ಬೆಂಗಳೂರು: ರಾಜ್ಯಾದ್ಯಂತ ಗುರುವಾರದಂದು ಹಗುರದಿಂದ ಸಾಧಾರಣ ಮಳೆಯೊಂದಿಗೆ ಪ್ರತ್ಯೇಕ ಕಡೆಗಳಲ್ಲಿ ಭಾರೀ ಮಳೆಯಾಗುವ (Rain News) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.
ದಕ್ಷಿಣ ಒಳನಾಡಿನ ತುಮಕೂರು, ಮಂಡ್ಯ, ಮೈಸೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಉಳಿದೆಡೆ ಲಘುವಾಗಿ ಸಾಧಾರಣದೊಂದಿಗೆ ವ್ಯಾಪಕ ಮಳೆಯಾಗಲಿದೆ. ಉತ್ತರ ಒಳನಾಡಿನ ಯಾದಗಿರಿ, ರಾಯಚೂರು, ವಿಜಯನಗರ, ಕೊಪ್ಪಳ, ವಿಜಯಪುರ ಮತ್ತು ಬಾಗಲಕೋಟೆಯಲ್ಲೂ ಭರ್ಜರಿ ಮಳೆಯಾಗಲಿದೆ.
ಮಲೆನಾಡಿನ ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲೂ ಗುಡುಗು ಸಹಿತ ಭಾರಿ ಮಳೆಯಾಗುವ ಸಂಭವವಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಚದುರಿದಂತೆ ಸಾಕಷ್ಟು ವ್ಯಾಪಕವಾಗಿದ್ದು, ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಚದುರಿದಂತೆ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 33 ಮತ್ತು 22 ಡಿ.ಸೆ ಇರಲಿದೆ.
ಭಾರಿ ಮಳೆ, ಬಿರುಗಾಳಿಗೆ ನೆಲಕ್ಕುರುಳಿದ ಭತ್ತ
ಭಾರಿ ಮಳೆ, ಬಿರುಗಾಳಿಗೆ ಭತ್ತ ನೆಲಕ್ಕುರುಳಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿಯಲ್ಲಿ ಘಟನೆ ನಡೆದಿದೆ. ಮುಂಗಾರು ಮುಗಿಯುವ ವೇಳೆಗೆ ಸುರಿಯುತ್ತಿರುವ ಮಳೆಗೆ ನೂರಾರು ಎಕರೆ ಭತ್ತ ಬೆಳೆಗೆ ಹಾನಿಯಾಗಿದೆ. ರೈತರಿಗೆ ಸಂಕಷ್ಟ ಎದುರಾಗಿದ್ದು, ಸಮೀಕ್ಷೆ ಮಾಡಿ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲೂ ಹಲವೆಡೆ ಭಾರಿ ಮಳೆಯಾಗಿದೆ. ಮಳೆಗಾಗಿ ಕಾಯುತ್ತಿದ್ದ ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿದೆ. ಶೇಂಗಾ, ಮೆಕ್ಕೆಜೋಳ ಬೆಳೆಗೆ ನೀರಿಲ್ಲದೆ ರೈತರು ಕಂಗಾಲಾಗಿದ್ದರು. ಮಳೆ ಇಲ್ಲದೆ ಬೆಂಕಿ ರೋಗಕ್ಕೆ ಶೇಂಗಾ ಬೆಳೆ ತುತ್ತಾಗಿದ್ದು, ಈಗ ವರುಣ ಆಗಮನದಿಂದ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ