ಬೆಳಗಾವಿ/ಚಿಕ್ಕಮಗಳೂರು: ಬೆಳಗಾವಿಯಲ್ಲಿ ಧಾರಾಕಾರ ಮಳೆಯಿಂದಾಗಿ ಮನೆಗಳಿಗೆ (Rain News) ನೀರು ನುಗ್ಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇವಲಾಪೂರ ಗ್ರಾಮದಲ್ಲಿ ಮಳೆರಾಯನ (Karnataka Weather Forecast) ಅಟ್ಟಹಾಸಕ್ಕೆ ಉಡಚ್ಚಮ್ಮಾ ದೇವಿ ದೇವಸ್ಥಾನಕ್ಕೆ ನೀರು ನುಗ್ಗಿದೆ. ಕಳೆದ ಒಂದು ಗಂಟೆಗಳ ಕಾಲ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ದೇವಲಾಪೂರ ಮತ್ತು ಯರಡಾಲ ರಸ್ತೆ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸಂಚಾರ ಬಂದ್ ಆಗಿತ್ತು. ಮಳೆರಾಯನ ಆರ್ಭಟಕ್ಕೆ ಜಮೀನುಗಳು ನೀರುಪಾಲಾಗಿದ್ದು, ರೈತರು ಸಂಕಷ್ಟ ಅನುಭವಿಸಿದರು.
ಚಿಕ್ಕಮಗಳೂರಿನಲ್ಲೂ ಮಳೆ ಆರ್ಭಟ
ಚಿಕ್ಕಮಗಳೂರಿನ ಚಾರ್ಮಾಡಿ ಘಾಟಿಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ರಸ್ತೆಗೆ ಗುಡ್ಡದ ಮಣ್ಣು ಬಿದ್ದಿದ್ದು, 2 ಜೆಸಿಬಿಯಿಂದ ನಿರಂತರ ಮಣ್ಣು ತೆರವಿನ ಕಾರ್ಯ ನಡೆಯುತ್ತಿದೆ. ಸುರಿಯುತ್ತಿರುವ ಮಳೆ ಮಧ್ಯೆಯೇ ತೆರವು ಕಾರ್ಯ ನಡೆಯುತ್ತಿದೆ. ಇನ್ನು ಅಪಾರ ಪ್ರಮಾಣದಲ್ಲಿ ನೀರು ಹರಿದು ರಸ್ತೆ ಬದಿ ಗುಂಡಿಗಳು ನಿರ್ಮಾಣವಾಗಿದೆ. ಹೀಗಾಗಿ ಅಧಿಕಾರಿಗಳು ತಾತ್ಕಾಲಿಕವಾಗಿ ಮಣ್ಣನ್ನು ಹಾಕಿ ಗುಂಡಿಗಳನ್ನು ಮುಚ್ಚುತ್ತಿದ್ದಾರೆ. ಪ್ರಯಾಣಿಕರು ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಮನವಿ ಮಾಡಿದ್ದಾರೆ.
ಮಳೆ ಜತೆ ಸರ್ಕಾರಿ ಆಸ್ಪತ್ರೆಗೆ ಡ್ರೈನೇಜ್ ನೀರು ನುಗ್ಗಿದೆ. ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ಕಳೆದ ರಾತ್ರಿ ಸುರಿದ ಮಳೆಯಿಂದ ಸರ್ಕಾರಿ ಆಸ್ಪತ್ರೆ ಜಲಾವೃತಗೊಂಡಿದೆ. ಆಸ್ಪತ್ರೆಯಲ್ಲಿ ನೀರು ತುಂಬಿದ್ದರಿಂದ ರೋಗಿಗಳು ಪರದಾಟಬೇಕಾಯಿತು. ಮಳೆ ನೀರಿನ ಜತೆಗೆ ಡ್ರೈನೇಜ್ ನೀರು ಸೇರಿ ಕೆಟ್ಟ ವಾಸನೆ ಬರುತ್ತಿದ್ದು, ರೋಗಿಗಳು ಪರದಾಡಬೇಕಾಯಿತು.
ಚಿಕ್ಕಮಗಳೂರಿನಲ್ಲಿ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕುದುರೆಮುಖ, ಸಂಸೆ, ಹೊರನಾಡು ಸುತ್ತಮುತ್ತ ಮಳೆ ಅಬ್ಬರಿಸುತ್ತಿದೆ. ಕಳಸ ಪಟ್ಟಣದಲ್ಲೂ ಧಾರಾಕಾರ ಮಳೆಯಾಗುತ್ತಿದೆ. ಭಾರಿ ಮಳೆಯಿಂದ ಕಾಫಿ-ಅಡಿಕೆ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ. ಮಲೆನಾಡಿನಾದ್ಯಂತ ಬೆಳೆಗ್ಗೆಯಿಂದಲೂ ಮೋಡ ಕವಿದ ವಾತವರಣ ಇದೆ.
ಉಕ್ಕಿ ಹರಿದ ಇಂದಿರಮ್ಮನ ಕೆರೆ
ಧಾರವಾಡದಲ್ಲಿ ಸುರಿದ ನಿರಂತರ ಮಳೆಗೆ ಅಳ್ನಾವರ ತಾಲೂಕಿನ ಇಂದಿರಮ್ಮನ ಕೆರೆ ತುಂಬಿ ಹರಿಯುತ್ತಿದೆ. ಕೆರೆ ಕೋಡಿ ಬಿದ್ದು ತುಂಬಿ ಹರಿಯುತ್ತಿರುವ ದೃಶ್ಯ ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದರು. ಕೆಲ ಯುವಕರು ಕೆರೆ ಕೋಡಿ ಬಿದ್ದು ಹರಿಯುತ್ತಿದ್ದ ನೀರಿನಲ್ಲಿ ದಾಟುವ ಹುಚ್ಚುತನ ಪ್ರದರ್ಶಿಸಿದ್ದರು. ಯುವಕನ ಹುಚ್ಚಾಟಕ್ಕೆ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.
ಕಳೆದ ಬುಧವಾರ ರಾತ್ರಿಯಿಡೀ ಸುರಿದ ಭಾರಿ ಮಳೆಗೆ ವಿದ್ಯಾಕಾಶಿ ಜನರು ತತ್ತರಿಸಿ ಹೋಗಿದ್ದರು. ಧಾರವಾಡದಲ್ಲಿ ಮಳೆಯು ಅವಾಂತರವೇ ಸೃಷ್ಟಿಸಿತ್ತು. ಮಳೆಯ ನೀರು ನಿಂತಿರುವ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಧಾರವಾಡದ ಸಂಪಿಗೆನಗರ, ನಿಲಸಿಟಿ, ಶ್ರೀಶ ರೆಸಿಡೆನ್ಸಿ, ವ್ಯಾಸ ವಿಹಾರ ಲೇಔಟ್‌ನ ತುಂಬ ನೀರು ನಿಂತಿದ್ದರಿಂದ, ಜನರು ಮನೆಯಿಂದ ಹೊರ ಬರಲು ಆಗದೆ ಪರದಾಡಿದರು. ರಾಜಕಾಲುವೆ ಇಲ್ಲದಿರುವುದೇ ಇದಕ್ಕೆ ಕಾರಣವೆಂದು ದೂರಿದರು. ಸ್ಥಳಕ್ಕೆ ಬಂದ ಅಧಿಕಾರಿಗಳ ವಿರುದ್ಧ ದೂರುಗಳ ಪಟ್ಟಿ ನೀಡಿದ್ದರು.
ಧಾರವಾಡದಲ್ಲಿ ಮಳೆ ಅವಾಂತರ
ರಾತ್ರಿಯಿಡೀ ಸುರಿದ ಮಳೆಗೆ ಕಟಾವಿಗೆ ಬಂದಿದ್ದ ಬೆಳೆಗಳು ನೀರಲ್ಲಿ ಹೋಮವಾಗಿದೆ. ಲಕ್ಷಾಂತರ ರೂ ಮೌಲ್ಯದ ಬೆಳೆಗಳು ಮಳೆಗೆ ನೆಲಸಮವಾಗಿದೆ. ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ರೈತರು ಕಂಗಾಲಾಗಿದ್ದಾರೆ. ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ವಾಹನ ಸವಾರರು ಪರದಾಡಬೇಕಾಯಿತು. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರಕೋಳ ಗ್ರಾಮ ಜಲಾವೃತಗೊಂಡಿದೆ. ಮಳೆಯ ಆರ್ಭಟಕ್ಕೆ ಮನೆಗಳೆಲ್ಲ ಕೆರೆಯಂತೆ ನಿರ್ಮಾಣವಾಗಿದ್ದು, ಮಳೆ ಬಂದಾಗೆಲ್ಲ ಇದೆ ಸಮಸ್ಯೆ ಅನುಭವಿಸುವಂತಾಗಿದೆ.
ಲಕ್ಷ್ಮೇಶ್ವರ-ದೊಡ್ಡೂರ ರಸ್ತೆ ಸಂಪರ್ಕ ಕಡಿತ
ಬೆಳಗಿನ ಜಾವ ಸುರಿದ ಭಾರಿ ಮಳೆಗೆ ಹಳ್ಳಕೊಳ್ಳ ತುಂಬಿ ಹರಿಯುತ್ತಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರ ಬಳಿ ಹಳ್ಳದಲ್ಲಿ ನೀರು ತುಂಬಿ ಹರಿದಿದ್ದು, ಲಕ್ಷ್ಮೇಶ್ವರ-ದೊಡ್ಡೂರ ರಸ್ತೆ ಸಂಪರ್ಕ ಕಡಿತಗೊಂಡಿದೆ. ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಹಳ್ಳದಲ್ಲಿ ಬೆಳೆ ಕಟಾವು ಯಂತ್ರ ಸಿಲುಕಿದ್ದರಿಂದ ರೈತರು ಪರದಾಡಿದರು. ಪ್ರತಿ ಬಾರಿ ಮಳೆಯಾದರೆ ಇದೇ ಸಂಕಷ್ಟ ಎದುರಾಗುತ್ತದೆ. ಸೇತುವೆ ನಿರ್ಮಾಣಕ್ಕೆ ಅನೇಕ ಬಾರಿ ಮನವಿ ಮಾಡಿದ್ದರು ಕ್ಯಾರೆ ಅಂತಿಲ್ಲ ಎಂದು ಆಕ್ರೋಶ ಹೊರಹಾಕಿದರು.