Site icon Vistara News

Karnataka Weather : ವಾಯುಭಾರ ಕುಸಿತ ಎಫೆಕ್ಟ್‌; ಬೆಂಗಳೂರಿನಲ್ಲಿ ಅಬ್ಬರಿಸಿದ ಮಳೆಗೆ ಜನ-ಜೀವನ ಅಸ್ತವ್ಯಸ್ತ

karnataka Weather Forecast

ಬೆಂಗಳೂರು/ಉಡುಪಿ: ಪೂರ್ವ ಅರಬ್ಬೀ ಸಮುದ್ರದಲ್ಲಿ ಟ್ರಫ್ ಎದ್ದಿದ್ದು, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ.ಇದರ ಪ್ರಭಾವದಿಂದಾಗಿ ಗುರುವಾರ ರಾಜ್ಯದ ಹಲವೆಡೆ ಮಳೆ (Rain News) ಅಬ್ಬರಿಸಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿದ್ದ ಮಳೆಯು ಗುರುವಾರ (Karnataka Weather Forecast) ಗರ್ಜಿಸಿತ್ತು.

ಮಧ್ಯಾಹ್ನ 1 ಗಂಟೆ ಸುಮಾರಿಗೆ ಮೋಡ ಕವಿದು ಗುಡುಗು ಸಹಿತ ಭರ್ಜರಿ ಮಳೆಯಾಗಿತ್ತು. ದಿಢೀರ್‌ ಮಳೆಗೆ ಕೋರಮಂಗಲ, ಆಡುಗೋಡಿ, ಮಡಿವಾಳ, ಬನ್ನೇರುಘಟ್ಟ, ಮೆಜೆಸ್ಟಿಕ್‌, ಶಿವಾಜಿನಗರ, ವಿಧಾನಸೌಧ ಸೇರಿದಂತೆ ಹಲವೆಡೆ ಮಳೆಯಾಗಿದೆ.

ದಿಢೀರ್ ಮಳೆಯಿಂದ ವಾಹನ ಸವಾರರು ಪರದಾಡಿ, ಬಸ್ ನಿಲ್ದಾಣವನ್ನು ಆಶ್ರಯ ಪಡೆದರು. ಕೆಲವೆಡೆ ರಸ್ತೆ ಮೇಲೆ ನೀರು ನಿಂತ ಕಾರಣ ಸವಾರರು ಸಂಕಷ್ಟ ಎದುರಿಸಿದರು. ಫ್ರೀಡಂ ಪಾರ್ಕ್‌ನಿಂದ ಆನಂದ್‌ ರಾವ್ ಸರ್ಕಲ್‌ಗೆ ಸಂಪರ್ಕಿಸುವ ರಸ್ತೆಯಲ್ಲಿ ನೀರು ನಿಂತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಲೋಕಾಯುಕ್ತ ಕಚೇರಿಯ ಮುಂಭಾಗ ಸಂಪೂರ್ಣ ಕೆರೆಯಂತಾಗಿತ್ತು. ಮಳೆ ನೀರಲ್ಲಿ ರಸ್ತೆ ದಾಟಲು ಜನರು ಪರದಾಡಿದರು.

ಇನ್ನು ಬೆಂಗಳೂರಿನಲ್ಲಿ ಭಾರಿ ಮಳೆಗೆ ಚಿಕ್ಕಪೇಟೆಯಲ್ಲಿರುವ ಸುಲ್ತಾನ್ ಪೇಟೆ ಜಲಾವೃತಗೊಂಡಿತ್ತು. ಜವಳಿ ಅಂಗಡಿಗಳ ಪ್ರಮುಖ ಕೇಂದ್ರವಾಗಿರುವ ಸುಲ್ತಾನ್ ಪೇಟೆಯ ಬಹುತೇಕ ಗಲ್ಲಿಗಳಿಗೆ, ಅಂಗಡಿಗಳಿಗೂ ಮೋರಿ ನೀರು ನುಗ್ಗಿತ್ತು. ನೀರು ತೆರವು ಮಾಡಲು ಅಂಗಡಿ ಸಿಬ್ಬಂದಿ ಪರದಾಡಿದರು.

ಇದನ್ನೂ ಓದಿ: CM Siddaramaiah : ಮುಡಾ ಹಗರಣ ಸಿಎಂಗೆ ತಾತ್ಕಾಲಿಕ ರಿಲೀಫ್‌; ಆ.31ಕ್ಕೆ ವಿಚಾರಣೆ ಮುಂದೂಡಿಕೆ

ಮುಂದಿನ ಐದು ದಿನಗಳಿಗೆ ಮಳೆ ಅಲರ್ಟ್

ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಎರಡೂ ಭಾಗದ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್‌ ಘೋಷಣೆ ಮಾಡಲಾಗಿದೆ. ಆಗಸ್ಟ್ 29 ರಿಂದ ಆಗಸ್ಟ್ 31ರ ವರೆಗೆ ಕರಾವಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಆಗಸ್ಟ್ 29 ರಿಂದ 30ರವರೆಗೆ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್‌ ಹಾಗೂ ಆಗಸ್ಟ್ 29ರಿಂದ ಸೆಪ್ಟೆಂಬರ್1ರ ವರೆಗೆ ಉತ್ತರ ಒಳನಾಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಆಳಸಮುದ್ರ ಮೀನುಗಾರಿಕೆಗೆ ತೆರಳಿದವರಿಗೆ ಕಟ್ಟೆಚ್ಚರ

ಕರಾವಳಿಯ ಉಡುಪಿಗೆ ಆರೆಂಜ್ ಹಾಗೂ ರೆಡ್ ಅಲರ್ಟ್ ನೀಡಲಾಗಿದೆ. ಗಾಳಿ ಜತೆಗೆ ಮಳೆಯಾಗಲಿದ್ದು, ಕಡಲಿಗಿಳಿಯುವ ಮೀನುಗಾರರಿಗೆ ಎಚ್ಚರಿಕೆ ಸಂದೇಶ ನೀಡಿದೆ. ಆಳಸಮುದ್ರ ಮೀನುಗಾರಿಕೆಗೆ ತೆರಳಿದವರಿಗೆ ಕಟ್ಟೆಚ್ಚರ ನೀಡಿದೆ. ಹವಾಮಾನ ಇಲಾಖೆ ಮನ್ಸೂಚನೆ ಮೇರೆಗೆ ಕೆಲ ಬೋಟ್‌ಗಳು ವಾಪಸ್ ಆಗಿವೆ. ಐಎಂಡಿ ಆಗಸ್ಟ್ 30 ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು, ಆಗಸ್ಟ್ 31 ರೆಡ್ ಅಲರ್ಟ್ ಘೋಷಣೆ ಮಾಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version