ಬೆಂಗಳೂರು: ಬುಧವಾರದಂದು (ಸೆ.25) ಕರ್ನಾಟಕದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಭಾರಿ ಮಳೆಯಾಗುವ (Heavy Rain) ಸಾಧ್ಯತೆಯಿದೆ. ಮಲೆನಾಡು ಸುತ್ತಮುತ್ತ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯೊಂದಿಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನಲ್ಲಿ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.
ದಕ್ಷಿಣ ಒಳನಾಡಿನ ಸುತ್ತಮುತ್ತ ಚದುರಿದಂತೆ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನಲ್ಲಿ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗಲಿದ್ದು, ಪ್ರತ್ಯೇಕವಾಗಿ ಚದುರಿದಂತೆ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಮಲೆನಾಡು ಭಾಗದ ಹಾಸನ, ಕೊಡಗು ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗಲಿದೆ. ಕರ್ನಾಟಕದ ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ.
ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ
ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕೆಲವೊಮ್ಮೆ ಮೋಡ ಕವಿದ ವಾತಾವರಣ ಇರಲಿದೆ.
ರೆಡ್ ಅಲರ್ಟ್ ಘೋಷಣೆ
ಗುಡುಗು ಸಹಿತ ಭಾರೀ ಮಳೆಯೊಂದಿಗೆ ಗಾಳಿ ವೇಗವು 30-40 ಕಿ.ಮೀ ಇರಲಿದೆ. ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಧಾರವಾಡ, ಗದಗ, ಹಾವೇರಿ, ವಿಜಯಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ನೀಡಲಾಗಿದೆ.
ಇದನ್ನೂ ಓದಿ: MLA Muniratna: ಅತ್ಯಾಚಾರ ಕೇಸ್; ಶಾಸಕ ಮುನಿರತ್ನಗೆ 12 ದಿನ ಎಸ್‌ಐಟಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ
ದಾವಣಗೆರೆಯಲ್ಲಿ ಮನೆಗಳಿಗೆ ನುಗ್ಗಿದ ನೀರು
ದಾವಣಗೆರೆಯಲ್ಲೂ ಮಂಗಳವಾರ ಸತತ ಒಂದು ಗಂಟೆಗೂ ಹೆಚ್ಚು ಮಳೆ ಸುರಿದಿತ್ತು. ಪಿ ಬಿ ರಸ್ತೆ, ಪಿಜೆ ಬಡಾವಣೆ, ಗಾಂಧಿ ವೃತ್ತ ಸೇರಿದಂತೆ ಹಲವೆಡೆ ಮಳೆಯಿಂದ ವಾಹನ ಸವಾರರು ಪರದಾಡಿದರು. ದಾವಣಗೆರೆ, ಮಾಯಕೊಂಡ, ಹರಿಹರ ಸೇರಿದಂತೆ ರಸ್ತೆಯ ಮೇಲೆ ನೀರು ಹರಿದಿತ್ತು. ವಾಹನ ಸವಾರಿಗೆ ತೊಂದರೆ ಉಂಟಾಗಿತ್ತು. ಕಳೆದ ಮೂರು ದಿನಗಳಿಂದ ಸಂಜೆ ವೇಳೆ ವರುಣನ ಆಗಮಿಸುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ರೈತರು ಬೆಳೆದ ಬೆಳೆಗಳಿಗೆ ಮಳೆಯಿಂದ ಅನುಕೂಲವಾಗಲಿದೆ.
ಕೊಡಗಿನಲ್ಲೂ ಜಿಟಿ ಜಿಟಿ ಮಳೆ
ಬಂಗಾಳಕೊಲ್ಲಿಯಲ್ಲಿ ವಾಯುವಭಾರ ಕುಸಿತ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ವಿವಿಧೆಡೆ ಜಿಟಿ ಜಿಟಿ ಮಳೆಯಾಗಿತ್ತು. ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಮಳೆಯ ವಾತವರಣದಿಂದಾಗಿ ವಿದ್ಯಾರ್ಥಿಗಳು ಹಾಗೂ ಬೈಕ್ ಸವಾರರು ಕಿರಿಕಿರಿ ಅನುಭವಿಸಿದರು. ಇನ್ನು ಎರಡು ಮೂರು ದಿನ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಮೈಸೂರಿನಲ್ಲೂ ಸಾಧಾರಣ ಮಳೆಯಾಗಿದೆ. ಸುಮಾರು ಅರ್ಧ ಗಂಟೆಗೂ ಸುರಿದ ವರ್ಷಧಾರೆಗೆ ವಾಹನ ಸಂಚಾರಕ್ಕೆ ಅಡ್ಡಿ ಆಯಿತು.
ಯಾದಗಿರಿಯಲ್ಲಿ ಮುಂದುವರಿದ ಮಳೆ ಅಬ್ಬರ
ಯಾದಗಿರಿ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಮಳೆ ಅರ್ಭಟಕ್ಕೆ ಭತ್ತದ ಜಮೀನಿಗೆ ನೀರು ನುಗ್ಗಿದೆ. ಭೀಮಾನದಿ ತೀರದ ರೈತರ ಜಮೀನಿಗೆ ಮಳೆ ನೀರು ನುಗ್ಗಿ, ಭತ್ತದ ಬೆಳೆ ಜಲಾವೃತಗೊಂಡಿತ್ತು. ಯಾದಗಿರಿ ಜಿಲ್ಲೆಯ ವಡಗೇರಾ ಜೋಳದಡಗಿ ಗ್ರಾಮದಲ್ಲಿ ಘಟನೆ ನಡೆದಿದೆ. ಗೇಟ್ ಎತ್ತದೆ ಕೆಬಿಜೆಎನ್‌ಎಲ್ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಜೋಳದಡಗಿ ಗ್ರಾಮದ ಭೀಮಾನದಿಗೆ ಅಡ್ಡಲಾಗಿರುವ ಬ್ರಿಡ್ಜ್ ಕಂ ಬ್ಯಾರೇಜ್‌ನ ಗೇಟ್ ಎತ್ತದೇ ನಿರ್ಲಕ್ಷ್ಯ ವಹಿಸಿದ್ದಾರೆ. ಭಾರಿ ಮಳೆಯಿಂದ ಭೀಮಾನದಿಗೆ ನೀರಿನ ಒಳಹರಿವು ಹೆಚ್ಚಳವಾಗಿತ್ತು. ಆದರೆ, ಗೇಟ್ ಎತ್ತದಕ್ಕೆ ಭೀಮಾನದಿಯ ನೀರು ಜಮೀನಿಗೆ ನುಗ್ಗಿ ಅಪಾರಪ್ರಮಾಣದ ಬೆಳೆ ಹಾನಿಯಾಗಿದೆ ಎಂದು ರೈತರ ಕಂಗಾಲಾದರು.
ಜಮಖಂಡಿಯಲ್ಲಿ ಮಳೆ ಅವಾಂತರ
ಬಾಗಲಕೋಟೆಯ ಜಮಖಂಡಿಯಲ್ಲಿ ರಾತ್ರಿ ಸುರಿದ ಮಳೆಯು ಅವಾಂತರವೇ ಸೃಷ್ಟಿಯಾಗಿದೆ. ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಪರದಾಡಿದರು. ಜಲಾವೃತವಾದ ಮನೆಗಳಿಗೆ ಮಾಜಿ ಶಾಸಕ ಆನಂದ್ ನ್ಯಾಮಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಲಕ್ಕನಕೇರೆ ಬೈಪಾಸ್ ರಸ್ತೆ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿತ್ತು. ನಿವಾಸಿಗಳಿಗೆ ಆದ ಹಾನಿ ಭರಿಸುವ ಭರವಸೆಯನ್ನು ಮಾಜಿ ಶಾಸಕ ಆನಂದ್ ನ್ಯಾಮಗೌಡ ನೀಡಿದರು. ಶಿಥಿಲಗೊಂಡ ಹಳೆ ಮನೆಯವರಿಗೆ ಸುರಕ್ಷಿತ ಸ್ಥಳದಲ್ಲಿ ವಾಸಿಸುವಂತೆ ಮನವಿ ಮಾಡಿದರು. ಜಮಖಂಡಿ ಎಸಿ ಶ್ವೇತಾ ಸಾಥ್ ನೀಡಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ