Site icon Vistara News

Karnataka Weather : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ-ಕೊಳ್ಳಗಳು; ಹಳ್ಳ ದಾಟಲು ಗ್ರಾಮಸ್ಥರ ಪರದಾಟ

karnataka weather forecast

ಹಾವೇರಿ: ಭಾರಿ ಮಳೆಗೆ (Rain News) ಕೆರೆ ಕೋಡಿ ಬಿದ್ದು ಗ್ರಾಮದ ಹಲವು ಮನೆಗಳು ಜಲಾವೃತಗೊಂಡಿದೆ. ಸುಮಾರು 30 ಹೆಚ್ಚು ಮನೆಗಳಿಗೆ ಕೆರೆ ನೀರು ನುಗ್ಗಿದೆ. ಹಾವೇರಿಯ ಹಿರೇಕೇರೂರು ತಾಲೂಕಿನ ಕಚವಿ ಗ್ರಾಮವು ಜಲಾವೃತಗೊಂಡಿದೆ. ಕೊಪ್ಪದ ಕೆರೆ ಕೋಡಿ ಬಿದ್ದು ಕಚವಿ ಗ್ರಾಮದತ್ತ ನೀರು (Karnataka Weather Forecast) ನುಗ್ಗಿದೆ.

ಕಳೆದೆರಡು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಕೊಪ್ಪದ ಕೆರೆ ತುಂಬಿ ಕೋಡಿ ಬಿದ್ದು ಗ್ರಾಮದತ್ತ ಹರಿದು ಬಂದಿದೆ. ಕಚವಿ ಗ್ರಾಮಸ್ಥರ ಬದುಕು ಬೀದಿಗೆ ಬಿದಿದ್ದು, ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದ್ದಾರೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ರಾತ್ರಿ ಪೂರ್ತಿ ನೀರು ಹೊರ ಹಾಕಿದ್ದಾರೆ. ಇಷ್ಟೆಲ್ಲಾ ಸಮಸ್ಯೆ ಆದರೂ ಜಿಲ್ಲಾಡಳಿತ ಕ್ಯಾರೆ ಎನ್ನುತ್ತಿಲ್ಲ. ಗ್ರಾಮದ ವಯೋವೃದ್ದರು, ವಾಹನ ಸವಾರರರು, ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ರಸ್ತೆ ಮೇಲೆ ನೀರು ನದಿಯಂತೆ ಹರಿಯುತ್ತಿದೆ.

ಬಳ್ಳಾರಿಯಲ್ಲಿ ಭತ್ತದ ಬೆಳೆಗೆ ಹಾನಿ

ಮಳೆಯಿಂದ ಹಳ್ಳಗಳು ತುಂಬಿ ನೀರು ಹರಿದು ಭತ್ತದ ಬೆಳೆಗೆ ಹಾನಿಯಾಗಿದೆ. ಬಳ್ಳಾರಿ ಜಿಲ್ಲೆಯ ಜಾಲಿಹಾಳ್ ಗ್ರಾಮದ ನಾಲ್ಕು ಹಳ್ಳಗಳ ರೈತರು ಜರ್ಜರಿತರಾಗಿದ್ದಾರೆ. ಭಾರಿ ಮಳೆಗೆ ಹಳ್ಳಗಳು ಹರಿದ ಪರಿಣಾಮ 500 ಎಕರೆ ಭತ್ತ ಜಲಾವೃತಗೊಂಡಿದೆ. ಜಾಲಿಹಾಳ್ ಗ್ರಾಮದ ಸುತ್ತ ಕಟ್ರಳ್ಳ, ಕೈಮುರುಕನಹಳ್ಳ, ಗಂಗಮ್ಮನಹಳ್ಳ, ಈರ್ಲಹಳ್ಳಗಳು ಹರಿಯುತ್ತಿದೆ. ಭತ್ತ ನಾಟಿ ಮಾಡಿದ ಕೆಲ ದಿನಗಳಿಂದ ಭರ ಸಿಡಿಲಾಗಿ ಎರಗಿದ ಹಳ್ಳದ ನೀರಿನಿಂದ ಲಕ್ಷಾಂತರ ರೂ.ಗಳು ನಷ್ಟವಾಗಿದೆ.

ರಸ್ತೆಯ ಮೇಲೂ ಹಳ್ಳ ಹರಿದು ಜಾಲಿಹಾಳ್ ಮತ್ತು ಕಾರೇಕಲ್ಲು ಮಧ್ಯದ ರಸ್ತೆ ಕೊಚ್ಚಿ ಹೋಗಿದೆ. ಎಕರೆಗೆ 15 ರಿಂದ 20 ಸಾವಿರ ವೆಚ್ಚ ಮಾಡಿ ಭತ್ತ ನಾಟಿ ಮಾಡಿದ್ದರು. ಕಳೆದ ಐದಾರು ದಿನಗಳಿಂದ ರೈತರ ಗದ್ದೆಯಲ್ಲಿ ನೀರು ಹರಿದಿದ್ದರಿಂದ ಭತ್ತದ ಸಸಿಗಳು ಕೊಳೆತು ಹೋಗಿದೆ.

ಇದನ್ನೂ ಓದಿ: Bomb Threat : ಉರ್ದು ಭಾಷೆಯಲ್ಲಿ ವಂಡರ್‌ ಲಾ ಅಮ್ಯುಸ್ಮೆಂಟ್ ಪಾರ್ಕ್‌ಗೆ ಬಾಂಬ್‌ ಬೆದರಿಕೆ

ತುಂಬಿ ಹರಿಯುತ್ತಿರುವ ಕರಡಿ ಗ್ರಾಮದ ಹಳ್ಳ

ಬಾಗಲಕೋಟೆಯ ಇಳಕಲ್ಲ ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ಕರಡಿ ಗ್ರಾಮದ ಹಳ್ಳ ತುಂಬಿ ಹರಿದಿದೆ. ರಸ್ತೆ ಮೇಲೆ ಹಳ್ಳದ ನೀರು ಹರಿಯುತ್ತಿರುವ ಪರಿಣಾಮ ಕರಡಿ ಗ್ರಾಮಸ್ಥರ ಸಂಚಾರಕ್ಕೆ ಅಡತಡೆಯಾಗಿದೆ. ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಳ್ಳದ ನೀರಲ್ಲೇ ನಡೆದು ಗ್ರಾಮಕ್ಕೆ ಹೋಗುವಂತಾಗಿದೆ. ಪುಟ್ಟ ಮಗು ಹೊತ್ತು ಹಳ್ಳ ದಾಟೋಕೆ ಪರದಾಡುತ್ತಿದ್ದಾರೆ. ಪ್ರತಿ ಬಾರಿ ಮಳೆ ಸುರಿದಾಗ ಕರಡಿ, ದಾಸಬಾಳ , ಪಾಲತಿ , ಕೊಣ್ಣೂರ ಹುನಗುಂದ ಸಂಪರ್ಕ ಕಡಿತಗೊಂಡಿದೆ. ಶೀಘ್ರ ಮೇಲ್ಸೇತುವೆ ಕಾರ್ಯ ಮುಗಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಮಳೆ ಅಬ್ಬರದ ಜತೆಗೆ ಭೂ ಕಂಪನದ ಅನುಭವ

ಶುಕ್ರವಾರ ಕೊಡಗು, ಹಾಸನ, ಮೈಸೂರು ಗಡಿಭಾಗದಲ್ಲಿ ಭೂಕಂಪನದ ಅನುಭವವಾಗಿದೆ. ಹೆಬ್ಬಾಲೆ ಸಮೀಪ, ಸೂಳೆಕೋಟೆ, ಅಡಗೂರು‌‌ ಹಾಗೂ ಕಣಗಾಲು ಹಾಗೂ ಕುಶಾಲನಗರ ಜ್ಞಾನಭಾರತಿ ಶಾಲೆ ಹಿಂಭಾಗ, ಭಸವತ್ತೂರು ಸೇರಿ ಹಲವೆಡೆ ಕಂಪನದ ಅನುಭವವಾಗಿದೆ. ಶುಕ್ರವಾರ ಮುಂಜಾನೆ 6.30ರ ಸಮಯಕ್ಕೆ 2ರಿಂದ3 ಸೆಕೆಂಡ್ ಭೂಮಿ ಕಂಪಿಸಿದೆ. ಭೂಕಂಪನ ಹಿನ್ನೆಲೆಯಲ್ಲಿ ಕೆಲಕಾಲ ಜನರು ಆತಂಕಗೊಂಡರು.

ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ

ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಲಿದೆ. ದಕ್ಷಿಣ ಒಳನಾಡು ಹಾಗೂ ಕರಾವಳಿಯ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡು ಉಳಿದ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version