ಬೆಂಗಳೂರು: ಕರಾವಳಿಯಲ್ಲಿ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾದರೆ, ಮಲೆನಾಡು ಹಾಗೂ ಒಳನಾಡಿನ ಜಿಲ್ಲೆಗಳಲ್ಲಿ ಪ್ರತ್ಯೇಕ ಭಾರಿ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ (Heavy Rain News) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.
ದಕ್ಷಿಣ ಒಳನಾಡಿನಲ್ಲಿ ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು ಸೇರಿದಂತೆ ವಿಜಯನಗರದಲ್ಲಿ ಅಲ್ಲಲ್ಲಿ ಅತಿ ಹಗುರದಿಂದ ಸಾಧಾರಣದೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ ಮತ್ತು ಹಾವೇರಿ, ಬೀದರ್, ಕಲಬುರಗಿ, ಗದಗ, ಕೊಪ್ಪಳ, ರಾಯಚೂರು, ಯಾದಗಿರಿಯಲ್ಲಿ ಚದುರಿದಂತೆ ಅಲ್ಲಲ್ಲಿ ತುಂಬಾ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ. ಪ್ರತ್ಯೇಕ ಕಡೆ ಭಾರೀ ಮಳೆಯಾಗಲಿದೆ.
ಮಲೆನಾಡಿನ ಕೊಡಗು, ಶಿವಮೊಗ್ಗದಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಸುತ್ತಮುತ್ತ ವ್ಯಾಪಕವಾಗಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಮತ್ತು 20 ಡಿ.ಸೆ ಇರಲಿದೆ.
ಗುಡುಗು ಸಹಿತ ಭಾರಿ ಮಳೆ ಹಿನ್ನೆಲೆಯಲ್ಲಿ 14 ಜಿಲ್ಲೆಗಳಿಗೆ ಎಚ್ಚರಿಕೆಯನ್ನು ನೀಡಲಾಗಿದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೋಲಾರ ಸೇರಿದಂತೆ ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ರಾಯಚೂರಿನಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು
ಗುಡುಗು ಸಹಿತ ಮಳೆ ಸಿಡಿಲು ಬಡಿದು ವ್ಯಕ್ತಿ ಮೃತಪಟ್ಟಿದ್ದಾರೆ. ಮಲ್ಲಪ್ಪ ಬಡಿಗೇರ್ (50) ಮೃತ ದುರ್ದೈವಿ. ರಾಯಚೂರಿನ ಮಸ್ಕಿ ತಾಲೂಕಿನ ಬಳಗಾನೂರು ಗ್ರಾಮದಲ್ಲಿ ಘಟನೆ ನಡೆದಿದೆ. ಹೊಲದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದಿದೆ. ಮಳೆ ಬಂದಿದ್ದರಿಂದ ಮರದ ಕೆಳಗೆ ನಿಂತಿದ್ದ ವೇಳೆ ಸಿಡಿಲು ಬಡಿದಿದೆ. ಶುಕ್ರವಾರ ಸಂಜೆ 4.30 ಗಂಟೆಗೆ ಬಳಗಾನೂರ ಪಟ್ಟಣದ ಹೊರವಲಯದಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಬಳಗಾನೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಯಾದಗಿರಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಮನೆಯೊಳಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದಲ್ಲಿ ವರುಣನ ಅರ್ಭಟ ಜೋರಾಗಿತ್ತು. ಭಾರಿ ಮಳೆಗೆ ರಸ್ತೆ ಜಲಾವೃತಗೊಂಡು ವಡಗೇರಾ ಪಟ್ಟಣದ ನಿವಾಸಿಗಳ ಸಂಕಷ್ಟ ಅನುಭವಿಸಿದರು. ಕಲಬುರಗಿಯಲ್ಲೂ ಬಿಸಿಲ ಬೇಗೆಗೆ ತತ್ತರಿಸಿದ ಜನತೆಗೆ ವರುಣ ತಂಪೆರಿದ್ದ. ನಗರದ ಹಲವೆಡೆ ರಸ್ತೆಗಳೆಲ್ಲಾ ಜಲಾವೃತವಾಗಿ ವಾಹನ ಸವಾರರು ಪರದಾಡಿದರು. ಇತ್ತ ಶುಕ್ರವಾರ ಬೆಂಗಳೂರು ಗ್ರಾಮಾಂತರದ ಆನೇಕಲ್, ಅತ್ತಿಬೆಲೆ, ಜಿಗಣಿ, ಚಂದಾಪುರ ಸೇರಿದಂತೆ ಹಲವೆಡೆ ಮಳೆಯಾಗಿತ್ತು. ರಸ್ತೆಯಲ್ಲಿಯೇ ಮಳೆ ನೀರು ನಿಂತು ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರ ಪರದಾಡಿದರು.