ಬೆಂಗಳೂರು: ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಮುಂದಿನ 24 ಗಂಟೆಯಲ್ಲಿ ಭರ್ಜರಿ ಮಳೆಯಾಗುವ (Heavy Rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ. ಭಾನುವಾರ ಉತ್ತರ ಕನ್ನಡ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಗಾಳಿಯ ವೇಗವು 40-50 ಕಿಮೀ ತಲುಪುವ ಸಾಧ್ಯತೆಯಿದೆ.
ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಗಾಳಿ ಜತೆಗೆ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬಹುತೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಉಳಿದೆಡೆ ಗಾಳಿ ಜತೆಗೆ ಮಳೆಯಾಗಲಿದೆ.
ಇದನ್ನೂ ಓದಿ: Drowned in water : ಮೀನು ಹಿಡಿಯುವಾಗ ಫಿಟ್ಸ್ ಬಂದು ನದಿಗೆ ಬಿದ್ದ ಮೀನುಗಾರ
ಮುತ್ತತ್ತಿಗೆ ಪ್ರವಾಸಿಗರ ನಿಷೇಧ
ಮಂಡ್ಯ: ಭಾರಿ ಮಳೆಯಿಂದಾಗಿ (Karnataka Rain) ಕಾವೇರಿ ನದಿಯಲ್ಲಿ ನಿರೀಕ್ಷೆಗೂ ಮೀರಿ ನೀರಿನ ಪ್ರಮಾಣ ಹರಿಯುತ್ತಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಮುತ್ತತ್ತಿಗೆ (muthathi temple) ಪ್ರವಾಸಿಗರು, ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.
ಕೆಆರ್‌ಎಸ್‌ನಿಂದ 1.22 ಲಕ್ಷ ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಬಿಡುಗಡೆ ಮಾಡಲಾಗುತ್ತಿದೆ. ಪ್ರವಾಹ ಮುನ್ನೆಚ್ಚರಿಕೆ ಕ್ರಮವಾಗಿ ಮುತ್ತತ್ತಿಗೆ ಪ್ರವಾಸಿಗರಿಗೆ ನಿಷೇಧಾಜ್ಞೆ ಜಾರಿ ಮಾಡಿ ಮಳವಳ್ಳಿ ತಹಸೀಲ್ದಾರ್ ಕೆ.ಎನ್ ಲೋಕೇಶ್ ಆದೇಶ ಹೊರಡಿಸಿದ್ದಾರೆ. ಪ್ರವಾಹ ಕಡಿಮೆಯಾಗುವವರೆಗೂ ನಿಷೇಧ ಜಾರಿಯಲ್ಲಿ ಇರಲಿದೆ. ಹೀಗಾಗಿ ಪೊಲೀಸರು ಕಾವೇರಿ ನದಿ ದಡದಲ್ಲಿ ಅಪಾಯದ ಸೂಚನಾ ಫಲಕ ಹಾಕಿದ್ದಾರೆ.
ಇದನ್ನೂ ಓದಿ: land slide : ಎಡಕುಮೇರಿಯಲ್ಲಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ; ಜು.29ರವರೆಗೆ ಎಕ್ಸ್‌ಪ್ರೆಸ್ ರೈಲುಗಳ ಓಡಾಟ ರದ್ದು
ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್
ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಪ್ರವಾಹ ಸೃಷ್ಟಿಯಾಗಿದೆ. ಹೀಗಾಗಿ ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್ ಹಾಕಲಾಗಿದೆ. ನದಿಗೆ ಇಳಿಯದಂತೆ ಜಿಲ್ಲಾಡಳಿತ ಕಬ್ಬಿಣದ ರಾಡ್‌ಗಳನ್ನು ಬಳಸಿ ತಡೆಗೋಡೆ ನಿರ್ಮಿಸಿದೆ. ನಿತ್ಯ ನೂರಾರು ಸಂಖ್ಯೆಯಲ್ಲಿ ಬಂದು ತಮ್ಮಪೂರ್ವಿಕರು, ಸಂಬಂಧಿಕರ ಅಸ್ತಿ ವಿಸರ್ಜನೆ ಜತೆಗೆ ಪಿಂಡ ಪ್ರಧಾನ ಮಾಡುತ್ತಿದ್ದರು. ಈಗ ಕಾವೇರಿ ನದಿಯಲ್ಲಿ ಪ್ರವಾಹ ಹಿನ್ನೆಲೆ ನದಿ ದಂಡೆಯಲ್ಲಿ ಕುಳಿತು ಪೂಜೆ ಮಾಡುವ ಅವಕಾಶ ಇಲ್ಲ. ಜನರು ಪಿಂಡ ಪ್ರದಾನಕ್ಕೆ ಬಂದು ವಾಪಸ್ ಹೋಗುತ್ತಿದ್ದಾರೆ.
ನಿಮಿಷಾಂಭ ದೇಗುಲದ ಸ್ನಾನ ಘಟ್ಟಕ್ಕೆ ಭಕ್ತರಿಗೆ ನಿರ್ಬಂಧ
ನಿಮಿಷಾಂಭ ದೇಗುಲದ ಭಕ್ತರಿಗೂ ಕಾವೇರಿ ಪ್ರವಾಹ ಬಿಸಿ ತಟ್ಟಿದೆ. ಕೆಆರ್‌ಎಸ್‌ನಿಂದ ನದಿಗೆ ಅಧಿಕ ನೀರು ಬಿಡುಗಡೆ ಮಾಡುತ್ತಿರುವುದರಿಂದ ಪ್ರಸಿದ್ಧ ನಿಮಿಷಾಂಭ ದೇವಾಲಯದ ಬಳಿ ಪ್ರವಾಹದ ಆತಂಕ ಎದುರಾಗಿದೆ. ಪ್ರವಾಹ ಹಿನ್ನೆಲೆಯಲ್ಲಿ ಕಾವೇರಿ ನದಿಗೆ ಇಳಿಯದಂತೆ ಭಕ್ತರಿಗೆ ಸೂಚನೆ ನೀಡಲಾಗಿದೆ. ದೇವಸ್ಥಾನದ ಬಳಿಯ ಸ್ನಾನ ಘಟ್ಟಕ್ಕೆ ಭಕ್ತರಿಗೆ ನಿರ್ಬಂಧ ಹೇರಲಾಗಿದೆ.
ರಂಗನತಿಟ್ಟು ಪಕ್ಷಿಧಾಮ ವಾಕಿಂಗ್ ಪಾಥ್ ಮುಳುಗಡೆ
ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರು ಕಾವೇರಿ ನದಿಯಿಂದಾಗಿ ರಂಗನತಿಟ್ಟು ಪಕ್ಷಿಧಾಮಕ್ಕೆ ಜಲ ದಿಗ್ಭಂದನ ಹಾಕಲಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮಕ್ಕೆ ಕಾವೇರಿ ನೀರು ನುಗ್ಗಿದೆ. ಇದರಿಂದಾಗಿ ವಾಕಿಂಗ್ ಪಾಥ್, ಅರಣ್ಯ ಇಲಾಖೆ ಕಚೇರಿ ಜಲಾವೃತಗೊಂಡಿದೆ. ಈಗಾಗಲೇ ಪಕ್ಷಿಧಾಮಕ್ಕೆ ಪ್ರವಾಸಿಗರ ನಿರ್ಬಂಧ ಹೇರಲಾಗಿದೆ. ಜತೆಗೆ ಬೋಟಿಂಗ್ ವ್ಯವಸ್ಥೆ ಕೂಡ ಸ್ಥಗಿತ ಮಾಡಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ