ರಾಯಚೂರು/ಯಾದಗಿರಿ: ರಾಯಚೂರಿನಲ್ಲಿ (Karnataka Weather Forecast) ಭಾರಿ ಮಳೆಗೆ (Rain News) ಜಿಲ್ಲೆಯಾದ್ಯಂತ 108 ಮನೆಗಳು (Home collopase) ಕುಸಿದಿವೆ. ದೇವದುರ್ಗ ತಾಲೂಕಿನಲ್ಲಿ 9 ಮನೆಗಳು ಕುಸಿದು ಬಿದ್ದರೆ, ಲಿಂಗಸೂಗೂರಿನಲ್ಲಿ 32 ಮನೆಗಳು ಹಾಳಾಗಿವೆ. ರಾಯಚೂರು ತಾಲೂಕಿನ ವಿವಿಧೆಡೆ 19 ಮನೆಗಳು ಕುಸಿದಿದೆ. ಆಂಧ್ರ- ತೆಲಂಗಾಣ ಗಡಿ ಹೊಂದಿರುವ ಸಿಂಧನೂರು ತಾಲೂಕಿನ 33 ಮನೆಗಳು, ಮಸ್ಕಿ ತಾಲೂಕಿನಲ್ಲಿ 9, ಸಿರವಾರ ತಾಲೂಕಿನಲ್ಲಿ 4 ಮನೆಗಳು ಕುಸಿದು ಬಿದ್ದಿದೆ. ರಾಯಚೂರು ತಾಲೂಕಿನ ಬಿ.ಯದ್ಲಾಪುರ ಗ್ರಾಮದ ದಿವಾಕರ್ ಎಂಬುವರ ಮನೆ ಕುಸಿದಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಆರು ಜನರು ವಾಸವಾಗಿರುವ ಮನೆ ಸಂಪೂರ್ಣ ಕುಸಿತವಾಗಿ ಹಾಳಾಗಿದೆ. ಸುಮಾರು 40 ವರ್ಷದ ಮಣ್ಣಿನ ಮನೆಯು ಕುಸಿದು ಬಿದ್ದಿದೆ.
ಸೇತುವೆ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ
ಕಲಬುರಗಿ: ನೀರಿನ ರಭಸಕ್ಕೆ ಕೊಚ್ಚಿ ಹೋದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾರೆ. ಕಲಬುರಗಿ ಜಿಲ್ಲೆಯ ಚಿಂಚೊಳ್ಳಿ ತಾಲೂಕಿನ ಚಿಮ್ಮನಚೊಡ ಗ್ರಾಮದ ಹಳ್ಳದ ದಂಡೆಯಲ್ಲಿ ಶವ ಪತ್ತೆಯಾಗಿದೆ. ಬಾಬು ತಂದೆ ಗುಂಡಪ್ಪ ನೂಲ್ಕರ್(50) ಎಂಬುವವರ ಮೃತದೇಹ ಸಿಕ್ಕಿದೆ. ಸೇತುವೆ ದಾಟುವ ವೇಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದರು.
ಕೊಡಗಿನಲ್ಲಿ ಧರಾಶಾಹಿಯಾದ ಮನೆ
ಕೊಡಗು ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಸುರಿದ ಭಾರಿ ಮಳೆಗೆ ಮನೆಯೊಂದು ಧರಾಶಾಹಿಯಾಗಿದೆ. ಸೋಮವಾರಪೇಟೆ ತಾಲ್ಲೂಕಿನ ರಾಮನಹಳ್ಳಿ ಗ್ರಾಮದ ಸುರೇಶ್ ಎಂಬುವರ ಮನೆ ಕುಸಿದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಯಾವುದೇ ತೊಂದರೆ ಇಲ್ಲದೆ ಪಾರಾಗಿದ್ದಾರೆ. ಮನೆ ಕಳೆದುಕೊಂಡು ಸುರೇಶ್ ಕುಟುಂಬ ಕಂಗಾಲಾಗಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Forced Conversion : ಪ್ರೀತಿ ಹೆಸರಿನಲ್ಲಿ ಇಸ್ಲಾಂಗೆ ಮತಾಂತರ! ಒಲ್ಲೆ ಎಂದವಳ ಕಪಾಳಕ್ಕೆ ಹೊಡೆದು ಕಿರುಕುಳ ಕೊಟ್ಟ ವೈದ್ಯ
ಯಾದಗಿರಿಯಲ್ಲಿ ಗವಿಸಿದ್ದೇಶ್ವರ ಗರ್ಭಗುಡಿ ಸಂಪೂರ್ಣ ಮುಳುಗಡೆ
ಯಾದಗಿರಿ ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರಿದಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಚಿಂತನಹಳ್ಳಿ ,ಕೋಟಗೇರಾದ ಸುರಗ ಫಾಲ್ಸ್ ಭೋರ್ಗರೆಯುತ್ತಿದೆ. ಯಾದಗಿರಿ ಜಿಲ್ಲೆಯ ಗುರಮಠಕಲ್ ತಾಲೂಕಿನ ಚಿಂತನಹಳ್ಳಿಯ ಕೋಟಗೇರಾದ ಜಲಪಾತ ಗವಿಸಿದ್ದೇಶ್ವರ ಗರ್ಭಗುಡಿ ಮೇಲ್ಭಾಗದಲ್ಲಿ ಹರಿಯುತ್ತಿದೆ. ಗವಿಸಿದ್ದೇಶ್ವರ ಗರ್ಭಗುಡಿ ಸಂಪೂರ್ಣ ಮುಳುಗಡೆಯಾಗಿದೆ. ಭಕ್ತರ ದರ್ಶನ ಪಡೆಯುವ ಮೆಟ್ಟಿಲುಗಳು ಸಹ ಜಲಾವೃತಗೊಂಡಿದೆ. ಗವಿಸಿದ್ದೇಶ್ವರ ದೇವಸ್ಥಾನದ ಆವರಣಕ್ಕೂ ನೀರು ನುಗ್ಗಿದ್ದರಿಂದ ಭಕ್ತರ ದರ್ಶನಕ್ಕೆ ಅವಕಾಶ ಇಲ್ಲದಂತಾಗಿದೆ.
ಮಳೆಯ ಹೊಡೆತಕ್ಕೆ ಮತ್ತಷ್ಟು ಸೇತುವೆಗಳು ಮುಳುಗಡೆಯಾಗಿದೆ. ಸೇತುವೆಗಳು ಮುಳುಗಡೆಯಿಂದ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಯಾದಗಿರಿ ಜಿಲ್ಲೆಯ ಗುರಮಠಕಲ್ ತಾಲೂಕಿನ ನಂದೇಪಲ್ಲಿ, ಬದ್ದೆಪಲ್ಲಿ ಸೇತುವೆಗಳು ಜಲಾವೃತಗೊಂಡಿದೆ. ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೈದಾಪುರದಿಂದ ತೆಲಂಗಾಣದ ನಾರಾಯಣಪೇಟ್‌ಗೆ ಸಂಪರ್ಕ ಕಲ್ಪಿಸುವ ಸೇತುವೆ, ಇನ್ನೊಂದು ಕಡೆ ಗುರುಮಠಕಲ್ ತಾಲೂಕಿನ ಬದ್ದೇಪಲ್ಲಿ ಸೇತುವೆ ಸಹ ಜಲಾವೃತಗೊಂಡಿದೆ. ಬದ್ದೇಪಲ್ಲಿಯಿಂದ ತೆಲಂಗಾಣದ ಕೆಲ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಬ್ರಿಡ್ಜ್ ಇದಾಗಿದೆ. ಎರಡು ಸೇತುವೆ ಮುಳುಗಡೆಯಿಂದ ಜನರ ಪರದಾಟ ಅನುಭವಿಸಿದ್ದಾರೆ.
ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು
ವರುಣನ ಅವಾಂತರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ನಿರಂತರ ಮಳೆಯಿಂದ ತಗ್ಗು ಪ್ರದೇಶದೊಳಗೆ ನೀರು ನುಗ್ಗಿದೆ. ಲಕ್ಷ್ಮೀನಗರದಲ್ಲಿ ಅಂಗಡಿಯೊಳಗೆ ಹಾಗೂ ಮನೆ ಆವರಣದೊಳಗೆ ನೀರು ನುಗ್ಗಿದ್ದರಿಂದ ಮನೆಯಿಂದ ಹೊರಹೋಗಲು ಆಗದೆ ಜನರ ಸಂಕಷ್ಟ ಎದುರಾಗಿದೆ. ಅದೇ ರೀತಿ ಹಾವು, ಚೇಳುಗಳ ಕಾಟದಿಂದ ಜನರು ಕಂಗಾಲಾಗಿದ್ದಾರೆ. ರಸ್ತೆಗಳು ಜಲಾವೃತಗೊಂಡ ಪರಿಣಾಮ ನಡೆದುಕೊಂಡು ಹೋಗಲು ಆಗದೆ ಪರಿತಪ್ಪಿಸಿದರು. ಲಕ್ಷ್ಮಿನಗರದಲ್ಲಿ 25ಕ್ಕೂ ಹೆಚ್ಚು ಮನೆಗಳಿಗೆ ನೀರು ಆವರಿಸಿದೆ.
ಮಳೆಯ ಅವಾಂತರಕ್ಕೆ ನಲುಗಿದ ಅನ್ನದಾತರು
ಯಾದಗಿರಿ ಜಿಲ್ಲೆಯಲ್ಲಿ ಮುಂದುವರೆದ ಮಳೆಯ ಅಬ್ಬರಕ್ಕೆ ಅನ್ನದಾತರು ನಲುಗಿ ಹೋಗಿದ್ದಾರೆ. ಭಾರಿ ಮಳೆಗೆ ಪಂಪ್ ಸೆಟ್, ಐಪಿ ಸೆಟ್ ಹಾಗೂ ಟಿಸಿಗಳು ಕೊಚ್ಚಿ ಹೋಗಿವೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೋನಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಕೋನಾಳ ಗ್ರಾಮದ ಬಂದಗಿಸಾಬ್ ಎಂಬ ರೈತನಿಗೆ ಸೇರಿದ ಪಂಪ್ ಸೆಟ್ ಹಾಗೂ ಟಿಸಿ ಸೇರಿದಂತೆ ಹಲವರ ಹತ್ತಾರು ಪಂಪ್ ಸೆಟ್ ಹಾಗೂ ವಿದ್ಯುತ್ ಟಿಸಿ ನೀರಿನಲ್ಲಿ ಕೊಚ್ಚಿ ಹೋಗಿವೆ. ಹಳ್ಳದ ಬಳಿ ರೈತರು ಪಂಪ್ ಸೆಟ್ ಹಾಗೂ ಟಿಸಿಗಳನ್ನು ಅಳವಡಿಸಿದ್ದರು. ನಿರಂತರ ಮಳೆಗೆ ಐಪಿ ಸೆಟ್, ಪಂಪ್ ಸೆಟ್ ಹಾಗೂ ಟಿಸಿಗಳು ನೀರುಪಾಲಾಗಿವೆ. ಹಗಲು ರಾತ್ರಿ ಎನ್ನದೇ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಗ್ರಾಮಗಳ ಸಂಪರ್ಕವು ಸಹ ಕಡಿತವಾಗಿದೆ. ಜನರು ಮನೆಯಿಂದ ಹೊರಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಯಾದಗಿರಿಯ ಲುಂಬಿನಿ ಗಾರ್ಡನ್ ಜಲಾವೃತ
ಯಾದಗಿರಿ ನಗರದ ಹೃದಯ ಭಾಗದಲ್ಲಿರುವ ಲುಂಬಿನಿ ಗಾರ್ಡನ್ ಜಲಾವೃತಗೊಂಡಿದೆ. ಪ್ರವಾಸಿಗರನ್ನು ಸೆಳೆಯಬೇಕಾದ ಗಾರ್ಡನ್ ಈಗ ಗಬ್ಬು ತಾಣವಾಗಿ ಮಾರ್ಪಾಡಾಗಿದೆ. ಗಾರ್ಡನ್ ಒಳಗೆ ನೀರು ನುಗ್ಗಿದ್ದ ಪರಿಣಾಮ ಪ್ರವಾಸಿಗರು ಬರಲು ಹಿಂದೇಟು ಹಾಕಿದ್ದಾರೆ. ಗಾರ್ಡನ್ ಪಕ್ಕದಲ್ಲಿರುವ ಕೆರೆಯು ನೀರು ಗಾರ್ಡನ್‌ನೊಳಗೆ ನುಗ್ಗಿದೆ. ಪ್ರಾಣಿಗಳ ಮೂರ್ತಿ ಹಾಗೂ ಮಕ್ಕಳ ಆಟಿಕೆ ವಸ್ತುಗಳು ಜಲಾವೃತಗೊಂಡಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ