ಯಾದಗಿರಿ ಜಿಲ್ಲೆಯಾದ್ಯಂತ ನಿನ್ನೆ ಶನಿವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ (Rain News) ಬೂದನೂರಿನ ಹಿರೇಹಳ್ಳ ತುಂಬಿ ಹರಿಯುತ್ತಿದೆ. ತುಂಬಿ ಹರಿಯುತ್ತಿರುವ ಹಳ್ಳದಲ್ಲಿ 20ಕ್ಕೂ ಹೆಚ್ಚು ಕುರಿಗಳು ಕೊಚ್ಚಿ ಹೋಗಿವೆ. ಇತ್ತ ಹಿರೇಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ 50 ಕುರಿಗಳ ರಕ್ಷಣೆ ಮಾಡಲಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬೂದನೂರಿನ ಹಿರೇಹಳ್ಳದಲ್ಲಿ ಘಟನೆ (Karnataka Weather Forecast) ನಡೆದಿದೆ. ಬೂದನೂರ ಗ್ರಾಮದ ಸಾಮಯ್ಯ ಎಂಬ ಕುರುಗಾಯಿಗೆ ಸೇರಿದ್ದ ಕುರಿಗಳನ್ನು ಸಂಜೆ ಎಂದಿನಂತೆ ಹಳ್ಳ ದಾಟಿ ಬರುವಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಗ್ರಾಮಸ್ಥರ ಸಹಾಯದಿಂದ 50 ಕ್ಕೂ ಹೆಚ್ಚು ಕುರಿಗಳ ರಕ್ಷಣೆ ಮಾಡಲಾಗಿದೆ. 20 ಕ್ಕೂ ಹೆಚ್ಚು ಕುರಿಗಳು ಹಿರೇಹಳ್ಳದ ನೀರು ಪಾಲಾಗಿವೆ.
ದೇವನಹಳ್ಳಿ ಸುತ್ತಮುತ್ತ ಭಾರಿ ಮಳೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸುತ್ತಮುತ್ತ ಭಾನುವಾರ ಅರ್ಧ ಗಂಟೆಗೂ ಹೆಚ್ಚು ಸಮಯ ಧಾರಾಕಾರ ಮಳೆಯಾಗಿದೆ. ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಮಳೆ ಆರ್ಭಟ ಜೋರಾಗಿತ್ತು. ಮಳೆಗೆ ರಸ್ತೆ ಹಾಗೂ ಚರಂಡಿಗಳ ಮೇಲೆ ನೀರು ಹರಿದು ಮನೆಗಳತ್ತ ತೆರಳಲು ಜನರು ಪರದಾಡಿದ್ದರು. ರಾಜಧಾನಿ ಬೆಂಗಳೂರಿನ ಸುತ್ತಮುತ್ತಲೂ ಮಳೆಯಾಗಿದೆ.
ಚಿಕ್ಕಬಳ್ಳಾಪುರದಲಿ ಬಾಳೆ ತೋಟ ನಾಶ
ಇಡೀ ರಾತ್ರಿ ಸುರಿದ ಭಾರಿ ಮಳೆಗೆ ಬಾಳೆ ತೋಟ ನಾಶವಾಗಿದೆ. ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಸುಮಾರು ಹತ್ತು ಲಕ್ಷ ಬೆಲೆ ಬಾಳುವ 2500 ಬಾಳೆ ಗಿಡಗಳು ನಾಶವಾಗಿದೆ. ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕಿನ ಬೀಮನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಹನುಮಂತರಾಯಪ್ಪ ಎಂಬ ರೈತನಿಗೆ ಸೇರಿದ ಬಾಳೆ ತೋಟ ಫಸಲಿಗೆ ಬಂದಿದ್ದ ಬೆಳೆ ನೆಲಕಚ್ಚಿದೆ. ಇತ್ತ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ರಾತ್ರಿ ಸುರಿದ ಭಾರಿ ಮಳೆಗೆ ಮೇಲೂರು ಗ್ರಾಮ ದೇವತೆ ಗಂಗಾದೇವಿ ದೇವಸ್ಥಾನ ಜಲಾವೃತಗೊಂಡಿದೆ. ಮನೆಗಳಿಗೆ ಹಾಗೂ ದೇವಸ್ಥಾನಗಳಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಅಧಿಕಾರಿಗಳಿಗೆ ಜನರು ಹಿಡಿಶಾಪ ಹಾಕಿದ್ದಾರೆ.
ತುಮಕೂರಿನಲ್ಲಿ ತಗ್ಗು ಪ್ರದೇಶಕ್ಕೆ ನುಗ್ಗಿದ ನೀರು
ತುಮಕೂರು ಜಿಲ್ಲೆಯ ಹಲವೆಡೆ ತಡರಾತ್ರಿ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶಕ್ಕೆ ನೀರು ನುಗ್ಗಿ ರಸ್ತೆಗಳು ಜಲಾವೃತಗೊಂಡಿದೆ. ತುಮಕೂರು ನಗರ, ಗುಬ್ಬಿ, ಕುಣಿಗಲ್ ತಾಲೂಕಿನಲ್ಲಿ ಮಳೆಯಾಗಿದೆ. ತುಮಕೂರು ನಗರದ ಬನಶಂಕರಿಯಲ್ಲಿ ರಸ್ತೆಗಳು ಜಲಾವೃತಗೊಂಡು, ವಾಹನ ಸವಾರರ ಪರದಾಟಬೇಕಾಯಿತು. ಹಲವಡೆ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
ವಿಜಯಪುರದಲ್ಲಿ ಜಮೀನು ಜಲಾವೃತ
ಕಾಲುವೆಗೆ ನೀರು ಬಿಟ್ಟಿದ್ದರಿಂದ ಭೂಮಿಯ ಬದು ಒಡೆದು ಜಮೀನಿಗೆ ನೀರು ನುಗ್ಗಿದೆ. ಕಾಲುವೆ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ರೈತರು ಬೆಳೆದ ಮುಂಗಾರು ಬೆಳೆಗಳಾದ ತೊಗರಿ, ಮೆಕ್ಕೆಜೋಳ ಸಂಪೂರ್ಣ ಜಲಾವೃತಗೊಂಡಿದೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕೊಟ್ಯಾಳ ಗ್ರಾಮದ ರೈತರ ಗೋಳು ಕೇಳುವವರು ಇಲ್ಲದಂತಾಗಿದೆ. ನೂರಾರು ಎಕರೆದಲ್ಲಿ ಬೆಳೆದ ಬೆಳೆ ಸಂಪೂರ್ಣಹಾನಿಯಾಗಿದೆ. ಕೂಡಲೇ ಕಾಲುವೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಮನವಿ ಮಾಡಿದ್ದಾರೆ. ಜತೆಗೆ ನಾಶವಾದ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ದಾವಣಗೆರೆಯಲ್ಲಿ ಮಳೆಗೆ ಧರೆಗುರುಳಿದ ಮರಗಳು
ನಿನ್ನೆ ಶನಿವಾರ ಸುರಿದ ಗಾಳಿ ಮಳೆಗೆ ಅಡಿಕೆ ಹಾಗೂ ತೆಂಗಿನ ಮರಗಳು ಧರೆಗುರುಳಿವೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಾಸಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಮಾಸಡಿ ಗ್ರಾಮ ಒಂದರಲ್ಲೇ 3 ಸಾವಿರಕ್ಕೂ ಅಧಿಕ ಅಡಿಕೆ ಮರ 200ಕ್ಕೂ ಅಧಿಕ ತೆಂಗಿನ ಮರಗಳು ಉರುಳಿ ಬಿದ್ದಿವೆ. ಫಲಕ್ಕೆ ಬಂದ ಅಡಿಕೆ ಮರ ಕಳೆದುಕೊಂಡ ರೈತರು ಗೋಳಾಡುತ್ತಿದ್ದಾರೆ. 16 ವರ್ಷಗಳ ಕಾಲ ಮಕ್ಕಳಂತೆ ಸಾಕಿದ್ದ ಅಡಿಕೆ ಮರ ಧರೆಗುರುಳಿದ್ದನ್ನು ಕಂಡು ರೈತರು ಕಣ್ಣೀರು ಹಾಕುತ್ತಿದ್ದಾರೆ. ರೈತರೂಂದಿಗೆ ಮಾಜಿ ಸಚಿವ ರೇಣುಕಾಚಾರ್ಯ ಬೆಳೆ ಹಾನಿ ತೋಟಗಳಿಗೆ ಭೇಟಿ ನೀಡಿದರು. ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದರು. ಬೆಳೆ ಹಾನಿಯಾದ ಜಮೀನುಗಳಿಗೆ ಭೇಟಿ ನೀಡಿ ರೈತರಿಗೆ ಧೈರ್ಯ ತುಂಬಿದರು.
ಇದನ್ನೂ ಓದಿ: POCSO Case: ಮನೆಯಲ್ಲಿ ಆಟವಾಡುತ್ತಿದ್ದ ಬಾಲಕಿಗೆ ಮೊಬೈಲ್ ಆಸೆ ತೋರಿಸಿ ಅತ್ಯಾಚಾರವೆಸಗಿದ ಕಾಮುಕ
ನಾಳೆ ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ
ಆ.19ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ ಜಿಲ್ಲೆಯ ಹೆಚ್ಚಿನ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಂಭವವಿದೆ. ಇನ್ನೂ ದಕ್ಷಿಣ ಒಳನಾಡಿನ ರಾಮನಗರ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 31 ಮತ್ತು 22 ಡಿ.ಸೆ ಇರಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ