ಬೆಂಗಳೂರು: ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ದಕ್ಷಿಣಒಳನಾಡಿನ ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಗುಡುಗು ಜತೆಗೆ ವ್ಯಾಪಕ ಮಳೆಯಾಗುವ (Heavy Rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.
ದಕ್ಷಿಣ ಒಳನಾಡಿನಲ್ಲಿ ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು ಸೇರಿದಂತೆ ವಿಜಯನಗರದಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ ಮತ್ತು ಹಾವೇರಿ, ಬೀದರ್, ಕಲಬುರಗಿ, ಗದಗ, ಕೊಪ್ಪಳ, ರಾಯಚೂರು, ಯಾದಗಿರಿಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಪಶ್ಚಿಮ ಘಟ್ಟದ ತಪ್ಪಲು ಹೆಬ್ರಿಯಲ್ಲಿ ಮೇಘ ಸ್ಫೋಟ
ಪಶ್ಚಿಮ ಘಟ್ಟದ ತಪ್ಪಲು ಉಡುಪಿಯ ಹೆಬ್ರಿಯಲ್ಲಿ ಮೇಘ ಸ್ಫೋಟಗೊಂಡಿದೆ. ಭಾನುವಾರ ಮಧ್ಯಾಹ್ನ 3.30 ರ ಸುಮಾರಿಗೆ ಭಾರೀ ಮಳೆ ಸುರಿದಿದೆ. ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದ ಬಲ್ಲಾಡಿ ಎಂಬಲ್ಲಿ ಹಠಾತ್ ಜಲ ಪ್ರವಾಹ ಉಂಟಾಗಿದೆ. ಮನೆಗಳಿಗೆ ಹಾಗೂ ಕೃಷಿ ಜಮೀನಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಬಲ್ಲಾಡಿಯ ಈಶ್ವರನಗರ ಸಮೀಪದ ಬಮ್ಮಗುಂಡಿ ಹೊಳೆ ಉಕ್ಕಿ ಹರಿದಿದೆ.
ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಎರಡು ಕಾರು ಹಾಗೂ ಎರಡು ಬೈಕ್‌ಗಳು ಭಾರೀ ನೆರೆಯಿಂದ ಕೊಚ್ಚಿ ಹೋಗಿದೆ. ಮೊದಲು ಕೇರಳ ಮೂಲದ ವ್ಯಕ್ತಿಗೆ ಸೇರಿದ್ದ ರಬ್ಬರ್ ತೋಟ ಜಲಾವೃತಗೊಂಡಿದೆ. ಬಳಿಕ ಮನೆಗೆ ನುಗ್ಗಿ ಅಂಗಳದಲ್ಲಿ ನಿಲ್ಲಿಸಿದ್ದ ಆಕ್ಟೋ ಕಾರು ಹಾಗೂ ಎರಡು ಬೈಕ್ ನೀರು ಪಾಲಾಗಿದೆ. ಹೊಸಕಂಬೃ ಕೃಷ್ಣ ಪೂಜಾರಿ ಎಂಬವರ ಮನೆಯಲ್ಲಿ ನಿಲ್ಲಿಸಿದ್ದ ಓಮ್ಮಿ ಕಾರು ನೀರುಪಾಲಾಗಿದೆ. ಕಬ್ಬಿನಾಲೆ ಭಾಗದ ಪರ್ವತ ಸಾಲಿನಲ್ಲಿ ಮೇಘ ಸ್ಫೋಟವಾಗಿ ಈ ಭೀಕರ ಪ್ರವಾಹ ಸೃಷ್ಟಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ವಿಪತ್ತು ನಿರ್ವಹಣಾ ತಂಡಗಳಿಂದ ರಕ್ಷಣಾ ಕಾರ್ಯಾಚರಣೆ ನಡೆದಿದೆ.
ವಿಜಯನಗರದಲ್ಲಿ ಸಿಡಿಲು ಬಡಿದು ರೈತರಿಬ್ಬರು ಸಾವು
ಸಿಡಿಲು ಬಡಿದು ಇಬ್ಬರು ರೈತರು ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲೂಕಿನ ದಶಮಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಬಣಕಾರ್ ನಾರಪ್ಪ (58), ಬಣಕಾರ್ ಪ್ರಶಾಂತ್ (40) ಮೃತ ದುರ್ದೈವಿ. ಹಗರಿಬೊಮ್ಮನಹಳ್ಳಿ ತಹಸೀಲ್ದಾರ್ ಕವಿತಾ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಲದಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಗರಿಬೊಮ್ಮನ ಹಳ್ಳಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ