ವಿಜಯನಗರ: ಒಂದು ಕಡೆ ಭಾರಿ ಮಳೆಯಿಂದಾಗಿ (Karnataka Weather Forecast) ಅತಿ ವೃಷ್ಠಿ ಉಂಟಾದರೆ ಮೊತ್ತೊಂದು ಕಡೆ ಮಳೆ (No Rain) ಇಲ್ಲದೇ ಅನಾವೃಷ್ಠಿಯಾಗಿದೆ. ಮಳೆಯಿಂದ ಮನೆ-ಮಠ ಕಳೆದುಕೊಂಡು ನಷ್ಟ ಅನುಭವಿಸಿದ್ದರೆ, ಇತ್ತ ಕಡೆ ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ಸ್ವತಃ ರೈತರೇ ಬೆಳೆ ನಾಶ ಮಾಡಿದ್ದಾರೆ. ವಿಜಯನಗರದ ಗೊಲ್ಲರಹಳ್ಳಿ ಗ್ರಾಮದ ಗುಬ್ಬಿಕಾಳೇ ಶ್ರೀ ಪರಶುರಾಮ ಎಂಬ ರೈತ ಬೆಳೆ ನಾಶ ಮಾಡಿದ್ದಾರೆ.
ಪರಶುರಾಮ ಅವರು 8 ಎಕರೆಯಲ್ಲಿ ಸಾವಿರಾರು ರೂ. ಖರ್ಚು ಮಾಡಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಮುಂಗಾರಿನಲ್ಲಿ ಅಲ್ಪ ಸ್ವಲ್ಪ ಮಳೆ ಬಂದಿದ್ದರಿಂದ ರೈತರು ಬಿತ್ತನೆ ಮಾಡಿದ್ದರು. ಮುಂದಿನ ದಿನಗಳಲ್ಲಿ ಸಮರ್ಪಕ ಮಳೆ ಬಾರದಿದ್ದಕ್ಕೆ ಕಾಳು ಕಟ್ಟುವ ಮೊದಲೇ ಬೆಳೆ ಒಣಗಿ ಹೋಗಲಿದೆ. ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ 4,625 ಹಕ್ಟೇರ್ ಜೋಳ, ಮೆಕ್ಕೆಜೋಳ, ಸಜ್ಜೆ ಇನ್ನಿತರ ಬೆಳೆ ಬಿತ್ತನೆ ಕಾರ್ಯ ಆಗಿದೆ.
ಆದರೆ ಮಳೆ ಇಲ್ಲದೇ ಒಣಗುತ್ತಿದೆ ಎಂದು ರೈತರು ಸಂಕಟದಿಂದ ಬೆಳೆ ನಾಶ ಮಾಡುತ್ತಿದ್ದಾರೆ. ಎಲ್ಲಾ ಕಡೆ ಬಿತ್ತನೆಯಾಗಿದ್ದು ತಂಪು ಇಲ್ಲದಿರುವುದು ಬೆಳೆ ಒಣಗಿ ನೆಲಕಚ್ಚಿ ಲಕ್ಷಾಂತರ ರೂಪಾಯಿ ನಷ್ಟವನ್ನುಂಟು ಮಾಡಿದೆ. ಬಿತ್ತನೆ ಮಾಡಿದ್ದ ಖರ್ಚು ಕೂಡ ರೈತನಿಗೆ ಬಾರದೇ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಒಂದು ಎಕರೆ ಬಿತ್ತನೆಗೆ 20 ರಿಂದ 30 ಸಾವಿರ ರೂ ಖರ್ಚು ಮಾಡಲಾಗಿದೆ. ಈಗ ಬಿಡಿಗಾಸು ಸಿಗದೆ ರೈತರು ಕಂಗಾಲಾಗಿದ್ದಾರೆ. ದನಕರುಗಳಿಗೆ ಮೇವಾದರೂ ಸಿಗಲಿ ಎಂಬ ಉದ್ದೇಶದಿಂದ ಕಟಾವು ಮಾಡ್ತಿದ್ದೇವೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: Road Accident : ಚಲಿಸುತ್ತಿದ್ದ ಸ್ಕೂಟರ್ ಮೇಲೆ ತುಂಡಾಗಿ ಬಿದ್ದ ವಿದ್ಯುತ್ ತಂತಿ; ಸವಾರನ ಕುತ್ತಿಗೆಗೆ ತಂತಿ ಸಿಲುಕಿ ಗಂಭೀರ
ಮೈದುಂಬಿ ತುಂಬಿ ಹರಿಯುತ್ತಿರುವ ಭೀಮಾ
ಮಹಾರಾಷ್ಟ್ರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಉಜನಿ ಜಲಾಶಯದಿಂದ ಮತ್ತೆ ಭೀಮಾ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಭೀಮಾ ನದಿ ಮೈದುಂಬಿ ತುಂಬಿ ಹರಿಯುತ್ತಿದ್ದು, ಕಲಬುರಗಿಯ ಅಫಜಲಪೂರ ಘತ್ತರಗಾ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಕಲಬುರಗಿ- ವಿಜಯಪುರ ರಾಜ್ಯ ಹೆದ್ದಾರಿ ಬಂದ್ ಆಗಿದೆ. ದೇವಲಗಾಣಗಾಪುರ ಬಳಿಯ ಸೇತುವೆ ಸಹ ಮುಳುಗಡೆಯಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಸೇತುವೆ ಕಡೆ ಜನ ಹೋಗದಂತೆ ಪೊಲೀಸರ ನಿಯೋಜನೆ ಮಾಡಲಾಗಿದೆ.
ಮಹಾರಾಷ್ಟ್ರದ ಮಳೆಯಿಂದ ತತ್ತರಿಸಿದ ಗಡಿ ಜನತೆ
ಮಹಾರಾಷ್ಟ್ರದ ಮಳೆಯಿಂದ ಗಡಿ ಜನತೆ ತತ್ತರಿಸಿ ಹೋಗಿದ್ದಾರೆ. ಕಳೆದ ಒಂದು ವಾರದಿಂದ ಕೃಷ್ಣಾ ನದಿ ಒಳ ಹರಿವು ಯಥಾವತ್ ಕಾಯ್ದುಕೊಂಡಿದೆ. ಕೃಷ್ಣಾ ನದಿ ಒಳ ಹರಿವಿನಿಂದ ಕೃಷ್ಣಾ ನದಿ ತೀರದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೇ ನದಿ ತೀರದ ಜನರಿಗೆ ತೊಂದರೆಯಾಗದಂತೆ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಸರ್ಕಾರದ ಆದೇಶಕ್ಕಿಲ್ಲ ಕವಡೆ ಕಾಸಿನ ಕಿಮ್ಮತ್ತಿಲ್ಲ. ನೆರೆ ಬಂದರೂ ತಾಲೂಕಾಡಳಿತ ಗಂಜಿ ಕೇಂದ್ರ ತೆಗೆದಿಲ್ಲ. ಕಲಬುರಗಿಯ ರಾಯಬಾಗ ತಾಲೂಕಿನ ಶಿರಗೂರ ಗ್ರಾಮದ ನೆರೆ ಸಂತ್ರಸ್ಥರು ಸಂಕಷ್ಟ ಪಡುತ್ತಿದ್ದಾರೆ. ದನಗಳಿಗೆ ಮೇವಿಲ್ಲ, ಇರಲು ಜಾಗ ಇಲ್ಲ ಹೀಗಾದರೆ ಹೇಗೆ ಎಂದು ನೆರೆ ಸಂತ್ರಸ್ಥರು ಸರ್ಕಾರಕ್ಕೆ ಪ್ರಶ್ನೆ ಮಾಡುತ್ತಿದ್ದಾರೆ.
ಯಾದಗಿರಿಯಲ್ಲಿ ನದಿ ತೀರದ ದೇಗುಲಗಳು ಜಲಾವೃತ
ಮಹಾರಾಷ್ಟ್ರದ ಉಜನಿ, ವೀರ್ ಜಲಾಶಯದಿಂದ ಭಾರಿ ಪ್ರಮಾಣದ ನೀರು ಬಿಡುಗಡೆ ಆಗುತ್ತಿದೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸಣಗಿ ಬ್ಯಾರೇಜ್‌ನಿಂದ ಭೀಮಾನದಿಗೆ 80 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಬ್ಯಾರೇಜ್‌ನ 24 ಗೇಟ್‌ಗಳಲ್ಲಿ 20 ಗೇಟ್ ಓಪನ್ ಮಾಡಿ ನೀರು ಬಿಡುಗಡೆ ಮಾಡಲಾಗಿದ್ದು, ಅಪಾಯದ ಮಟ್ಟ ಮೀರಿ ಭೀಮಾನದಿ ಹರಿಯುತ್ತಿದೆ. ಭೀಮಾನದಿ ತೀರದಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಕಂಗಳೇಶ್ವರ ಹಾಗೂ ವಿರಾಂಜನೇಯ ದೇಗುಲಗಳು ಸಂಪೂರ್ಣ ಮುಳುಗಡೆಯಾಗಿದೆ. ಈಗಾಗಲೇ ನದಿ ತೀರಕ್ಕೆ ತೆರಳದಂತೆ ಜಿಲ್ಲಾಡಳಿತದಿಂದ ಎಚ್ಚರಿಕೆ ನೀಡಲಾಗಿದೆ.
ಉತ್ತರ ಒಳನಾಡಿನಲ್ಲಿ ಮುಂಗಾರು ಚುರುಕು
ನೈರುತ್ಯ ಮುಂಗಾರು ಉತ್ತರ ಒಳನಾಡಲ್ಲಿ ಚುರುಕುಗೊಂಡಿದ್ದರೆ, ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ದುರ್ಬಲಗೊಂಡಿತ್ತು. ಶುಕ್ರವಾರದಂದು (ಆ.9) ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಒಳನಾಡಿನ ಕೆಲವಡೆ ಹಗುರದಿಂದ ಕೂಡಿರಲಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ