Site icon Vistara News

Karnataka Weather : ವೀಕೆಂಡ್‌ ಮೋಜಿಗೆ ಮಳೆ ಅಡ್ಡಿ; ಬೆಂಗಳೂರು ಸೇರಿ ಇಲ್ಲೆಲ್ಲ ನಾಳೆ ವರ್ಷಧಾರೆ

ಬೆಂಗಳೂರು: ಶನಿವಾರ ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆ ಜಿಟಿ ಜಿಟಿ ಮಳೆಯಿಂದ (Rain News) ಶುರುವಾಗಿ ಸಂಜೆ ವೇಳೆಗೆ ಹಲವೆಡೆ ಸಾಧಾರಣ (Karnataka weather Forecast) ಮಳೆಯಾಗಿದೆ. ಮುಂಜಾವಿನ ಮಳೆಯಿಂದ ಜಾಗಿಂಗ್, ರನ್ನಿಂಗ್ ಹೋಗುವವರಿಗೆ ತೊಂದರೆ ಆಯಿತು.

ನಗರದ ಕೆ.ಆರ್.ಮಾರುಕಟ್ಟೆ, ಶಾಂತಿನಗರ, ಕೋರಮಂಗಲ, ಶಿವಾಜಿನಗರ, ಮಲೇಶ್ವರಂ, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಮಳೆಯಾಗಿದೆ. ಮಲ್ಲೇಶ್ವರಂ, ಶೇಷಾದ್ರಿಪುರಂ, ವಿಧಾನಸೌಧದಲ್ಲೂ ಮಳೆಯ ಸಿಂಚನವಾಗಿದೆ.

ಭಾರಿ ಮಳೆಗೆ ಕಾಳಿ ಸೇತುವೆ ಕುಸಿತದಿಂದಾಗಿ ಹೊಸ ಸೇತುವೆಯಲ್ಲಿ ಹೆಚ್ಚಾದ ವಾಹನ ದಟ್ಟಣೆ

ಉತ್ತರ ಕನ್ನಡದ ಕಾರವಾರದ ಕಾಳಿ ಸೇತುವೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಸೇತುವೆ ಮೇಲೆ ವಾಹನ ದಟ್ಟಣೆ ಹೆಚ್ಚಿದೆ. ಕಾರವಾರದ ರಾಷ್ಟ್ರೀಯ ಹೆದ್ದಾರಿ 66ಕ್ಕೆ ನಿರ್ಮಿಸಲಾದ ಹೊಸ ಸೇತುವೆಯು ಕಾರವಾರ-ಗೋವಾ ಸಂಪರ್ಕಿಸಲಿದೆ.

ಒಂದೇ ಸೇತುವೆ ಮೇಲೆ ದ್ವಿಮುಖ ಸಂಚಾರದಿಂದ ವಾಹನ ದಟ್ಟಣೆ ಎದುರಾಗಿದ್ದು, ಒಂದರ ಹಿಂದೆ ಒಂದರಂತೆ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗೋವಾ-ಮಂಗಳೂರು ನಡುವಿನ ಸರಕು ಸಾಗಾಟಕ್ಕೆ ತೊಡಕು ಉಂಟಾಗಿದೆ. ಹೊಸ ಸೇತುವೆಗೆ ಬೀದಿದೀಪ ಅಳವಡಿಸದೇ ಐಆರ್‌ಬಿ ನಿರ್ಲಕ್ಷ್ಯ ವಹಿಸಿದ್ದು, ರಾತ್ರಿ ವೇಳೆ ವಾಹನ ಸಂಚಾರದಿಂದ ಅಪಘಾತಗಳು ಸಂಭವಿಸುವ ಆತಂಕ ಎದುರಾಗಿದೆ. ಹೊಸ ಸೇತುವೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸವಾರರು ಬೇಡಿಕೆ ಇಟ್ಟಿದ್ದಾರೆ.

ಇದನ್ನೂ ಓದಿ: Building Collapsed: ಬೆಂಗಳೂರಲ್ಲಿ ನಿರ್ಮಾಣ ಹಂತ ಕಟ್ಟಡ ಕುಸಿತ; ಇಬ್ಬರು ಸಾವು, ಮತ್ತಿಬ್ಬರು ಗಂಭೀರ

ಸಾಧಾರಣ ಮಳೆ ಸಾಧ್ಯತೆ

ನಾಳೆ ಭಾನುವಾರ ಕರಾವಳಿಯ ಜಿಲ್ಲೆಗಳಲ್ಲಿ ಅನೇಕ ಸ್ಥಳಗಳಲ್ಲಿ, ದಕ್ಷಿಣ ಒಳನಾಡು ಜಿಲ್ಲೆಗಳ ಮೇಲೆ ಒಂದೆರಡು ಕಡೆಗಳಲ್ಲಿ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಬೆಂಗಳೂರು ನಗರ ಮತ್ತು ಸುತ್ತಮುತ್ತ ಮುಂದಿನ 24 ಗಂಟೆಯಲ್ಲಿ ಸಾಮಾನ್ಯವಾಗಿ ಮೋಡ ವಾತಾವರಣ ಇರಲಿದೆ. ಹಗುರದಿಂದ ಸಾಧಾರಣ ಮಳೆಯೊಂದಿಗೆ ಗುಡುಗು ಸಾಥ್‌ ನೀಡಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಮತ್ತು 21 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version