ಬೆಂಗಳೂರು/ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ (Rain News) ಅಬ್ಬರ (Karnataka Weather Forecast) ಮುಂದುವರಿದಿದ್ದು, ಫಲ್ಗುಣಿ ನದಿ ಉಕ್ಕಿ ಹರಿಯುತ್ತಿದೆ. ವಾಮಂಜೂರು ಶ್ರೀಅಮೃತೇಶ್ವರ ದೇವಸ್ಥಾನಕ್ಕೆ ನೀರು ನುಗ್ಗಿದೆ. ದೇವಸ್ಥಾನದ ಒಳ ಪ್ರಾಂಗಣ ಸಂಪೂರ್ಣ ಜಲಾವೃತವಾಗಿದ್ದು, ದೇವಸ್ಥಾನದ ಸುತ್ತಲೂ ಫಲ್ಗುಣಿ ನದಿ ನೀರು ಆವರಿಸಿದೆ. ಕಳೆದ 30 ವರ್ಷದ ಬಳಿಕ ಇದೇ ಮೊದಲ ಬಾರಿಗೆ ದೇವಸ್ಥಾನಕ್ಕೆ ನೀರು ನುಗ್ಗಿದೆ. ಕ್ಷಣ ಕ್ಷಣಕ್ಕೂ ಫಲ್ಗುಣಿ ನದಿಯ ನೀರು ಏರಿಕೆಯಾಗುತ್ತಿದ್ದು, ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿದ್ದು, ಪಲ್ಗುಣಿ ನದಿಯಲ್ಲಿ ಒಳಹರಿವು ಹೆಚ್ಚಾಗಿದೆ. ಇದರಿಂದಾಗಿ ಮಂಗಳೂರು ನಗರ ಹೊರವಲಯದ ಪಡುಶೆಡ್ಡೆಯ ಸುಮಾರು 20ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದೆ. ನೆರೆ ಬಾಧಿತ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. ನದಿಯಲ್ಲಿ ಕ್ಷಣ ಕ್ಷಣಕ್ಕೂ ನೀರು ಏರಿಕೆ ಆಗುತ್ತಿದ್ದು, ನದಿ ತೀರದ ಹಲವು ಮನೆಗಳು, ಕೃಷಿ ಭೂಮಿಗಳು ಜಲಾವೃತಗೊಂಡಿದೆ. ಪಲ್ಗುಣಿ ನದಿಯ ಮಧ್ಯ ಭಾಗದಲ್ಲಿ ಡ್ರೆಜ್ಜಿಂಗ್ ಬೋಟ್ ಸಿಲುಕಿದೆ. ರಾತ್ರಿ ಸುರಿದ ಮಹಾಮಳೆಗೆ ಪಲ್ಗುಣಿ ನದಿ ಉಕ್ಕಿದ್ದು, ಬಂಟ್ವಾಳ ತಾಲೂಕಿನ ಅಮ್ಮುಂಜೆಯ ಏಳು ಮನೆಗಳು ಜಲಾವೃತಗೊಂಡು, ಅಮ್ಮುಂಜೆ ಸೋಮನಾಥೇಶ್ವರ ದೇವಸ್ಥಾನದಲ್ಲಿ ನೀರು ನುಗ್ಗಿದೆ. ಬಂಟ್ವಾಳ ಸಿದ್ಧಕಟ್ಟೆ ಸಮೀಪದ ಅಂಗಾರಕರಿಯ ಸೇತುವೆ ಮೇಲೆ ನೀರು ಹರಿದಿದೆ.
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಾಭದ್ರಾ
ಅಪಾಯದ ಮಟ್ಟ ಮೀರಿ ತುಂಗಭದ್ರಾ ನದಿ ಹರಿಯುತ್ತಿದ್ದು, ನದಿಗೆ 1,67,443 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಮತ್ತೆ ಕಂಪ್ಲಿ ಸೇತುವೆ ಮುಳುಗಡೆಯಾಗಿದೆ. ಕಂಪ್ಲಿ ಸೇತುವೆ ಮುಳುಗಡೆಯಾದ ಕಾರಣಕ್ಕೆ ಬಳ್ಳಾರಿ- ಗಂಗಾವತಿ ಸಂಪರ್ಕ ಕಡಿತಗೊಂಡಿದೆ. ಸೇತುವೆ ಮೇಲ್ಭಾಗದಿಂದ ಮೂರು ಅಡಿ ನೀರು ಹರಿಯುತ್ತಿದೆ. ಹೀಗಾಗಿ ಕಂಪ್ಲಿ ಕೋಟೆಯ ಪ್ರದೇಶಕ್ಕೆ ನದಿ ನೀರು ನುಗ್ಗಿದೆ. ಕಂಪ್ಲಿ ಕೋಟೆ ಪ್ರದೇಶದ ಹೊಳೆ ಆಂಜನೇಯ, ಪ್ರಸನ್ನ ವೆಂಕಟರಮಣ ದೇವಸ್ಥಾನ ಜಲಾವೃತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಕೋಟೆ ಪ್ರದೇಶದ ಜನರನ್ನ ಸ್ಥಳಾಂತರ ಮಾಡಲಾಗಿತ್ತು.
ಇತ್ತ ಮಲೆನಾಡು ಭಾಗದಲ್ಲಿ ನಿರಂತರ ಮಳೆಯಿಂದಾಗಿ ವಿಜಯನಗರ ಜಿಲ್ಲೆಯಲ್ಲಿ ರಸ್ತೆ, ಭತ್ತದ ಗದ್ದೆಗಳು ಜಲಾವೃತವಾಗಿದೆ. ಮಕರಬ್ಬಿ-ಬ್ಯಾಲಾಹುಣಸೆ ಗ್ರಾಮದ ರಸ್ತೆ ಸಂಪೂರ್ಣ ಬಂದ್ ಆಗಿದೆ. ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನ ಗ್ರಾಮಗಳ ಹತ್ತಾರು ಎಕರೆ ಭತ್ತದ ಜಮೀನಿಗೆ ನೀರು ನುಗ್ಗಿದ್ದರಿಂದ ಸಂಪೂರ್ಣ ನೀರು ಪಾಲಾಗಿದೆ. ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶಗಳಲ್ಲಿ ಸಂಕಷ್ಟ ಎದುರಾಗಿದೆ. ನದಿಪಾತ್ರದ 22 ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಇದನ್ನೂ ಓದಿ: Karnataka Rain : ಕೃಷ್ಣಾ ನದಿ ಪ್ರವಾಹದಲ್ಲಿ ಪಲ್ಟಿ ಹೊಡೆದ ಬೋಟ್; ಎತ್ತುಗಳ ಮೇಲೆ ಕುಸಿದು ಬಿದ್ದ ಗೋಡೆ
ನಾಳೆ ವ್ಯಾಪಕ ಮಳೆ ಎಚ್ಚರಿಕೆ
ಕರಾವಳಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಜ್ಞ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ 23 ಸೆ.ಮೀ, ಉತ್ತರ ಕನ್ನಡದ ಅಂಕೋಲಾದಲ್ಲಿ 20 ಸೆ.ಮೀ ಮಳೆಯಾಗಿದೆ.
ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಕರಾವಳಿ ತೀರದಲ್ಲಿ ಟ್ರಫ್ ಮುಂದುವರೆದಿದೆ. ಸಿಯರ್ ಝೋನ್ 20° ಉತ್ತರ ಅಂಕ್ಷಾಂಶದಲ್ಲಿ 4.5ಕಿ.ಮೀ ಯಿಂದ 5.8 ಕಿ.ಮೀ ವರೆಗೆ ಸುಳಿಗಾಳಿ ಇದೆ. ಇದರ ಪರಿಣಾಮ ಕರಾವಳಿ ಜಿಲ್ಲೆಗಳಿಗೆ ಆಗಸ್ಟ್ 5ರ ವರೆಗೆ ವ್ಯಾಪಕ ಮಳೆ ಆಗಲಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಮಳೆ ಸಾಧ್ಯತೆ ಇದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ರೆಡ್ ಅಲರ್ಟ್ ನೀಡಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ