ಬೆಂಗಳೂರು: ನೈರುತ್ಯ ಮುಂಗಾರು ಕರಾವಳಿಯಲ್ಲಿ (Karnataka Weather Forecast) ಸಕ್ರಿಯವಾಗಿದ್ದು, ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು. ಉತ್ತರ ಒಳನಾಡಿನಲ್ಲಿ (Rain News) ದುರ್ಬಲವಾಗಿತ್ತು. ಮಣಿ 19 ಸೆಂ.ಮೀ, ಪುತ್ತೂರು ಎಚ್‌ಎಂಎಸ್ 16 ಸೆಂ.ಮೀ, ಮಂಗಳೂರು, ಪಣಂಬೂರು ವೀಕ್ಷಣಾಲಯ 15 ಸೆಂ.ಮೀ ಮಳೆಯಾಗಿದೆ. ಕಾರ್ಕಳ, ಮಂಕಿ , ಆಗುಂಬೆ ಎಮೋ 14 ಸೆಂ.ಮೀ ಮಳೆಯಾಗಿದೆ. ಅಂಕೋಲಾ, ಕದ್ರ, ಉಪ್ಪಿನಂಗಡಿ13 ಸೆಂ.ಮೀ ಮಳೆಯಾಗಿದೆ. ಮಂಗಳೂರು ಎಪಿ ವೀಕ್ಷಣಾಲಯ , ಗೇರ್ಸೊಪ್ಪ, ಕುಂದಾಪುರ 12 ಸೆಂ.ಮೀ ಮಳೆಯಾಗಿದೆ.
ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ
ಕರಾವಳಿಯ ಉಡುಪಿ ಮತ್ತು ಉತ್ತರ ಕನ್ನಡದ ಕೆಲವು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಜತೆಗೆ ನಿರಂತರ ಗಾಳಿಯ ವೇಗವು 30-40 ಕಿಮೀ ತಲುಪುವ ಸಾಧ್ಯತೆಯಿದೆ.
ದಕ್ಷಿಣ ಕನ್ನಡ, ಬೆಳಗಾವಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ವ್ಯಾಪಕ ಮಳೆಯಾಗಲಿದೆ. ನಿರಂತರ ಗಾಳಿಯ ವೇಗವು 30-40 ಕಿಮೀ ತಲುಪಲಿದೆ. ಉತ್ತರ ಒಳನಾಡಿನ ಉಳಿದ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ
ಬೆಂಗಳೂರು ನಗರ ಮತ್ತು ಸುತ್ತಮುತ್ತ ಮುಂದಿನ 24 ಗಂಟೆಯಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ನಿರಂತರ ಗಾಳಿಯ ವೇಗ ಗಂಟೆಗೆ 30 ರಿಂದ 40 ಕಿಮೀ ತಲುಪುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 27 ಮತ್ತು 21 ಡಿ.ಸೆ ಇರಲಿದೆ.
ಇದನ್ನೂ ಓದಿ: Karnataka Rain : ಹಾಸನದಲ್ಲಿ ಗಾಳಿ- ಮಳೆಗೆ ಕುಸಿದು ಬಿದ್ದ ಮನೆ; ಮಂಗಳೂರಿನಲ್ಲಿ ಜಾನುವಾರುಗಳು ಸಾವು
ಜಲಾವೃತ ರಸ್ತೆಯಲ್ಲಿ ಗ್ರಾಮಸ್ಥರ ಹುಚ್ಚಾಟ
ತುಂಗಭದ್ರಾ ಜಲಾಶಯ ಹಿನ್ನೀರು ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದೆ. ವಿಜಯನಗರ ಜಿಲ್ಲೆಯ ಮಕರಬ್ಬಿ-ಬ್ಯಾಲಹುಣಸೆ ಗ್ರಾಮದ ಸಂಪರ್ಕ ರಸ್ತೆ ಜಲಾವೃತಗೊಂಡಿದೆ. ಸಂಪರ್ಕ ಕಡಿತದಿಂದಾಗಿ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ವ್ಯಾಪ್ತಿಗೆ ಒಳಪಡುವ ಮಕರಬ್ಬಿ ಗ್ರಾಮಸ್ಥರು ತೀವ್ರ ಪರದಾಟ ಅನುಭವಿಸುತ್ತಿದ್ದಾರೆ.
ಮಕರಬ್ಬಿ ಗ್ರಾಮದಿಂದ ಬ್ಯಾಲಹುಣಸೆ ಶಾಲೆಗೆ ತೆರಳಬೇಕಿದ್ದ ಶಾಲಾ ಮಕ್ಕಳಿಗೆ ಸಂಕಷ್ಟ ಎದುರಾಗಿದೆ. ರಸ್ತೆ ಸಂಪರ್ಕ ಕಡಿತವಾಗಿದ್ದರಿಂದ 2 ದಿನದಿಂದ ಶಾಲೆಗೆ ತೆರಳದೇ ಮಕ್ಕಳು ಗೈರಾಗಿದ್ದಾರೆ. ಮಕ್ಕಳ ಪರದಾಟ ಒಂದೆಡೆಯಾದರೆ ವಯೋವೃದ್ಧರು, ಮಹಿಳೆಯರು ಬೇರೆ ಗ್ರಾಮಗಳಿಗೆ ತೆರಳಲು ಹರಸಾಹಸ ಪಡುತ್ತಿದ್ದಾರೆ.
ಇವೆಲ್ಲದರ ಮಧ್ಯೆ ಬೈಕ್ ಸವಾರರು ಹುಚ್ಚಾಟ ಮೆರೆದಿದ್ದಾರೆ. ಜಲಾವೃತವಾದ ರಸ್ತೆ ಮಧ್ಯೆ ಸಾಲು ಸಾಲು ವಾಹನ ನಿಲ್ಲಿಸಿ ಕ್ಲೀನಿಂಗ್‌ನಲ್ಲಿ ತೊಡಗಿದ್ದರು. ಮೊಣಕಾಲುವರೆಗೆ ಜಲಾವೃತವಾದ ರಸ್ತೆಯಲ್ಲಿಯೇ ಬೈಕ್ ನಿಲ್ಲಿಸಿ ಸ್ವಚ್ಚಗೊಳಿಸುತ್ತಿದ್ದರು. ಜತೆಗೆ ಜಲಾವೃತ ರಸ್ತೆಯಲ್ಲಿ ಬೈಕ್ ಓಡಿಸಿದ್ದಾರೆ. ಸ್ವಲ್ಪ ಯಾಮಾರಿದ್ದರೂ ನೀರಿನ ರಭಸಕ್ಕೆ ಬೈಕ್ ಸಮೇತ ಕೊಚ್ಚಿಕೊಂಡು ಹೋಗುವ ಸಾಧ್ಯತೆ ಇದೆ. ಟಿಬಿ ಡ್ಯಾಂ ಭರ್ತಿಯಾಗಿದ್ದರಿಂದ ಹಿನ್ನೀರು ಪ್ರದೇಶದ ಗ್ರಾಮಗಳಲ್ಲಿ ಇದೀಗ ಪ್ರವಾಹ ಭೀತಿ ಎದುರಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ