಗಿರಿಯ ಗುರುಮಠಕಲ್ ತಾಲೂಕಿನ ಭಾಗದಲ್ಲಿ ಸೋಮವಾರ ಗುಡುಗು, ಸಿಡಿಲಿನ ಜತೆಗೆ ಬಿರುಗಾಳಿ ಸಹಿತ ಮಳೆಯಾಗಿದೆ. ಪರಿಣಾಮ ಸಿಡಿಲು ಬಡಿದು ಕುರಿಗಾಹಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗುರುಮಠಕಲ್ ತಾಲೂಕಿನ ರಾಂಪುರು ಗ್ರಾಮದಲ್ಲಿ ದುರ್ಘಟನೆ ನಡೆದಿದೆ.

ರಾಂಪುರು ಗ್ರಾಮದ ಕುರಿಗಾಹಿ ಚಂದಪ್ಪ (55) ಮೃತ ದುರ್ದೈವಿ. ಕುರಿಗಾಹಿ ಚಂದಪ್ಪ ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡು ಕುರಿ ಮೇಯಿಸಲು ತೆರಳಿದ್ದರು. ಈ ವೇಳೆ ಮೊಬೈಲ್ ಇಟ್ಟುಕೊಂಡ ಭಾಗಕ್ಕೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗುರುಮಠಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಗೋಪಾಲಸ್ವಾಮಿ ಬೆಟ್ಟದಲ್ಲಿ ಮಳೆಗೆ ಸಿಲುಕಿ ಪ್ರವಾಸಿಗರ ಪರದಾಟ

ಗೋಪಾಲಸ್ವಾಮಿ ಬೆಟ್ಟದಲ್ಲಿ ಜೋರು ಮಳೆಯಾಗುತ್ತಿದ್ದು ಪ್ರವಾಸಿಗರು ಪರದಾಡಿದರು. ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ಚೆಕ್ ಪೋಸ್ಟ್ ಸಮೀಪ ನೀರು ನದಿಯಂತೆ ಹರಿಯುತ್ತಿದೆ. ಚೆಕ್ ಪೋಸ್ಟ್‌ನಲ್ಲಿ ಬಸ್‌ಗಾಗಿ ಕಾಯುತ್ತಿದ್ದ ವೇಳೆ ನೂರಾರು ಮಂದಿ ಮಳೆಗೆ ಸಿಲುಕಿದರು. 1 ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದರಿಂದ ಬೆಟ್ಟದ ಮೇಲಿಂದ ನದಿಯಂತೆ ನೀರು ಹರಿದು ಬಂದಿತ್ತು. ಮಳೆಗೆ ಸಿಲುಕಿ ಪ್ರವಾಸಿಗರ ಪರದಾಟ ಒಂದು ಕಡೆಯಾದರೆ, ಮಳಿಗೆಗಳಿಗೂ ನೀರು ನುಗ್ಗಿತ್ತು.

ಚಾಮರಾಜನಗರದಲ್ಲಿ ಮಳೆಯ ಅಬ್ಬರ

ಚಾಮರಾಜನಗರದಲ್ಲಿ ಎರಡು ಗಂಟೆಗೂ ಹೆಚ್ಚು ಸಮಯ ಮಳೆ ಸುರಿದಿದೆ. ಜಿಲ್ಲೆಯ ಕೆಲ ಕಡೆ ತುಂತುರು ಮಳೆಯಾದರೆ ಕೆಲವು ಕಡೆ ಭರ್ಜರಿ ಮಳೆಯಾಗಿದೆ. ರಸ್ತೆ ಬದಿಗಳಲ್ಲಿ ನದಿಯಂತೆ ಮಳೆ ನೀರು ಹರಿಯುತ್ತಿದೆ. ಇತ್ತ ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟ, ಹಂಗಳ ಗ್ರಾಮದ ಸುತ್ತ ಮುತ್ತ ಭರ್ಜರಿ ಮಳೆಯಾಗಿದೆ.

ಶಿವಮೊಗ್ಗದಲ್ಲಿ ಧಾರಾಕಾರ ಮಳೆ

ಮಲೆನಾಡು ಶಿವಮೊಗ್ಗದಲ್ಲೂ ಧಾರಾಕಾರವಾಗಿ ಮಳೆ ಸುರಿದಿದೆ. ಶಿವಮೊಗ್ಗ, ತೀರ್ಥಹಳ್ಳಿ, ಹೊಸನಗರ, ಶಿಕಾರಿಪುರ, ಸೊರಬ, ಭದ್ರಾವತಿ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ. ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಒಂದು ಗಂಟೆಯಿಂದ ಬಿಡುವು ನೀಡದೆ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ.

ಇದನ್ನೂ ಓದಿ: Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಗುಡುಗು ಸಹಿತ ಮಳೆ

ದಕ್ಷಿಣ ಕನ್ನಡ, ಉಡುಪಿಯಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಗಾಳಿ (40-50 kmph) ಸಹಿತ ಭಾರಿ ಮಳೆಯಾಗಲಿದೆ.

ಉತ್ತರ ಕನ್ನಡದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿಯೊಂದಿಗೆ (40-50 ಕಿ.ಮೀ) ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಭಾಗದಲ್ಲಿ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿ (40-50 ಕಿ.ಮೀ.) ಮಳೆ ಸಂಭವವಿದೆ.

ಮುಂದಿನ 5 ದಿನಗಳವರೆಗೆ ಕರ್ನಾಟಕದ ಒಳನಾಡಿನಲ್ಲಿ ಗರಿಷ್ಠ ತಾಪಮಾನವು 2-4 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಾಧ್ಯತೆಯಿದೆ. ಬೆಂಗಳೂರಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಹಗುರದಿಂದ ಸಾಧಾರಣ ಮಳೆಯಾಗಲಿದೆ. ಕೆಲವೊಮ್ಮೆ ಮೇಲ್ಮೈ ಗಾಳಿಯು ಬಲವಾಗಿರುತ್ತದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಮತ್ತು 21 ಡಿ.ಸೆ ಇರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version