Site icon Vistara News

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

karnataka weather Forecast

ಬೆಂಗಳೂರು/ಮಂಗಳೂರು: ವ್ಯಾಪಕ ಮಳೆಯಿಂದಾಗಿ (Karnataka Weather Forecast) ಕರಾವಳಿಯ ಹಲವೆಡೆ ಪ್ರವಾಸಿಗರಿಗೆ ನಿಷೇಧ ಹಾಕಲಾಗಿದೆ. ಗಿರಿಶಿಖರಗಳಲ್ಲಿ ಚಾರಣಕ್ಕೆ ಹೋಗಬೇಕಾದರೆ ಮಳೆಗಾಲ (Heavy rain) ಮುಗಿಯುವವರೆಗೂ ಕಾಯಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಭೂ ಕುಸಿತ , ಗುಡ್ಡ ಕುಸಿತ ಪ್ರಕರಣಗಳು ಹೆಚ್ಚಾಗಿವೆ. ಇನ್ನಷ್ಟು ಪ್ರಾಕೃತಿಕ ವಿಕೋಪ ಸಂಭವಿಸುವ ಆತಂಕ ಇರುವ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯ ಗಿರಿ ಶಿಖರಗಳಿಗೆ ಚಾರಣಕ್ಕೆ ಹೋಗುವ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.

ಮಳೆಗಾಲ ಮುಗಿಯುವವರೆಗೆ ಹೋಮ್ ಸ್ಟೇ, ರೆಸಾರ್ಟ್ ಸೇರಿದಂತೆ ಅರಣ್ಯ ಇಲಾಖೆ ಏರ್ಪಡಿಸುವ ಟ್ರಕ್ಕಿಂಗ್, ಸಾಹಸ ಯಾತ್ರೆಗೂ ನಿಷೇಧ ಹಾಕಲಾಗಿದೆ. ಇವೆಲ್ಲದರ ಜತೆಗೆ ನದಿ, ಸಮುದ್ರ ತೀರಕ್ಕೆ ತೆರಳದಂತೆ ಸೂಚನೆ ನೀಡಲಾಗಿದ್ದು, ಅಲ್ಲೂ ನದಿ ಹಾಗು ಸಮುದ್ರ ತಟದಲ್ಲಿ ಈಜು ಮೋಜು-ಮಸ್ತಿ ಚಟುವಟಿಕೆಗಳಿಗೂ ಬ್ರೇಕ್‌ ಹಾಕಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ನಿಷೇಧ ಆದೇಶವನ್ನು ಹೊರಡಿಸಿದ್ದಾರೆ.

ಇಲ್ಲೆಲ್ಲ ಮಳೆ ಅಬ್ಬರ

ರಾಜ್ಯದ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ನೈರುತ್ಯ ಮುಂಗಾರು ಸಕ್ರಿಯವಾಗಿದ್ದರೆ, ದಕ್ಷಿಣ ಒಳನಾಡಿನಲ್ಲಿ ಸಾಧಾರಣವಾಗಿದೆ. ಉತ್ತರ ಕನ್ನಡದ ಕ್ಯಾಸಲ್‌ ರಾಕ್‌ನಲ್ಲಿ 17 ಸೆಂ.ಮೀ ಮಳೆಯಾದರೆ, ಹೊನ್ನಾವರದಲ್ಲಿ 16 ಹಾಗೂ ಉಡುಪಿಯಲ್ಲಿ 15, ಅಂಕೋಲಾದಲ್ಲಿ 13 ಸೆಂ.ಮೀ ಮಳೆಯಾಗಿದೆ.

ಜು.7ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಲ್ಲಲ್ಲಿ ಅತಿ ಹೆಚ್ಚು ಮಳೆಯಾಗಲಿದೆ. ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ಗಾಳಿ ವೇಗವು 30-40ಕಿ.ಮೀ ಇರಲಿದ್ದು, ಜತೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗಲಿದೆ. ಕೆಲವೊಮ್ಮೆ ಗಾಳಿ ವೇಗವು 30 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ.

ಉತ್ತರ ಒಳನಾಡಿನ ಕೆಲವು ಸ್ಥಳಗಳಲ್ಲಿ 50 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಸಾಧಾರಣ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ,ಕೊಡಗು, ಮೈಸೂರು, ರಾಮನಗರ ಸೇರಿದಂತೆ ದಾವಣಗೆರೆ, ಮಂಡ್ಯ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ.

ಉಕ್ಕಿ ಹರಿಯುವ ನದಿಯಲ್ಲಿ ಮೀನು ಹಿಡಿಯುವ ಸಾಹಸ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾದ ಮಳೆ ಪ್ರಮಾಣದಿಂದಾಗಿ ಎರಡು ದಿನ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಪಶ್ಚಿಮ ಘಟ್ಟದಲ್ಲಿಯೂ ನಿರಂತರವಾಗಿ ಮಳೆ ಹೆಚ್ಚಿದ್ದು, ನೇತ್ರಾವತಿ ನದಿ ತುಂಬಿ ಹರಿಯುತ್ತಿದೆ. ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದು, ತೀರ ಪ್ರದೇಶದ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಪ್ರವಾಹದ ಭೀತಿ ಇರುವುದರಿಂದ ನೇತ್ರಾವತಿ ನದಿ ತೀರದವರಿಗೆ, ದ್ವೀಪ ಪ್ರದೇಶ ಜನರಿಗೂ ಸೂಚನೆ ನೀಡಲಾಗಿದೆ. ನದಿಯಲ್ಲಿ ಮೀನುಗಾರಿಕೆ ನಡೆಸದಂತೆ ಎಚ್ಚರಿಕೆ ನೀಡಿದರೂ, ಸ್ಥಳೀಯರು ದೋಣಿ ಮೂಲಕ ಮೀನು ಹಿಡಿಯುತ್ತಿರುವುದು ಕಂಡು ಬಂದಿದೆ.

ತುಂಗಭದ್ರೆಯ ತಟದಲ್ಲಿ ಅಪರೂಪದ ನೀರು ನಾಯಿಗಳು ಪ್ರತ್ಯಕ್ಷ

ದಾವಣಗೆರೆಯ ಹರಿಹರದ ಬಳಿಯ ರಾಜನಹಳ್ಳಿ ಜಾಕ್ ವೆಲ್ ಬಳಿ ನೀರು ನಾಯಿಗಳ ಹಿಂಡು ಹಿಂಡಾಗಿ ಪ್ರತ್ಯಕ್ಷವಾಗಿದೆ. ನೀರು ನಾಯಿಗಳು ಜನರ ಕಣ್ಣಿಗೆ ಕಾಣುವುದು ಅಪರೂಪ. ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿಯ ದಡದಲ್ಲಿ ನೀರು ನಾಯಿಗಳು ಆಟವಾಡುತ್ತಿರುವುದು ಕಂಡು ಬಂದಿದೆ. ನೀರು ನಾಯಿ ಕಂಡರೆ ಸಮೃದ್ಧಿ ಮಳೆ ಬೆಳೆ ಆಗುತ್ತೆ ಎಂಬ ನಂಬಿಕೆ ಇದೆ.

ಅಬ್ಬಿ ಜಲಪಾತಕ್ಕೆ ಸಾಕು ನಾಯಿ ಜತೆಗೆ ಬಂದ ಪ್ರವಾಸಿಗರು!

ಕೊಡಗಿನಲ್ಲಿ ಮತ್ತೆ ಪ್ರವಾಸಿಗರ ಹುಚ್ಚಾಟ ಮುಂದುವರಿದಿದೆ. ಸಾಕು ನಾಯಿ ಹಿಡಿದು ಪ್ರವಾಸಿತಾಣವಾದ ಮಡಿಕೇರಿ ಸಮೀಪದ ಅಬ್ಬಿ ಜಲಪಾತಕ್ಕೆ ಬಂದಿದ್ದಾರೆ. ಶ್ವಾನವನ್ನು ಒಳಗೆ ತರಬೇಡಿ ಎಂದರು ಹೇಳಿದರೆ ಪ್ರವಾಸಿಗರು ಪೊಲೀಸರೊಟ್ಟಿಗೆ ಕೂಗಾಟ ಶುರು ಮಾಡುತ್ತಿದ್ದಾರೆ.

ಇತ್ತ ಪ್ರವಾಸಿಗರನ್ನು ಕಂಡು ಶ್ವಾನಗಳು ಕಚ್ಚಲು ಎಳೆದಾಡುತ್ತಿದ್ದ ದೃಶ್ಯ ಕಂಡು ಬಂತು. ಮಕ್ಕಳು ಸೇರಿದಂತೆ ನೂರಾರು ಪ್ರವಾಸಿಗರು ಇರುವ ಸ್ಥಳದಲ್ಲಿ ಜರ್ಮನ್ ಶೆಫರ್ಡ್, ಎರಡು ಲ್ಯಾಬ್ ಸೇರಿದಂತೆ ಶ್ವಾನವನ್ನು ಹಿಡಿದು ಒಳಗೆ ಬಂದಿದ್ದಾರೆ. ಬಳಿಕ ಬಲವಂತವಾಗಿ ಪೊಲೀಸರು ಹೊರಗೆ ಕಳುಹಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version