ಕಾರವಾರ: ವಾಯುಭಾರ ಕುಸಿತದಿಂದ ಕರಾವಳಿಯಲ್ಲಿ ಅಲೆಗಳ ಅಬ್ಬರ (Karnataka Weather Forecast) ಜೋರಾಗಿದೆ. ಭಾರೀ ಅಲೆಗಳ ಅಬ್ಬರಕ್ಕೆ (Rain News) ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಹಾರವಾಡದ ತರಂಗಮೇಟ ಪ್ರದೇಶದಲ್ಲಿ ಮನೆಯೊಂದು ಕೊಚ್ಚಿಹೋಗಿದೆ. ಮೀನುಗಾರ ಅಶೋಕ್ ಹರಿಕಂತ್ರ ಎಂಬುವವರ ಮನೆ ಸಮುದ್ರಪಾಲಾಗಿದೆ.
ತರಂಗಮೇಟ ತೀರದ ಸುಮಾರು 200 ಮೀಟರ್ ವ್ಯಾಪ್ತಿಯಲ್ಲಿ ಅಲೆಗಳ ಅಬ್ಬರಕ್ಕೆ ಕಳೆದ ಮೂರು ತಿಂಗಳಿಂದ ಕಡಲಕೊರೆತ ಉಂಟಾಗಿತ್ತು. ಕುಟುಂಬಸ್ಥರು ಎರಡು ತಿಂಗಳ ಹಿಂದೆಯೇ ಮನೆ ಬಿಟ್ಟು ಬೇರೆಡೆ ಉಳಿದುಕೊಂಡಿದ್ದರು. ಇಂದು ಗುರುವಾರ ಅಲೆಗಳ ಅಬ್ಬರಕ್ಕೆ ಮನೆ, ತೆಂಗಿನಮರ ನೀರುಪಾಲಾಗಿದೆ. ಮನೆ, ತೆಂಗಿನಮರ ಕೊಚ್ಚಿಹೋಗುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ. ತರಂಗಮೇಟ ಕಡಲತೀರಕ್ಕೆ ಹೊಂದಿಕೊಂಡು 30ಕ್ಕೂ ಅಧಿಕ ಮೀನುಗಾರರ ಮನೆಗಳು ಇವೆ. ಕಡಲತೀರಕ್ಕೆ ಅಲೆತಡೆಗೋಡೆ ನಿರ್ಮಿಸುವಂತೆ ಮನವಿ ಮಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಳೆ ಅವಾಂತರ
ಚಿಕ್ಕಮಗಳೂರು: ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್‌ನ ತಪ್ಪಲಿನಲ್ಲಿ ಭಾರಿ ಮಳೆಯಾಗಿದೆ. ಧಾರಾಕಾರ ಮಳೆಗೆ ಚಾರ್ಮಾಡಿಯಲ್ಲಿ ಬಂಡೆಗಳು ಧರೆಗುರುಳಿವೆ. ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್‌ನ 8 ಮತ್ತು 9ನೇ ತಿರುವಿನಲ್ಲಿ ಘಟನೆ ನಡೆದಿದೆ.
ಕಳೆದ ಎರಡು ದಿನಗಳಿಂದ ಚಾರ್ಮಾಡಿ ಘಾಟಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ರಸ್ತೆಯಲ್ಲೇ ನೀರು ತುಂಬಿ ಹರಿಯುತ್ತಿದೆ. ಮಳೆ ನೀರಿನ ಜತೆ ರಸ್ತೆಗೆ ಕಲ್ಲುಗಳು ತೇಲಿ ಬಂದಿದೆ. ಗುಡ್ಡ ಕುಸಿದು ರಸ್ತೆ ಮೇಲೆ ಬಂಡೆ ಕಲ್ಲುಗಳು ಉರುಳಿವೆ. ಸ್ಥಳಕ್ಕೆ ಚಾರ್ಮಾಡಿ ಘಾಟಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾಹನ ಸಂಚಾರ ಎಂದಿನಂತೆ ಇದ್ದು, ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ.
ಇನ್ನೂ ಚಿಕ್ಕಮಗಳೂರಿನಲ್ಲಿ ಮಳೆ ಅವಾಂತರ ಮುಂದುವರಿದಿದೆ. ಗ್ರಾಮಸ್ಥರ ಕಣ್ಣೆದುರೆ ಮನೆಗೆ ಸಿಡಿಲು ಬಡಿದು, ಮನೆ ಚಾವಣಿ ಸಂಪೂರ್ಣ ಹಾನಿಯಾಗಿ, ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲ್ಲೂಕಿನ ಮಾಳಿಗನಾಡು ಗ್ರಾಮದಲ್ಲಿ ಘಟನೆ ನಡೆದಿದೆ.
ಗ್ರಾಮದ ಸೀತು ಎಂಬುವವರ ಮನೆಗೆ ಸಂಪೂರ್ಣ ಹಾನಿಯಾಗಿದೆ. ಮನೆಯ ಸದಸ್ಯರು ತೋಟದ ಕೆಲಸಕ್ಕೆ ಹೋಗಿದ್ದರಿಂದ ಅವಘಡ ಸಂಭವಿಸಿದಾಗ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಮನೆಯ ಹೆಂಚುಗಳು, ಬಾಗಿಲು ಕಿಟಕಿ ಸುಟ್ಟ ಸ್ಥಿತಿ ತಲುಪಿದೆ.
ಇದನ್ನೂ ಓದಿ: Belgavi News : ಪರಿಹಾರ ನೀಡಲು ವಿಳಂಬ; ಬೆಳಗಾವಿ ಎಸಿ ಕಚೇರಿಯ ಕಂಪ್ಯೂಟರ್, ಪ್ರಿಂಟರ್ ಹೊತ್ತೊಯ್ದ ರೈತರು!
ವಿಜಯಪುರದಲ್ಲಿ ಉಕ್ಕಿ ಹರಿಯುತ್ತಿರುವ ಹಳ್ಳ
ಇತ್ತ ರೋಣಿಹಾಳ ಹಳ್ಳ ಉಕ್ಕಿ ಹರಿಯುತ್ತಿದ್ದು, ಜನರು ಹಳ್ಳದಲ್ಲೆ ಓಡಾಡುತ್ತಿದ್ದಾರೆ. ನಿನ್ನೆ ಬುಧವಾರ ತಡರಾತ್ರಿ ಸುರಿದ ಮಳೆಗೆ ವಿಜಯಪುರ ಜಿಲ್ಲೆಯ ಕೋಲ್ಹಾರ ತಾಲೂಕಿನ ರೋಣಿಹಾಳ. ಗರಸಂಗಿ, ಆಸಂಗಿ ಹಳ್ಳಗಳು ಉಕ್ಕಿ ಹರಿದಿದೆ. ಅಪಾಯದ ನಡುವೆಯೂ ಗ್ರಾಮಸ್ಥರು ಜೀವದ ಹಂಗು ತೊರೆದು ಹಳ್ಳ ದಾಟಲು ಯತ್ನಿಸುತ್ತಿದ್ದಾರೆ. ವಿಜಯಪುರ ತಾಲೂಕಿನ ಲೋಗಾಂವಿ ಗ್ರಾಮದಲ್ಲಿ ದ್ರಾಕ್ಷಿ ಬೆಳೆಗೆ ಹಾನಿಯಾಗಿದೆ. ರಾಜು ಹುನ್ನೂರ್ ಎಂಬುವವರಿಗೆ ಸೇರಿದ ದ್ರಾಕ್ಷಿ ಬೆಳೆ ಭಾರಿ ಮಳೆಗೆ ಬೆಳೆಯ ಕಂಬಗಳು ಹಾಗೂ ದ್ರಾಕ್ಷಿ ಬೆಳೆ ನೆಲಕ್ಕುರುಳಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ದ್ರಾಕ್ಷಿ ಹಾನಿಯಾಗಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ರೈತರ ಮನವಿ ಮಾಡಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ತಡ ರಾತ್ರಿ ಭರ್ಜರಿ ಮಳೆಗೆ ಬಹುತೇಕ ಕಡೆ ರಸ್ತೆಗಳು ಜಲಾವೃತಗೊಂಡಿದ್ದವು. ದಾವಣಗೆರೆ ನಗರ ಹಾಗೂ ಹೊನ್ನಾಳಿ ಪಟ್ಟಣ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಸುರಿದ ಮಳೆಯಿಂದಾಗಿ ಜಮೀನಿಗೆ ನೀರು ನುಗ್ಗಿದೆ. ವಿಜಯನಗರ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ರೈತರ ಜಮೀನಿ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಭಾರಿ ಮಳೆಗೆ ಬೈಲುವದ್ದಿಗೆರೆ ಗ್ರಾಮದ ಕೆರೆ ಕೋಡಿ ಬಿದ್ದಿದೆ. ಕೆರೆ ಕೋಡಿ ಬಿದ್ದು ಗುಲಾಬಿ ತೋಟ, ಮೆಣಸಿನಕಾಯಿ ತೋಟ, ಹತ್ತಿ, ಹಾಗೂ ಮೆಕ್ಕೆಜೋಳ ಬೆಳೆದಿದ್ದ ಜಮೀನಿಗೆ ನೀರು ನುಗ್ಗಿದೆ. ಹತ್ತಾರು ಸಾವಿರ ಖರ್ಚು ಮಾಡಿದ್ದ ಬೆಳೆ ಮಳೆಗೆ ಮುಕ್ಕಾಲು ಭಾಗ ಹಾನಿಯಾಗಿದೆ. ಬೆಳೆ ಹಾನಿಯಾಗಿದ್ದಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಗುಲಾಬಿ ಬೆಳೆಗಾರ ಕಂಗಾಲಾಗಿದ್ದಾರೆ. ಪರಿಹಾರಕ್ಕಾಗಿ ಹತ್ತಿ, ಮೆಣಸಿನಕಾಯಿ, ಮೆಕ್ಕೆಜೋಳ ಬೆಳೆದ ರೈತರಿಂದ ಆಗ್ರಹಿಸಿದ್ದಾರೆ.
ಬಿರುಗಾಳಿಗೆ ವಾಲಿದ ಸಿಗ್ನಲ್ ಕಂಬ!
ಬಿರುಗಾಳಿಗೆ ಸಿಗ್ನಲ್ ಕಂಬ ವಾಲಿದ ಘಟನೆ ಗದಗ ನಗರದ ಮುಳಗುಂದ ನಾಕಾದ ಸಿಗ್ನಲ್‌ನಲ್ಲಿ ಘಟನೆ ನಡೆದಿದೆ. ವಾಹನಗಳ ಓಡಾಡುವ ಸಂದರ್ಭದಲ್ಲಿ ಕಂಬ ವಾಲಿದ್ದು, ಸವಾರರು ಕಕ್ಕಾಬಿಕ್ಕಿಯಾದರು. ತಕ್ಷಣ ಅಲರ್ಟ್ ಟ್ರಾಫಿಕ್ ಪೊಲೀಸರು ಬ್ಯಾರಿಕೆಡ್ ಹಾಕಿ ಪರ್ಯಾಯ ಸಂಚಾರಕ್ಕೆ ವ್ಯವಸ್ಥೆ ಮಾಡಿದರು. ಸ್ಥಳಕ್ಕೆ ಟ್ರಾಫಿಕ್ ಪಿಎಸ್ಐ ಶಕುಂತಲಾ ನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಾಳೆಗೂ ಇರಲಿದೆ ಮಳೆ ಅಬ್ಬರ
ನಾಳೆ ಶುಕ್ರವಾರ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ಒಳನಾಡಿನ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಗುಡುಗು ಸಹಿತ ಮಳೆಯಾಗಲಿದೆ. ಕೆಲವೊಮ್ಮೆ ನಿರಂತರ ಗಾಳಿಯ ವೇಗ 40-50 ಕಿ.ಮೀ ಬೀಸುವ ಸಾಧ್ಯತೆ ಇದೆ. ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ