ಬೆಂಗಳೂರು: ಸೋಮವಾರ ರಾಜಧಾನಿ ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಮಳೆ (Bengaluru rain) ಸುರಿದಿದೆ. ಕೇವಲ10-15 ನಿಮಿಷ ಸುರಿದ ಮಳೆಗೆ ಹಲವು ರಸ್ತೆಗಳು ಜಲಾವೃತಗೊಂಡಿದ್ದವು. ಹೆಬ್ಬಾಳದ ರಸ್ತೆಗಳು ಕೆರೆಯಂತಾಗಿ ಸವಾರರು, ಸಾರ್ವಜನಿಕರು ಹೈರಣಾದರು. ಇತ್ತ ಮಳೆ ಕಡಿಮೆಯಾಗುತ್ತಿದ್ದಂತೆ ಸವಾರರು ಟ್ರಾಫಿಕ್‌ನಲ್ಲಿ (Karnataka Weather Forecast) ಸಿಲುಕಿದ್ದರು.
ಯಶವಂತಪುರ, ಹೆಬ್ಬಾಳ ಅಂಡರ್ ಪಾಸ್‌ನಲ್ಲಿ ವಾಹನಗಳು ನಿಂತಲ್ಲೇ ನಿಲ್ಲುವಂತಾಯಿತು. ಟ್ರಾಫಿಕ್ ಕ್ಲಿಯರ್ ಮಾಡಲು ಸಂಚಾರಿ ಪೊಲೀಸರು ಹರಸಾಹಸ ಪಟ್ಟರು. ಹೆಬ್ಬಾಳ ಸಂಪರ್ಕ ಕಲ್ಪಿಸುವ ಅಕ್ಕಪಕ್ಕದ ರಸ್ತೆಗಳು, ವಸಂತನಗರ, ರೈಲ್ವೆ ಪ್ಯಾರಲಲ್ ರಸ್ತೆ, ಪ್ಯಾಲೇಸ್ ಗುಟ್ಟಳ್ಳಿ ಸೇರಿದಂತೆ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಸಿಲಿಕಾನ್ ಸಿಟಿಯಲ್ಲಿ ಮಳೆಗೆ ಮರವೊಂದ ಧರೆಗುರುಳಿದೆ. ಸಂಜಯ್ ನಗರದಲ್ಲಿ ಕಾರಿನ ಮೇಲೆ ಬೃಹತ್ ಮರ ಬಿದ್ದಿದೆ. ಮರ ಉರುಳಿ ಬಿದ್ದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇತ್ತ ದೊಡ್ಡಬಳ್ಳಾಪುರದಲ್ಲೂ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ರಸ್ತೆಯ ಮೇಲೆ ನೀರು ತುಂಬಿ ಹರಿದಿತ್ತು. ದೊಡ್ಡಬಳ್ಳಾಪುರದ ತಾಲೂಕು ಕಚೇರಿ, ತೇರಿನ ಬೀದಿ ಸರ್ಕಲ್ ಬಳಿ ವಾಹನ ಸವಾರರು ಪರದಾಡಿದರು. ಒಂದು ಅಡಿಗೂ ಹೆಚ್ಚು ನೀರು ನಿಂತು, ಜತೆಗೆ ಚರಂಡಿ ನೀರೆಲ್ಲಾ ತುಂಬಿ ರಸ್ತೆಯ ಮೇಲೆ ಹರಿದಿತ್ತು. ತಾಲೂಕು ಕಚೇರಿಯ ಮುಂದೆಯೇ ರಸ್ತೆ ಅವ್ಯವಸ್ಥೆಗೊಂಡಿತ್ತು. ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಪರದಾಡಿದರು.
ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಭಾರಿ ಮಳೆಯಾಗಿದ್ದು, ರಸ್ತೆಗಳು ನದಿಯಂತಾಗಿತ್ತು. ಬಾಳೆಹೊನ್ನೂರು-ಕಳಸ- ಕೊಟ್ಟಿಗೆಹಾರ ಸಂಪರ್ಕ ಕಡಿತಗೊಂಡಿತ್ತು. ಎನ್ ಆರ್ ಪುರ ತಾಲೂಕಿನ ಬನ್ನೂರು ಬಳಿ ರಸ್ತೆ ಮುಳುಗಡೆಯಾಗಿದೆ. ರಸ್ತೆಯ ಮೇಲೆ ರಭಸವಾಗಿ ನೀರು ಹರಿಯುತ್ತಿದ್ದು, ರಸ್ತೆ ಸಂಪರ್ಕ ಕಡಿತ ಹಿನ್ನೆಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಕಿಲೋ ಮೀಟರ್ ಗಟ್ಟಲೆ ವಾಹನಗಳು ನಿಂತಲ್ಲೇ ನಿಂತಿವೆ.ವಿಜಯಪುರದ ನಾಲತವಾಡನಲ್ಲಿ ಭಾರಿ ಮಳೆಗೆ ಸಾರ್ವಜನಿಕರು, ಗ್ರಾಹಕರು ಪರದಾಡಿದರು. ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಮಾರ್ಕೆಟ್‌ಗೆ ಚರಂಡಿ ನೀರು ನುಗ್ಗಿತ್ತು.
ಇದನ್ನೂ ಓದಿ: Namma Metro : ನಾಳೆಯಿಂದ ಸೆಪ್ಟೆಂಬರ್ 11ರವರೆಗೂ ಪೀಣ್ಯ ಇಂಡಸ್ಟ್ರಿ ಟು ನಾಗಸಂದ್ರ ಮೆಟ್ರೋ ಓಡಾಟ ಬಂದ್!
ಬಾಗಲಕೋಟೆಯಲ್ಲಿ ಅಬ್ಬರಿಸಿದ ಮಳೆ
ತಡರಾತ್ರಿ ಬಾಗಲಕೋಟೆಯ ರಬಕವಿ ಬನಹಟ್ಟಿ ನಗರದಲ್ಲಿ ಮಳೆಯು ಅಬ್ಬರಿಸಿದೆ. ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಿದ್ದು, ಇಡೀ ಬನಹಟ್ಟಿ ನಗರ ನದಿಯಂತೆ ಕಂಡು ಬಂತು. ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ನಿದ್ದೆಗೆಟ್ಟು ಬಕೆಟ್ ಮೂಲಕ ನೀರು ಹೊರ ಹಾಕಿದರು. ಬ್ಯಾರೆಲ್, ಮನೆ ಮುಂಭಾಗದ ಬೈಕ್‌ಗಳು ಜಲಾವೃತಗೊಂಡಿದ್ದವು. 1 ಗಂಟೆಗೂ ಹೆಚ್ಚು ಸಮಯ ಸುರಿದ ಮಳೆಗೆ ಬನಹಟ್ಟಿ ಜನರು ತತ್ತರಿಸಿ ಹೋಗಿದ್ದರು.
ಚಿಕ್ಕಮಗಳೂರಿನಲ್ಲಿ ನಿಲ್ಲದ ಮಳೆ ಅವಾಂತರ
ರಾತ್ರಿ ಸುರಿದ ಮಳೆಗೆ ಕೆರೆಯ ಏರಿ ಒಡೆದು ಜಮೀನಿಗೆ ನೀರು ನುಗ್ಗಿದ್ದರಿಂದ ಸುಮಾರು 30 ಎಕರೆ ಬೆಳೆ ನಾಶವಾಗಿದೆ. ಚಿಕ್ಕಮಗಳೂರು ತಾಲೂಕಿನ ಕರ್ತಿಕೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಜೋಳ, ರಾಗಿ ಸೇರಿದಂತೆ ಹಲವು ಬೆಳೆಗಳು ಕೊಚ್ಚಿ ಹೋಗಿವೆ. ಕೂಡಲೇ ಏರಿ ದುರಸ್ತಿ ಮಾಡಿ ನೀರು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.
ಇತ್ತ ಚಿಕ್ಕಮಗಳೂರು ನಗರದ ಕಲ್ಲು ದೊಡ್ಡಿ ಬಡಾವಣೆಯ ಹಲವು ಮನೆಗಳಿಗೆ ನೀರು ನುಗ್ಗಿ ಪರದಾಟ ಅನುಭವಿಸಿದರು. ರಸ್ತೆ ನೀರು ಹಳ್ಳದಂತೆ ಮನೆಗೆ ನುಗ್ಗಿತ್ತು. ನೀರು ಹೊರ ಹಾಕಲಾಗದೆ ಜನರು ಪರದಾಡಿದರು. ಮನೆಯಲ್ಲಿದ್ದ ಆಹಾರ ಪದಾರ್ಥ ಹಾಗೂ ವಸ್ತುಗಳು ಹಾನಿಯಾಗಿದ್ದವು. ನಗರ ಸಭೆ ವಿರುದ್ಧ ಸ್ಥಳೀಯ ನಾಗರಿಕರು ಇಡಿ ಶಾಪ ಹಾಕಿದ್ದರು.
ಆಗಸ್ಟ್ 23ರವರಗೆ ಭಾರಿ ಮಳೆ ಎಚ್ಚರ
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇಂದಿನಿಂದ (ಆ.19) ಆಗಸ್ಟ್ 23ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಪೂರ್ವ ಅರಬ್ಬೀ ಸಮುದ್ರದ ಕರಾವಳಿ ಪ್ರದೇಶದಿಂದ ಮಾಲ್ಡಿವ್ಸ್ ದ್ವೀಪದವರೆಗೆ 1.5 ಮತ್ತು 1.8ಕಿ.ಮೀ ಟ್ರಪ್ ಎದ್ದಿದೆ. ಹೀಗಾಗಿ ಆಗಸ್ಟ್ 19 ರಿಂದ 23 ರ ವರೆಗೆ ಕರಾವಳಿ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಲಿದೆ.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ ಇದ್ದು, ಆಗಸ್ಟ್ 19 ಮತ್ತು 20 ರಂದು ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಆಗಸ್ಟ್ 19 ರಿಂದ 23 ರ ವರೆಗೆ ಮಳೆಯಾಗುವ ನಿರೀಕ್ಷೆ ಇದೆ. ದಕ್ಷಿಣ ಒಳನಾಡಿನ ಚಿತ್ರದುರ್ಗ, ತುಮಕೂರು, ದಾವಣಗೆರೆ, ಬಳ್ಳಾರಿ, ಬೆಂಗಳೂರು, ಚಿಕ್ಕಮಗಳೂರು, ಕೋಲಾರ್, ರಾಮನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ