ಬೆಂಗಳೂರು/ಬೆಳಗಾವಿ: ಅರಬ್ಬಿ ಸಮುದ್ರದಲ್ಲಿ ಸುಳಿಗಾಳಿ ಸೃಷ್ಟಿಯಾದ ಹಿನ್ನೆಲೆಯಲ್ಲಿ ಆಗಸ್ಟ್ 9 ರವರೆಗೆ ರಾಜ್ಯಾದ್ಯಂತ ಭಾರಿ ಮಳೆಯಾಗುವ (Karnataka Weather Forecast) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ನಿನ್ನೆ ಸೋಮವಾರ ಸುರಿದ ಮಳೆಗೆ (Heavy Rain) ಹಲವೆಡೆ ಅಸ್ತವ್ಯಸ್ತವಾಗಿದೆ. ಬೆಳಗಾವಿ ಜಿಲ್ಲೆಯಾದ್ಯಂತ ಭಾರಿ ಮಳೆ ಹಿನ್ನೆಲೆಯಲ್ಲಿ ಕಿತ್ತೂರು ತಾಲೂಕಿನ ನಿಂಗಾಪುರ ಗ್ರಾಮಕ್ಕೆ ಹೊಂದಿಕೊಂಡಿರೋ ಹುಲಿಕೆರೆ ಹಿನ್ನೀರಿನಲ್ಲಿ ವಿದ್ಯಾರ್ಥಿಗಳು ಪರದಾಟ ಅನುಭವಿಸುತ್ತಿದ್ದಾರೆ. ಚೂರು ಆಯ ತಪ್ಪಿದರೂ ಸಹ ಮಕ್ಕಳು ಕೆರೆಯ ಪಾಲಾಗುವ ಭೀತಿ ಇದೆ.
ಬೆಳಗಾವಿ ಜಿಲ್ಲೆಯಾದ್ಯಂತ ಭಾರಿ ಮಳೆ ಹಿನ್ನೆಲೆಯಲ್ಲಿ ಕೆರೆ, ಹಳ್ಳ-ಕೊಳ್ಳ, ನದಿಗಳು ತುಂಬಿ ಹರಿಯುತ್ತಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ನಿಂಗಾಪುರ ಗ್ರಾಮದಲ್ಲಿ ಮಕ್ಕಳು ಕಲಿಕೆಗಾಗಿ ಜೀವ ಪಣಕ್ಕಿಟ್ಟು ಕೆರೆ ದಾಟುವಂತಾಗಿದೆ. ಕೆರೆ ಹಿನ್ನೀರು ದಾಟಿ ಶಾಲೆಗೆ ಹೋಗಲು ವಿದ್ಯಾರ್ಥಿಗಳು ಗಾಳಿ ತುಂಬಿದ ಟ್ಯೂಬೆಗಳೇ ಗತಿಯಾಗಿದೆ. ಪೋಷಕರು ಗಾಳಿ ತುಂಬಿದ ಟ್ಯೂಬ್‌ಗೆ ಹಗ್ಗ ಕಟ್ಟಿ ಎಳೆದು ಮಕ್ಕಳ ದಾಟಿಸುತ್ತಿದ್ದಾರೆ. ಚೂರು ಆಯ ತಪ್ಪಿದರೂ ಸಹ ಮಕ್ಕಳು ಕೆರೆಯ ಪಾಲಾಗುವ ಭೀತಿ ಇದೆ. ಸೇತುವೆ ನಿರ್ಮಾಣ ಮಾಡಿ ಕೊಡಿ ಎಂದು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಹೋಟೆಲ್ ನುಗ್ಗಿದ ನೀರು
ಮಳೆಯ ಅಬ್ಬರಕ್ಕೆ ಹೋಟೆಲ್ ಅಂಗಡಿಗಳಿಗೆ ನೀರು ನುಗ್ಗಿದೆ. ರಾತ್ರಿ ಮಳೆ ನೀರು ನುಗ್ಗಿದ್ದರಿಂದ ಹೋಟೆಲ್ ಮಾಲೀಕರು ಪರದಾಡಬೇಕಾಯಿತು. ದೊಡ್ಡಬಳ್ಳಾಪುರದ ರೈಲ್ವೆ ಸ್ಟೇಷನ್ ಬಳಿ ಇರುವ ಅಂಗಡಿಗಳಿಗೆ ನೀರು ನುಗ್ಗಿ ಹಾನಿಯುಂಟಾಗಿದೆ. ಚರಂಡಿಗಳು ಬಂದ್ ಮಾಡಿರುವ ಕಾರಣ ಈ ರೀತಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮುಚ್ಚಿರುವ ಚರಂಡಿಗಳನ್ನು ತೆರವುಗೊಳಿಸುವಂತೆ ನಗರ ಸಭೆ ಅಧಿಕಾರಿಗಳಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಳೆ ತಗ್ಗಿದ್ದರೂ ಮುಂದುವರಿದ ಪ್ರವಾಹ ಸ್ಥಿತಿ
ಮಹಾರಾಷ್ಟ್ರದಲ್ಲಿ ಮಳೆ ಕಡಿಮೆಯಾದರೂ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಪ್ರವಾಹ ಸ್ಥಿತಿ ಮುಂದುವರಿದಿದೆ. ಮಳೆ ಪ್ರಮಾಣ ಕಡಿಮೆಯಾದರೂ ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಹರಿದು ಬರುತ್ತಿದೆ. ಪರಿಣಾಮ ಕೃಷ್ಣಾ ನದಿ ತೀರದ ಜಮೀನುಗಳು ಸಂಪೂರ್ಣ ಜಲಾವೃತಗೊಂಡಿದೆ. ಕಾಗವಾಡ ತಾಲೂಕಿನ ಜುಗೂಳ ಹಾಗೂ ಮಹಾರಾಷ್ಟ್ರದ ಖಿದ್ರಾಪೂರ ಗ್ರಾಮದ ಕೆಲ ಪ್ರದೇಶಗಳ ಜಲಾವೃತ ಯಥಾಸ್ಥಿತಿ ಇದೆ. ಚಿಕ್ಕೋಡಿ ಉಪ ವಿಭಾಗದ 22 ಗ್ರಾಮಗಳ ನದಿ ತೀರದಲ್ಲಿ ಪ್ರವಾಹ ಸ್ಥಿತಿ ಮುಂದುವರಿದಿದೆ. ಮಳೆ ಪ್ರಮಾಣ ಹೆಚ್ಚಾದರೇ ನದಿ ತೀರ ಬಿಟ್ಟು ಗ್ರಾಮಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ.
ವಿಜಯಪುರದಲ್ಲಿ ಉಮರಾಣಿ- ಲವಗಿ ಹಳೆಯ ಬ್ಯಾರೇಜ್ ಮುಳುಗಡೆ
ಮಹಾರಾಷ್ಟ್ರದಲ್ಲಿ ಭಾರೀ ಮಳೆಗೆ ಉಜನಿ ಹಾಗೂ ವೀರ್ ಜಲಾಶಯಗಳಿಂದ ಭೀಮಾನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದಾಗಿ ಭೀಮಾನದಿ ತುಂಬಿ ಹರಿಯುತ್ತಿದೆ. ಪರಿಣಾಮ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಭೀಮಾ ನದಿಗೆ ಅಡ್ಡಲಾಗಿರುವ ಉಮರಾಣಿ- ಲವಗಿ ಹಳೆಯ ಬ್ಯಾರೇಜ್ ಮುಳುಗಡೆಯಾಗಿದೆ. ಚಡಚಣ, ಇಂಡಿ, ಆಲಮೇಲ ಸಿಂದಗಿ ತಾಲೂಕುಗಳಲ್ಲಿ ಪ್ರವಾಹದ ಭೀತಿ ಇದೆ.
ಧಾರಾಕಾರ ಮಳೆಗೆ ಆಸ್ಪತ್ರೆಗೆ ನುಗ್ಗಿದ ನೀರು
ತುಮಕೂರಿನ ಗುಬ್ಬಿ ಪಟ್ಟಣದಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ಗುಬ್ಬಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ನೀರು ನುಗ್ಗಿದೆ. ರೋಗಿಗಳಿದ್ದ ಕೊಠಡಿ ಸಂಪೂರ್ಣ ಜಲಾವೃತಗೊಂಡಿತ್ತು. ನೀರು ನುಗ್ಗಿದ ಪರಿಣಾಮ ರೋಗಿಗಳು ಪರದಾಡಬೇಕಾಯಿತು. ಕೆಳಗೆ ನೀರು ಮಯವಾದ ಕಾರಣಕ್ಕೆ ಮಧ್ಯರಾತ್ರಿಯೇ ರೋಗಿಗಳನ್ನು ಮೊದಲ ಹಾಗೂ ಎರಡನೇ ಮಹಡಿಯಲ್ಲಿರುವ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ.
ತುಮಕೂರಿನಲ್ಲಿ ಧರೆಗುರುಳಿದ ಮರ
ತುಮಕೂರು ಜಿಲ್ಲೆಯಲ್ಲಿ ರಭಸವಾಗಿ ಸುರಿದ ಮಳೆಗೆ ವಿವಿಧೆಡೆ ಅವಾಂತರವೇ ಸೃಷ್ಟಿಯಾಗಿತ್ತು. ಮರವೊಂದು ರಸ್ತೆಗೆ ಉರುಳಿ ಬಿದ್ದಿತ್ತು. ಇತ್ತ ಬೈಕ್ ಸವಾರ ಕೂದಲೆಳೆ ಅಂತರದಿಂದ ಪಾರಾಗಿದ್ದರು. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕ್ಯಾಮೇನಹಳ್ಳಿ ಬಳಿ ಘಟನೆ ನಡೆದಿದೆ. ಮರ ಬಿದ್ದ ಕಾರಣ ಬೈಕ್‌ನ ಹೆಡ್‌ಲೈಟ್ ಪುಡಿ ಪುಡಿಯಾಗಿತ್ತು.
ನದಿ ನೀರು ಇಳಿಕೆ ಆಯಿತು; ಮೊಸಳೆಗಳ ಕಾಟ ಶುರುವಾಯಿತು
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹುಣ್ಣರಗಿ ಗ್ರಾಮದಲ್ಲಿ ವೇದಗಂಗಾ ನದಿ ನೀರಲ್ಲಿ ಇಳಿಕೆ ಆಗುತ್ತಿದ್ದಂತೆ ಮೊಸಳೆಗಳ ಕಾಟ ಹೆಚ್ಚಾಗುತ್ತಿದೆ. ನಾಲ್ಕೈದು ಮೊಸಳೆಗಳು ಗ್ರಾಮದ ಹೊರ ವಲಯದಲ್ಲಿ ಪತ್ತೆಯಾಗಿವೆ. ಮೊಸಳೆ ಮರಿಗಳು ಗ್ರಾಮಕ್ಕೆ ನುಗ್ಗಿದ್ದು, ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ