ಚಿಕ್ಕಬಳ್ಳಾಪುರ/ಹಾಸನ: ಗದ್ದೆಯಲ್ಲಿ ಭತ್ತ ನಾಟಿ ಮಾಡುತ್ತಿದ್ದ ವೇಳೆ ಮಳೆ (Karnataka Weather Forecast) ಜತೆಗೆ ಸಿಡಿಲು ಬಡಿದು ಓರ್ವ ಮಹಿಳೆ ಸ್ಥಿತಿ ಗಂಭೀರವಾಗಿದೆ. ಸುಮಾರು ಹದಿನೈದು ಮಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ, ಕೋರ್ಲಗದ್ದೆ ಗ್ರಾಮದಲ್ಲಿ ಘಟನೆ ನಡೆದಿದೆ.
ಕೆ.ಬಿ.ಚಂದ್ರು ಎಂಬುವವರಿಗೆ ಸೇರಿದ ಗದ್ದೆಯಲ್ಲಿ 25 ಮಂದಿ ನಾಟಿ ಮಾಡುತ್ತಿದ್ದರು. ಈ ವೇಳೆ ಗುಡುಗು, ಸಿಡಿಲು ಸಹಿತ ದಿಢೀರ್ ಮಳೆ ಶುರುವಾಗಿತ್ತು. ಭತ್ತದ ಗದ್ದೆಯಲ್ಲಿ ನಾಟಿ ಮಾಡುತ್ತಿದ್ದ ವೇಳೆಯೇ ಸಿಡಿಲಾಘಾತಕ್ಕೆ ಲತಾ (35) ಎಂಬುವವರ ಸ್ಥಿತಿ ಗಂಭೀರವಾಗಿದೆ.
ರೇಣುಕಾ (49), ಸವಿತಾ (45), ಸುಮಿತ್ರ (51), ರೇಣುಕಮ್ಮಾ (55), ನೇತ್ರ (40), ನಿರ್ಮಲ (51), ವೀಣಾ (35), ಅನಿತಾ (55) ಸೇರಿ ಹದಿನೈದು ಮಂದಿಗೆ ಸಿಡಿಲು ಬಡಿದಿದೆ. ಎಲ್ಲರಿಗೂ ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ತಿಂಗಳ ಬಳಿಕ ಚಿಕ್ಕಬಳ್ಳಾಪುರದಲ್ಲಿ ವರುಣ ಪ್ರತ್ಯಕ್ಷ
ಇಷ್ಟು ದಿನ ಕರ್ನಾಟಕದ ಕರಾವಳಿ ಹಾಗೂ ಮಲೆನಾಡು, ಉತ್ತರ ಒಳನಾಡಿನ ಸುತ್ತಮುತ್ತ ಮಳೆಯು ಅಬ್ಬರಿಸಿತ್ತು. ದಕ್ಷಿಣ ಒಳನಾಡಿನಲ್ಲಿ ಕಣ್ಮರೆಯಾಗಿದ್ದ ಮಳೆಯು ಇದೀಗ ಕಳೆದೆರಡು ದಿನಗಳಿಂದ ವ್ಯಾಪಿಸಿದೆ. ಉತ್ತರ ಧ್ರುವದಿಂದ ದಕ್ಷಿಣ ಧ್ರುವದ ಕಡೆ ಮಳೆರಾಯ ಮುಖ ಮಾಡಿದ್ದಾನೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಂದು ತಿಂಗಳಿನಿಂದ ಬಿಡುವು ಕೊಟ್ಟಿದ್ದ ಮಳೆಯು ಭಾನುವಾರ ರಾತ್ರಿ ಇಡೀ ಗುಡುಗು, ಮಿಂಚು ಸಮೇತ ಸುರಿದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಬಿತ್ತನೆ ಮಾಡಿ ಮಳೆಗಾಗಿ ಕಾಯುತ್ತಿದ್ದ ರೈತರು ಸಂತಸಗೊಂಡಿದ್ದರು.
ಇದನ್ನೂ ಓದಿ: Bengaluru Rains : ಬೃಹತ್ ಗಾತ್ರದ ಮರದ ಕೊಂಬೆಗಳು ಬಿದ್ದು 6 ಮಂದಿಗೆ ಗಾಯ; ಆರೋಗ್ಯ ವಿಚಾರಿಸಿದ ಡಿಕೆ ಶಿವಕುಮಾರ್
ನಾಳೆ ಚಾಮರಾಜನಗರ, ರಾಮನಗರದಲ್ಲಿ ಭಾರಿ ಮಳೆ
ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಆದರೆ ದಕ್ಷಿಣ ಒಳನಾಡಿನ ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪ್ರತ್ಯೇಕವಾದ ಭಾರೀ ಮಳೆಯೊಂದಿಗೆ ಗುಡುಗು ಇರಲಿದೆ. ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಂಭವವಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಹೆಚ್ಚಾಗಿ ಶುಷ್ಕ ಹವಾಮಾನ ಇರಲಿದೆ. ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ